IPL Auction 2021: ಸ್ವಜನ ಪಕ್ಷಪಾತ ಅಪವಾದ, ಅರ್ಜುನ್ ಬೆಂಬಲಕ್ಕೆ ನಿಂತ ಬಾಲಿವುಡ್ ನಟ ಫರ್ಹಾನ್ ಅಖ್ತರ್
ಅರ್ಜುನ್ ಫಿಟ್ನೆಸ್ಗಾಗಿ ಜಿಮ್ನಲ್ಲಿ ಬೆವರು ಸುರಿಸುವುದನ್ನು ತಾನು ನೋಡಿರುವುದಾಗಿ ಹೇಳಿರುವ ಅಖ್ತರ್, ಆಟದಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಲು ಅರ್ಜುನ್ ಬಹಳ ಕಷ್ಟಪಡುತ್ತಿದ್ದಾರೆ, ಅಂತ ತಮ್ಮ ಟ್ವೀಟೊಂದರಲ್ಲಿ ಹೇಳಿದ್ದಾರೆ.
ಭಾರತದ ಲೆಜೆಂಡರಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಇಂಡಿಯನ್ ಪ್ರಿಮೀಯರ್ ಲೀಗ್ ಟೂರ್ನಿಗೆ ಮುಂಬೈ ಇಂಡಿಯನ್ಸ್ ಪರ ಆಯ್ಕೆಯಾಗುತ್ತಿದ್ದಂತೆಯೇ ವಿವಾದಗಳು ಶುರವಿಟ್ಟುಕೊಂಡಿವೆ. ಅರ್ಜುನ್, ಮುಂಬೈ ಇಂಡಿಯನ್ಸ್ ಟೀಮಿಗೆ ಆಯ್ಕೆಯಾಗುವಷ್ಟು ಪ್ರತಿಭಾವಂತನಲ್ಲ, ತಂದೆಯ ವಶೀಲಿಯಿಂದ ಆಯ್ಕೆಮಾಡಿಕೊಳ್ಳಲಾಗಿದೆ ಅಂತ ಕೆಲವರು ಮಾತಾಡಿಕೊಳ್ಳುತ್ತಿದ್ದಾರೆ, ಅರೆಬರೆ ಕ್ರಿಕೆಟ್ ಜ್ಞಾನ ಇರುವವರು ಟ್ವೀಟ್ಗಳನ್ನು ಮಾಡಿ ಇದು ಸ್ವಜನ ಪಕ್ಷಪಾತದ ಪರಮಾವಧಿ, ಅಪ್ಪನಿಂದಾಗೇ ಅರ್ಜುನ್ಗೆ ಸ್ಥಾನ ಅಂತೆಲ್ಲ ಬರೆದು ತಮ್ಮ ಕ್ರಿಕೆಟ್ ಜ್ಞಾನದ ಪ್ರವರವನ್ನು ಹರಿಬಿಡುತ್ತಿದ್ದಾರೆ.
ಆದರೆ, ಬಾಲಿವುಡ್ ಮತ್ತು ಕ್ರೀಡೆಗಳ ಬಗ್ಗೆ ಅಪಾರ ಆಸಕ್ತಿಯಿಟ್ಟುಕೊಂಡಿರುವ ಮತ್ತು ಅವುಗಳನ್ನು ನಿಯಮಿತವಾಗಿ ಫಾಲೋ ಸಹ ಮಾಡುವ ಫರ್ಹಾನ್ ಆಖ್ತರ್ ಅರ್ಜುನ್ ಬೆಂಬಲಕ್ಕೆ ನಿಂತಿದ್ದಾರೆ. ಫಿಟ್ನೆಸ್ಗಾಗಿ ಅರ್ಜುನ್ ಜಿಮ್ನಲ್ಲಿ ಬೆವರು ಸುರಿಸುವುದನ್ನು ತಾನು ನೋಡಿರುವುದಾಗಿ ಹೇಳಿರುವ ಅಖ್ತರ್, ಆಟದಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಲು ಅರ್ಜುನ್ ಬಹಳ ಕಷ್ಟಪಡುತ್ತಿದ್ದಾರೆ, ಅಂತ ತಮ್ಮ ಟ್ವೀಟೊಂದರಲ್ಲಿ ಹೇಳಿದ್ದಾರೆ.
