ದೇವನಹಳ್ಳಿ: ಚರಂಡಿಯಲ್ಲಿ ಅರ್ಧ ಕಿಮೀ ಕೊಚ್ಚಿ ಹೋಗಿದ್ದ ವ್ಯಕ್ತಿ ಕೊನೆಗೂ ಬಚಾವ್, ಸಾವು ಗೆದ್ದು ಮೃತ್ಯುಂಜಯನಾದ ವೆಂಕಟೇಶ್

| Updated By: ಗಣಪತಿ ಶರ್ಮ

Updated on: Oct 22, 2024 | 2:16 PM

ಕರ್ನಾಟಕದಾದ್ಯಂತ ಸೋಮವಾರ ಸುರಿದ ವರ್ಷಧಾರೆ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ಮಳೆಯಿಂದಾಗಿ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದರೆ, ಇನ್ನು ಹಲವೆಡೆ ಬೆಳೆ ನಾಶ, ಮನೆಗಳಿಗೆ ನೀರು ನುಗ್ಗಿದಂಥ ಘಟನೆಗಳು ಸಂಭವಿಸಿದೆ. ದೇವನಹಳ್ಳಿಯಲ್ಲಿ ಚರಂಡಿಯಲ್ಲಿ ಕೊಚ್ಚಿಹೋದ ವ್ಯಕ್ತಿಯನ್ನು ಸ್ಥಳೀಯರು ಸಿನಿಮೀಯವಾಗಿ ರಕ್ಷಿಸಿದ್ದು, ಸಿಸಿಟಿವಿ ದೃಶ್ಯ ಹಾಗೂ ಸಂಬಂಧಿತ ವಿಡಿಯೋಗಳು ಈಗ ವೈರಲ್ ಆಗುತ್ತಿವೆ.

ಬೆಂಗಳೂರು, ಅಕ್ಟೋಬರ್ 22: ಬೆಂಗಳೂರು ಉತ್ತರ ಭಾಗದಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ವ್ಯಕ್ತಿಯೊಬ್ಬರು ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ದೇವನಹಳ್ಳಿಯ ದೊಡ್ಡ ಸಾಗರದಲ್ಲಿ ಘಟನೆ ನಡೆದಿದ್ದು, ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವ್ಯಕ್ತಿ ವೆಂಕಟೇಶ್​ ಎಂಬವರನ್ನು ಸಿನಿಮೀಯ ರೀತಿಯಲ್ಲಿ ಸ್ಥಳೀಯರು ರಕ್ಷಿಸಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ವೆಂಕಟೇಶ್​ ಬಚಾವ್ ಆಗಿದ್ದಾರೆ.

ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಗಾರೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೆಂಕಟೇಶ್, ಮಳೆ ನೀರಿನ ರಭಸಕ್ಕೆ ನಿಲ್ಲಲಾಗದೇ ಜಾರಿ ಚರಂಡಿಗೆ ಬಿದ್ದಿದ್ದಾರೆ. ಅರ್ಧ ಕಿಲೋ ಮೀಟರ್ ಕೊಚ್ಚಿಕೊಂಡು ಹೋಗಿದ್ದಾರೆ. ನಂತರ ಅವರನ್ನು ಗಮನಿಸಿದ ಗ್ರಾಮಸ್ಥರು ರಕ್ಷಿಸಿದ್ದಾರೆ. ಸಾವು ಗೆದ್ದು ಬಂದ ವೆಂಕಟೇಶ್ ‘ಟಿವಿ9’ ಜೊತೆ ಮಾತನಾಡಿ, ನಾನು ಬದುಕಿ ಬಂದಿದ್ದೇ ಪುಣ್ಯ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ರಣಭೀಕರಮಳೆಗೆ ಸರ್ಕಾರಿ ಶಾಲೆ ಜಲಾವೃತ

ಬೆಂಗಳೂರಿನ ದೇವನಹಳ್ಳಿ ಬಳಿಯ ದೊಡ್ಡ ಸಾಗರ ಗ್ರಾಮದ ಸರ್ಕಾರಿ ಶಾಲೆ ಜಲಾವೃತವಾಗಿದೆ. 50 ಮಕ್ಕಳಿರುವ ಶಾಲೆಗೆ ನೀರು ನುಗ್ಗಿದ್ದು, ಶಾಲೆಗೆ ರಜೆ ನೀಡಲಾಗಿದೆ.

ನೀರಲ್ಲಿ ಕೊಚ್ಚಿ ಹೋದ ಕಾರು ನಾಲ್ವರು ಬಚಾವ್

ಮತ್ತೊಂದೆಡೆ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಗ್ರಾಮದ ಹಳ್ಳದಲ್ಲಿ ಕಾರು ಕೊಚ್ಚಿ ಹೋಗಿದೆ. ಕಾರಲ್ಲಿದ್ದ ತಿಪ್ಪೇಸ್ವಾಮಿ, ನಿತಿನ್, ಮಲ್ಲಿಕಾರ್ಜುನ, ಬೋರೇಶ ಬಚಾವ್ ಆಗಿದ್ದಾರೆ. ನಾಯಕನಹಟ್ಟಿ ಬಳಿಯ ಸೇತುವೆ ನೀರಲ್ಲಿ ಕೊಚ್ಚಿ ಹೋಗಿದ್ದು, ಇದನ್ನ ಅರಿಯದ ಯುವಕರು ಕಾರು ಚಲಾಯಿಸಿದ್ದಾರೆ. ಮೊದಲು ತಿಪ್ಪೇಸ್ವಾಮಿ ಕಾರಿಂದ ಪಾರಾಗಿ ಬಂದು ಸ್ಥಳೀಯರಿಗೆ ಮಾಹಿತಿ ನೀಡಿದರು. ನಂತರ ಮೂವರನ್ನ ರಕ್ಷಿಸಲಾಗಿದೆ. ಹಳ್ಳದಲ್ಲಿ ಮುಳುಗಿ ಹೋದ ಇಟಿಎಸ್ ಕಾರ್ ನಾಪತ್ತೆಯಾಗಿದೆ.

