IPL Auction 2021: ಮುಂಬೈ ಇಂಡಿಯನ್ಸ್ ಅಂತಿಮ ತಂಡದಲ್ಲಿರುವ ಸದಸ್ಯರ ಸಂಕ್ಷಿಪ್ತ ವಿವರ
ಮುಂಬೈ ಇಂಡಿಯನ್ಸ್ ನೈಲ್ ಅವರನ್ನು ಮರು-ಖರೀದಿ ಮಾಡಿದ್ದಕ್ಕಿಂತ ಜಾಸ್ತಿ ಚರ್ಚೆಯಾಗಿದ್ದು ಭಾರತದ ಲೆಜೆಂಡರಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಖರೀದಿಸಿದ್ದು.
ಚೆನೈಯಲ್ಲಿ ನಿನ್ನೆ (ಫೆ.18) ನಡೆದ ಇಂಡಿಯನ್ ಪ್ರಿಮೀಯರ್ ಲೀಗ್ (ಐಪಿಎಲ್) 2021 ಮಿನಿ-ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಧಣಿಗಳು (ಅಂಬಾನಿಗಳು) ತಾವು ಪಕ್ಕಾ ವ್ಯಾಪಾರಿಗಳು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದರು. ನಾವು ಹಾಗೆ ಹೇಳಲು ಕಾರಣವಿದೆ. ಕ್ರಿಕೆಟ್ ಪ್ರೇಮಿಗಳಿಗೆ ನೆನಪಿರಬಹುದು, ಮುಂಬೈ ಇಂಡಿಯನ್ಸ್ ಆಸ್ಟ್ರೇಲಿಯಾದ ವೇಗ ಬೌಲರ್ ನೇಥನ್ ಕೌಲ್ಟರ್ ನೈಲ್ ಅವರನ್ನು ಕಳೆದ ಐಪಿಎಲ್ ಸೀಸನ್ನಲ್ಲಿ ₹ 8 ಕೋಟಿ ಖರೀದಿಸಿತ್ತು. ಆದರೆ, 2020ರ ಸೀಸನ್ ಮುಗಿದ ನಂತರ ಅವರನ್ನು ಬಿಡುಗಡೆ ಮಾಡಿತ್ತು. ನಿನ್ನೆಯ ಹರಾಜಿನಲ್ಲಿ ನಡೆದ ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಮುಂಬೈ ಧಣಿಗಳು ನೈಲ್ ಅವರನ್ನು ₹ 5 ಕೋಟಿಗೆ ಖರೀದಿಸಿದರು. ನೈಲ್ ಅವರೊಂದಿಗೆ ಎಂಐ ಫ್ರಾಂಚೈಸಿಯು ನ್ಯೂಜಿಲೆಂಡ್ನ ವೇಗದ ಬೌಲರ್ ಆಡಮ್ ಮಿಲ್ನೆ ಅವರನ್ನು ₹ 3.2 ಕೋಟಿಗೆ ಖರೀದಿಸಿತು! ಮಿಲ್ನೆ ಸಹ ಅತ್ಯುತ್ತಮ ಬೌಲರ್ ಎಂದು ಹೆಸರಾಗಿದ್ದಾರೆ.
ನಾವು ಹೇಳಿದ್ದು ನಿಮಗೀಗ ಅರ್ಥವಾಗಿರಬೇಕು. ಕಳೆದ ವರ್ಷ ನೈಲ್ರನ್ನು ಖರೀದಿಸಲು ₹ 8 ಕೋಟಿ ತೆತ್ತಿದ್ದ ಅಂಬಾನಿಗಳು ಅದೇ ಹಣದಲ್ಲಿ ಅಷ್ಟೇ ಸಾಮರ್ಥ್ಯದ ಇಬ್ಬರು ಬೌಲರ್ಗಳನ್ನು ಈ ಸಲದ ಹರಾಜಿನಲ್ಲಿ ಖರೀದಿಸಿದರು! ಕಿವಿಲ್ಯಾಂಡ್ನ ಮತ್ತೊಬ್ಬ ವೇಗದ ಬೌಲರ್ ಜೇಮ್ಸ್ ನೀಷಮ್ ಅವರನ್ನೂ ಅಂಬಾನಿಗಳು ₹ 50 ಲಕ್ಷಕ್ಕೆ ಖರೀದಿಸಿದರು. ಹಾಗೆಯೇ ದಕ್ಷಿಣ ಆಫ್ರಿಕಾದ ಎಡಗೈ ವೇಗದ ಬೌಲರ್ ಮಾರ್ಕೊ ಜಾನ್ಸೆನ್ರನ್ನು ಮೂಲಬೆಲೆ ₹ 20 ಲಕ್ಷಗಳಿಗೆ ಖರೀದಿಸಿದರು. ಮುಂಬೈ ತಂಡಕ್ಕೆ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿರ್ಗಮಿಸಿರುವ ಲಸಿತ್ ಮಲಿಂಗ ಮತ್ತು ಮಿವೆಲ್ ಮ್ಯಾಕ್ಲೆನಘನ್ ಅವರ ಸ್ಥಾನಗಳಿಗೆ ಅವರಷ್ಟೇ ಉಪಯುಕ್ತ ಮತ್ತು ಪರಿಣಾಮಕಾರಿ ಬೌಲರ್ಗಳನ್ನು ತಂಡಕ್ಕೆ ಸೇರಿಸುವ ಪ್ರಯತ್ನದಲ್ಲಿ ಮುಂಬೈ ನಾಲ್ವರು ವೇಗಿಗಳನ್ನು ನಿನ್ನೆ ಖರೀದಿಸಿದೆ.
