ಧಾರವಾಡ: ಕೊರೊನಾ ಶರವೇಗದಲ್ಲಿ ಹೆಚ್ಚುತ್ತಿರುವ ಜಿಲ್ಲೆಗಳ ಪೈಕಿ ಧಾರವಾಡ ಕೂಡ ಒಂದು. ಧಾರವಾಡ ಜಿಲ್ಲೆಯಲ್ಲಿ ಇದೀಗ ಸೋಂಕು ಹಳ್ಳಿಗಳಿಗೂ ವ್ಯಾಪಿಸಿದೆ. ಇಷ್ಟು ವೇಗವಾಗಿ ಕೊರೊನಾ ಹಳ್ಳಿಗಳಿಗೆ ಮುಟ್ಟಿದ್ದು ಹೇಗೆ ಎಂದು ಪರೀಶಿಲನೆಗೆ ಇಳಿದ ಜಿಲ್ಲಾಡಳಿತಕ್ಕೆ ಉತ್ತರ ಸಿಕ್ಕಿದ್ದು, ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಮದುವೆ ಇದಕ್ಕೆ ಕಾರಣ ಎನ್ನುವ ವಿಚಾರ ತಿಳಿದಿದೆ. ಇದೇ ಕಾರಣಕ್ಕೆ ಧಾರವಾಡ ಜಿಲ್ಲಾಧಿಕಾರಿ ಇದೀಗ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲಿ 7460 ಕೊರೊನಾ ಪ್ರಕರಣಗಳು ದಾಖಲಾಗಿದೆ. ಮೇ ತಿಂಗಳ ಕಳೆದ ಹದಿನೈದು ದಿನಗಳ ಅವಧಿಯಲ್ಲಿ 13541 ಜನರಿಗೆ ಸೋಂಕು ದೃಢಪಟ್ಟಿದೆ. ಅಷ್ಟೇ ಅಲ್ಲ, ಏಪ್ರಿಲ್ನಲ್ಲಿ ಕೇವಲ ನಗರ ಪ್ರದೇಶಕ್ಕಷ್ಟೇ ಸೀಮಿತವಾಗಿದ್ದ ಸೋಂಕು ಮೇ ತಿಂಗಳಲ್ಲಿ ಹಳ್ಳಿಗಳಿಗೆ ನುಗ್ಗಿದೆ. ಜಿಲ್ಲೆಯಲ್ಲಿ ನಡೆದ ಸಾಲು ಸಾಲು ಮದುವೆಗಳೇ ಇದಕ್ಕೆ ಕಾರಣ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.
ಹದಿನೈದು ದಿನಗಳ ಹಿಂದೆ ಧಾರವಾಡ ಜಿಲ್ಲೆಯಲ್ಲಿ ಸೋಂಕಿನ ಪಾಸಿಟಿವಿಟಿ ರೇಟ್ ಶೇಕಡಾ 11ರಷ್ಟಿತ್ತು. ಇದರಿಂದಾಗಿ ಜಿಲ್ಲಾಡಳಿತಕ್ಕೆ ಕೊಂಚ ಸಮಾಧಾನವೂ ಆಗಿತ್ತು. ಏಕೆಂದರೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಶೇಕಡಾ 30 ರಷ್ಟು ಪಾಸಿಟಿವಿಟಿ ರೇಟ್ ಇತ್ತು. ಅಂಥದ್ದರಲ್ಲಿ ಜಿಲ್ಲೆಯಲ್ಲಿ ಶೇಕಡಾ 11 ಅಂದರೆ ಅದು ಸಮಾಧಾನಕರ ವಿಚಾರವೇ ಆಗಿತ್ತು. ಆದರೆ ಇದೀಗ ಎರಡೇ ವಾರಗಳಲ್ಲಿ ಪಾಸಿಟಿವಿಟಿ ರೇಟ್ ಶೇಕಡಾ 34ಕ್ಕೆ ಏರಿದೆ. ಜಿಲ್ಲೆಯಲ್ಲಿ ಮದುವೆಗೆ 40 ಜನಕ್ಕೆ ಮಾತ್ರ ಅವಕಾಶವಿದ್ದರೂ ಅನೇಕ ಸೋಂಕಿತರ ಟ್ರಾವೆಲ್ ಹಿಸ್ಟರಿ ತೆಗೆದಾಗ ಅದು ಕೊನೆಗೆ ಬಂದು ನಿಂತಿದ್ದು, ಮದುವೆಗೆ. ಹೀಗಾಗಿ ಧಾರವಾಡ ಜಿಲ್ಲಾಡಳಿತ ಈಗ ಮೇ 24 ರವರೆಗೂ ಜಿಲ್ಲೆಯಲ್ಲಿ ಮದುವೆಗಳನ್ನೇ ನಿಷೇಧಿಸಿದೆ.
ರವಿವಾರದವರೆಗೂ ಒಟ್ಟು 1500 ಜನ ಮದುವೆಗೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಅದಾಗಲೇ 584 ಮದುವೆಗಳಿಗೆ ಅನುಮತಿ ನೀಡಲಾಗಿತ್ತು. ಅವುಗಳನ್ನು ಹೊರತುಪಡಿಸಿ ಇದೀಗ ಉಳಿದೆಲ್ಲಾ ಮದುವೆ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಸರ್ಕಾರ ಕೊರೊನಾ ಹಿನ್ನೆಲೆಯಲ್ಲಿ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಹೇಳಿದರೂ ಮದುವೆ ವಿಚಾರದಲ್ಲಿ ಅದು ಸಾಧ್ಯವಾಗುವುದೇ ಇಲ್ಲ. ಹೀಗಾಗಿ ಈ ಮದುವೆಗಳೇ ಇದೀಗ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುವಂತೆ ಮಾಡಿವೆ. ಸದ್ಯಕ್ಕೆ ಮದುವೆಗಳಿಗೆ ನಿಷೇಧ ಹೇರಲಾಗಿದ್ದು, ಆ ಮೂಲಕ ಜಿಲ್ಲಾಡಳಿತ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ ಈ ನಿರ್ಧಾರದಿಂದ ಅದೆಷ್ಟರಮಟ್ಟಿಗೆ ಸೋಂಕಿನ ಪ್ರಮಾಣ ಕಡಿಮೆಯಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:
ಕೊರೊನಾ ಸೋಂಕು ಗ್ರಾಮಗಳಲ್ಲಿ ಹರಡದಂತೆ ಎಚ್ಚರಿಕೆ; ವಿನೂತನ ಪ್ರಯೋಗಕ್ಕೆ ಸಾಕ್ಷಿಯಾದ ದಾವಣಗೆರೆ ಜಿಲ್ಲಾಡಳಿತ
ಅಂತ್ಯಸಂಸ್ಕಾರಕ್ಕೆ ಹೋದ 128 ಜನರಿಗೆ ಕೊರೊನಾ ಪಾಸಿಟಿವಿ; ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿದ ಆತಂಕ
Published On - 12:19 pm, Tue, 18 May 21