ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 14ನೇ ಸೀಸನ್ಗೆ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ₹ 20 ಲಕ್ಷಗಳಿಗೆ ಖರೀದಿಸಿದ ನಂತರ ಕೆಲವರು ಅವರ ಸಾಮರ್ಥ್ಯದ ಬಗ್ಗೆ ಟೀಕೆ ಮಾಡಿದ್ದರು. ಸಚಿನ್ ತೆಂಡೂಲ್ಕರ್ ಅವರ ಮಗನಾಗಿದ್ದಕ್ಕೆ ಮುಂಬೈ ಅರ್ಜುನ್ ಅವರನ್ನು ಖರೀದಿಸಿದೆ ಅಂತೆಲ್ಲ ಮಾತಾಡಿದ್ದರು. ಈ ಮಾತುಗಳು ಪ್ರಾಯಶಃ ಭಾರತದ ಲೆಜೆಂಡರಿ ಕ್ರಿಕೆಟರ್ನನ್ನು ಘಾಸಿಗೊಳಿಸಿದೆ. ಮಂಗಳವಾರದಂದು ಇ-ಕಲಿಕೆಯ ಪ್ಲಾಟ್ಫಾರ್ಮ್ ‘ಅನ್ಅಕ್ಯಾಡೆಮಿ’ಯ ಬ್ರ್ಯಾಂಡ್ ರಾಯಭಾರಿಯಾಗಿ ನೇಮಕಗೊಂಡ ನಂತರ ಮಾತನಾಡಿದ ಸಚಿನ್, ಕ್ರೀಡೆಯು ಅಟಗಾರನೊಬ್ಬನ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸುತ್ತದೆಯೇ ಹೊರತು ಅವನ ಕೌಟುಂಬಿಕ ಹಿನ್ನಲೆಯನ್ನಲ್ಲ ಅಂತ ಹೇಳಿದರು.
ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಹಲವಾರು ಅಪ್ರತಿಮ ದಾಖಲೆಗಳನ್ನು ಸೃಷ್ಟಿಸಿ 2013ರಲ್ಲಿ ವಿದಾಯ ಹೇಳಿದ ಸಚಿನ್ ಮಂಗಳವಾರಪಿಟಿಐ ಸುದ್ದಿಸಂಸ್ಥೆಯೊಂದಿಗೆ ನಡಸಿದ ವರ್ಚ್ಯುವಲ್ ಮಾತುಕತೆಯಲ್ಲಿ, ‘ಪ್ರತಿಬಾರಿ ನಾವು ಡ್ರೆಸ್ಸಿಂಗ್ ರೂಂ ಪ್ರವೇಶಿಸಿದಾಗ ಆಟಗಾರರು ಯಾವ ಪ್ರಾಂತ್ಯದಿಂದ ಬಂದವರು, ಆವರ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ಬಗ್ಗೆ ಯಾವತ್ತೂ ಯೋಚಿಸಲಿಲ್ಲ. ನಾವೆಲ್ಲ ಒಂದೇ, ನಮ್ಮಲ್ಲಿ ಯಾರೂ ಮೇಲಲ್ಲ, ಕೀಳಲ್ಲ ಎಂಬ ಭಾವನೆ ಇರುತಿತ್ತು’ ಎಂದು ಹೇಳಿದರು.
‘ಕ್ರೀಡೆಯು ಮೈದಾನದಲ್ಲಿ ನೀವು ತೋರುವ ಸಾಮರ್ಥ್ಯವನ್ನು ಬಿಟ್ಟು ಬೇರೆ ಯಾವುದಕ್ಕೂ ಮನ್ನಣೆ ನೀಡುವುದಿಲ್ಲ. ನೀವೊಬ್ಬ ವ್ಯಕ್ತಿಯಾಗಿ ಮೈದಾನ ಪ್ರವೇಶಿಸುವುದು ನಿಜ; ಆದರೆ ನೀವು ನೀಡುವ ಪ್ರದರ್ಶನ ಮತ್ತು ತೋರುವ ಸಾಮರ್ಥ್ಯ ಟೀಮಿನ ಒಟ್ಟಾರೆ ಶ್ರೇಯಸ್ಸಿಗೆ ಮೀಸಲಾಗಿರುತ್ತದೆ’ ಎಂದು ಸಚಿನ್ ಹೇಳಿದರು.