ವಾಸ್ತವದಲ್ಲಿ ಮುಂಬೈ, ನೈಲ್ ಅವರನ್ನು ಮರು ಖರೀದಿ ಮಾಡಿದ್ದಕ್ಕಿಂತ ಜಾಸ್ತಿ ಚರ್ಚೆಯಾಗಿದ್ದು ಭಾರತದ ಲೆಜೆಂಡರಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಖರೀದಿಸಿದ್ದು. ಆದರೆ ಸೋಜಿಗದ ಸಂಗತಿಯೆಂದರೆ ಅರ್ಜುನ್ ಹೆಸರು ಹರಾಜಿಗೆ ಬಂದಿದ್ದು ಪ್ರಕ್ರಿಯೆಯ ಅಂತಿಮ ಹಂತದಲ್ಲಿ. ಮೂಲ ಬೆಲೆಯಾದ ₹ 20 ಲಕ್ಷಕ್ಕೆ ಜ್ಯೂನಿಯರ್ ತೆಂಡೂಲ್ಕರ್ ಅವರನ್ನು ಖರೀದಿಸಲಾಯಿತು.
ರಾಷ್ಟ್ರೀಯ ತಂಡವನ್ನು ಇದುವರೆಗೆ ಪ್ರತಿನಿಧಿಸಿರದ ಅರ್ಜುನ್ ಕಳೆದ ಹಲವು ಸೀಸನ್ಗಳಿಂದ ಮುಂಬೈ ಇಂಡಿಯನ್ಸ್ ಆಟಗಾರರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಕಳೆದ ವರ್ಷ ಅವರು ಟೀಮಿನೊಂದಿಗೆ ಯುಎಇಗೆ ಪ್ರಯಾಣಿಸಿದ್ದರು. ಆದರೆ ಅಧಿಕೃತವಾಗಿ 2021ರ ಐಪಿಎಲ್ ಸೀಸನ್ ಅರ್ಜುನ್ಗೆ ಮೊದಲ ಸೀಸನ್ ಆಗಲಿದೆ.
ಮುಂಬೈ ಇಂಡಿಯನ್ಸ್ 2020 ಸೀಸನ್ ನಂತರ ಉಳಿಸಿಕೊಂಡಿದ್ದ ಅಟಗಾರರ ವಿವರ ಕೆಳಗಿನಂತಿದೆ
ರೋಹಿತ್ ಶರ್ಮ: ಟೀಮಿನ ನಾಯಕ ಮತ್ತು ಅಪಾರ ಅನುಭವದ ಪ್ರಮುಖ ಬ್ಯಾಟ್ಸ್ಮನ್. 2008 ರಿಂದ ಇದುವರೆಗೆ ಅಚರು 200 ಪಂದ್ಯಗಳನ್ನಾಡಿದ್ದು 31.31 ಸರಾಸರಿಯಲ್ಲಿ 5230 ರನ್ ಬಾರಿಸಿದ್ದಾರೆ ಇದರಲ್ಲಿ 1 ಶತಕ ಮತ್ತು 39 ಅರ್ಧಶತಕಗಳು ಸೇರಿವೆ. ಅಗಾಗ ಆಫ್-ಸ್ಪಿನ್ ಬೌಲಿಂಗ್ ಸಹ ಮಾಡುವ ರೋಹಿತ್ 15 ವಿಕೆಟ್ಗಳನ್ನು ಪಡೆದಿದ್ದಾರೆ. ಅವರ ಸಂಭಾವನೆ ₹ 15 ಕೋಟಿ.
