ಉರಗಕ್ಕೂ ಯಾದಗಿರಿಯ ಈ ಕುಟುಂಬಕ್ಕೂ ಅವಿನಾಭಾವ ಸಂಬಂಧ; 15 ವರ್ಷಗಳ ನಿಸ್ವಾರ್ಥ ಸೇವೆ
ಯಾದಗಿರಿ ಜಿಲ್ಲೆಯಲ್ಲಿ ಕಳೆದ ಆರೇಳು ದಶಕಗಳಿಂದ ನಗರದ ಶಶಿಧರ ಕಾಲೋನಿಯಲ್ಲಿರುವ ಚಾಂದ ಪಾಷ ಪರಿವಾರ ಹಾವುಗಳ ರಕ್ಷಣೆಯಲ್ಲಿ ತೊಡಗಿದೆ. ಜಿಲ್ಲೆ ಸೇರಿದಂತೆ ಹಾವುಗಳ ಎಲ್ಲೆ ಪ್ರತ್ಯಕ್ಷವಾದರೆ ಸಾಕು ಚಾಂದ ಪಾಷ ಕುಟುಂಬಸ್ಥರಿಗೆ ಒಂದು ಕರೆ ಮಾಡಿದರೆ ಹಾವುಗಳ ರಕ್ಷಣೆಗೆ ದಾವಿಸುತ್ತಾರೆ.
ಯಾದಗಿರಿ: ಮನೆಯಲ್ಲಿ ಹಲ್ಲಿ, ಜಿರಳೆಗಳು ಬಂದರೆ ಸಾಕು ಜನ ಹೆದರಿಕೊಳ್ಳುತ್ತಾರೆ. ಹಾವುಗಳು ಕಂಡರೆ ಊಹಿಸಕ್ಕೂ ಸಾಧ್ಯವಿಲ್ಲ ಕಾಲುಕಿತ್ತು ಓಡಿ ಹೋಗುತ್ತಾರೆ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಕೆಲ ದಶಕಗಳಿಂದ ಒಂದು ಕುಟುಂಬಕ್ಕೆ ಮತ್ತು ಹಾವುಗಳಿಗೆ ಅವಿನಾಭಾವ ಸಂಬಂಧವಿದೆ. ಹಾವುಗಳು ಕಂಡರೆ ಸಾಕು ಕುಟುಂಬವೊಂದರ ಸದಸ್ಯರು ಹಾಜರಿರುತ್ತಾರೆ. ಹಾವುಗಳ ರಕ್ಷಣೆ ಮಾಡುತ್ತಾ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದಾರೆ. ಆದರೆ ಸರ್ಕಾರ ಮಾತ್ರ ಇವರ ಕಡೆ ನೋಡದೆ ಇರುವುದು ದುಃಖದ ಸಂಗತಿಯಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಕಳೆದ ಆರೇಳು ದಶಕಗಳಿಂದ ನಗರದ ಶಶಿಧರ ಕಾಲೋನಿಯಲ್ಲಿರುವ ಚಾಂದ ಪಾಷ ಪರಿವಾರ ಹಾವುಗಳ ರಕ್ಷಣೆಯಲ್ಲಿ ತೊಡಗಿದೆ. ಜಿಲ್ಲೆ ಸೇರಿದಂತೆ ಹಾವುಗಳ ಎಲ್ಲೆ ಪ್ರತ್ಯಕ್ಷವಾದರೆ ಸಾಕು ಚಾಂದ ಪಾಷ ಕುಟುಂಬಸ್ಥರಿಗೆ ಒಂದು ಕರೆ ಮಾಡಿದರೆ ಹಾವುಗಳ ರಕ್ಷಣೆಗೆ ದಾವಿಸುತ್ತಾರೆ. ಚಾಂದ ಅವರು ಕಳೆದ 15 ವರ್ಷಗಳಿಂದ ಹಾವುಗಳನ್ನು ರಕ್ಷಣೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಹಾವುಗಳನ್ನು ಹಿಡಿದು ನೇರವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬರುತ್ತಾರೆ. ಆದರೆ ಚಾಂದ ಅವರ ಕುಟುಂಬ ಜಿಲ್ಲೆಯಲ್ಲಿ ಸ್ನೇಕ್ ಫ್ಯಾಮಿಲಿ ಅಂತಾನೆ ಫೇಮಸ್ ಆಗಿದೆ. ಚಾಂದ ಅವರ ಕುಟುಂಬದಲ್ಲಿ ಕೇವಲ ಚಾಂದ ಪಾಷರವರು ಮಾತ್ರ ಹಾವುಗಳ ರಕ್ಷಣೆ ಮಾಡುತ್ತಿಲ್ಲ. ಬದಲಿಗೆ ಇಡೀ ಕುಟುಂಬದ ಸದಸ್ಯರು ಈ ಕಾರ್ಯದಲ್ಲಿ ತೊಡಗಿದ್ದಾರೆ. ವಿಶೇಷವಾಗಿ ಮಹಿಳೆಯರು ಸಹ ಹಾವುಗಳನ್ನು ಹಿಡಿಯುತ್ತಾರೆ. ವಾಸ್ತವ ಎಂದರೆ ಜಿರಳೆಗಳು ಕಂಡರೆ ಸಾಕು ಮಹಿಳೆಯರು ಮಾರುದ್ದ ಓಡಿ ಹೋಗುತ್ತಾರೆ. ಆದರೆ ಚಾಂದ ಕುಟುಂಬದ ಮಹಿಳೆಯರು ಹಾವುಗಳ ಹಿಡಿಯುವುದರಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದಾರೆ.
