ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ನಾಮಕರಣಕ್ಕೆ ಚಿಂತನೆ: ಡಿಸಿಎಂ ಡಿಕೆ ಶಿವಕುಮಾರ್

|

Updated on: Oct 25, 2023 | 10:39 PM

ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಹಾಗೂ ಹಾರೋಹಳ್ಳಿ ಒಳಗೊಂಡ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿ ಹಾಗೂ ರಾಮನಗರವನ್ನು ಇದರ ಜಿಲ್ಲಾ ಕೇಂದ್ರವಾಗಿ ಇರಿಸಲು ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಜನರ ಅಭಿಪ್ರಾಯವನ್ನು ಕೂಡ ಸಂಗ್ರಹಿಸಲಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ನಾಮಕರಣಕ್ಕೆ ಚಿಂತನೆ: ಡಿಸಿಎಂ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್
Follow us on

ಬೆಂಗಳೂರು, ಅಕ್ಟೋಬರ್ 25: ಕನಕಪುರ ತಾಲೂಕನ್ನು ಬೆಂಗಳೂರು ಜಿಲ್ಲೆಗೆ ಸೇರಿಸಲಾಗುವುದು ಎಂಬ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿಕೆ ರಾಜಕೀಯವಾಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಅವರು ಮತ್ತೊಂದು ಅಚ್ಚರಿಯ ವಿಷಯ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿರುವ ಡಿಕೆ ಶಿವಕುಮಾರ್, ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ ಹಾಗೂ ಹಾರೋಹಳ್ಳಿ ತಾಲೂಕುಗಳನ್ನು ಒಳಗೊಂಡ ರಾಮನಗರ ಜಿಲ್ಲೆಯನ್ನು (Ramanagara District) ಬೆಂಗಳೂರು ದಕ್ಷಿಣ ಜಿಲ್ಲೆ (Bangalore South District) ಎಂದು ಮರುನಾಮಕರಣ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಈ ಹಿಂದೆ ದೊಡ್ಡಬಳ್ಳಾಪುರ, ನೆಲಮಂಗಲ, ಯಲಹಂಕ, ದೇವನಹಳ್ಳಿ, ಆನೇಕಲ್, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಹೊಸಕೋಟೆ, ರಾಮನಗರ, ಮಾಗಡಿ, ಕನಕಪುರ ಮತ್ತು ಚನ್ನಪಟ್ಟಣ ತಾಲೂಕುಗಳು ಬೆಂಗಳೂರು ಜಿಲ್ಲೆಯ ಭಾಗವಾಗಿದ್ದವು. ತದನಂತರ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ಚನ್ನಪಟ್ಟಣ, ರಾಮನಗರ, ಮಾಗಡಿ ಹಾಗೂ ಕನಕಪುರ ತಾಲೂಕುಗಳನ್ನು ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಡಲಾಯಿತು ಎಂದು ಡಿಕೆ ಶಿವಕುಮಾರ್ ಉಲ್ಲೇಖಿಸಿದ್ದಾರೆ.

ನಂತರ ದೊಡ್ಡಬಳ್ಳಾಪುರವನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಹೊಸಕೋಟೆ, ನೆಲಮಂಗಲ ದೇವನಹಳ್ಳಿ, ದೊಡ್ಡಬಳ್ಳಾಪುರ ಒಳಗೊಂಡಂತೆ ಬೆಂಗಳೂರು ಗ್ರಾಮಂತರ ಜಿಲ್ಲೆಯನ್ನಾಗಿ ಮಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂಬ ಹೆಸರನ್ನು ಹಾಗೇ ಉಳಿಸಿಕೊಳ್ಳಲಾಯಿತು. ಅದೇ ರೀತಿ ಮಾಗಡಿ, ಕನಕಪುರ, ಚನ್ನಪಟ್ಟಣ ಹಾಗೂ ರಾಮನಗರ ತಾಲೂಕು ಸೇರಿಸಿ ಹೊಸದಾಗಿ ರಾಮನಗರ ಜಿಲ್ಲೆ ಮಾಡಲಾಯಿತು. ರಾಮನಗರ ಜಿಲ್ಲಾ ಕೇಂದ್ರವಾಯಿತು. ನಂತರ ಈ ಜಿಲ್ಲೆಗೆ ಹಾರೋಹಳ್ಳಿ ಹೊಸ ತಾಲ್ಲೂಕು ಸೇರ್ಪಡೆಯಾಯಿತು ಎಂದು ಅವರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಜಿಲ್ಲೆಗೆ ಕನಕಪುರ ಸೇರಿಸುವ ಬಗ್ಗೆ ಡಿಕೆ ಶಿವಕುಮಾರ್​ ಹೇಳಿಕೆಗೆ ಯಾರೆಲ್ಲ ಏನ್​​ ಅಂದ್ರು?


ಈಗ ಬೆಂಗಳೂರು ನಗರದ ಅಂತಾರಾಷ್ಟ್ರೀಯ ಖ್ಯಾತಿ, ಸಾರ್ವಭೌಮತೆ ಮತ್ತು ಘನತೆ ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ಹಾಗೂ ಹಾರೋಹಳ್ಳಿ ತಾಲೂಕುಗಳಿಗೆ ಲಭ್ಯ ಆಗಬೇಕೆಂಬುದು ಜನರ ಆಶಯ ಮತ್ತು ನನ್ನ ಚಿಂತನೆಯೂ ಕೂಡ. ಹೀಗಾಗಿ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಹಾಗೂ ಹಾರೋಹಳ್ಳಿ ಒಳಗೊಂಡ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿ ಹಾಗೂ ರಾಮನಗರವನ್ನು ಇದರ ಜಿಲ್ಲಾ ಕೇಂದ್ರವಾಗಿ ಇರಿಸಲು ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಜನರ ಅಭಿಪ್ರಾಯವನ್ನು ಕೂಡ ಸಂಗ್ರಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