ಬೆಂಗಳೂರು: ಬಿಬಿಎಂಪಿ ಬಾಡೂಟ ಹಾಕುವುದಕ್ಕೂ ಮೊದಲೇ ಬೀದಿನಾಯಿಗಳ ಅಟ್ಟಹಾಸ; ಡೆಡ್ಲಿ ದಾಳಿಗೆ ವ್ಯಕ್ತಿ ಬಲಿ
ಬಾಡೂಟ ಹಾಕುವುದಕ್ಕೆ ಬಿಬಿಎಂಪಿ ರೆಡಿಯಾಗುತ್ತಿರುವ ಹೊತ್ತಲ್ಲೇ ಬೀದಿನಾಯಿಗಳ ಅಟ್ಟಹಾಸ ಜೋರಾಗಿದೆ. ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ ವಾಕಿಂಗ್ಗೆ ಹೋಗುತ್ತಿದ್ದ ವ್ಯಕ್ತಿ ಮೇಲೆ ಬೀದಿನಾಯಿಗಳು ದಾಳಿ ಮಾಡುವ ಮೂಲಕ ಬಲಿ ಪಡೆದಿವೆ. ರಾಜ್ಯದ ಬೇರೆ ಬೇರೆ ಕಡೆ ಕೂಡ ಬೀದಿನಾಯಿಗಳು ಅಟ್ಟಹಾಸ ಮೆರೆದಿವೆ.

ಬೆಂಗಳೂರು, ಜುಲೈ 29: ಕರ್ನಾಟಕದಲ್ಲಿ ನಾಯಿ (dog) ಕಡಿತ ಪ್ರಕರಣಗಳು ಹೆಚ್ಚಿವೆ. ನಾಯಿ ಕಡಿತ ಕೇಸ್ಗಳಲ್ಲಿ ತುಮಕೂರು ಮೊದಲನೇ ಸ್ಥಾನದಲ್ಲಿ. ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ 35ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ಅಟ್ಯಾಕ್ ಮಾಡಿವೆ. ಹೀಗಾಗಿ ನಾಯಿಗಳಿಗೆ ಊಟ ನೀಡದಂತೆ ಎಚ್ಚರಿಕೆ ನೀಡಲಾಗಿದೆ. ಇತ್ತ ಬೆಂಗಳೂರಿನಲ್ಲಿ ಬಿಬಿಎಂಪಿಯ ಬಾಡೂಟ ಪ್ಲ್ಯಾನ್ ಜಾರಿಗೂ ಮೊದಲೇ ಅಟ್ಟಹಾಸ ಮೆರೆದಿರುವ ಬೀದಿನಾಯಿಗಳು ಓರ್ವ ವ್ಯಕ್ತಿಯನ್ನ ಬಲಿ (death) ಪಡೆದಿವೆ.
ನಗರದಲ್ಲಿ ಬೀದಿನಾಯಿಗಳ ದಾಳಿಗೆ 71 ವರ್ಷದ ಸೀತಪ್ಪ ಎಂಬುವವರು ಸಾವನ್ನಪ್ಪಿದ್ದಾರೆ. ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸೀತಪ್ಪ ಅವರು ಸೋಮವಾರ ಬೆಳಗ್ಗೆ ವಾಕಿಂಗ್ಗೆ ಹೋಗುತ್ತಿದ್ದಾಗ 8 ರಿಂದ 9 ಬೀದಿನಾಯಿಗಳು ದಾಳಿ ಮಾಡಿದ್ದು, ಕೈ, ಕಾಲಿನ ಅರ್ಧ ಮಾಂಸವನ್ನೇ ಕಚ್ಚಿ ತಿಂದಿವೆ. ಅಷ್ಟೇ ಅಲ್ಲದೆ ಮುಖಕ್ಕೂ ಕಚ್ಚಿವೆ. ನಾಯಿಗಳ ದಾಳಿಗೆ ವೃದ್ಧ ಸೀನಪ್ಪ ಕೊನೆಯುಸಿರೆಳೆದಿದ್ದಾರೆ.
1 ಲಕ್ಷ ರೂ. ಪರಿಹಾರ
ಬೀದಿನಾಯಿ ದಾಳಿಯಿಂದ ಮೃತಪಟ್ಟ ವೃದ್ಧ ಸೀತಪ್ಪ ಕುಟುಂಬಸ್ಥರಿಗೆ ಕೇವಲ 1 ಲಕ್ಷ ರೂ. ಪರಿಹಾರ ಕೊಡುವುದಾಗಿ ಬಿಬಿಎಂಪಿ ಮಾಹಿತಿ ನೀಡಿದೆ. 1 ಲಕ್ಷ ರೂ. ಪರಿಹಾರ ಕೊಡುತ್ತೇವೆ ಅಂತಾ ಬಿಬಿಎಂಪಿ ವಿಶೇಷ ಆಯುಕ್ತ ಸೂರಲ್ಕರ್ ವಿಕಾಸ್ ಕಿಶೋರ್ ಮಾಹಿತಿ ನೀಡಿದ್ದಾರೆ.