ಪರಿಹಾರ ನೀಡದ ಸರ್ಕಾರ ಯಾದಗಿರಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೂ ಚಾಂದ ಅವರಿಗೆ ಫೋನ್ ಮಾಡಿ ಕರೆಯುತ್ತಾರೆ. ಮನೆಗಳಲ್ಲಿ ಮತ್ತು ಕಚೇರಿಗಳಲ್ಲಿ ಹಾವುಗಳು ಪ್ರತ್ಯಕ್ಷವಾದರೆ ಜನರಿಗೆ ಚಾಂದ ಕುಟುಂಬ ನೆನಪಾಗುತ್ತದೆ. ಹಾವುಗಳನ್ನ ರಕ್ಷಣೆ ಮಾಡಿದ ಬಳಿಕ ಯಾರಾದರು ಅಲ್ಪಸ್ವಲ್ಪ ಹಣವನ್ನು ಕೊಟ್ಟರೆ ಅದನ್ನು ಪಡೆದು ಕುಟುಂಬ ಜೀವನ ಸಾಗಿಸುತ್ತದೆ. ಇನ್ನು ಚಾಂದ ಮನೆಯಲ್ಲಿ ಪುರುಷರು ಬೇರೆ ಏನಾದರು ಕೆಲಸಕ್ಕೆ ಹೋಗಿದ್ದರೆ ಮಹಿಳೆಯರು ಹಾವುಗಳ ರಕ್ಷಣೆ ಕಾರ್ಯದಲ್ಲಿ ತೊಡಗುತ್ತಾರೆ. ಎಲ್ಲೇ ಹಾವುಗಳು ಪ್ರತ್ಯಕ್ಷವಾದರು ಮಹಿಳೆಯರು ಸ್ಥಳಕ್ಕೆ ಹೋಗಿ ಹಾವುಗಳ ರಕ್ಷಣೆ ಮಾಡುತ್ತಾರೆ.
ಹಾವುಗಳನ್ನು ಹಿಡಿದು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. 10 ರಿಂದ 12 ಹಾವುಗಳಾದಾಗ ಅರಣ್ಯ ಪ್ರದೇಶಕ್ಕೆ ಹೋಗಿ ಬಿಟ್ಟು ಬರುತ್ತಾರೆ. ಆದರೆ ಅಲ್ಲಿಯವರೆಗೆ ಮನೆಯಲ್ಲಿಯೇ ಹಾವುಗಳನ್ನ ಇಟ್ಟುಕೊಂಡು ರಕ್ಷಣೆ ಮಾಡುತ್ತಾರೆ. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೂ ಕಿಂಚಿತ್ತು ಹಾವುಗಳನ್ನ ಕಂಡರೆ ಭಯ ಪಡುವುದಿಲ್ಲ. ಬದಲಿಗೆ ಹಾವುಗಳನ್ನು ಕೈಯಲ್ಲಿ ಹಿಡಿದು ಆಟವಾಡುತ್ತಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಇದೆ ಹಾವುಗಳ ರಕ್ಷಣೆ ಮಾಡುವ ಸಂದರ್ಭದಲ್ಲಿ ಹಾವು ಕಚ್ಚಿ ಚಾಂದ ಅವರ ಸಹೋದರ ಸಾವನ್ನಪ್ಪಿದ್ದರು. ಆದರೂ ಈ ಕಾರ್ಯವನ್ನು ಬಿಡದ ಕುಟುಂಬ ನಿರಂತರವಾಗಿ ಹಾವುಗಳ ರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡಿದೆ. ಇನ್ನು ಸರ್ಕಾರ ಹಾವುಗಳ ರಕ್ಷಣೆ ವೇಳೆ ಹಾವು ಕಚ್ಚಿ ಚಾಂದ ಸಹೋದರ ಸಾವಿನ್ನಪ್ಪಿದ್ದರು ಪರಿಹಾರ ನೀಡಿಲ್ಲ.
