ಜಾಮೀನು ಅರ್ಜಿ ತಿರಸ್ಕೃತ: ಕಾಂಗ್ರೆಸ್ ಎಂಎಲ್​​​ಎಗೆ ಜೈಲೇ ಗತಿ, ಸಚಿವ ಸ್ಥಾನದ ಕನಸಿಗೆ ತಣ್ಣೀರು

ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಆಘಾತವಾಗಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಲು ಕಾತರಿಂದ ಕಾಯುತ್ತಿದ್ದ ವಿನಯ್​ ಕುಲಕರ್ಣಿಗೆ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ಇದರಿಂದ ಸದ್ಯಕ್ಕೆ ವಿನಯ್ ಕುಲಕರ್ಣಿಗೆ ಜೈಲೇ ಗತಿಯಾಗಿದೆ.

ಜಾಮೀನು ಅರ್ಜಿ ತಿರಸ್ಕೃತ: ಕಾಂಗ್ರೆಸ್ ಎಂಎಲ್​​​ಎಗೆ ಜೈಲೇ ಗತಿ, ಸಚಿವ ಸ್ಥಾನದ ಕನಸಿಗೆ ತಣ್ಣೀರು
Vinay Kulkarni
Updated By: ರಮೇಶ್ ಬಿ. ಜವಳಗೇರಾ

Updated on: Dec 08, 2025 | 10:10 PM

ಬೆಂಗಳೂರು, (ಡಿಸೆಂಬರ್ 08): ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ (Yogeeshgouda Gouda Murder Case) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಜಾಮೀನು ಅರ್ಜಿ ವಜಾಗೊಂಡಿದೆ. ಇಂದು (ಡಿಸೆಂಬರ್ 08) ಜನಪ್ರತಿನಿಧಿಗಳ ಕೋರ್ಟ್, ವಿನಯ್ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕೃತ ಮಾಡಿ ಆದೇಶ ಹೊರಡಿಸಿದೆ. ಇದರಿಂದ  ಸಂಪುಟ ಪುನಾರಚನೆ ವೇಳೆ ಸಚಿವರಾಗಬೇಕೆಂಬ ವಿನಯ್ ಕುಲಕರ್ಣಿ ಕನಸು ನುಚ್ಚುನೂರಾಗಿದೆ.

ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದೇಕೆ?

ಯೋಗೇಶ್ ಗೌಡ ಹತ್ಯೆ ಪ್ರಕರಣದ 16ನೇ ಆರೋಪಿ ಚಂದ್ರಶೇಖರ ಇಂಡಿ ಅಲಿಯಾಸ್ ಚಂದು ಮಾಮಗೆ ಕೋರ್ಟ್ ಜಾಮೀನು ನೀಡಿದೆ. ಆದ್ರೆ, 15ನೇ ಆರೋಪಿಯಾಗಿರುವ ಶಾಸಕ ವಿನಯ್ ಕುಲಕರ್ಣಿಗೆ ಜಾಮೀನು ಅರ್ಜಿಯನ್ನು ತಿರಸ್ಕಾರ ಮಾಡಿದೆ. ಪ್ರಮುಖವಾಗಿ ಸಾಕ್ಷಿಗಳ ಮೇಲೆ‌ ಒತ್ತಡ ಹಾಕಿದ್ದ ಆರೋಪದ ಮೇಲೆ‌ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

ಇದನ್ನೂ ನೋಡಿ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಪ್ರಕರಣದ ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿದ ಹಿನ್ನಲೆಯಲ್ಲಿ ಜಾಮೀನು ಕೋರಿ ವಿನಯ್ ಕುಲಕರ್ಣಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಕುರಿತು ಕೋರ್ಟ್ ವಾದ ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿತ್ತು.ಇನ್ನೊಂದೆಡೆ ವಿನಯ್ ಕುಲಕರ್ಣಿ ಸಹ ಈ ಮತ್ತೆ ಜಾಮೀನು ಸಿಗುತ್ತೆ. ಈ ಬಾರಿ ಸಂಪುಟ ಪುನಾರಚನೆ ವೇಳೆ ಸಚಿವರಾಗಬೇಕೆಂಬ ಕನಸು ಕಂಡಿದ್ದರು. ಆದ್ರೆ, ಕೋರ್ಟ್​ ವಿನಯ್ ಕುಲಕರ್ಣಿ ಕನಸಿಗೆ ತಣ್ಣೀರೆರಚಿದೆ.

ಏನಿದು ಕೇಸ್‌?

ಧಾರವಾಡ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಅವರನ್ನು 2016ರ ಜೂನ್‌ 15ರಂದು ದುಷ್ಕರ್ಮಿಗಳು ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರ ಬಳಿಕ ಸಿಬಿಐ ಕೈಗೆತ್ತಿಕೊಂಡು ಶಾಸಕ ವಿನಯ್‌ ಕುಲಕರ್ಣಿ ಅವರನ್ನು ಆರೋಪಿಯನ್ನಾಗಿ ಪರಿಗಣಿಸಿ ಬಂಧಿಸಿತ್ತು. ಬಳಿಕ ವಿನಯ್ ಕುಲಕರ್ಣಿ ಜಾಮೀನಿನ ಮೇಲೆ ಜೈಲಿನಿಂದ ಆಚೆಬಂದಿದ್ದರು. ಆದ್ರೆ, ಸಾಕ್ಷ್ಯ ನಾಶ ಯತ್ನ ನಡೆಸಿದ್ದಾರೆಂದು ಸಿಬಿಐ ಸಾಕ್ಷಿ ಸಮೇತ ಸುಪ್ರೀಂಕೋರ್ಟ್​​​ ಮೊರೆ ಹೋಗಿತ್ತು. ಇದನ್ನು ಪರಿಗಣಿಸಿದ ಸುಪ್ರೀಂಕೋರ್ಟ್​ ವಿನಯ್ ಕುಲಕರ್ಣಿಗೆ ನೀಡಲಾಗಿದ್ದು ಜಾಮೀನು ರದ್ದುಪಡಿಸಿತ್ತು. ಬಳಿಕ ವಿಧಿ ಇಲ್ಲದೇ ವಿನಯ್ ಕುಲಕರ್ಣಿ 2025ರ ಜೂನ್‌ 13ರಂದು ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಬೇಕಾಯ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