ವಿದ್ಯಾಕಾಶಿ ಮುಕುಟಕ್ಕೆ ಮತ್ತೊಂದು ಗರಿ: ದೇಶದ ಟಾಪ್​ 10 ಕೃಷಿ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ಧಾರವಾಡ ಕೃಷಿ ವಿವಿ

ದೇಶದಲ್ಲಿ 74 ಕೃಷಿ ವಿಶ್ವವಿದ್ಯಾಲಯಗಳನ್ನು ಪರಿಗಣಿಸಿ ಈ ರ್ಯಾಂಕಿಂಗ್ ನೀಡಲಾಗಿದೆ. ಕಳೆದ ವರ್ಷ ಧಾರವಾಡ ಕೃಷಿ ವಿಶ್ವವಿದ್ಯಾಲಯ ರಾಜ್ಯದ ನಂಬರ್ ಒನ್ ಪಟ್ಟ ಪಡೆದುಕೊಂಡಿದ್ದರೂ ದೇಶದಲ್ಲಿ 16ನೇ ಸ್ಥಾನದಲ್ಲಿತ್ತು. ಈ ವರ್ಷವೂ ರಾಜ್ಯದಲ್ಲಿ ನಂಬರ್ ಒನ್ ಪಟ್ಟ ಉಳಿಸಿಕೊಳ್ಳುವಲ್ಲಿ ಇದು ಯಶಸ್ವಿಯಾಗಿದೆ.

ವಿದ್ಯಾಕಾಶಿ ಮುಕುಟಕ್ಕೆ ಮತ್ತೊಂದು ಗರಿ: ದೇಶದ ಟಾಪ್​ 10 ಕೃಷಿ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ಧಾರವಾಡ ಕೃಷಿ ವಿವಿ
Updated By: ಆಯೇಷಾ ಬಾನು

Updated on: Dec 21, 2020 | 10:10 AM

ಧಾರವಾಡ: ಧಾರವಾಡ ಅಂದರೆ ಅದು ವಿದ್ಯಾಕಾಶಿ. ಇಲ್ಲಿನ ವಿಶ್ವವಿದ್ಯಾಲಯಗಳೇ ಧಾರವಾಡದ ಮೆರಗು. ಇಂಥ ವಿದ್ಯಾಕಾಶಿ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ದೇಶದ ಕೃಷಿ ಹಾಗೂ ತೋಟಗಾರಿಕೆ ಸೇರಿದಂತೆ ಕೃಷಿ ಸಂಬಂಧಿ ವಿಶ್ವವಿದ್ಯಾಲಯಗಳಿಗೆ ಕೇಂದ್ರ ಸರ್ಕಾರದ ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್) ರ‍್ಯಾಂಕಿಂಗ್‌‌​ ನೀಡುತ್ತದೆ. ಈ ಪಟ್ಟಿಯಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯ ದೇಶದಲ್ಲಿಯೇ 9ನೇ ಸ್ಥಾನ ಪಡೆದಿದೆ. ಕರ್ನಾಟಕದ ಅತ್ಯುತ್ತಮ ಕೃಷಿ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ.

ಐಸಿಎಆರ್​​ನ ಕೃಷಿ ಶಿಕ್ಷಣ ವಿಭಾಗವು ಪ್ರತಿವರ್ಷ ದೇಶದಲ್ಲಿರೋ ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ ಬೋಧನೆ, ಸಂಶೋಧನೆ ಜೊತೆಗೆ ರೈತರ ಅನುಕೂಲಕ್ಕಾಗಿ ಮಾಡುತ್ತಿರುವ ಕಾರ್ಯಗಳನ್ನು ಪರಿಗಣಿಸಿ ಅತ್ಯುತ್ತಮ ಶ್ರೇಯಾಂಕ ನೀಡುತ್ತ ಬಂದಿದೆ. ಈ ವರ್ಷ ಘೋಷಿಸಲಾದ ಪಟ್ಟಿಯಲ್ಲಿ ಧಾರವಾಡದ ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ದೇಶದ 9ನೇ ಅತ್ಯುತ್ತಮ ಕೃಷಿ ವಿಶ್ವವಿದ್ಯಾಲಯದ ಸ್ಥಾನ ಪಡೆದುಕೊಂಡಿದೆ.

ದೇಶದಲ್ಲಿ 74 ಕೃಷಿ ವಿಶ್ವವಿದ್ಯಾಲಯಗಳನ್ನು ಪರಿಗಣಿಸಿ ಈ ರ‍್ಯಾಂಕಿಂಗ್‌‌ ನೀಡಲಾಗಿದೆ. ಕಳೆದ ವರ್ಷ ಧಾರವಾಡ ಕೃಷಿ ವಿಶ್ವವಿದ್ಯಾಲಯ ರಾಜ್ಯದ ನಂಬರ್ ಒನ್ ಪಟ್ಟ ಪಡೆದುಕೊಂಡಿದ್ದರೂ ದೇಶದಲ್ಲಿ 16ನೇ ಸ್ಥಾನದಲ್ಲಿತ್ತು. ಈ ವರ್ಷವೂ ರಾಜ್ಯದಲ್ಲಿ ನಂಬರ್ ಒನ್ ಪಟ್ಟ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಾತ್ರವಲ್ಲ ದೇಶದ ರ‍್ಯಾಂಕಿಂಗ್‌‌ನಲ್ಲಿ ಸುಧಾರಣೆಯಾಗಿದೆ.