ಕ್ವಿಂಟನ್ ಡಿ ಕಾಕ್: ದಕ್ಷಿಣ ಆಫ್ರಿಕಾ ಮೂಲದ ವಿಕೆಟ್ ಕೀಪರ್ ಮತ್ತು ಓಪನಿಂಗ್ ಬ್ಯಾಟ್ಸ್ಮನ್. ಐಪಿಎಲ್ನ್ಲಿ ಇದುವರೆಗೆ ಆಡಿರುವ 66 ಪಂದ್ಯಗಳಿಂದ 1959 ರನ್ ಬಾರಿಸಿದ್ದಾರೆ. ಇದರಲ್ಲ 1 ಶತಕ ಮತ್ತು 16 ಅರ್ಧಶತಕಗಳು ಸೇರಿವೆ. ವಿಕೆಟ್ ಹಿಂದೆ 49 ಕ್ಯಾಚ್ಗಳನ್ನು ಹಿಡಿದಿದ್ದು, 12 ಸ್ಟಂಪ್ಗಳನ್ನೂ ಮಾಡಿದ್ದಾರೆ. ಅವರ ಸಂಭಾವನೆ ₹ 2.80 ಕೋಟಿ.
ಸೂರ್ಯಕುಮಾರ್ ಯಾದವ್: ಸೂರ್ಯನ ಬ್ಯಾಟಿಂಗ್ ಬಗ್ಗೆ ಕಳೆದ ಎರಡು ವರ್ಷಗಳಿಂದ ಬಹಳ ಚರ್ಚೆ ನಡೆಯುತ್ತಿದೆ. ಅಪಾರ ಪ್ರತಿಭಾವಂತನಾಗಿದ್ದರೂ ಟೀಮ್ ಇಂಡಿಯಾಗೆ ಅವರನ್ನು ಅರಿಸದೆ ಅನ್ಯಾಯವೆಸಗಲಾಗುತ್ತಿದೆ ಎಂದು ಮಾಜಿ ಆಟಗಾರರು ಮತ್ತು ಕಾಮೆಂಟೇಟರ್ಗಳು ಹೇಳುತ್ತಿದ್ದಾರೆ. 2012 ರಿಂದ ಬೇರೆ ಬೇರೆ ಟೀಮಿಗಳಿಗೆ ಅಡುತ್ತಿರುವ ಯಾದವ್ ಇದುವರೆಗೆ 101 ಪಂದ್ಯಗಳನ್ನಾಡಿದ್ದು 2024 ರನ್ ಗಳಿಸಿದ್ದಾರೆ. ಅಜೇಯ 78 ಅವರ ಗರಿಷ್ಠ ಸ್ಕೋರ್. 11 ಅರ್ಧ ಶತಕಗಳನ್ನು ದಾಖಲಿಸಿದ್ದಾರೆ. ಅವರ ಸಂಭಾವನೆ ₹ 3.20 ಕೋಟಿ.
ಇಶಾನ್ ಕಿಷನ್: 24 ವರ್ಷ ವಯಸ್ಸಿನ ಇಶಾನ್ ಕಿಷನ್ ಸಹ ವಿಕೆಟ್ಕೀಪರ್ ಬ್ಯಾಟ್ಸ್ಮನ್ 2016 ರಿಂದ ಐಪಿಎಲ್ನಲ್ಲಿ ಆಡುತ್ತಿದ್ದಾರೆ, ಇದುವರೆಗೆ ಆಡಿರೋದು 51 ಪಂದ್ಯಗಳು ಮತ್ತು ಗಳಿಸಿರೋದು 28.83 ಸರಾಸರಿಯಲ್ಲಿ 1211 ರನ್ಗಳು. ಅವರ ಸ್ಟ್ರೈಕ್ ರೇಟ್ 136.83. 7 ಅರ್ಧ ಶತಕಗಳನ್ನು ಬಾರಿಸಿದ್ದಾರೆ. 99 ಅವರ ಗರಿಷ್ಠ ಸ್ಕೋರ್. ವಿಕೆಟ್ ಹಿಂದೆ 16 ಕ್ಯಾಚ್ ಹಿಡಿದಿದ್ದಾರೆ ಮತ್ತು 2 ಸ್ಟಂಪ್ ಮಾಡಿದ್ದಾರೆ. ಅವರ ಸಂಭಾವನೆ ₹ 6.20.
