ದಾವಣಗೆರೆ: ದೇವರು ಎಂದರೆ ಬಹುತೇಕರಿಗೆ ಭಯ ಭಕ್ತಿ ಇರುತ್ತದೆ. ಆದರೆ ದೇವರನ್ನು ಕಣ್ಣಾರೆ ಕಂಡವರು ಯಾರು ಇಲ್ಲ. ಬಹುತೇಕ ದಾರ್ಶನಿಕರು ದೇವರನ್ನ ತಲುಪುವ ಮಾರ್ಗಗಳನ್ನ ಹೇಳಿದ್ದಾರೆ ಹೊರತು ದೇವರನ್ನ ಕಂಡಿಲ್ಲ. ಆದರೆ ದಾವಣಗೆರೆ ಜಿಲ್ಲೆಯಲ್ಲಿ ಒಬ್ಬ ದೇವರಿದ್ದಾನೆ. ಜನರು ಆತನ ಜೊತೆ ಮಾತನಾಡುತ್ತಾರೆ. ಇದನ್ನ ನಂಬುವುದು ಕಷ್ಟ. ಆದರೆ ಆ ಕ್ಷೇತ್ರಕ್ಕೆ ಹೋದಾಗ ಸತ್ಯ ಅರ್ಥವಾಗುತ್ತದೆ. ಮಕ್ಕಳ ಮದುವೆಯಿಂದ ಹಿಡಿದು ಮುಂದಿನ ಬಹುತೇಕ ಕಾರ್ಯಗಳಲ್ಲಿ ಸಹ ದೇವರನ್ನ ಕೇಳದೆ ಭಕ್ತರು ಒಂದು ಹೆಜ್ಜೆ ಮುಂದೆ ಇಡುವುದಿಲ್ಲ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಹೊಳೆ ಮಹಾರುದ್ರಸ್ವಾಮಿ ದೇಗುಲ ಪ್ರಸಾದ ಎಂದು ಪ್ರಸಿದ್ಧಿ ಪಡೆದ ಪುಣ್ಯಕ್ಷೇತ್ರ. ನಿತ್ಯ ಸಾವಿರಾರು ಜನ ಇಲ್ಲಿನ ದೇವರ ದರ್ಶನಕ್ಕೆ ಮಾತ್ರ ಅಲ್ಲ ದೇವರ ಜತೆ ಮಾತನಾಡಲು ಕ್ಯೂನಲ್ಲಿ ನಿಲ್ಲುತ್ತಾರೆ. ಹೆದ್ದಾರಿಯಿಂದ ಗುಡ್ಡಕ್ಕೆ ಹೊಂದಿಕೊಂಡು ನಾಲ್ಕು ಕಿಲೋಮೀಟರ್ ದೂರದಲ್ಲಿ ಇರುವ ಈ ಪುಣ್ಯಕ್ಷೇತ್ರ ದೇಶ ವಿದೇಶದಲ್ಲಿ ಪ್ರಸಿದ್ಧಿ ಹೊಂದಿದೆ. ಮಾಜಿ ಸಿಎಂ ಜೆ.ಎಚ್.ಪಟೇಲ್ ಸಮಾಜವಾದಿ ಆದರೂ ಈ ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿಯೇ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದರು.
ಜಮೀನು ಪತ್ರ ಬಿಟ್ಟು ಹೋಗುವ ಭಕ್ತರು
ಹತ್ತಾರು ಎಕರೆ ಜಮೀನು ವಿವಾದಗ ಬಗೆ ಹರಿಯಲು ‘ಮಹಾರುದ್ರಸ್ವಾಮಿ ನೀನೇ ಬಗೆಹರಿಸು ಅಲ್ಲಿಯವರೆಗೆ ಜಮೀನಿನ ಪತ್ರ ಇಲ್ಲಿಯೇ ಇರಲಿ’ ಎಂದು ದೇವಸ್ಥಾನದಲ್ಲಿ ಭಕ್ತರು ತಮ್ಮ ಜಮೀನು ದಾಖಲಾತಿ ಬಿಟ್ಟು ಹೋಗುತ್ತಾರೆ. ಜಮೀನು ವಿವಾದ ಬಗೆಹರಿದ ಬಳಿಕ ಆ ಪತ್ರ ಬಂದು ತೆಗೆದುಕೊಂಡು ಹೋಗುತ್ತಾರೆ. ಇಲ್ಲಿನ ಇನ್ನೊಂದು ಬಹಳ ವಿಶೇಷ ಪದ್ದತಿ ಜೀವಂತವಿದೆ. ಭಕ್ತರು ಬಂದು ದೇವರ ಜೊತೆಗೆ ಮಾತನಾಡುತ್ತಾರೆ. ಇಂತಹ ಕಾರ್ಯ ಮಾಡುತ್ತಿರುವ ನಾನು ಏನು ಮಾಡಲಿ ಹೇಳು ಎಂದು ದೇವರ ಬಳಿ ಕೇಳುತ್ತಾರೆ. ಆಗ ಮಹಾರುದ್ರಸ್ವಾಮಿ ಮೂರ್ತಿಗೆ ಲೇಪಿಸಲಾದ ಹೂವಿನ ದಳಗಳ ಯಾವ ಭಾಗದಿಂದ ಉದುರುತ್ತದೆ ಎಂಬುದು ಮುಖ್ಯ. ಬಲ ಭಾಗದಿಂದ ಉದುರಿದರೆ ಕಾರ್ಯ ಯಶಸ್ವಿ. ಎಡಭಾಗದಿಂದ ಉದುರಿದರೆ ಬೇಡ ಎಂಬುದು ಭಕ್ತರಿಗೆ ತಿಳಿಯುತ್ತದೆ. ಹೀಗೆ ಎರಡರಿಂದ ಮೂರು ದಿನಗಳ ಕಾಲ ಇಲ್ಲಿಯೇ ಕುಳಿತು ದೇವರ ವರ ಕೊಡುವ ತನಕ ಭಕ್ತರು ಎದ್ದು ಹೋಗುವುದಿಲ್ಲ.
