ಮತ್ತೆ ಮುನ್ನಲೆಗೆ ಬಂದ ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ: ದಿನಕ್ಕೆ 2 ಬಾರಿ ಬಾಡೂಟ ಹಾಕಲು ಪ್ಲ್ಯಾನ್
ಬೀದಿ ನಾಯಿಗಳಿಗೆ ಬಿರಿಯಾನಿ ಭಾಗ್ಯ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಮೊದಲಿಗೆ ಒಂದು ಬಾರಿ ಬಿರಿಯಾನಿ ನೀಡಲಾಗುತ್ತಿತ್ತು. ಇದೀಗ ದಿನಕ್ಕೆ ಎರಡು ಬಾರಿ ಬಿರಿಯಾನಿ ನೀಡಲು ಮುಂದಾಗಿದೆ. ಇನ್ನೊಂದೆಡೆ ಸರಿಯಾದ ವ್ಯವಸ್ಥೆ ಮಾಡಿಕೊಳ್ಳದೇ ನಾಯಿಗಳನ್ನ ಗೋಡೌನ್ನಲ್ಲಿ ತಂದು ಬಿಡಲಾಗುತ್ತಿದೆ ಎಂದು ಪ್ರಾಣಿದಯಾ ಸಂಘ ಜಿಬಿಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರು, ಡಿಸೆಂಬರ್ 08: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಜೋರಾಗಿದೆ. ಬೀದಿ ನಾಯಿಗಳ (Street Dog) ಕಾಟಕ್ಕೆ ಬ್ರೇಕ್ ಹಾಕಲು ಜಿಬಿಎ (GBA) ನಾನಾ ಪ್ರಯತ್ನ ಮಾಡ್ತಿದೆ. ಇದರ ನಡುವೆ ಇದೀಗ ಮತ್ತೆ ಬೀದಿ ನಾಯಿಗಳಿಗೆ ಬಿರಿಯಾನಿ ಭಾಗ್ಯದ ವಿಚಾರ ಮುನ್ನೆಲೆಗೆ ಬಂದಿದ್ದು, ಇದೀಗ ಒಂದು ಬಾರಿ ಅಲ್ಲ, ಬದಲಿಗೆ ದಿನಕ್ಕೆ ಎರಡು ಬಾರಿ ಚಿಕನ್ ಬಿರಿಯಾನಿ ನೀಡಲು ಜಿಬಿಎ ಮುಂದಾಗಿದ್ದರೆ, ಇತ್ತ ಅಧಿಕಾರಿಗಳು ಬೀದಿ ನಾಯಿಗಳಿಗೆ ಸುಪ್ರೀಂ ಕೋರ್ಟ್ ಹೆಸರಲ್ಲಿ ಕಿರುಕುಳ ಕೊಡುತ್ತಿದ್ದಾರೆಂದು ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದಿನಕ್ಕೆ ಎರಡು ಬಾರಿ ಬಾಡೂಟ ಹಾಕಲು ಪ್ಲ್ಯಾನ್
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳ ದಾಳಿಯಿಂದ ಅನೇಕರು ಆಸ್ಪತ್ರೆಗೆ ದಾಖಲಾದರೆ ಕೆಲವರು ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದಾರೆ. ಆದರೆ ಇದಕ್ಕೆ ಬ್ರೇಕ್ ಹಾಕಬೇಕಿದ್ದ ಜಿಬಿಎ ಮಾತ್ರ ಬೀದಿ ನಾಯಿಗಳಿಗೆ ಬಿರಿಯಾನಿ ನೀಡುವ ವಿಚಾರಕ್ಕೆ ಮತ್ತೆ ಕೈ ಹಾಕಿದೆ. ಅದು ಒಂದು ಬಾರಿ ಅಲ್ಲ, ಬದಲಿಗೆ ದಿನಕ್ಕೆ ಎರಡು ಬಾರಿ ಬಿರಿಯಾನಿ ನೀಡಲು ಮುಂದಾಗಿದೆ.
