ಬೀದರ್: ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪಾರ ಪ್ರಮಾಣದ ಭಕ್ತರನ್ನು ಹೊಂದಿರುವ ಪ್ರಸಿದ್ಧ ದೇವಸ್ಥಾನ ಎಂದರೆ ಅದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿರುವ ಮೈಲಾರ ಮಲ್ಲಣ್ಣ ದೇವಾಲಯ. ರಾಜ್ಯದಿಂದಷ್ಟೇ ಅಲ್ಲದೆ ಹೊರರಾಜ್ಯದಿಂದಲೂ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ. ಆದರೆ ಇಲ್ಲಿಗೆ ಬರುವ ಭಕ್ತರಿಗೆ ಸ್ನಾನದಿಂದ ಹಿಡಿದು, ಕುಡಿಯುವ ನೀರಿನವರೆಗೂ ಹತ್ತಾರು ಸಮಸ್ಯೆಗಳು ಕಾಡುತ್ತಿದೆ. ಸರಕಾರದ ಸುಪರ್ಧೀಗೆಯಲ್ಲಿರುವ ಈ ದೇವಸ್ಥಾನವನ್ನು ಮುಜರಾಯಿ ಇಲಾಖೆ ನಿರ್ಲಕ್ಷ್ಯ ಮಾಡಿದ್ದು, ಇದು ಸಹಜವಾಗಿಯೇ ಭಕ್ತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿರುವ ಮೈಲಾರ ಮಲ್ಲಣ್ಣ ದೇವಾಲಯ ಐದು ಶತಮಾನಗಳಷ್ಟೂ ಹಳೆಯದಾದ ದೇವಾಲಯವಾಗಿದೆ. ಈ ದೇವಸ್ಥಾನಕ್ಕೆ ರಾಜ್ಯ ಸೇರಿದಂತೆ ಮಹರಾಷ್ಟ್ರ, ತೆಲಂಗಾಣ, ಆಂಧ್ರದಿಂದ ಪ್ರತಿ ವರ್ಷ ಲಕ್ಷಾಂತರ ಭಕ್ತರು, ಬಂದು ದೇವರ ದರ್ಶನ ಪಡೆದು ಹೋಗುತ್ತಾರೆ. ಪ್ರತಿ ವರ್ಷ ಚಟ್ಟಿ ಅಮಾವಾಸ್ಯೆಯಿಂದ ಬರೋಬ್ಬರಿ ಒಂದು ತಿಂಗಳುಗಳ ಕಾಲ ಇಲ್ಲಿ ಜಾತ್ರೆ ನಡೆಯುತ್ತದೆ. ಈ ಒಂದು ತಿಂಗಳ ಅವಧಿಯಲ್ಲಿ 50 ಲಕ್ಷಕ್ಕೂ ಅಧಿಕ ಸಂಖ್ಯೆಯ ಭಕ್ತರು ಬಂದು ದೇವಸ್ಥಾನದ ಆವರಣದಲ್ಲಿಯೇ ರಾತ್ರಿಯಿಡಿ ಕಳೆದು ಇಲ್ಲಿಯೇ ಅಡುಗೆ ಮಾಡಿಕೊಂಡು, ದೇವರ ದರ್ಶನ ಮಾಡುತ್ತಾರೆ.
ಇದಷ್ಟೇ ಅಲ್ಲದೆ ಪ್ರತಿ ಅಮಾವಾಸ್ಯೆ, ಹುಣ್ಣಿಮೆ, ಪ್ರತಿ ರವಿವಾರದಂದು ಕೂಡಾ ಸಾವಿರಾರು ಭಕ್ತರು ಇಲ್ಲಿಗೆ ಬಂದು ತಮ್ಮ ಹರಕೆ ತಿರಿಸಿ ಹೋಗುತ್ತಾರೆ. ಇನ್ನೂ ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರು ಕೂಡಾ ದೇವರಿಗೆ ಹರಕೆ ರೂಪದಲ್ಲಿ ತೆಂಗಿನಕಾಯಿಯ ಹೋಳು ಮತ್ತು ಭಂಡಾರವನ್ನು ಮಿಶ್ರಣ ಮಾಡಿ ಹಾರಿಸುತ್ತಾರೆ. ಆದರೆ ಈ ದೇವಸ್ಥಾನ ಸದ್ಯ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದೆ ಎಂದು ಮೈಲಾರ ಮಲ್ಲಣ್ಣ ದೇವಾಲಯದ ಪೂಜಾರಿ ಆಕಾಶ ತಿಳಿಸಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬಂದು ಹರಕೆ ತಿರಿಸಿ ದೇವರ ದರ್ಶನ ಪಡೆದುಕೊಂದು ಹೋಗುತ್ತಾರೆ. ಕೆಲವು ಭಕ್ತರು ಇಲ್ಲಿಯೇ ವಸತಿ ಉಳಿದುಕೊಂಡು ದೇವರ ದರ್ಶನ ಮಾಡಿಕೊಂಡು ಹೋಗುತ್ತಾರೆ. ಆದರೇ ಇಲ್ಲಿ ವಸತಿ ಉಳಿದುಕೊಳ್ಳುವ ಭಕ್ತರಿಗಂತಾ ವಸತಿ ಗೃಹಗಳನ್ನು ಕೂಡಾ ನಿರ್ಮಾಣ ಮಾಡಿಲ್ಲ. ಭಕ್ತರಿಗೆಂದು ನಿರ್ಮಿಸಿದ ವಸತಿಗೃಹವನ್ನು ಭಕ್ತರಿಗೆ ಅನೂಕುಲ ಮಾಡಿಕೊಡದೆ, ಅದೂ ಕೂಡಾ ಹಾಳಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ಭಕ್ತರು ಗಿಡದ ನೆರಳಿನಲ್ಲಿ, ಬಯಲು ಪ್ರದೇಶದಲ್ಲಿ ಅಡುಗೆ ಮಾಡಿ ಊಟ ಮಾಡಿಕೊಂಡು ರಾತ್ರಿ ಕಳೆಯುವಂತಾ ಸ್ಥಿತಿ ನಿರ್ಮಾಣವಾಗಿದೆ ಎಂದು ಮೈಲಾರ ಮಲ್ಲಣ್ಣ ದೇವಾಲಯದ ಪೂಜಾರಿ ಆಕಾಶ ಹೇಳಿದ್ದಾರೆ.