‘ಅರ್ಜುನ್ ತೆಂಡೂಲ್ಕರ್ ಕುರಿತು ನನಗೆ ಇದನ್ನು ಹೇಳಬೇಕೆನಿಸುತ್ತಿದೆ. ಅವರು ಮತ್ತು ನಾನು ಒಂದೇ ಜಿಮ್ಗೆ ಹೋಗೋದು, ತಮ್ಮ ಫಿಟ್ನೆಸ್ಗಾಗಿ ಅವರ ಅಪಾರ ಶ್ರಮಪಡುವುದನ್ನು ನಾನು ನೋಡಿದ್ದೇನೆ ಮತ್ತು ಉತ್ತಮ ಕ್ರಿಕೆಟರ್ ಆಗಬೇಕೆನ್ನುವೆಡೆ ಅವರಲ್ಲಿರುವ ಸಂಕಲ್ಪವನ್ನೂ ನಾನು ಗಮನಿಸುತ್ತಿದ್ದೇನೆ. ಅವರ ಮೇಲೆ ಸ್ವಜನ ಪಕ್ಷಪಾತದಂಥ ಅಪವಾದಗಳನ್ನು ಹೇರುವುದು ಅನುಚಿತ ಮತ್ತು ಕ್ರೌರ್ಯವೂ ಅನಿಸುತ್ತಿದೆ. ಅವರಲ್ಲಿರುವ ಉತ್ಸಾಹವನ್ನು ಕೊಲ್ಲುವ ಪ್ರಯತ್ನ ಮಾಡಬೇಡಿ, ಅವರ ಕರೀಯರ್ ಶುರುವಾಗುವ ಮೊದಲೇ ಅವರ ಸಾಮರ್ಥ್ಯವನ್ನು ಅಳೆಯುವ ಪ್ರಯತ್ನ ಬೇಡ,’ ಎಂದು ಅಖ್ತರ್ ಟ್ವೀಟ್ ಮಾಡಿದ್ದಾರೆ.
I feel I should say this about #Arjun_Tendulkar. We frequent the same gym & I’ve seen how hard he works on his fitness, seen his focus to be a better cricketer. To throw the word ‘nepotism’ at him is unfair & cruel. Don’t murder his enthusiasm & weigh him down before he’s begun.
— Farhan Akhtar (@FarOutAkhtar) February 20, 2021
ಗುರುವಾರದಂದು ನಡೆದ ಐಪಿಎಲ್ 2021 ಸೀಸನ್ ಮಿನಿ-ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಅರ್ಜುನ್ರನ್ನು ಅವರಮೂಲಬೆಲೆಯಾಗಿದ್ದ ರೂ. 20 ಲಕ್ಷಗಳಿಗೆ ಖರೀದಿಸಿತು. ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಅವರ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿದವು. ಹಲವಾರು ಟೀಕಾಕಾರು ಇದು ಸ್ವಜನ ಪಕ್ಷಪಾತವಲ್ಲದೆ ಬೇರೇನೂ ಅಲ್ಲ ಅಂತ ಹೇಳಿದ್ದಾರೆ. ಗುರುವಾರದಂದು ಹರಾಜು ಪ್ರಕ್ರಿಯೆ ಮುಗಿದ ನಂತರ ಮುಂಬೈ ಇಂಡಿಯನ್ಸ್ ತಂಡದ ಕ್ರಿಕೆಟ್ ಆಪರೇಷನ್ಸ್ ನಿರ್ದೇಶಕರಾಗಿರುವ ಜಹೀರ್ ಖಾನ್ ಮಾಧ್ಯಮದವರೊಂದಿಗೆ ಮಾತಾಡಿ, ಆಲ್-ರೌಂಡರ್ ಅರ್ಜುನ್ ತೆಂಡೂಲ್ಕರ್ ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಬೇಕಿದೆ ಎಂದು ಹೇಳಿದರು.
