ದಾವಣಗೆರೆ, ಫೆ.13: ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಹಾಗೂ ಸಮಾಜ ತಲೆ ತಗ್ಗಿಸುವ ಘಟನೆ ಬೆಳಕಿಗೆ ಬಂದಿದೆ. ಶಾಲಾ ಬಾಲಕಿಯರಿಂದ ಶೌಚಾಲಯ ಸ್ವಚ್ಛಗೊಳಿಸಿದ (Toilet Cleaning by Students) ಮತ್ತೊಂದು ಪ್ರಕರಣ ಬಹಿರಂಗವಾಗಿದೆ. ದಾವಣಗೆರೆ (Davanagere) ತಾಲೂಕಿನ ಮೆಳ್ಳೆಕಟ್ಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ 10ಕ್ಕೂ ಅಧಿಕ ಬಾಲಕಿಯರು ಶೌಚಾಲಯ ಸ್ವಚ್ಛಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಶಾಲೆಯ ಸಮವಸ್ತ್ರದಲ್ಲಿ ಪೊರಕೆ ಹಿಡಿದು ಬಾಲಕಿಯರು ಶೌಚಾಲಯ ಸ್ವಚ್ಚ ಮಾಡಿದ್ದಾರೆ. ಬಕೆಟ್ ನಲ್ಲಿ ನೀರು ತಂದು ಪೊರಕೆಯಿಂದ ಶೌಚಾಲಯ ಸ್ವಚ್ಚ ಗೊಳಿಸುತ್ತಿರುವ ಬಾಲಕಿಯರ ವಿಡಿಯೋ ವೈರಲ್ ಆಗಿದೆ. ಶಾಲೆಯ ಮುಖ್ಯಶಿಕ್ಷಕಿ ಹೈಸ್ಕೂಲ್ ಮಕ್ಕಳಿಂದ ಶೌಚಾಲಯ ಸ್ವಚ್ಚ ಮಾಡಿಸಿದ್ದಾರೆ. ಸ್ವತಹ ಗಾಂಧಿಜಿಯೇ ತಮ್ಮ ಶೌಚಾಲಯ ಸ್ವಚ್ಚ ಮಾಡಿಕೊಳ್ಳುತ್ತಿದ್ದರು. ನೀವು ಸ್ವಚ್ಚಗೊಳಿಸಿ ಎಂದು ಮುಖ್ಯ ಶಿಕ್ಷಕಿ ಸೂಚನೆ ನೀಡಿದ್ದರಂತೆ. ಮಕ್ಕಳನ್ನ ಶೌಚಾಲಯ ಸ್ವಚ್ಚಗೊಳಿಸಲು ಬಳಸಿಕೊಳ್ಳುತ್ತಿರುವ ಶಾಲೆಯ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಪ್ರಕರಣಕ್ಕೆ ಶಿಕ್ಷಕಿಯರ ಒಳ ಜಗಳದ ನಂಟು
ಇನ್ನು ಮುಖ್ಯ ಶಿಕ್ಷಕಿ ಹಾಗೂ ಇನ್ನೊಬ್ಬ ಶಿಕ್ಷಕಿಯ ಒಳ ಜಗಳದ ಶಂಕೆ ವ್ಯಕ್ತವಾಗಿದೆ. ಉದ್ದೇಶ ಪೂರ್ವಕವಾಗಿ ವಿಡಿಯೋ ಮಾಡಿ ಬಿಡಲಾಗಿದೆ. ನನ್ನ ಮೇಲಿನ ಸಿಟ್ಟಿಗೆ ಈ ರೀತಿ ಮಾಡಲಾಗಿದೆ ಎಂದು ಟಿವಿ9ಗೆ ಮುಖ್ಯ ಶಿಕ್ಷಕಿ ಶೋಭಾ ಮಾಹಿತಿ ನೀಡಿದ್ದಾರೆ. ನಾನು ವಿಡಿಯೋ ಮಾಡಿ ಹರಿಬಿಟ್ಟಿಲ್ಲ. ಮೇಲಾಗಿ ಮಕ್ಕಳನ್ನ ಕರೆದುಕೊಂಡು ಶೌಚಾಲಯ ಸ್ವಚ್ಚಗೊಳಿಸಲು ಹೇಳಿದ್ದು ಮುಖ್ಯ ಶಿಕ್ಷಕಿ ಶೋಭಾ. ಪೊರಕೆ ಸೋಪಿನಪುಡಿ ತರಿಸಿದ್ದು ಮುಖ್ಯ ಶಿಕ್ಷಕಿ ಶೋಭಾ ಎಂದು ಇಂಗ್ಲೀಷ ಶಿಕ್ಷಕಿ ಸಾವಿತ್ರಿ ಆರೋಪಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ಆಗಲಿ ಸತ್ಯಾಂಶ ಹೊರಬರಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮಕ್ಕಳು