ಇಲ್ಲಿಗೆ ಬರುವ ಭಕ್ತರಿಗೆ ಸರಿಯಾಗಿ ಸ್ನಾನದ ವ್ಯವಸ್ಥೆಯೂ ಕೂಡಾ ಇಲ್ಲ. ಇನ್ನೂ ಶತಮಾನದಷ್ಟು ಪುರಾತನವಾದ ನೀರಿನ ಹೊಂಡಗಳು ಕೂಡಾ ಇಲ್ಲಿದ್ದು, ಅವುಗಳನ್ನು ಸ್ವಚ್ಚಗೊಳಿಸಿ ಭಕ್ತರ ಸ್ನಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿಲ್ಲ. ಇದರಿಂದಾಗಿ ಅದೇ ಕಲ್ಮಷಯುಕ್ತವಾದ ನೀರಿನಲ್ಲಿಯೇ ಭಕ್ತರು ಸ್ನಾನ ಮಾಡುವಂತ ಸ್ಥಿತಿ ಇಲ್ಲಿದೆ. ಇದರ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹಿತ ಇಲ್ಲಿ ಯಾರು ಮಾಡಿಲ್ಲ. ಇದರಿಂದಾಗಿ ಮನೆಯಿಂದಲೇ ಕುಡಿಯುವ ನೀರು ತೆಗೆದುಕೊಂಡು ಬರಬೇಕಾದ ಸ್ಥಿತಿ ಇಲ್ಲಿನ ಭಕ್ತರದ್ದು. ಮುಜರಾಯಿ ಇಲಾಖೆಯ ಸುಪರ್ಧಿಯಲ್ಲಿರುವ ಈ ದೇವಸ್ಥಾನಕ್ಕೆ ವರ್ಷಕ್ಕೆ ಕೊಟ್ಯಾಂತರ ರೂಪಾಯಿ ಹಣ ಹರಿದುಬರುತ್ತದೆ. ಆದರೇ ಭಕ್ತರು ಕಾಣಿಕೆಯಾಗಿ ನೀಡಿದ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಯಾರಿಗೂ ಕೂಡಾ ಅರ್ಥವಾಗುತ್ತಿಲ್ಲ ಎಂದು ಇಲ್ಲಿನ ಭಕ್ತರಾದ ರಜನಿಕಾಂತ್ ತಿಳಿಸಿದ್ದಾರೆ.
ಇತಿಹಾಸ ಪ್ರಶಿದ್ಧ ಕಲ್ಯಾಣಿ ನೀರಿನ ಹೊಂಡದಲ್ಲಿನ ನೀರು ಕೂಡಾ ಮಲೀನವಾಗಿದೆ. ಸಾವಿರಾರು ಭಕ್ತರು ಬರುವ ಯಾತ್ರಾ ಸ್ಥಳದಲ್ಲಿ ಕುಡಿಯಲು ಹಾಗೂ ಸ್ನಾನಕ್ಕೆ ನೀರಿಲ್ಲ. ಹೀಗಾಗಿ ಭಕ್ತರು ಮೂಲಭೂತ ಸೌಲಭ್ಯ ವಂಚಿತರಾಗಿಯೇ ದೇವರ ದರ್ಶನ ಪಡೆದುಹೋಗುವಂತ ಸ್ಥಿತಿ ಇದೆ. ಜಿಲ್ಲಾಢಳಿತ ಭಕ್ತರು ನೀಡಿರುವ ಹಣವನ್ನಾದರೂ ಬಳಸಿಕೊಂಡು ಇಲ್ಲಿ ಕುಡಿಯುವ ನೀರು, ವಸತಿ ಗೃಹ ಕಲ್ಪಸಿಕೊಡಬೇಕು ಎಂದು ಇಲ್ಲಿನ ಭಕ್ತರು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.
ವರದಿ: ಸುರೇಶ್ ನಾಯಕ್
ಇದನ್ನೂ ಓದಿ:
Sabarimala Temple: ಇಂದಿನಿಂದ ಶಬರಿಮಲೆ ದೇಗುಲ ಓಪನ್; ದಿನಕ್ಕೆ 5,000 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ
Shirley Temple: ಶಿರ್ಲೆ ಟೆಂಪಲ್ ಅವರಿಗೆ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದ ಗೂಗಲ್