ಅನೇಕರು ಸರಕಾರಿ ನೌಕರಿಯಿಂದ ನಿವೃತ್ತರಾದ ಬಳಿಕ ತಮ್ಮ ಜೀವನ ಶೈಲಿಯನ್ನೇ ಬದಲಿಸಿಕೊಂಡು ಬಿಡುತ್ತಾರೆ. ತಾವು ವೃದ್ಧರಾಗಿಬಿಟ್ಟಿದ್ದೇವೆ ಅನ್ನೋ ಮನಸ್ಥಿತಿ ರೂಢಿಸಿಕೊಂಡು ಮನೆಯಿಂದ ಹೊರಗೆ ಬರಲು ಕೂಡ ಹಿಂದೆ ಮುಂದೆ ನೋಡುತ್ತಾರೆ. ಆದರೆ ಧಾರವಾಡದಲ್ಲಿ (Dharwad) ಓರ್ವ ವೃದ್ಧರಿದ್ದಾರೆ. ಅವರ ಶಕ್ತಿಯನ್ನು ನೋಡಿದರೆ ಎಂಥವರೂ ಬೆಚ್ಚಿಬೀಳುತ್ತಾರೆ. ಆ ವ್ಯಕ್ತಿ ಇದೀಗ ವಿದೇಶದಲ್ಲಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಅಷ್ಟಕ್ಕೂ ಅವರು ಮಾಡಿರೋ ಸಾಧನೆಯಾದರೂ ಏನು? ಬನ್ನಿ ನೋಡೋಣ… ಈ ಇಳಿವಯಸ್ಸಿನಲ್ಲಿಯೂ (Octogenarian) ಹೀಗೆ ಯುವಕರಂತೆ ಜಿಗಿಯೋ ಈ ವ್ಯಕ್ತಿಯ ಹೆಸರು ಶಿವಪ್ಪ ಸಲಕಿ. ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ಇವರ ವಯಸ್ಸು 77 ವರ್ಷ. ಕೆಎಸ್ಸಾರ್ಟಿಸಿ ನಿವೃತ್ತ ಅಧಿಕಾರಿಯಾಗಿರೋ ( KSRTC Retirement) ಇವರು ಇದೀಗ ಎಲ್ಲರೂ ಹುಬ್ಬೇರಿಸುವಂಥ ಹಾಗೂ ಹೆಮ್ಮೆ ಪಡುವಂಥ ಸಾಧನೆ ಮಾಡಿದ್ದಾರೆ.
ಪ್ರತಿವರ್ಷ ಮಧ್ಯಪ್ರದೇಶದ ಸಂಯುಕ್ತ ಭಾರತೀಯ ಖೇಲ್ ಫೌಂಡೇಶನ್ ಆಯೋಜಿಸೋ ಕ್ರೀಡಾಕೂಟದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಈ ಫೌಂಡೇಶನ್ ಇತ್ತಿಚಿಗೆ ದುಬೈನಲ್ಲಿ ಕ್ರೀಡಾಕೂಟವನ್ನು ಆಯೋಜಿಸಿತ್ತು. ಈ ಕ್ರೀಡಾಕೂಟದಲ್ಲಿ ರಾಜ್ಯದಿಂದ 7 ಜನರು ಭಾಗವಹಿಸಿದ್ದರೆ, ವಿದೇಶಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಜುಲೈ 30 ರಿಂದ ಆಗಸ್ಟ್ 6 ರವರೆಗೆ ಆಯೋಜಿಸಲಾಗಿದ್ದ ಕ್ರಿಡಾಕೂಟದಲ್ಲಿ ಎಲ್ಲ ಮಧ್ಯೆ ಈ ಅಜ್ಜ ಮಿಂಚಿ, ಅಚ್ಚರಿ ಮೂಡಿಸಿದ್ದಾರೆ. 75 ರಿಂದ 80 ವರ್ಷದ ವಿಭಾಗದಲ್ಲಿ ಮೂರು ಸ್ಪರ್ಧೆಗಳಲ್ಲಿ ಶಿವಪ್ಪ ಚಿನ್ನದ ಪದಕ ಬಾಚಿದ್ದಾರೆ. ಚಿನ್ನ ಗೆದ್ದು ಮರಳಿ ಬಂದ ಶಿವಪ್ಪನಿಗೆ ಗ್ರಾಮಸ್ಥರು ಹೆಗಲ ಮೇಲೆ ಕೂಡಿಸಿಕೊಂಡು ಮೆರವಣಿಗೆ ಮಾಡಿ ಸ್ವಾಗತ ನೀಡಿದ್ದಾರೆ.