ಕ್ರಿಸ್ ಲಿನ್: 30ರ ಪ್ರಾಯ, ಆಸ್ಟ್ರೇಲಿಯಾದ ಬಲಗೈ ಬ್ಯಾಟ್ಸ್ಮನ್. 2012ರಿಂದ ಇದುವರೆಗೆ 41 ಪಂದ್ಯಗಳನ್ನಾಡಿ 33.68 ಸರಾಸರಿಯಲ್ಲಿ 1280 ರನ್ ಗಳಿಸಿದ್ದಾರೆ, ಅಜೇಯ 83 ಗರಿಷ್ಠ ಸ್ಕೋರ್, 10 ಅರ್ಧ ಶತಕಗಳು, 140. 65 ಸ್ಟ್ರೈಕ್ ರೇಟ್. ಅವರ ಸಂಭಾವನೆ ₹ 2 ಕೋಟಿ.
ಅನ್ಮೋಲ್ ಪ್ರೀತ್ ಸಿಂಗ್: 24 ವರ್ಷದ ಬಲಗೈ ಬ್ಯಾಟ್ಸ್ಮನ್ನನ್ನು ಮುಂಬೈ ₹ 80 ಲಕ್ಷಕ್ಕೆ ಖರೀದಿಸಿದೆ. ಐಪಿಎಲ್ನಲ್ಲಿ ಇದುವರೆಗೆ ಒಂದು ಪಂದ್ಯವನ್ನೂ ಅಡಿಲ್ಲ.
ಸೌರಭ್ ತಿವಾರಿ: 31 ವರ್ಷ ವಯಸ್ಸಿನ ಬಲಗೈ ಬ್ಯಾಟ್ಸ್ಮನ್ನನ್ನು ಮುಂಬೈ ₹ 50 ಲಕ್ಷಗಳಿಗೆ ಖರೀದಿಸಿದೆ. 2008ರಿಂದ ಇದುವರೆಗೆ 88 ಪಂದ್ಯಗಳನ್ನಾಡಿ 1.379 ರನ್ಗಳನ್ನು 27.58 ಸರಾಸರಿಯಲ್ಲಿ ಗಳಿಸಿದ್ದಾರೆ, ಇದರಲ್ಲಿ 7 ಅರ್ಧ ಶತಕ ಸೇರಿವೆ. 120 ಅವರ ಸ್ಟ್ರೈಕ್ ರೇಟ್.
ಆದಿತ್ಯ ತಾರೆ: 34 ವರ್ಷ ವಯಸ್ಸಿನ ತಾರೆಯನ್ನು 20 ಲಕ್ಷ ರೂ.ಗಳಿಗೆ ಖರೀದಿಸಲಾಗಿದೆ. ಬಲಗೈ ಬ್ಯಾಟ್ಸ್ಮನ್ ಆಗಿರುವ ತಾರೆ 2010ರಿಂದ 2020ರವರೆಗೆ 35 ಪಂದ್ಯಗಳನ್ನಾಡಿ, 1 ಅರ್ಧ ಶತಕದೊಂದಿಗೆ 339 ರನ್ ಗಳಿಸಿದ್ದಾರೆ.
ಕೈರನ್ ಪೊಲ್ಲಾರ್ಡ್: 2010ರಿಂದ ಮುಂಬೈ ಟೀಮಿಗೆ ಆಡುತ್ತಿರುವ ಆಲ್ರೌಂಡರ್ ಪೊಲ್ಲಾರ್ಡ್ ಅವರಿಗೆ ಮುಂಬೈ ನೀಡಿರುವ ಫೀಸ್ ₹ 5.40 ಕೋಟಿ. ಇದುವರೆಗೆ 164 ಪಂದ್ಯಗಳನ್ನಾಡಿದ್ದು 29.93 ಸರಾಸರಿಯಲ್ಲಿ 3023 ರನ್ ಗಳಿಸಿದ್ದಾರೆ ಮತ್ತು 69 ವಿಕೆಟ್ ಪಡೆದಿದ್ದಾರೆ, 4/44 ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ.
