AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ವಿದ್ಯುತ್ ಕೊರತೆ ಒಪ್ಪಿಕೊಂಡ ಸಿಎಂ, ಆದರೂ ರೈತರಿಗೆ ಸಿಹಿ ಸುದ್ದಿ ನೀಡಿದ ಸಿದ್ದರಾಮಯ್ಯ

ವಿದ್ಯುತ್ ಖರೀದಿ ಮಾಡುವಂತೆ ಸೂಚನೆ ನೀಡಿದ್ದೇನೆ. ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಉತ್ಪಾದನೆ ಹೆಚ್ಚು ಮಾಡಲು ಸೂಚನೆ ನೀಡಿದ್ದೇವೆ. ರೈತರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡುತ್ತೇವೆ‌. ರೈತರು ನಿರಂತರವಾಗಿ ನಾಲ್ಕು ಗಂಟೆ ತ್ರೀ ಫೇಸ್ ವಿದ್ಯುತ್ ಕೊಟ್ಟರೆ ಸಾಕು ಎಂದು ಹೇಳುತ್ತಿದ್ದಾರೆ. ಆದರೆ ನಿರಂತರ ಐದು ಗಂಟೆ ವಿದ್ಯುತ್ ಕೊಡಲು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕದಲ್ಲಿ ವಿದ್ಯುತ್ ಕೊರತೆ ಒಪ್ಪಿಕೊಂಡ ಸಿಎಂ, ಆದರೂ ರೈತರಿಗೆ ಸಿಹಿ ಸುದ್ದಿ ನೀಡಿದ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
ರಾಮ್​, ಮೈಸೂರು
| Edited By: |

Updated on: Oct 16, 2023 | 11:59 AM

Share

ಮೈಸೂರು ಅ.16: ಕರ್ನಾಟಕದಲ್ಲಿ ವಿದ್ಯುತ್ (Electricity) ಕೊರತೆ ಉಂಟಾಗುತ್ತಿದ್ದು, ಲೋಡ್​ ಶೆಡ್ಡಿಂಗ್​​ನಿಂದ ರೈತರ ನೀರಾವರಿ ಪಂಪ್​ ಸೆಟ್​​ಗಳಿಗೆ ಸಮರ್ಪಕವಾಗಿ ವಿದ್ಯುತ್​ ಪೂರೈಕೆಯಾಗುತ್ತಿಲ್ಲ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಾತನಾಡಿ 2 ರಿಂದ 3 ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆ ಇದೆ. ಬಿಜೆಪಿ ಸರ್ಕಾರದಲ್ಲಿ ಹಾಗೂ ಹೆಚ್​​ಡಿ ಕುಮಾರಸ್ವಾಮಿ ಸರ್ಕಾರದಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗಲಿಲ್ಲ. ಹೀಗಾಗಿ ವಿದ್ಯುತ್ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹೊರಗಡೆಯಿಂದ ವಿದ್ಯುತ್ ಖರೀದಿ ಮಾಡುವಂತೆ ಸೂಚನೆ ನೀಡಿದ್ದೇನೆ. ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಉತ್ಪಾದನೆ ಹೆಚ್ಚು ಮಾಡಲು ಸೂಚನೆ ನೀಡಿದ್ದೇವೆ. ರೈತರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡುತ್ತೇವೆ‌. ರೈತರು ನಿರಂತರವಾಗಿ ನಾಲ್ಕು ಗಂಟೆ ತ್ರೀ ಫೇಸ್ ವಿದ್ಯುತ್ ಕೊಟ್ಟರೆ ಸಾಕು ಎಂದು ಹೇಳುತ್ತಿದ್ದಾರೆ. ಆದರೆ ನಿರಂತರ ಐದು ಗಂಟೆ ವಿದ್ಯುತ್ ಕೊಡಲು ಸೂಚಿಸಿದ್ದೇನೆ. ಎಲ್ಲದರ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಭರವಸೆ ನೀಡಿದರು.