ಶ್ರೀಗುರು ತಿಪ್ಪೇರುದ್ರಸ್ವಾಮಿ ಹೊರಮಠಕ್ಕೆ ಜಲದಿಗ್ಬಂಧನ

ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ಹೊರಮಠಕ್ಕೂ ಜಲದಿಗ್ಬಂಧನವಾಗಿದೆ. ಅಧಿಕಾರಿಗಳ ವಿರುದ್ಧ ಭಕ್ತರು ಆಕ್ರೋಶ ಹೊರಹಾಕಿದ್ದಾರೆ.

ಇಷ್ಟೇ ಅಲ್ಲ, ನಾಯಕನಹಟ್ಟಿ ಪೊಲೀಸ್ ಠಾಣೆಯೂ ಜಲಾವೃತವಾಗಿದ್ದು, ಠಾಣೆ ಆವರಣದಲ್ಲಿದ್ದ ಜೀಪ್ ಮುಳುಗಡೆಯಾಗಿದೆ. ಪೊಲೀಸ್ ಠಾಣೆಯೊಳಗೆ ಮಳೆ ನೀರು ನುಗ್ಗಿದ್ದು, ದಾಖಲೆಗಳನ್ನ ರಕ್ಷಿಸಿಕೊಳ್ಳಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ದಾವಣಗೆರೆಯಲ್ಲಿ 50 ಮನೆಗಳಿಗೆ ನುಗ್ಗಿದ ನೀರು

ದಾವಣಗೆರೆ ಜಿಲ್ಲೆ ತಾಲೂಕಿನ ನ್ಯಾಮತಿ ತಾಲೂಕಿನಲ್ಲಿರೋ ಯರಗನಾಳ ಗ್ರಾಮದಲ್ಲಿ ಗೌಡನಕೆರೆ ಕೋಡಿ ಬಿದ್ದು 50 ಮನೆಗಳಿಗೆ ನೀರು ನುಗ್ಗಿದೆ. ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ ಕಾರುಗಳು ಮುಳುಗಡೆಯಾಗಿದೆ. ಆತಂಕದಲ್ಲಿದ್ದ 40 ಗ್ರಾಮಸ್ಥರನ್ನ ರಕ್ಷಣೆ ಮಾಡಲಾಗಿದೆ.

ಹಾಸನಾಂಬ ಬಡಾವಣೆಗೆ ಜಲಬೇಲಿ: ಜನ ಕಂಗಾಲು

ಹಾಸನದ ಹಾಸನಾಂಬ ಬಡಾವಣೆಗೂ ಜಲಬೇಲಿ ಬಿದ್ದಿದೆ. ಮನೆಯಿದ ಹೊರಗೆ ಬರಲಾಗದೇ ಜನ ಲಾಕ್ ಆಗದ್ದಾರೆ. ಕುಡಿಯೋಕೂ ನೀರಿಲ್ಲ ಅಂತಾ ಬಡಾವಣೆ ನಿವಾಸಿಗಳು ಗೋಳಾಡುತ್ತಿದ್ದಾರೆ.

ತೇಜೂರು, ಉದ್ದೂರು ಕೆರೆ ಕೋಡಿ ಬಿದ್ದು, ಹಾಸನದ ಬೇಲೂರು ರಸ್ತೆ ಬಂದ್ ಆಗಿದೆ. ರಸ್ತೆ ಮೇಲೆ ಬೃಹತ್ ಪ್ರಮಾಣದ ನೀರು ಹರಿಯುತ್ತಿದೆ. ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗಿದೆ. ಇದೇ ರಸ್ತೆಯಲ್ಲಿ ರಭಸವಾಗಿರೋ ನೀರನ್ನ ಲೆಕ್ಕಿಸದೇ ಬೈಕ್ ಸವಾರರು ಓಡಾಡ್ತಿದ್ದಾರೆ. ನೀರಲ್ಲಿ ನಿಯಂತ್ರಣ ಕಳೆದುಕೊಂಂಡ ಬೈಕ್ ಸವಾರರನ್ನ ಜನರು ರಕ್ಷಿಸಿದ್ದಾರೆ.

ಇದನ್ನೂ ಓದಿ: ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!

ಚಿಕ್ಕಬಳ್ಳಾಪುರದಲ್ಲೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಬಡಾವಣೆಗಳು ಜಲಾವೃತವಾಗಿದೆ. ಮಂಡ್ಯದ ಕೆ.ಆರ್‌ ಪೇಟೆ ತಾಲೂಕಿನ ಜೌಡೇನಹಳ್ಳಿ ಗ್ರಾಮದಲ್ಲಿ ಕಕ್ಕೇರಿ ಕೆರೆ ಕೋಡಿ ಬಿದ್ದು, ರಸ್ತೆ ಮೇಲೆ ನೀರು ತುಂಬಿ ಹರಿಯುತ್ತಿದೆ.

ಕೇವಲ ಬೆಂಗಳೂರಷ್ಟೇ ಅಲ್ಲದೆ, ಕರ್ನಾಟಕ ಇತರ ಜಿಲ್ಲೆಗಳಲ್ಲಿಯೂ ರಣ ಮಳೆಯಾಗಿದ್ದು, ಜನ ನಡುಗಿ ಹೋಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