ದಾವಣಗೆರೆ: ಜಮೀನು ವಿವಾದ ಹಿನ್ನೆಲೆಯಲ್ಲಿ ಎರಡು ಗ್ರಾಮಗಳ ನಡುವೆ ಮಾರಾಮಾರಿಯಾಗಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕಂಚಿಕೊಪ್ಪ ಹಾಗೂ ಹೊನ್ನಾಳಿಯ ತುಗ್ಗಲಹಳ್ಳಿ ಗ್ರಾಮಸ್ಥರ ಮಧ್ಯೆ ದೊಣ್ಣೆ, ಕುಡುಗೋಲುಗಳಿಂದ ಪರಸ್ಪರ ಹಲ್ಲೆ ನಡೆದಿದೆ. ಮಾರಾಮಾರಿಯಲ್ಲಿ 13 ಜನರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾದವರಿಂದ ಹೊನ್ನಾಳಿ ಠಾಣೆಗೆ ದೂರು ಸಲ್ಲಿಸಲಾಗಿದ್ದು ತುಗ್ಗಲಹಳ್ಳಿಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಂಚಿಕೊಪ್ಪ ಗ್ರಾಮದ 30 ದಲಿತ ಕುಟುಂಬಗಳು ತುಗ್ಗಲಹಳ್ಳಿ ಗ್ರಾಮದ ಬಳಿ ಇರುವ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರು. ದಲಿತ ಕುಟುಂಬಗಳು ಸರ್ವೇ ನಂಬರ್ 29- 30 ರಲ್ಲಿ 40 ಎಕರೆಯಲ್ಲಿ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಸಾಗುವಳಿ ಚೀಟಿ, ಪಹಣೆ ಕೂಡ ನೀಡಲಾಗಿದ್ದು, ಈ ಜಮೀನು ಖಾತೆ ಮಾಡಿಕೊಡುವಂತೆ ಕಂಚಿಕೊಪ್ಪದ ದಲಿತ ಕುಟುಂಬಗಳು ಕೋರ್ಟ್ ಮೊರೆ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ತುಗ್ಗಲಹಳ್ಳಿ ಗ್ರಾಮದ ಕೆಲವರು ಈ ಜಮೀನು ನಮಗೆ ಸೇರಿದ್ದು ಎಂದು ತಕರಾರು ಮಾಡಿದ್ದು ತುಗ್ಗಲಹಳ್ಳಿ ಗ್ರಾಮದ ಕೆಲವರು ನಿನ್ನೆ ಸಂಜೆ ಏಕಾಏಕಿ ಜಮೀನಲ್ಲಿದ್ದ ಬೆಳೆಯನ್ನು ನಾಶ ಮಾಡಿದ್ರು. ಇದರಿಂದ ಮಾತಿನ ಚಕಮಕಿಯಾಗಿ ಎರಡು ಗ್ರಾಮಗಳ ನಡುವೆ ಮಾರಾಮಾರಿಯಾಗಿದೆ.
2 ಗ್ರಾಮಗಳ ಗ್ರಾಮಸ್ಥರು ಕುಡಗೋಲು, ದೊಣ್ಣೆಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ. ಕಂಚಿಕೊಪ್ಪದ 13 ಜನರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಹೊನ್ನಾಳಿ ಸಿಪಿಐ ದೇವರಾಜ್ ಭೇಟಿ ನೀಡಿದ್ದಾರೆ. ಹಲ್ಲೆಗೊಳಗಾದವರಿಂದ ಹೊನ್ನಾಳಿ ಠಾಣೆಗೆ ದೂರು ಸಲ್ಲಿಸಲಾಗಿದ್ದು ತುಗ್ಗಲಹಳ್ಳಿಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Snehith: ಸ್ನೇಹಿತ್ ಮತ್ತು ತಂಡದ ಹಲ್ಲೆ ಪ್ರಕರಣ; ಮನೆ ಸೆಕ್ಯುರಿಟಿ ಗಾರ್ಡ್ ಅರೆಸ್ಟ್; ಉಳಿದವರ ಪತ್ತೆಗೆ ಬಲೆ ಬೀಸಿದ ಪೊಲೀಸರು