ಬಾಗಲಕೋಟೆ: ಸಾಮಾನ್ಯವಾಗಿ ದೇವರಿಗೆ ಹಣ್ಣು ಕಾಯಿ, ಪಾಯಸ ಹೀಗೆ ವಿವಿಧ ಆಹಾರ ಪದಾರ್ಥಗಳ ನೈವೇದ್ಯ ಅರ್ಪಿಸುತ್ತಾರೆ. ಇದಕ್ಕೆ ಪ್ರತಿಯಾಗಿ ದೇವಾಲಯದಲ್ಲಿ ತೆಂಗಿನ ಹಾಲು, ಶುದ್ಧ ನೀರು ತೀರ್ಥ ಕೊಡುತ್ತಾರೆ. ಆದರೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ಕೆಲವಡಿ ಗ್ರಾಮದ ಲಕ್ಷ್ಮಿ ರಂಗನಾಥ ದೇವಸ್ಥಾನದಲ್ಲಿ ಮಾತ್ರ ಮದ್ಯವೇ ದೇವರಿಗೆ ನೈವೇದ್ಯ, ಸಾರಾಯಿಯೇ ಭಕ್ತರಿಗೆ ತೀರ್ಥ. ಅಲ್ಲಿಗೆ ಬಂದರೆ ದೇವರ ಮುಂದೆ ವೆರೈಟಿ ವೆರೈಟಿ ಸಾರಾಯಿ ಬಾಟಲಿಗಳು ಕಂಡು ಬರುತ್ತವೆ. ಕೊರೊನಾ ಜಾತ್ರೆ ನಿಷೇಧದ ಮಧ್ಯೆಯೂ ಜನ ಮಾತ್ರ ಜಾತ್ರೆಯಲ್ಲಿ ಭಾಗಿಯಾಗಿ ಮದ್ಯದ ನೈವೇದ್ಯ ಮಾಡಿದ್ದಾರೆ.
ಇಲ್ಲಿನ ರಂಗನಾಥ ದೇವಸ್ಥಾನದಲ್ಲಿ ಪ್ರತಿ ವರ್ಷ ಹೋಳಿ ಹುಣ್ಣೆಮೆಯ ಬಳಿಕ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಬರುವ ಭಕ್ತರು ತಮ್ಮ ಹರಕೆ ತೀರಿಸಲು ದೇವರಿಗೆ ಮದ್ಯದ ನೈವೇದ್ಯ ಮಾಡಿಸಿ, ತೀರ್ಥ ಸೇವನೆ ಮಾಡುವುದು ವಿಶೇಷ. ಅಂದಾಜು 600 ವರ್ಷಗಳ ಇತಿಹಾಸ ಇರುವ ಈ ಲಕ್ಷ್ಮಿ ರಂಗನಾಥ ದೇವಸ್ಥಾನದ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ತಮ್ಮ ಹರಕೆ ತೀರಿಸಲು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮದ್ಯದ ಬಾಟಲಿ ತಂದು ಪೂಜೆ ಮಾಡಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಇನ್ನು ಸದ್ಯ ಕೊರೊನಾ ಎರಡನೇ ಅಲೆ ಹಿನ್ನೆಲೆ ನಿನ್ನೆ ತಾನೇ ನಿಯಮಗಳನ್ನು ಜಾರಿ ಮಾಡಲಾಗಿದೆ. ಆದರೂ ಕೇರ್ ಮಾಡದ ಜನರು ಸಾವಿರಾರು ಸಂಖ್ಯೆಯಲ್ಲಿ ಹಾಜರಿದ್ದರು. ಕೊವಿಡ್ ನಿಯಮವನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಭಕ್ತಿಯನ್ನು ಪ್ರದರ್ಶಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಲಕ್ಷ್ಮಿ ರಂಗನಾಥ ದೇವರಿಗೆ ಮದ್ಯದ ನೈವೇದ್ಯ ಅರ್ಪಿಸಿ ಪುನೀತರಾದರು.
ಇನ್ನು ದೇವರಿಗೆ ಎಣ್ಣೆ ಕಾಣಿಕೆ ಸಲ್ಲಿಸುವುದು ಎಂದು ಜನರು ಹೇಳಿದರೂ ದೇವಸ್ಥಾನದ ಭಕ್ತರು ಮಾತ್ರ ಅದು ತೀರ್ಥ ಅಂತಾರೆ. ಹೀಗೆ ದೇವರಿಗೆ ತಮ್ಮ ಬೇಡಿಕೆ ಈಡೇರಿಸಿದರೆ ಇಂತಿಷ್ಟು ಮದ್ಯದ ಕಾಣಿಕೆ ಸಲ್ಲಿಸುವುದಾಗಿ ಹರಕೆ ಹೊತ್ತಿರುತ್ತಾರಂತೆ. ಅದರಂತೆ ಜಾತ್ರೆಯ ಸಮಯಕ್ಕೆ ಬಂದು ಎಣ್ಣೆ ಕಾಣಿಕೆ ನೀಡಿ ತೀರ್ಥ ಸೇವನೆ ಮಾಡಿ ಹೋಗುತ್ತಾರೆ. ಕೆಲವರು ಹರಕೆ ತೀರಿಸೋಕೆ ಅಂತ ಮದ್ಯ ನೈವೇದ್ಯ ಅರ್ಪಿಸಿದರೆ ಕೆಲವರು ಹರಕೆ ಹೊರದಿದ್ದರೂ ಸಾಮಾನ್ಯವಾಗಿ ಎಲ್ಲ ನೈವೇದ್ಯದ ಜೊತೆಗೆ ಸಾರಾಯಿ ನೈವೇದ್ಯ ಅರ್ಪಿಸುತ್ತಾರೆ. ಇದರಿಂದ ತಮಗೆ ಒಳ್ಳೆಯದು ಆಗುತ್ತೆ ಎನ್ನುವುದು ಭಕ್ತರ ನಂಬಿಕೆ.