ಇದನ್ನೂ ಓದಿ: ಬೀದಿ ನಾಯಿಗಳಿಗೆ ಬಿಬಿಎಂಪಿ ಬಾಡೂಟ: ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ
ಈಗಾಗಲೇ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೀದಿ ನಾಯಿಗಳನ್ನ ಸೆರೆ ಹಿಡಿದು ಅವುಗಳಿಗೆ ಶೆಲ್ಟರ್ ವ್ಯವಸ್ಥೆ ಮಾಡಲು ಜಿಬಿಎ ತಯಾರಿ ನಡೆಸಿದೆ. ಇದರ ಜೊತೆಗೆ ಇದೀಗ ಬೀದಿ ನಾಯಿಗಳಿಗೆ ದಿನಕ್ಕೆ ಎರಡು ಬಾರಿ ಚಿಕನ್ ಬಿರಿಯಾನಿ ನೀಡಲು ಸಹ ತಯಾರಿ ನಡೆದಿದೆ. ಇನ್ನೂ ಕಳೆದ ಬಾರಿ ಒಂದು ಹೊತ್ತಿನ ಊಟಕ್ಕೆ 22 ರೂ. ನಿಗದಿ ಪಡಿಸಲಾಗಿತ್ತು. ಆದರೆ ಇದೀಗ ಮತ್ತೆ ಮೂರು ರೂ. ಹೆಚ್ಚಳ ಮಾಡಿದ್ದು, ಒಂದು ಹೊತ್ತಿನ ಊಟದ ಬೆಲೆ 25ರೂ ನಿಗದಿ ಮಾಡಲಾಗಿದೆ. ಅಂದರೆ ಎರಡು ಹೊತ್ತಿನ ಊಟಕ್ಕೆ 50ರೂ ನಿಗದಿ ಪಡಿಸಲಾಗಿದೆ.
ತಿಂಗಳಿಗೆ 66 ಲಕ್ಷ 95 ಸಾವಿರ ರೂ ಖರ್ಚು
ಇನ್ನೂ ಒಂದು ಹೊತ್ತಿನ ಊಟದಲ್ಲಿ 150 ಗ್ರಾಂ ಅಕ್ಕಿ ಹಾಗೂ 100 ಗ್ರಾಂ ಚಿಕನ್ ಅನ್ನು ಬೀದಿನಾಯಿಗಳಿಗೆ ನೀಡಲಾಗುತ್ತೆ. ಮಾಸಿಕ ಪ್ರತಿ ನಾಯಿಗೆ 3,035 ರೂ ವೆಚ್ಚವಾಗಲಿದೆ. ಜೊತೆಗೆ ಸಿಬ್ಬಂದಿ ವೇತನ, ಔಷಧಿ, ಸ್ವಚ್ಚತೆ, ವೆಚ್ಚ ಎಲ್ಲಾ ಸೇರಿ 3 ಸಾವಿರದ 36 ರೂ. ಆಗಲಿದ್ದು, ಈ ಪ್ರಕಾರ ಬೀದಿ ನಾಯಿಗಳ ಆರೈಕೆಗೆ ಸರಿಸುಮಾರು ಒಂದು ತಿಂಗಳಿಗೆ 66 ಲಕ್ಷ 95 ಸಾವಿರ ರೂ ಖರ್ಚು ಆಗಲಿದೆ. ವರ್ಷಕ್ಕೆ ಲೆಕ್ಕ ಹಾಕಿದರೆ ಸರಿಸುಮಾರು 8.5 ಕೋಟಿಗೂ ಅಧಿಕ ಹಣವನ್ನ ಜಿಬಿಎ ವೆಚ್ಚ ಮಾಡಬೇಕಿದೆ. ಇದಕ್ಕೆ ಬೆಂಗಳೂರಿಗರು ಆಕ್ರೋಶ ವ್ಯಕ್ತಪಡಿಸ್ತಿದ್ದು, ಹಣ ಮಾಡಲು ಈ ಕೆಲಸ ಮಾಡುತ್ತಿದ್ದಾರೆ ಎಂದು ಕಾಂತ್ ರಾಜ್ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಣಿದಯಾ ಸಂಘ ಆಕ್ರೋಶ