ಅರ್ಜುನ್ ತೆಂಡೂಲ್ಕರ್
ಅನ್ಅಕ್ಯಾಡೆಮಿಯ ರಾಯಾಭಾರಿಯಾಗಿ ಕ್ರೀಡಾಪಟುಗಳನ್ನು ಒಗ್ಗೂಡಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು 47-ವರ್ಷ ವಯಸ್ಸಿನ ಸಚಿನ್ ಹೇಳಿದರು. ಮುಂದಿನ ದಿನಗಳಲ್ಲಿ ಅನ್ಅಕ್ಯಾಡೆಮಿ ಆ್ಯಪ್ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳೊಂದಿಗೆ ಸಚಿನ್ ಸಂವಾದ ನಡೆಸುತ್ತಾ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
‘ನಾನು ನನ್ನ ಅನುಭವಗಳನ್ನು ಮಕ್ಕಳೊಂದಿಗೆ ಶೇರ್ ಮಾಡಿಕೊಳ್ಳುತ್ತೇನೆ. ವಿದ್ಯಾರ್ಥಿಯಾಗಿದ್ದಾಗ ಬೇರೆಬೇರೆ ಶಾಲೆಗಳಲ್ಲಿ ಕಲಿತೆ. ಕ್ರಿಕೆಟ್ ಆಡುವಾಗ ಹಲವಾರು ಕೋಚ್ಗಳು ಆಟದಲ್ಲಿನ ನ್ಯೂನತೆಗಳನ್ನು ತಿದ್ದಿ ನನ್ನನ್ನು ಉತ್ತಮ ಆಟಗಾರನನ್ನಾಗಿಸಿದರು. ಹಾಗೆಯೇ ವೈಯಕ್ತಿಕವಾಗಿ ಸಹ ನಾನು ಒಂದಿಷ್ಟು ಕಲಿತುಕೊಂಡೆ. ಈ ಎಲ್ಲ ಅನುಭವಗಳನ್ನೇ ನಾನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲಿದ್ದೇನೆ. ನಾನು ಉಚಿತವಾಗಿ ಕ್ಲಾಸುಗಳನ್ನು ತೆಗೆದುಕೊಳ್ಳಲಿದ್ದೇನೆ. ಯಾರೂ ಶುಲ್ಕ ತೆರಬೇಕಿಲ್ಲ. ಈ ಪ್ಲಾಟ್ಫಾರ್ಮ್ ದೇಶದ ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಹೀಗಾಗಿಯೇ ಈ ವೇದಿಕೆಯನ್ನು ನಾನು ಆಯ್ಕೆ ಮಾಡಿಕೊಂಡಿದ್ದೇನೆ. ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಬೆನ್ನಟ್ಟಿ ತಾವಂದುಕೊಂಡಿರುವ ಗುರಿ ಸಾಧನೆಗೆ ಹೆಚ್ಚೆಚ್ಚು ಪ್ರಯತ್ನಗಳನ್ನು ಮಾಡಬೇಕೆಂದು ಸಚಿನ್ ಹೇಳಿದರು.
ಅನ್ಅಕ್ಯಾಡೆಮಿ ಅಧಿಕಾರಿಗಳೊಂದಿಗೆ ಸಚಿನ್ ತೆಂಡೂಲ್ಕರ್
‘ನಿಮ್ಮ ಕನಸುಗಳನ್ನು ಬೆನ್ನಟ್ಟುವುದನ್ನು ನಿಲ್ಲಿಸಬೇಡಿ, ಮುಂದೊಂದು ದಿನ ಅವು ಸಾಕಾರಗೊಳ್ಳುತ್ತವೆ. ನಮ್ಮ ಪ್ರಯತ್ನಗಳಲ್ಲಿ ಯಶ ಸಿಗದೆ ಹೋದಾಗ, ಡೆಡ್ ಎಂಡ್ ತಲುಪ್ಪಿದ್ದಾಯ್ತು ಎಂದು ಯಾವತ್ತೂ ಅಂದುಕೊಳ್ಳಬಾರದು, ಯಾಕೆಂದರೆ ಅದು ಡೆಡ್ ಎಂಡ್ ಅಲ್ಲವೇ ಇಲ್ಲ. ಹಾಗಾಗಿ, ನಿಮ್ಮ ಗುರಿ ಸಾಧಿಸಲು ಹೆಚ್ಚಿನ ಪರಿಶ್ರಮಪಡಬೇಕು’ ಎಂದು ಸಚಿನ್ ವಿದ್ಯಾರ್ಥಿಗಳಿಗೆ ಹೇಳಿದರು.
ಪ್ರೊಫೆಸರ್ ಆಗಿದ್ದ ತಮ್ಮ ತಂದೆ ರಮೇಶ್ ತೆಂಡೂಲ್ಕರ್ರನ್ನು ನೆನಪಿಸಿಕೊಂಡ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿರುವ ಸಚಿನ್, ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲು ಅವರು ಪಡುತ್ತಿದ್ದ ಶ್ರಮವನ್ನು ವಿದ್ಯಾರ್ಥಿಗಳಿಗೆ ಹೇಳಿದರು. ‘ಈಗಿರುವ ಸೌಲಭ್ಯಗಳನ್ನು ನೋಡುವಾಗ ನನ್ನ ತಂದೆ ನೆನಪಾಗುತ್ತಾರೆ, ವೃತ್ತಿಯಲ್ಲಿ ಪ್ರೊಫೆಸರ್ ಅಗಿದ್ದ ಅವರು ಮಕ್ಕಳಿಗೆ ಪಾಠ ಹೇಳಲು ಮುಂಬೈ ಮಹಾನಗರದ ಒಂದು ಮೂಲೆಯಿಂದ ಮತ್ತೊದು ಮೂಲೆಗೆ ಹೋಗುತ್ತಿದ್ದರು. ದಿನವಿಡೀ ಅವರು ಪಾಠ ಹೇಳುವುದರಲ್ಲೇ ಮಗ್ನರಾಗಿರುತ್ತಿದ್ದರು’ ಎಂದು ಸಚಿನ್ ಹೇಳಿದರು.
ಇದನ್ನೂ ಓದಿ: IPL Auction 2021: ಸ್ವಜನ ಪಕ್ಷಪಾತ ಅಪವಾದ, ಅರ್ಜುನ್ ಬೆಂಬಲಕ್ಕೆ ನಿಂತ ಬಾಲಿವುಡ್ ನಟ ಫರ್ಹಾನ್ ಅಖ್ತರ್