ಹಾರ್ದಿಕ್ ಪಾಂಡ್ಯ: ಭಾರತದ ಉಜ್ವಲ ಪ್ರತಿಭೆ ಎಂದು ಗುರುತಿಸಿಕೊಳ್ಳುವ ಆಲ್ರೌಂಡರ್ ಹಾರ್ದಿಕ್ಗೆ (27ರ ಪ್ರಾಯ) ಮುಂಬೈ ತೆತ್ತಿದ್ದು ₹ 11 ಕೋಟಿ. 2015ರಿಂದ ಐಪಿಎಲ್ನಲ್ಲಿ ಆಡುತ್ತಿರುವ ಹಾರ್ದಿಕ್, 80 ಪಂದ್ಯಗಳಲ್ಲಿ 1,349 ರನ್ ಗಳಿಸಿದ್ದಾರೆ, 29.97 ಸರಾಸರಿ ಮತ್ತು 159.25 ಸ್ಟ್ರೈಕ್ ರೇಟ್.
ಕೃಣಾಲ್ ಪಾಂಡೆ: 29 ವರ್ಷ ವಯಸ್ಸಿನ ಕ್ರಣಾಲ್ ಪಾಂಡೆ ಎಡಗೈ ಆಲ್ರೌಂಡರ್, ಅವರ ಸಂಭಾವನೆ ₹ 8.80 ಕೋಟಿ. 2016ರಿಂದ ಇದುವರೆಗೆ 71 ಪಂದ್ಯಗಳನ್ನಾಡಿ 25 ರ ಸರಾಸರಿಯಲ್ಲಿ 1,000 ರನ್ ಬಾರಿಸಿದ್ದಾರೆ. 142.45 ಅವರ ಸ್ಟ್ರೈಕ್ ರೇಟ್. ಎಡಗೈ ಸ್ಪಿನ್ ಬೌಲಿಂಗ್ ಮೂಲಕ 46 ವಿಕೆಟ್ ಪಡೆದಿದ್ದಾರೆ.
ಅನುಕುಲ್ ರಾಯ್: 23ರ ಪ್ರಾಯ, ಸಂಭಾವನೆ 20 ಲಕ್ಷ ರೂಪಾಯಿ. ಇದುವರೆಗೆ ಕೇವಲ ಒಂದು ಪಂದ್ಯ ಮಾತ್ರ ಆಡಿದ್ದಾರೆ.
ಜಸ್ಪ್ರೀತ್ ಬುಮ್ರಾ: ಟಿ-20 ಕ್ರಿಕೆಟ್ ಸ್ಪೆಷಲಿಸ್ಟ್ ಬೌಲರ್ ಎಂದು ಮೊದಲು ಗುರುತಿಸಿಕೊಂಡಿದ್ದ ಬುಮ್ರಾ ಈಗ ಎಲ್ಲ ಫಾರ್ಮಾಟ್ಗಳಲ್ಲಿ ಭಾರತದ ನಂಬರ್ ವನ್ ಬೌಲರ್ ಆಗಿದ್ದಾರೆ. ಅವರ ಸಂಭಾವನೆ ₹ 7 ಕೋಟಿ. ಇದುವರೆಗೆ ಆಡಿರುವ 82 ಪಂದ್ಯಗಳಿಂದ 23.71 ಸರಾಸರಿಯಲ್ಲಿ 109 ವಿಕೆಟ್ ಪಡೆದಿದ್ದಾರೆ. ಅವರ ಬೆಸ್ಟ್ ಬೌಲಿಂಗ್ ಪ್ರದರ್ಶನ 4/14 ಮತ್ತು ಎಕಾನಮಿ ರೇಟ್ 7.41.
ಟ್ರೆಂಟ್ ಬೌಲ್ಟ್: ನ್ಯೂಜಿಲೆಂಡ್ನ ಬೌಲ್ಟ್ ಮುಂಬೈನ ಪ್ರಮುಖ ವೇಗದ ಬೌಲರ್. 32 ವರ್ಷ ವಯಸ್ಸಿನ ಎಡಗೈ ವೇಗದ ಬೌಲರ್ ಬೌಲ್ಟ್ ಸಂಭಾವನೆ ₹ 3.20 ಕೋಟಿ. ಇದುವರೆಗೆ ಐಪಿಎಲ್ನಲ್ಲಿ ಆಡಿರುವ 48 ಪಂದ್ಯಗಳಿಂದ 25.03 ಸರಾಸರಿಯಲ್ಲಿ 63 ವಿಕೆಟ್ ಪಡೆದಿದ್ದಾರೆ. 4/18 ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ.