ಕೆಲವು ದೃಷ್ಟಾಂತಗಳು
ಮಠ ಎಂಬುವವರು ಪೊಲೀಸ್ ಇಲಾಖೆಯಲ್ಲಿ ನೇಮಕವಾಗಿದ್ದರು. ಮಹಾರುದ್ರಸ್ವಾಮಿ ದೇವರು ವರ ಕೊಡಲಿಲ್ಲ ಅಂತಾ ಅವರು ಸರ್ಕಾರಿ ಸೇವೆಗೆ ಹಾಜರಾಗಲಿಲ್ಲ. ಅಲ್ಲದೇ ಇನ್ನೊಬ್ಬರು ಮಗಳ ಮದುವೆ ವಿಚಾರ ದೇವರ ಬಳಿ ಕೇಳಿದಾಗ ಬೇಡವೆಂದು ಸುಳಿವು ನೀಡಿದರು. ಮದುವೆ ಮಾಡಿದರೂ ಆ ಯುವತಿಯೇ ಸಂಕಷ್ಟದಲ್ಲಿ ಸಿಕ್ಕು ಸಾವನ್ನಪ್ಪಿದ್ದಳು. ವಿಶೇಷವಾಗಿ ಒಬ್ಬ ರಾಜಕಾರಣಿ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದಾಗ ದೇವರ ವರ ಲಭಿಸಿತು. ಆದರೆ ಪಕ್ಷದ ಅಧಿಕೃತ ಟಿಕೇಟ್ ಇನ್ನೊಬ್ಬರಿಗೆ ಆಗಿತ್ತು. ಇನ್ನೇನು ಮಾಡುವುದು.. ಸ್ವಾಮಿ ವರ ಕೊಟ್ಟಿದ್ದಾನೆ ಅಂತ ಸುಮ್ಮನಾದಾಗ ನಾಮಪತ್ರ ಸಲ್ಲಿಕೆ ಮಾಡಲು ಒಂದು ರಾತ್ರಿ ಮಾತ್ರ ಇರುವಾಗ ತಡ ರಾತ್ರಿ ಬಿ ಫಾರ್ಮ್ ಸಿಕ್ಕು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ತಾಲೂಕು ಪಂಚಾಯತ್ನ ಅಧ್ಯಕ್ಷ ಕೂಡಾ ಆಗಿದ್ದಾರೆ.
ಟೋಕನ್ ಪಡೆಯಬೇಕು
ಮಹಾರುದ್ರಸ್ವಾಮಿಯಿಂದ ವರ ಕೇಳಲು ಟೋಕನ್ ಪಡೆಯಬೇಕು. ವರ ಕೇಳಲು ಪ್ರತಿಯೊಬ್ಬರಿಗೆ ತಲಾ ಐದು ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಐದು ನಿಮಿಷದಲ್ಲಿ ವರ ಪಡೆಯುವ ಪ್ರಕ್ರಿಯೆ ಮತ್ತೊಮ್ಮೆ ವರಕ್ಕಾಗಿ ಸಾಲಾಗಿ ಬರಬೇಕು. ಇಂತಹ ಒಂದು ಸಂಪ್ರದಾಯ 16 – 17 ಶತಮಾನದಿಂದ ನಡೆದುಕೊಂಡು ಬಂದಿದೆ. ವೀರಶೈವ ಧರ್ಮದ ಪಂಚಗಣಾಧೀಶರೊಬ್ಬರಾದ ಕೊಳ ಶಾಂತೇಶ್ವರ ಸ್ವಾಮಿಜಿಗಳು ಅಂದು ಹುತ್ತದಲ್ಲಿ ಅಡಗಿದ್ದ ಮಹಾರುದ್ರಸ್ವಾಮಿ ಮೂರ್ತಿಯನ್ನ ಪತ್ತೆ ಹಚ್ಚಿಸಿದ್ದರು. ಅದೇನೆ ಇದ್ದರೂ ಇಲ್ಲಿ ಬಂದ ಎಷ್ಟೊ ರೋಗಿಗಳು ಗುಣಮುಖರಾಗಿ ಮನೆ ಹೋಗಿದ್ದಾರೆ. ಭಕ್ತರು ಇಲ್ಲಿ ದೇವರೊಂದಿಗೆ ಮಾತಾಡುತ್ತಾರೆ ಎಂಬುದು ವಿಶೇಷ, ಜತೆಗೆ ವಿಚಿತ್ರ ಎಂದು ತಪ್ಪಾಗದು.
ಇದನ್ನೂ ಓದಿ
ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿ ರಾಯಚೂರು ರೈತರು: ನೀರು ಬಿಡುಗಡೆಗೆ ರೈತರ ಆಗ್ರಹ