ಹೀಗಾಗಿ ಜಾತ್ರೆ ಬಂತೆಂದರೆ ಸಾಕು ದೇವಸ್ಥಾನದ ಆವರಣ, ಗರ್ಭಗುಡಿ ಎಲ್ಲೆಂದರಲ್ಲಿ ಎಣ್ಣೆ ಬಾಟಲಿಗಳೇ ರಾರಾಜಿಸುತ್ತವೆ. ಶತಶತಮಾನಗಳಿಂದ ನಡೆದು ಬಂದಿರುವ ಈ ಪದ್ಧತಿ ಈಗಲೂ ಮುಂದುವರೆದುಕೊಂಡು ಬಂದಿದೆ. ಇದಕ್ಕೆ ಕಾರಣ ಹಿಂದೆ ಈ ಭಾಗದಲ್ಲಿ ಬರ ಬಿದ್ದು ಜನರಿಗೆ ಕುಡಿಯೋದಕ್ಕೂ ನೀರಿಲ್ಲದೆ ಪರಿತಪಿಸುವಂತಾಗಿತ್ತು, ಆಗ ಲಕ್ಷ್ಮಿರಂಗನಾಥ ದೇವರು ಮನುಜನ ರೂಪ ತಾಳಿ ಈ ಭಾಗಕ್ಕೆ ಬಂದು ಹಣ್ಣಿನ ರಸವನ್ನು ನೀರು ಮಾಡಿ ಬಾಯಾರಿಕೆ ನೀಗಿಸಲು ಜನರಿಗೆ ನೀಡಿದ್ರಂತೆ. ನಂತರ ಇದನ್ನು ತಿಳಿದ ಜನರು ದೇವರು ನಮಗೆ ಕೊಟ್ಟಿದ್ದು ಹಣ್ಣಿನ ರಸ, ಅಂದರೆ ಅದು ಸೋಮರಸ. ಹಣ್ಣಿನ ರಸಕ್ಕೆ ಪ್ರತಿಯಾಗಿ ಲಕ್ಷ್ಮಿರಂಗನಾಥ ದೇವರಿಗೆ ಸಾರಾಯಿ ನೈವೇದ್ಯ ಅರ್ಪಿಸುವುದಕ್ಕೆ ಶುರು ಮಾಡಿದರು ಎಂದು ಶೈಲಜಾ ಕೆಲವಡಿ ಹೇಳಿದ್ದಾರೆ.
ಒಟ್ಟಾರೆ ಸಾರಾಯಿ ಅರ್ಪಿಸಿದರೆ ಬೇಡಿಕೆ ಈಡೇರುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಇದರಿಂದ ಇಂದಿಗೂ ಸಾರಾಯಿ ನೈವೇದ್ಯ ಪದ್ಧತಿ ಮುಂದುವರಿಯುತ್ತಲೇ ಸಾಗುತ್ತಿದೆ. ಅದೇನೆ ಇದ್ದರೂ ಎಲ್ಲವೂ ಭಕ್ತರ ನಂಬಿಕೆ ಮೇಲೆ ನಿಂತಿದ್ದು, ಇದೊಂದು ವಿಭಿನ್ನ ವಿಶೇಷ ದೇವಸ್ಥಾನ ಹಾಗೂ ವಿಚಿತ್ರ ಪದ್ಧತಿ ಎಂಬುದು ಮಾತ್ರ ನಿಜ.
(ವರದಿ: ರವಿ ಮೂಕಿ – 9980914144)
ಇದನ್ನೂ ಓದಿ: ಮದ್ಯ ಸೇವನೆಗೆ ಹಣ ನೀಡದಿದ್ದಕ್ಕೆ ತಾಯಿಯನ್ನೇ ಕೊಂದ ಮಗ.. ನಾಪತ್ತೆಯಾಗಿದ್ದ ವೃದ್ದೆ ಶವ ನದಿಯಲ್ಲಿ ಪತ್ತೆ
ಇಲ್ಲಿ ಶಿವ ಕಾಲಭೈರವನ ರೂಪದಲ್ಲಿದ್ದಾನೆ.. ಇವನಿಗೆ ಬೇಕು ಮದ್ಯ ನೈವೇದ್ಯ
(Devotees give alcohol to Lakshmi Ranganatha God in Bagalkot is a unique tradition)
Published On - 11:06 am, Sun, 4 April 21