‘ನೆಟ್ಸ್ನಲ್ಲಿ ನಾನು ಸಾಕಷ್ಟು ಸಮಯವನ್ನು ಅವರೊಂದಿಗೆ ಕಳೆದಿದ್ದೇನೆ ಮತ್ತು ವೇಗದ ಬೌಲಿಂಗ್ನ ಕೆಲ ಟ್ರಿಕ್ಗಳನ್ನು ಅವರಿಗೆ ಹೇಳಿಕೊಡುವ ಪ್ರಯತ್ನವನ್ನೂ ಮಾಡಿದ್ದೇನೆ. ನಿಸ್ಸಂದೇಹವಾಗಿ ಅವರು ಕಠಿಣ ಶ್ರಮಪಡುವ ಯುವಕನಾಗಿದ್ದಾರೆ, ಕಲಿಯಬೇಕೆನ್ನುವ ಉತ್ಸಾಹ ಮತ್ತು ಆಸಕ್ತಿ ಅವರಲ್ಲಿದೆ. ಸಚಿನ್ ತೆಂಡೂಲ್ಕರ್ ಮಗನೆಂಬ ಹೊರೆಯನ್ನು ಅವರು ತನ್ನ ಕರೀಯರ್ನಿಡೀ ಹೊರಬೇಕಾಗುತ್ತದೆ. ಮುಂಬೈ ತಂಡದ ವಾತಾವರಣ ಅವರಿಗೆ ಉತ್ತಮ ಕ್ರಿಕೆಟರ್ ಆಗಲು ನೆರವು ನೀಡಲಿದೆ. ಯುವಕನೊಬ್ಬ ಹರಾಜಿನಲ್ಲಿ ಆಯ್ಕೆಯಾದ ಕೂಡಲೇ ಚರ್ಚೆಗೆ ಗ್ರಾಸವಾಗಿರುವುದು ಹಿಂದೆ ಎಷ್ಟು ಸಲ ನಡೆದಿದೆ? ಅವರು ತಮ್ಮಲ್ಲಿರುವ ಸಾಮರ್ಥ್ಯವನ್ನು ಸಾಬೀತು ಮಾಡಲೇಬೇಕು ಮತ್ತು ತನ್ನಲ್ಲಿ ಪ್ರತಿಭೆ ಇದೆ ಎನ್ನುವುದನ್ನು ತೋರಿಸಬೇಕು,’ ಅಂತ ಜಹೀರ್ ಖಾನ್ ಹೇಳಿದರು.
ಮುಂಬೈ ಇಂಡಿಯನ್ಸ್ ಅರ್ಜುನ್ ಜೊತೆ ನೇಥನ್ ಕೌಲ್ಟರ್ ನೈಲ್, ಜಿಮ್ಮಿ ನೀಷಮ್, ಯುಧವೀರ್ ಚರಕ್, ಮ್ಯಾಕ್ರೊ ಜಾನ್ಸೆನ್ ಮತ್ತು ಪಿಯುಶ್ ಚಾವ್ಲಾ ಅವರನ್ನು ಖರೀದಿಸಿತು.
ಇದನ್ನೂ ಓದಿ: IPL Auction 2021: ಮುಂಬೈ ಇಂಡಿಯನ್ಸ್ ಅಂತಿಮ ತಂಡದಲ್ಲಿರುವ ಸದಸ್ಯರ ಸಂಕ್ಷಿಪ್ತ ವಿವರ