ಬೆಂಗಳೂರು ಅ.16: ಇಂದಿನಿಂದ ತಮಿಳುನಾಡು (Tamilnadu) ರಾಜ್ಯಕ್ಕೆ ಮತ್ತೆ 15 ದಿನಗಳ ಕಾಲ ನಿತ್ಯ 3 ಸಾವಿರ ಕ್ಯೂಸೆಕ್ ಕಾವೇರಿ (Cauvery) ನೀರು ಹರಿಸಬೇಕು ಎಂಬ ಕಾವೇರಿ ನೀರು ನಿರ್ವಹಣಾ ಸಮಿತಿ (CWRC) ಮತ್ತು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶ ಕನ್ನಡಿಗರ ಪಾಲಿಗೆ ಮರಣಶಾಸನವಾಗಿದೆ. ಈ ಆದೇಶದಿಂದ ಕಾವೇರಿ ಕೊಳ್ಳದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇನ್ನು ತಮಿಳುನಾಡಿಗೆ ನೀರು ಹರಿಸದಂತೆ ಮಂಡ್ಯದಲ್ಲಿ ರೈತರು ಮತ್ತು ಕನ್ನಡಪರ ಸಂಘಟನೆಗಳ ಪ್ರತಿಭಟನೆ 42ನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾವೇರಿಗಾಗಿ ದೆಹಲಿ ಚಲೋ ಕರೆ ನೀಡಿದೆ.
ಕರವೇ ಕಾರ್ಯಕರ್ತರು ಅಕ್ಟೋಬರ್ 18ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಕರವೇ ಅಧ್ಯಕ್ಷ ನಾರಯಣ ಗೌಡ ನೇತೃತ್ವದಲ್ಲಿ ಕಾರ್ಯಕರ್ತರು ದೆಹಲಿಗೆ ಪ್ರಯಾಣಿಸಲಿದ್ದಾರೆ. ಕೆಲವರು ಬೆಳಗಾವಿಯಿಂದ ದೆಹಲಿಗೆ ಟ್ರೈನ್ ಮೂಲಕ, ಇನ್ನು ಕೆಲವರು ಬೆಂಗಳೂರಿನಿಂದ ಪ್ಲೈಟ್ ಮೂಲಕ ದೆಹಲಿಗೆ ಪ್ರಯಾಣಿಸಲಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಮುಂದುವರೆದ ಕಾವೇರಿ ಕಿಚ್ಚು; ಅನ್ನದಾತನ ವಿಭಿನ್ನ ರೀತಿ ಹೋರಾಟ
ದೆಹಲಿ ಕನ್ನಡ ಸಂಘ ಮತ್ತು ಕರವೇಯಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಕರವೇ ಕಾರ್ಯಕರ್ತರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಬಳಿ, ಪ್ರಧಾನಿ ಮೋದಿ ಭೇಟಿಗಾಗಿ ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿ ಭೇಟಿಗೆ ಕರ್ನಾಟಕ ಸಂಘ ದೆಹಲಿ ಅಧ್ಯಕ್ಷ ನಾಗರಾಜ್, ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವೇಳೆ ಕಾವೇರಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿಗೆ ಒತ್ತಾಯಿಸಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