ಸಹ ಶಿಕ್ಷಕಿ ಸಾವಿತ್ರಿ ಮೇಲೆ ಆರೋಪ ಮಾಡಿದ್ದಾರೆ. ಮೇಲಾಧಿಕಾರಿಗಳು ತನಿಖೆ ಮಾಡಿ ಕ್ರಮಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕಳೆದ ಕೆಲ ದಿನಗಳ ಹಿಂದೆ ಮಕ್ಕಳಿಂದ ಶಾಲಾ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿರುವ ಘಟನೆಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದವು. ಹೀಗಾಗಿ ರಾಜ್ಯದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸುವುದನ್ನು ಶಾಲಾ ಶಿಕ್ಷಣ ಇಲಾಖೆ ಕಡ್ಡಾಯವಾಗಿ ನಿಷೇಧಿಸಿತ್ತು. ಇದೀಗ ನಿಷೇಧದ ನಡುವೆಯೂ ದಾವಣಗೆರೆಯಲ್ಲಿ ಇಂತಹದ್ದೇ ಘಟನೆ ಬಯಲಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಕೊಪ್ಪ ತಾಲೂಕಿನಲ್ಲಿ ಒಂದೇ ದಿನ 9 ಜನರಿಗೆ ಮಂಗನ ಕಾಯಿಲೆ
ಇನ್ನು ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿಯೂ ಇಂತಹ ಯಾವುದೇ ಪ್ರಕರಣ ಘಟಿಸದಂತೆ ಶಾಲಾ ಆಡಳಿತ ಮಂಡಳಿ, ಶಾಲಾ ಮುಖ್ಯಸ್ಥರು ಕ್ರಮ ಕೈಗೊಳ್ಳಬೇಕೆಂದು ಸೂಚನೆ ಇದೆ. ಒಂದು ವೇಳೆ ನಿಯಮ ಮೀರಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಇಲಾಖೆಯ ಅಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಿಬಂದಿ ವಿರುದ್ದ ಎಫ್ಐಆರ್ ದಾಖಲಿಸಲಾಗುವುದು ಮತ್ತು ಶಿಸ್ತುಕ್ರಮ ಕೈಗೊಳ್ಳ ಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಎಸ್‌ಡಿಎಂಸಿ ಸಹಕಾರದೊಂದಿಗೆ ಸ್ಥಳೀಯವಾಗಿ ಲಭ್ಯ ಸಂಪನ್ಮೂಲ ಬಳಸಿಕೊಂಡು ಸ್ವಚ್ಛತೆ ಕೈಗೊಳ್ಳಬೇಕು ಎಂದು ಸೂಚಿಸಿದ್ದು, ಶೌಚಾಲಯ ಸ್ವಚ್ಛತೆಯ ಹೊಣೆಯನ್ನು ಎಸ್‌ಡಿಎಂಸಿಗಳ ಹೆಗಲಿಗೇರಿಸಲಾಗಿದೆ. ಶಿಕ್ಷಣ ಇಲಾಖೆ ಇಷ್ಟೆಲ್ಲ ಕ್ರಮಗಳನ್ನು ಕೈಗೊಂಡಿದ್ದರೂ ಮತ್ತೆ ಮತ್ತೆ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸುವ ಘಟನೆಗಳು ನಡೆಯುತ್ತಲೇ ಇವೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:35 am, Tue, 13 February 24