ದಾವಣಗೆರೆ, ಆಗಸ್ಟ್.25: ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆ ಚಂದ್ರಮ್ಮ(60) ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ (Shimoga McGANN Hospital) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹುಣದಘಟ್ಟ ಗ್ರಾಮದಲ್ಲಿ ಕಲುಷಿತ ನೀರು (Contaminated Water) ಕುಡಿದು ಗ್ರಾಮದ 7 ಜನರು ಆಸ್ಪತ್ರೆಗೆ ದಾಖಲಾಗಿದ್ದರು. 7 ಜನರಲ್ಲಿ ಚಂದ್ರಮ್ಮ (60) ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಆಗಸ್ಟ್ 21 ರಂದು ಆಸ್ಪಸ್ಥರಾಗಿ ಮೆಗ್ಗನ್ ಆಸ್ಪತ್ರೆಗೆ ಚಂದ್ರಮ್ಮ ದಾಖಲಾಗಿದ್ದರು. ವಾಂತಿ ಬೇಧಿ, ಜ್ವರದಿಂದ ಬಳಲುತ್ತಿದ್ದ ಚಂದ್ರಮ್ಮ ಅವರು ಇಂದು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಇನ್ನುಳಿದ ಆರು ಜನರು ಚಿಕಿತ್ಸೆ ಪಡೆದು ಮನೆಗೆ ವಾಪಾಸ್ಸಾಗಿದ್ದಾರೆ. ಕುಡಿಯುವ ನೀರಿನ ಪೈಪ್ ಹೊಡೆದು ಚರಂಡಿ ನೀರು ಮಿಶ್ರಣವಾದ ಹಿನ್ನಲೆ ನೀರು ಕಲುಷಿತಗೊಂಡಿತ್ತು. ಘಟನೆಯಾದ ನಂತರ ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜನರಲ್ಲಿ ನೀರು ಕಲುಷಿತಗೊಳ್ಳದಂತೆ ನೋಡಿಕೊಳ್ಳಲು ಜಾಗೃತಿ ಮೂಡಿಸಿದ್ದರು.
ಇದನ್ನೂ ಓದಿ: ಬೆಳಗಾವಿ: ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿ
ಇನ್ನು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಉಬ್ಬಲಗಂಡಿ ಗ್ರಾಮದಲ್ಲಿ ನೀರು ಸೇವನೆ ಬಳಿಕ 15ಕ್ಕೂ ಹೆಚ್ಚು ಜನರಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದೆ. ಕಳೆದ ನಾಲ್ಕು ದಿನಗಳಿಂದ ವಾಂತಿ, ಭೇದಿ ಪ್ರಕರಣಗಳು ಹೆಚ್ಚುತ್ತಲೇ ಇವೆ. ಘಟನಾ ಸ್ಥಳಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಂತಿ, ಭೇದಿ ಕಾಣಿಸಿಕೊಂಡ ಗ್ರಾಮಸ್ಥರನ್ನು ವಿವಿಧ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಬಲಗಂಡಿ ಗ್ರಾಮದ ಆರೋಗ್ಯ ಕೇಂದ್ರದಲ್ಲೂ ಚಿಕಿತ್ಸೆ ಮುಂದುವರೆದಿದೆ. ಯಾವುದೇ ರೀತಿ ಪ್ರಾಣಾಪಾಯ ಸಂಭವಿಸಿಲ್ಲ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