ಬೆಂಗಳೂರು ಜಿಲ್ಲೆಗೆ ಕನಕಪುರ ಸೇರಿಸುವ ಬಗ್ಗೆ ಡಿಕೆ ಶಿವಕುಮಾರ್ ಹೇಳಿಕೆಗೆ ಯಾರೆಲ್ಲ ಏನ್ ಅಂದ್ರು?
ಕನಕಪುರ ತಾಲೂಕನ್ನು ಬೆಂಗಳೂರು ಜಿಲ್ಲೆಗೆ ಸೇರಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದರು. ಸದ್ಯ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿ ಮಾಡಿದೆ. ಕೆಲವರು ಇದು ಸರಿ ಅಂದರೆ ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಯಾರೆಲ್ಲ ಏನ್ ಅಂದ್ರು ಇಲ್ಲಿದೆ ಮಾಹಿತಿ.
ಬೆಂಗಳೂರು, ಅಕ್ಟೋಬರ್ 25: ಕನಕಪುರ (Kanakpura) ತಾಲೂಕನ್ನು ಬೆಂಗಳೂರು ಜಿಲ್ಲೆಗೆ ಸೇರಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದರು. ಸದ್ಯ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿ ಮಾಡಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ. ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ಸಾಲು ಸಾಲು ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ಮಾಡಿದ್ದಾರೆ. ಈ ವಿಚಾರವಾಗಿ ಯಾರೆಲ್ಲ ಏನ್ ಅಂದ್ರು ಇಲ್ಲಿದೆ ಮಾಹಿತಿ.
ಡಿ.ಕೆ.ಶಿವಕುಮಾರ್ ಯಾವ ಆಯಾಮದಲ್ಲಿ ಹೇಳಿದ್ದಾರೋ ಗೊತ್ತಿಲ್ಲ: ಸಚಿವ ಎನ್.ಚಲುವರಾಯಸ್ವಾಮಿ
ದೆಹಲಿಯಲ್ಲಿ ಕೃಷಿ ಇಲಾಖೆ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದು, ಡಿ.ಕೆ.ಶಿವಕುಮಾರ್ ಯಾವ ಆಯಾಮದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ನಮ್ಮ ಹಂತದಲ್ಲಿ ಈ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಬೆಂಗಳೂರು ಜಿಲ್ಲೆಗೆ ಸೇರಿಸುವ ಬಗ್ಗೆ ಪ್ರಸ್ತಾಪ ಬಂದಾಗ ನೋಡೋಣ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಮನಗರ ಛಿದ್ರ ಮಾಡಿದವರು ನಾವಲ್ಲ, ಹೆಚ್ಡಿ ಕುಮಾರಸ್ವಾಮಿ: ಡಿಕೆ ಶಿವಕುಮಾರ್ ಆರೋಪ
ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಪ್ರತಿಕ್ರಿಯಿಸಿದ್ದು, ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಚರ್ಚೆ ಆಗಬೇಕು. ಸಂಪುಟದಲ್ಲಿ ಪ್ರಸ್ತಾಪ ಬಂದಾಗ ಈ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ನಮ್ಮ ನಿರ್ಧಾರದಿಂದ ಜನರಿಗೆ ತೊಂದರೆ ಆಗಬಾರದು ಎಂದ ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿಯಲ್ಲಿ ಟಿವಿ9 ಜೊತೆ PWD ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಡುವೆ ಫೈಟ್ ಇರಬಹುದು. ಅಂತಿಮವಾಗಿ ಎಲ್ಲಿಗೆ ಸೇರಬೇಕು ಅಂತಾ ಜನ ತೀರ್ಮಾನ ಮಾಡಬೇಕು. ನಮ್ಮ ನಿರ್ಧಾರದಿಂದ ಜನರಿಗೆ ತೊಂದರೆ ಆಗಬಾರದು. ಇದಕ್ಕೆ ಸರ್ಕಾರ ಕೂಡ ಒಪ್ಪಬೇಕು ಎಂದಿದ್ದಾರೆ.
ಡಿಸಿಎಂ ಡಿಕೆ ಬಗ್ಗೆ ಶಾಸಕ ಬಿ.ವೈ.ವಿಜಯೇಂದ್ರ ವ್ಯಂಗ್ಯ
ಮೈಸೂರಿನಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಡಿ.ಕೆ.ಶಿವಕುಮಾರ್ ಮಾಡಿದ್ದನ್ನೆಲ್ಲಾ ಯಾಕೆ ವಿರೋಧ ಮಾಡುತ್ತೀರಾ? ಡಿಸಿಎಂ ಡಿಕೆ ರಿಯಲ್ ಎಸ್ಟೇಟ್ ಉದ್ಯಮ ವಿಸ್ತರಣೆಯಾಗಬೇಕು. ಅದಕ್ಕೆ ಪಾಪ ರಾಮನಗರ ಬದಲಾಯಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಅವರು ಯಾವ ರೀತಿಯಲ್ಲಿ ಹೇಳಿದ್ದಾರೆ ಎಂಬ ಮಾಹಿತಿ ಇಲ್ಲ; ಸಚಿವ ರಾಮಲಿಂಗಾರೆಡ್ಡಿ
ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, 225 ಸ್ಕ್ವಯರ್ ಫೀಡ್ ಇದ್ದಂತಹ ಬೆಂಗಳೂರಿಗೆ 100 ಹಳ್ಳಿ ಸೇರಿಸಿದ್ದರು. ಆ ಹಳ್ಳಿಗಳಲ್ಲಿ ಅಭಿವೃದ್ಧಿಯೇ ಆಗಿಲ್ಲ, ಈ ಬಗ್ಗೆ ಬಿಜೆಪಿಯವರು ಉತ್ತರ ಕೊಡಬೇಕು. ನಾನು 8 ಭಾರೀ ಶಾಸಕನಾಗಿದ್ದೇನೆ. ಬೆಂಗಳೂರು ಸುತ್ತಲೂ ಅಭಿವೃದ್ಧಿಯಾಗ ಏರಿಯಾ ಸೇರಿಸಿಕೊಳ್ಳಲು ಯಾವುದೇ ಅಭ್ಯಂತರ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: ರಾಜಕೀಯದಲ್ಲಿ ವಿಲನ್ ಅಂತ ಇದ್ದರೆ ಅದು ಕುಮಾರಸ್ವಾಮಿ: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಕನಕಪುರ ಬೆಂಗಳೂರಿಗೆ ಸೇರ್ಪಡೆಯಾದರೆ ಟ್ರಾಫಿಕ್, ಉದ್ಯೋಗ ಸಮಸ್ಯೆ ಉಲ್ಬಣಿಸೊಲ್ವಾ ಎಂಬ ಪ್ರಶ್ನೆಗೆ ಅದನ್ನೆಲ್ಲ ಡಿ.ಕೆ ಶಿವಕುಮಾರ್ ಅವರನ್ನು ಕೇಳಿ ಎಂದರು. ನನಗೆ ಅವರ ಯಾವ ರೀತಿಯಲ್ಲಿ ಹೇಳಿದ್ದಾರೆ ಎಂಬ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:25 pm, Wed, 25 October 23