ರಾಹುಲ್ ಚಹರ್: ಲೆಗ್ ಬ್ರೇಕ್ ಬೌಲರ್ ಆಗಿರುವ 22 ರ ಪ್ರಾಯದ ಚಹರ್ ಅವರ ಸಂಭಾವನೆ ₹ 1. 90 ಕೋಟಿ. 2017ರಿಂದ ಇದುವರೆಗೆ ಆಡಿರುವ 31 ಪಂದ್ಯಗಳಿಂದ 30 ವಿಕೆಟ್ ಪಡೆದಿದ್ದಾರೆ, ಅವರ ಎಕಾನಮಿ ರೇಟ್ 7.46 ಮತ್ತು ಬೆಸ್ಟ್ ಬೌಲಿಂಗ್ ಪರ್ಫಾರ್ಮನ್ಸ್ 3/19.
ಜಯಂತ್ ಯಾದವ್: ಯಾದವ್ ಆಲ್ರೌಂಡರ್ ಆಗಿದ್ದು 2015ರಿಂದ ಇಲ್ಲಿಯವರೆಗೆ ಆಡಿರುವ 14 ಪಂದ್ಯಗಳಿಂದ 6 ರನ್ ಬಾರಿಸಿದ್ದಾರೆ ಮತ್ತು 6 ವಿಕೆಟ್ ಪಡೆದಿದ್ದಾರೆ, ಅವರ ಸಂಭಾವನೆ ₹ 50 ಲಕ್ಷ.
ಧವಲ್ ಕುಲಕರ್ಣಿ: 2008ರಿಂದ ಐಪಿಎಲ್ನಲ್ಲಿ ಆಡುತ್ತಿರುವ ಧವಲ್ ಕುಲಕರ್ಣಿ ಅವರ ಸಂಭಾವನೆ ₹ 75 ಲಕ್ಷ. ಇದುವರೆಗೆ ಆಡಿರುವ 91 ಪಂದ್ಯಗಳಿಂದ 86 ವಿಕೆಟ್ ಪಡೆದಿದ್ದಾರೆ. ಅವರ ಎಕಾನಮಿ ರೇಟ್ 8.25 ಮತ್ತು ಅತ್ಯುತ್ತಮ ಬೌಲಿಂಗ್ ಪ್ರದರ್ಶನ 4/14
ಮೊಹ್ಸಿನ್ ಖಾನ್: 26 ವರ್ಷ ವಯಸ್ಸಿನ ಮೊಹ್ಸಿನ್ ಖಾನ್ರನ್ನು ಮುಂಬೈ ₹ 20 ಲಕ್ಷಕ್ಕೆ ಖರೀದಿಸಿದೆ. ಐಪಿಎಲ್ನಲ್ಲಿ ಪಂದ್ಯವಿನ್ನೂ ಆಡಬೇಕಿದೆ.
ಮುಂಬೈ ಖರೀದಿಸಿದ ಆಟಗಾರರು ಈ ಬಾರಿಯ ಮಿನಿ-ಆಕ್ಷನ್ನಲ್ಲಿ ಮುಂಬೈ ಖರೀದಿಸಿದ ಆಟಗಾರರು, ನೇತನ್ ಕೌಲ್ಟರ್ ನೈಲ್ (₹ 5 ಕೋಟಿ), ಆಡಮ್ ಮಿಲ್ನೆ (₹ 2.4 ಕೋಟಿ), ಪಿಯುಷ್ ಚಾವ್ಲಾ (₹ 2.4 ಕೋಟಿ), ಜೇಮ್ಸ್ ನೀಷಮ್ (₹ 50 ಲಕ್ಷ), ಯುಧ್ವೀರ್ ಚರಕ್ (₹ 20 ಲಕ್ಷ), ಮಾರ್ಕೊ ಜಾನ್ಸೆನ್ (₹ ಕೋಟಿ), ಅರ್ಜುನ್ ತೆಂಡೂಲ್ಕರ್ (₹ 20ಲಕ್ಷ)
ಇದನ್ನೂ ಓದಿ: IPL 2021 Auction DC Players List: ಡೆಲ್ಲಿ ತಂಡ ಸೇರಿದ ಹೊಸಬರು ಯಾರು? ತಂಡದ ಫುಲ್ ಸ್ಕ್ವಾಡ್ ಮಾಹಿತಿ ಇಲ್ಲಿದೆ