ಹೊಸದಾಗಿ ಬೋರ್​ವೆಲ್​ ಕೊರೆಸಲು ಸೂಚನೆ

ರಾಜ್ಯದಲ್ಲಿನ ಕುಡಿಯುವ ನೀರು ಮತ್ತು ಮೇವಿನ ಕೊರತೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ 236 ತಾಲೂಕುಗಳ‌ ಪೈಕಿ 216 ತಾಲೂಕುಗಳಲ್ಲಿ ಬರಗಾಲ ಆವರಿಸಿದೆ. 42,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಸಂಪೂರ್ಣ ನಾಶವಾಗಿದೆ. ಸದ್ಯಕ್ಕೆ ಕುಡಿಯುವ ನೀರಿ‌ನ ಸಮಸ್ಯೆಯಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಬಿದ್ದರೇ ಹೊಸದಾಗಿ ಬೋರ್​ವೆಲ್​ ಕೊರೆಸಲು ಸೂಚಿಸಲಾಗಿದೆ.ಜಾನುವಾರಗಳಿಗೆ ಮೇವು ಕೊರತೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಇದನ್ನೂ ಓದಿ: ಭೀಕರ ಬರಗಾಲದಿಂದ ರಾಜ್ಯದ ರೈತರಿಗೆ 30 ಸಾವಿರ ಕೋಟಿ ರೂ. ನಷ್ಟ: ಸಿಎಂ ಸಿದ್ದರಾಮಯ್ಯ

ಚುನಾವಣೆಗೆ ಕಾಂಗ್ರೆಸ್ ಹಣ ಸಂಗ್ರಹಿಸುತ್ತಿದೆ ಎಂಬ ಬಿಜೆಪಿ ಆರೋಪದ ವಿಚಾರವಾಗಿ ಮಾತನಾಡಿದ ಅವರು ನಮಗೆ ಈವರೆಗೂ ಹೈಕಮಾಂಡ್​ ನಯಾ ಪೈಸೆ ಹಣ ಕೇಳಿಲ್ಲ. ಬಿಜೆಪಿ ಮಾಡುತ್ತಿರುವ ಎಲ್ಲ ಆರೋಪಗಳು ನಿರಾಧಾರ. ಗುತ್ತಿಗೆದಾರರನ್ನು ಬಿಜೆಪಿ, ಕಾಂಗ್ರೆಸ್ಸಿಗರು ಅಂತಾ ಹೇಳಲು ಆಗುತ್ತಾ? ಈಗ ನಾನು ಹೇಳುತ್ತೇನೆ ಅವನು ಬಿಜೆಪಿ ಗುತ್ತಿಗೆದಾರ ಅಂತ, ಈ ಮಾತನ್ನು ಯಾರಾದರೂ ಒಪ್ಪಿಕೊಳ್ಳುತ್ತಾರಾ? ಐದು ರಾಜ್ಯ ಚುನಾವಣೆಗೂ ನಮಗೂ ಏನೂ ಸಂಬಂಧ? ನಮ್ಮ ಚುನಾವಣೆ ವೇಳೆ ನಾವು ಯಾರನ್ನಾದರೂ ಹಣ ಕೇಳಿದ್ವಾ? ಈಗ ಅವರಿಗೆ, ಇವರಿಗೆ ಹಣ ಕೊಡಬೇಕು ಎನ್ನುವ ಪ್ರಶ್ನೆಗೆ ಅರ್ಥವಿಲ್ಲ. ಬಿಜೆಪಿಯವರು ಸುಖಾಸುಮ್ಮನೆ ಆರೋಪ ಮಾಡುತ್ತಾರೆ ವಾಗ್ದಾಳಿ ಮಾಡಿದರು.

ಈ ಹಣ ಸರ್ಕಾರದ್ದು ಎಂದು ಐಟಿ ಏನಾದರೂ ಹೇಳಿದೆಯಾ? ಐಟಿ ಏನಾದರೂ ಸರ್ಕಾರದ ಮೇಲೆ ಆರೋಪ ಮಾಡಿದೆಯಾ? ಐಟಿ ದಾಳಿ ವಿಚಾರದ ಬಗ್ಗೆ ನಾವೇಕೆ ತನಿಖೆ ಮಾಡಬೇಕು? ಐಟಿ ಅಧಿಕಾರಿಗಳ ದಾಳಿಗಳು ಸಾಮಾನ್ಯವಾಗಿ ನಡೆಯುತ್ತವೆ. ಇದನ್ನು ರಾಜಕೀಯಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