ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ (Honnali BJP MLA MP Renukacharya) ವಿರುದ್ದ ತಾಲೂಕಿನ ಗ್ರಾಮ ಲೆಕ್ಕಿಗರೊಬ್ಬರು ಎಫ್ ಐ ಆರ್ ದಾಖಲು ಮಾಡಿದ್ದಾರೆ. ಆದರೆ ಹೀಗೆ ಕೇಸ್ ಮಾಡಿದ ವಿಎ ದಿಢೀರನೆ ಟ್ರಾನ್ಸಫರ್ ಆಗಿದ್ದಾರೆ. ವಿಎ ವರ್ಗಾವಣೆ ಖಂಡಿಸಿ ಕೆಲ ಗ್ರಾಮಸ್ಥರಿಂದ ನಿನ್ನೆ ಬುಧವಾರ ನ್ಯಾಮತಿಯಲ್ಲಿ ಪ್ರತಿಭಟನೆ ಸಹ ನಡೆದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ವಿರುದ್ಧ ನವೆಂಬರ್ 15 ರಂದು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದವರು ವಿಎ ಪ್ರಶಾಂತ ಕುಮಾರ (Nyamathi Village Accountant). ಸರ್ಕಾರಿ ನೌಕರರಿಗೆ ಕೆಲಸ ಮಾಡಲು ಅಡಚಣೆ ಮಾಡುತ್ತಿದ್ದಾರೆ ಎಂದು ಐಪಿಸಿ 186 ಅಡಿ ರೇಣುಕಾಚಾರ್ಯ ವಿರುದ್ದ ದೂರು (FIR) ದಾಖಲಾಗಿದೆ. ನ್ಯಾಮತಿ ತಾಲೂಕಿನ ಕುಂಕುವಾ ಗ್ರಾಮದ VA ಪ್ರಶಾಂತ್ ಕುಮಾರ್ ಸ್ಥಳೀಯ ಶಾಸಕರ ವಿರುದ್ಧ ದೂರು ದಾಖಲಿಸಿರುವ ಅಧಿಕಾರಿ.
ಕೋಗನಹಳ್ಳಿ ಗ್ರಾಮದಲ್ಲಿ ಮಳೆಗೆ ಹಾನಿಯಾದ ಮನೆಗಳ ಸರ್ವೇ ವಿಚಾರ ಇಲ್ಲಿ ಮುಖ್ಯವಾಗಿದೆ. ಶಾಸಕರು ಹೇಳಿದಂತೆ ಗ್ರೇಡ್ ಹಾಕಬೇಕು ಎಂದು ವಿಎ ಗೆ ತಾಕೀತು ಮಾಡಿದ್ದರಂತೆ ರೇಣುಕಾಚಾರ್ಯ. ವರದಿ ಬದಲಿಸಲು ಆಗುವುದಿಲ್ಲ ಎಂದು ಹೇಳಿ ರೇಣುಕಾಚಾರ್ಯಗೆ VA ಪ್ರಶಾಂತ್ ಹೇಳಿದರಂತೆ. ಇದೇ ಕಾರಣಕ್ಕೆ ಸಾರ್ವಜನಿಕವಾಗಿ ನಿಂದನೆ ಮಾಡಿದ್ದಾರೆ ಎಂದು ಪ್ರಶಾಂತ ಎಫ್ ಐಆರ್ ದಾಖಲಿಸಿದ್ದಾರೆ.
ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಕಾರಣಕ್ಕೆ ವಿಎ ಪ್ರಶಾಂತನನ್ನ ಚನ್ನಗಿರಿ ತಾಲೂಕಿನ ನಲ್ಲೂರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿದವು. ಪ್ರಶಾಂತ ಅವರನ್ನ ಮತ್ತೆ ಕುಂಕುವಾ ವೃತ್ತಕ್ಕೆ ವರ್ಗಾವಣೆ ಮಾಡಬೇಕು ಎಂದು ರೇಣುಕಾಚಾರ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ಆಗಿರುವುದು ಇಷ್ಟು ಇತ್ತೀಚಿಗೆ ಹೊನ್ನಾಳಿ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ನೂರಾರು ಮನೆಗಳು ಬಿದ್ದಿವೆ. ಹೀಗೆ ಬಿದ್ದ ಮನೆಗಳಿಗೆ ಸರ್ಕಾರ ಪರಿಹಾರ ನೀಡಲು ಅದರಲ್ಲಿ ಗ್ರೇಡ್ ಮಾಡುತ್ತದೆ. ಎ ಗ್ರೇಡ್, ಬಿ ಗ್ರೇಡ್, ಸಿ ಗ್ರೇಡ್ ಅಂತಾ. ಸಂಪೂರ್ಣ ಮನೆ ಹಾಳಾದ್ರೆ ಎ ಗ್ರೇಡ್, ಭಾಗಶಃ ಹಾಳಾದ್ರೆ ಬಿ ಗ್ರೇಡ್ ಅಲ್ಪ ಸ್ವಲ್ಪ ಹಾಳಾದ್ರೆ ಸಿ ಗ್ರೇಡ್ ಎಂಬುದು ಇದರ ಲೆಕ್ಕಾಚಾರ.
ಆದ್ರೆ ಬಹುತೇಕ ಮನೆಗಳನ್ನ ಎ ಗ್ರೇಡ್ ಮಾಡಬೇಕು ಎಂಬುದು ರೇಣುಕಾಚಾರ್ಯರ ವಾದ. ಇದಕ್ಕೆ ಗ್ರಾಮ ಲೆಕ್ಕಿಗರು ವರದಿ ನೀಡಬೇಕು. ಇದೇ ವೇಳೆ ತಮ್ಮ ಪಕ್ಷದ ಕೆಲ ಕಾರ್ಯಕರ್ತರ ಮನೆಗಳು ಅಲ್ಪಸ್ವಲ್ಪ ಹಾಳಾಗಿದ್ದರೂ ಸಂಪೂರ್ಣ ಹಾಳು ಮಾಡಿ ಸರ್ಕಾರಿ ದುಡ್ಡಿನಲ್ಲಿ ಹೊಸ ಮನೆ ಕಟ್ಟಿಸಿಕೊಡುವ ಪ್ಲಾನ್ ರೇಣುಕಾಚಾರ್ಯ ಮಾಡಿದ್ದರಂತೆ. ಕಾರಣ ಈಗ ಚುನಾವಣೆ ಬಂದಿದೆ. ಇದಕ್ಕೆ ಪ್ರಶಾಂತ ಅವರಂತಹ ಅಧಿಕಾರಿಗಳು ಸಾಥ್ ನೀಡಿಲ್ಲ. ಇದೇ ಕಾರಣಕ್ಕೆ ವರ್ಗಾವಣೆ ಮಾಡಿದ್ದಾರಂತೆ.
ಹೀಗೆ ಹಲವಾರು ದಿನಗಳಿಂದ ಅಧಿಕಾರಿಗಳು- ಶಾಸಕರ ನಡುವೆ ತಿಕ್ಕಾಟ ನಡೆದೇ ಇದೆ. ಆದ್ರೆ ಪ್ರಶಾಂತ ಅವರಂತಹ ಅಧಿಕಾರಿಯೊಬ್ಬರು ಶಾಸಕರ ವಿರುದ್ಧವೇ ಎಫ್ ಐಆರ್ ಮಾಡಿದ್ದಾರೆ. ಸರ್ಕಾರಿ ನೌಕರಿಗೆ ಅಡ್ಡಿ ಪಡಿಸಿದ್ದಾರೆ ಅಂದ್ರೆ ಅದು ಜಾಮೀನುರಹಿತ ಬಂಧನದ ಕೇಸ್. ಮೇಲಾಗಿ ನೇರವಾಗಿ ನ್ಯಾಮತಿ ಪೊಲೀಸ್ ಠಾಣೆಯವರೇ ಎಫ್ ಐ ಆರ್ ಮಾಡಿಲ್ಲ. ಪ್ರಶಾಂತ ಕೋರ್ಟ್ಗೆ ಹೋಗಿ ಕೋರ್ಟ್ ಮೂಲಕ ಎಫ್ ಐ ಆರ್ ದಾಖಲು ಮಾಡಿಸಿದ್ದಾರೆ. (ವರದಿ: ಬಸವರಾಜ್ ದೊಡ್ಮನಿ, ಟಿವಿ 9, ದಾವಣಗೆರೆ)
ಹೆಚ್ಚಿನ ಜಿಲ್ಲಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