ಈ ವಯಸ್ಸಿನಲ್ಲಿಯೂ ಶಿವಪ್ಪ ನಿತ್ಯವೂ ಒಂದು ಗಂಟೆ ಯೋಗ ಮಾಡುತ್ತಾರೆ. ಬಳಿಕ ಒಂದು ಗಂಟೆ ರನ್ನಿಂಗ್ ಮಾಡುತ್ತಾರೆ. ಇದರೊಂದಿಗೆ ಕೊಂಚ ವೇಳೆ ವ್ಯಾಯಾಮ ಮಾಡುವ ರೂಢಿಯನ್ನು ಕೂಡ ಬೆಳೆಸಿಕೊಂಡಿದ್ದಾರೆ. ಇಂಥ ಶಿವಪ್ಪ ಸಲಕಿ ಈ ಕ್ರೀಡಾಕೂಟದಲ್ಲಿ 400 ಮೀಟರ್, 800 ಮೀಟರ್ ಮತ್ತು 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಈ ಕ್ರೀಡಾಕೂಟದಲ್ಲಿ ವಿವಿಧ ಹತ್ತಾರು ದೇಶಗಳಿಂದಲೂ ಸ್ಪರ್ಧಾಳುಗಳು ಭಾಗವಹಿಸಿದ್ದರು.
ಸಾಮಾನ್ಯವಾಗಿ ವಿದೇಶಗಳಲ್ಲಿನ ಜನರು ಸದೃಢರಾಗಿರುತ್ತಾರೆ ಎನ್ನಲಾಗುತ್ತೆ. ಆದರೆ ಭಾರತೀಯರು ಕೂಡ ಉಳಿದವರಿಗಿಂತ ಸದೃಢರೂ ಮತ್ತು ಗಟ್ಟಿಗರು ಅನ್ನೋದನ್ನು ಈ ಶಿವಪ್ಪ ತೋರಿಸಿಕೊಟ್ಟಿದ್ದಾರೆ. ಶಿವಪ್ಪ ಗ್ರಾಮಕ್ಕೆ ಮರಳುತ್ತಿದ್ದಂತೆಯೇ ಅದ್ಧೂರಿಯಾಗಿ ಅವರನ್ನು ಸ್ವಾಗತಿಸಲಾಯಿತು. ಶಿವಪ್ಪ ಕೇವಲ ಗ್ರಾಮಕ್ಕಷ್ಟೇ ಅಲ್ಲ, ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿಯನ್ನು ತಂದಿದ್ದಾರೆ ಅನ್ನುತ್ತಾರೆ ಸ್ಥಳೀಯರು.
ಮುಂಚೆಯಿಂದಲೂ ಕ್ರೀಡೆ ಬಗ್ಗೆ ಒಲವು ಹೊಂದಿರೋ ಶಿವಪ್ಪ ಅನೇಕ ಸ್ಪರ್ಧೆಗಳಲ್ಲಿ ಸಾಧನೆ ಮೆರೆದಿದ್ದಾರೆ. ಇಂಥ ಶಿವಪ್ಪ ಯುವಕರ ಬಗ್ಗೆ ಅತೀವ ಕಾಳಜಿ ಹೊಂದಿದ್ದು, ಅವರಿಗೆಲ್ಲ ನಿತ್ಯವೂ ಆರೋಗ್ಯದ ಬಗ್ಗೆ ತಿಳಿ ಹೇಳುತ್ತಾರೆ. ದುಶ್ಚಟಗಳಿಂದ ದೂರವಿರುವಂತೆ ಪದೇ ಪದೇ ಹೇಳುವ ಅವರು, ಎಲ್ಲರೂ ನಿತ್ಯವೂ ಕೊಂಚ ಹೊತ್ತಾದರೂ ಯೋಗ, ವ್ಯಾಯಾಮಕ್ಕೆ ವೇಳೆ ಕೊಡಬೇಕು ಅನ್ನೋ ಕಿವಿಮಾತು ಹೇಳುತ್ತಾರೆ. ಒಟ್ಟಿನಲ್ಲಿ ವಿದೇಶಿ ನೆಲದಲ್ಲಿ ಚಿನ್ನದ ಬೇಟೆಯಾಡಿರೋ ಶಿವಪ್ಪ ಯುವಕರಿಗೆ ಮಾದರಿಯಾಗಿದ್ದಾರೆ.
ಧಾರವಾಡ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