ಶ್ರೇಯಾಂಕ ನೀಡಲು ಅನೇಕ ಮಾನದಂಡಗಳಿವೆ. ಅದರಲ್ಲೂ ಕೃಷಿ ವಿಶ್ವವಿದ್ಯಾಲಯಗಳಿಗೆ ರ‍್ಯಾಂಕಿಂಗ್‌‌ ಕೊಡುವುದು ಅಷ್ಟು ಸುಲಭದ ಮಾತಲ್ಲ. ಕೃಷಿ ಕ್ಷೇತ್ರದಲ್ಲಿ ಇಂದು ನಡೆಸಿದ ಸಂಶೋಧನೆ ಫಲ ನೀಡಬೇಕೆಂದರೆ ವರ್ಷಗಳೇ ಬೇಕು. ಆ ಸಂಶೋಧನೆಯ ಸಾಧಕ-ಬಾಧಕಗಳು ತಡವಾಗಿ ಹೊರ ಬರುತ್ತವೆ. ಹೀಗಾಗಿ ಅನೇಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರ‍್ಯಾಂಕಿಂಗ್‌‌ ನೀಡಬೇಕಾಗುತ್ತದೆ.

ಇಂಥ ಎಲ್ಲಾ ವಿಚಾರಗಳಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮೆಚ್ಚುಗೆ ಪಡೆದಿದೆ. ಅದರಲ್ಲೂ ಬೀಜೋತ್ಪಾದನೆ, ಮಣ್ಣಿನ ವಿಶ್ಲೇಷಣಾ ಸಂಶೋಧನೆ, ರೈತರ ಆದಾಯ ಉತ್ಪಾದನೆಯಲ್ಲಿನ ಕಾರ್ಯ, ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ, ವಿವಿಧ ರೀತಿಯ ಕೃಷಿ ಪರ ಸಂಶೋಧನೆಗಳು ಎಲ್ಲವನ್ನು ಗಣನೆಗೆ ತೆಗೆದುಕೊಂಡು ಈ ಶ್ರೇಯಾಂಕ ನೀಡಲಾಗಿದೆ.

ಉತ್ತರ ಕರ್ನಾಟಕದ 14 ಜಿಲ್ಲೆಗಳ ವ್ಯಾಪ್ತಿಯಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಉತ್ತರ ಕರ್ನಾಟಕದ ರೈತರ ಪಾಲಿಗೆ ಈ ವಿಶ್ವವಿದ್ಯಾಲಯ ಕೃಷಿ ಸಂಜೀವಿನಿಯಂತೆ ಕೆಲಸ ಮಾಡುತ್ತಿದೆ. ಅದೆಲ್ಲವನ್ನೂ ನೋಡಿಯೇ ಈಗ ಕೇಂದ್ರ ಸರ್ಕಾರದ ಕೃಷಿ ಅನುಸಂಧಾನ ಪರಿಷತ್ ಈ ರ‍್ಯಾಂಕ್ ನೀಡಿದೆ.

ಈ ಮೊದಲೂ ಬಂದಿತ್ತು ಹಲವು ಗೌರವ
ದೇಶದ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯವೂ ಒಂದು. ಕೃಷಿ ಸಂಶೋಧನೆ, ಕೃಷಿಕರ ಆದಾಯ ಹೆಚ್ಚಿಸಲು ನಡೆಯುತ್ತಿರುವ ಹೊಸ ಹೊಸ ಯೋಜನೆಗಳ ವಿಚಾರದಲ್ಲಿ ಈ ವಿಶ್ವವಿದ್ಯಾಲಯ ಯಾವತ್ತೂ ಮುಂದೆ. ಇಲ್ಲಿ ಪ್ರತಿವರ್ಷ ನಡೆಯುವ ಕೃಷಿ ಮೇಳಕ್ಕೆ ಲಕ್ಷಾಂತರ ರೈತರು ಬಂದು ತಮ್ಮ ಕೃಷಿ ಜ್ಞಾನ ವೃದ್ಧಿಸಿಕೊಳ್ಳುತ್ತಾರೆ. ಇಲ್ಲಿ ನಡೆಯುವ ಕೃಷಿ ಮೇಳಕ್ಕೆ ಕೇವಲ ಉತ್ತರ ಕರ್ನಾಟಕದವರಷ್ಟೇ ಅಲ್ಲದೇ ಅಕ್ಕಪಕ್ಕದ ರಾಜ್ಯಗಳಿಂದಲೂ ರೈತರು ಬರುತ್ತಾರೆ. ಹೀಗಾಗಿ ಇಲ್ಲಿ ನಡೆಯುವ ಕೃಷಿ ಮೇಳ ವರ್ಷದಿಂದ ವರ್ಷಕ್ಕೆ ಪ್ರಸಿದ್ಧಿ ಪಡೆಯುತ್ತಾ ಸಾಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ: ಚುನಾವಣೆಗೆ ಕಾಯಬೇಕು ಮತ್ತೆ ಆರೇಳು ತಿಂಗಳು..!