ಇತ್ತೀಚೆಗೆ ಸುಪ್ರೀಂ ಕೋರ್ಟ್ ನಗರದ ಹೊರ ವಲಯದಲ್ಲಿ ಶೆಡ್ಗಳನ್ನ ನಿರ್ಮಿಸಿ ಶ್ವಾನಗಳನ್ನ ಬಿಡುವಂತೆ ಆದೇಶಿಸಿತ್ತು. ಅದಕ್ಕೂ ಮುಂಚಿತವಾಗಿಯೇ ಜಿಬಿಎಯಿಂದ ಬೀದಿ ನಾಯಿಗಳನ್ನು ಹಿಡಿದು ಗೋಡೌನ್ಗೆ ಬಿಡಲಾಗುತ್ತಿದೆ. ಸರಿಯಾದ ವ್ಯವಸ್ಥೆ ಮಾಡಿಕೊಳ್ಳದೇ ನಾಯಿಗಳನ್ನ ಗೋಡೌನ್ನಲ್ಲಿ ತಂದು ಬಿಡಲಾಗುತ್ತಿದಯಂತೆ. ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲ, ಪ್ರಾಣಿ ಅನ್ನೋದು ಮರೆತು ಈ ರೀತಿ ನಾಯಿಗಳಿಗೆ ಶಿಕ್ಷೆ ಕೊಡ್ತಿದ್ದಾರೆ. ಮತ್ತೊಂದು ಕಡೆ ನಾಯಿ ಸೆರೆ ಹಿಡಿಯುವ ವೇಳೆ ನಾಯಿಗಳಿಗೆ ಗಾಯವಾಗುತ್ತಿವೆ. ಅವುಗಳಿಗೆ ಸರಿಯಾದ ಚಿಕಿತ್ಸೆ ಕೂಡ ನೀಡುತ್ತಿಲ್ಲ. ನೀರು, ಊಟ ಕೊಡದೇ ನಾಯಿಗಳಿಗೆ ಚಿತ್ರ ಹಿಂಸೆ ಕೊಡಲಾಗ್ತಿದೆ ಎಂದು ಪ್ರಾಣಿದಯಾ ಸಂಘದವರು ಆರೋಪ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಬಿಬಿಎಂಪಿ ಬಾಡೂಟ ಹಾಕುವುದಕ್ಕೂ ಮೊದಲೇ ಬೀದಿನಾಯಿಗಳ ಅಟ್ಟಹಾಸ; ಡೆಡ್ಲಿ ದಾಳಿಗೆ ವ್ಯಕ್ತಿ ಬಲಿ
ಸರ್ಕಾರ ಮೊದಲು ಸರಿಯಾದ ವ್ಯವಸ್ಥೆ ಮಾಡಿಕೊಂಡು ನಾಯಿಗಳನ್ನ ಸ್ಥಳಾಂತರ ಮಾಡಲಿ, ಅದನ್ನು ಬಿಟ್ಟು ಈ ರೀತಿಯಾಗಿ ಬಂಧನದಲ್ಲಿ ಇಡುವುದು ಎಷ್ಟರ ಮಟ್ಟಿಗೆ ಸರಿ. ಸರಿಯಾಗಿ ಊಟ ಸಹ ನೀಡುತ್ತಿಲ್ಲ ಅಂತ ಸರ್ಕಾರದ ವಿರುದ್ಧ ಪ್ರಾಣಿ ದಯಾ ಸಂಘದವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯದ ಕುರಿತು ಸಾಕಷ್ಟು ಟೀಕೆಗಳು ಕೇಳಿ ಬರ್ತಿದ್ದು, ಎಷ್ಟರ ಮಟ್ಟಿಗೆ ಜಿಬಿಎ ಇದನ್ನ ಜಾರಿಗೆ ತರುವುದರಲ್ಲಿ ಯಶಸ್ವಿ ಆಗುತ್ತದೆ ಅಂತ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