ಅರಣ್ಯ ಇಲಾಖೆಯಿಂದ ಚಾಂದ ಕುಟುಂಬದ ಸದಸ್ಯರಿಗೆ ಹಾವುಗಳನ್ನ ರಕ್ಷಣೆ ಮಾಡುವುದಕ್ಕೆ ಪರವಾನಿಗೆ ಕೊಟ್ಟಿರುವುದು ಬಿಟ್ಟರೆ ಸರ್ಕಾರದಿಂದ ನಯಾ ಪೈಸೆಯ ಸವಲತ್ತು ಪಡೆದಿಲ್ಲ. ಇನ್ನು ನಿರಂತರವಾಗಿ ಹಾವುಗಳ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದ ಕುಟುಂಬಕ್ಕೆ ಸರ್ಕಾರ ಒಂದು ಸಣ್ಣ ಸೂರಿನ ವ್ಯವಸ್ಥೆ ಮಾಡಿಲ್ಲ. ಆದರೆ ಈ ಕುಟುಂಬ ಮಾತ್ರ ಯಾವುದೇ ಆಪೇಕ್ಷೆ ಇಲ್ಲದೆ ಸೇವೆಯನ್ನು ಮಾಡುತ್ತದೆ. ಬೇರೆ ಜಿಲ್ಲೆಗಳಲ್ಲಿ ಈ ರೀತಿ ಹಾವುಗಳ ರಕ್ಷಣೆ ಮಾಡುವವರಿಗೆ ಸರ್ಕಾರದಿಂದ ಗೌರವಧನವನ್ನು ನೀಡಲಾಗುತ್ತದೆ. ಯಾದಗಿರಿ ಜಿಲ್ಲೆಯ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಾಕಷ್ಟು ಬಾರಿ ಜಿಲ್ಲಾಧಿಕಾರಿಗಳಿಗೂ ಈ ಕುಟುಂಬ ಮನವಿ ಮಾಡಿಕೊಂಡಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ನಮ್ಮ ತಾತ, ಮುತ್ತಾತ ಕಾಲದಿಂದಲೂ ಹಾವಗಳನ್ನು ಹಿಡಿದು ರಕ್ಷಣೆ ಮಾಡಲಾಗುತ್ತಿದೆ. ನಮ್ಮ ಕಸಬು ಹಾವುಗಳನ್ನು ಹಿಡಿಯುವುದಾಗಿದೆ. ಯಾವ ಸಂದರ್ಭದಲ್ಲೂ ನಮಗೆ ಹಾವನ್ನ ರಕ್ಷಣೆ ಮಾಡುವಂತೆ ಕರೆ ಮಾಡಿದರೆ ಎಷ್ಟೇ ಕಷ್ಟವಾದರೂ ಹೋಗಿ ರಕ್ಷಿಸುತ್ತೇವೆ. ಆದರೆ ಸರ್ಕಾರದಿಂದ ಯಾವುದೇ ರೀತಿಯ ಪರಿಹಾರ ನೀಡಿಲ್ಲ. ಜನರು ನಮಗೆ ಕೊಟ್ಟ ಹಣದಿಂದ ಜೀವನ ಸಾಗಿಸುತ್ತೇವೆ ಎಂದು ಚಾಂದ ಪಾಷ ಕುಟುಂಬದ ಸದಸ್ಯರಾದ ಹುಸೇನ್ ಬೀ ಅಭಿಪ್ರಾಯಪಟ್ಟರು.
ವರದಿ: ಅಮೀನ್ ಹೊಸುರು (9980914141)
ಇದನ್ನೂ ಓದಿ:
ಅಪ್ಪನ ಹಾದಿಯಲ್ಲಿ ಮಗ.. 45 ಹಾವಿನ ಮರಿಗಳ ರಕ್ಷಿಸಿದ ಮೈಸೂರಿನ ಉರಗ ಸಂರಕ್ಷಕ
ಕೊಡಗು ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಬಂದ್; ನಿಯಮ ಉಲ್ಲಂಘನೆ ಶಿಕ್ಷಾರ್ಹ ಅಪರಾಧ: ಜಿಲ್ಲಾಡಳಿತದಿಂದ ಆದೇಶ
(Yadagiri family rescues the snakes but government has not given any compensated)
Published On - 11:01 am, Sun, 4 April 21