ನಮ್ಮ ಮಾವನನ್ನ ನಾಯಿಗಳು ಕಚ್ಚಿಕಚ್ಚಿ ಸಾಯಿಸಿವೆ: ಸೊಸೆಯಂದಿರ ಅಳಲು
ಬೀದಿನಾಯಿ ದಾಳಿ ವಿಚಾರವಾಗಿ ಟಿವಿ9 ಜೊತೆ ಕುಟುಬಸ್ಥರು ಮಾತನಾಡಿದ್ದು, ನಿನ್ನೆ ಬೆಳಗ್ಗೆ ಮನೆಯಿಂದ ಎದ್ದು ವಾಕಿಂಗ್ ಹೋಗಿದ್ದರು. ದಿಢೀರ್ ಅಂತಾ ಹತ್ತು ನಾಯಿಗಳು ಕಚ್ಚಿವೆ. ಯಾರೂ ಕೂಡ ಅವರನ್ನ ಬಿಡಿಸುವುದಕ್ಕೆ ಆಗಿಲ್ಲ. ನಮ್ಮ ಮಾವನನ್ನ ನಾಯಿಗಳು ಕಚ್ಚಿ ಕಚ್ಚಿ ಸಾಯಿಸಿವೆ ಎಂದು ಸೊಸೆಯಂದಿರು ಅಳಲು ತೋಡಿಕೊಂಡರು.
ಈ ಹಿಂದೆ ಕೂಡ ಇದೇ ರೀತಿಯ ಘಟನೆ ಆಗಿತ್ತು. ಆಗಲೂ ಬಿಬಿಎಂಪಿ ಏನೂ ಮಾಡಿರಲಿಲ್ಲ. ಈ ಏರಿಯಾದಲ್ಲಿ ನಾಯಿಗಳದ್ದೇ ದೊಡ್ಡ ಸಮಸ್ಯೆ. ಮಕ್ಕಳು, ವಯಸ್ಸಾದವರು ಓಡಾಡುವುದಕ್ಕೆ ಆಗದ ಸ್ಥಿತಿ ಇದೆ. ಬಿಬಿಎಂಪಿಯವರು ಬಂದು ನೋಡಿಕೊಂಡು ಹೋದರು. ನಾಯಿಗಳನ್ನ ಬೇರೆ ಕಡೆ ಬಿಡುವುದಕ್ಕೆ ಏನೂ ಮಾಡಿಲ್ಲ ಅಂತಾ ಕಿಡಿಕಾರಿದ್ದಾರೆ.
6 ತಿಂಗಳಲ್ಲಿ 10 ಸಾವಿರ ಜನರಿಗೆ ಶ್ವಾನ ಕಡಿತ, ಐವರು ಬಲಿ!
ನಾಯಿ ಕಡಿತ ಕೇಸ್ಗಳಲ್ಲಿ ತುಮಕೂರೇ ರಾಜ್ಯದಲ್ಲಿ ಮೊದಲಿಗಿದೆ. ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 10 ಸಾವಿರ ಜನರಿಗೆ ನಾಯಿಗಳು ಕಡಿದಿವೆ. ಇದ್ರಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಇನ್ನು ಶಿರಾ ಒಂದರಲ್ಲೇ ನಾಯಿ ಕಡಿತಕ್ಕೆ 6 ತಿಂಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ ಹಿಡಿದ ನಾಯಿಗಳನ್ನು ತುಮಕೂರಿಗೆ ತಂದು ಬಿಡ್ತಿದ್ದಾರಂತೆ.
ಇದನ್ನೂ ಓದಿ: ಚಿಕ್ಕಮಗಳೂರು: ಮೂರು ದಿನದಲ್ಲಿ 35ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳ ದಾಳಿ
ಬೀದಿನಾಯಿಗಳ ಸಂತಾನೋತ್ಪತ್ತಿಯಲ್ಲಿ ಹೆಚ್ಚಳವಾಗಿದೆ. ಜೊತೆಗೆ ನಾನ್ ವೆಜ್ ಹೋಟೆಲ್ನವರು ಎಲ್ಲೆಂದ್ರಲ್ಲಿ ತ್ಯಾಜ್ಯ ಬಿಸಾಡುತ್ತಿದ್ದಾರೆ. ರಕ್ತದ ರುಚಿ ಕಂಡು ಮಕ್ಕಳು, ವೃದ್ಧರ ಮೇಲೆ ಶ್ವಾನ ದಾಳಿ ಮಾಡುತ್ತಿವೆಯಂತೆ.
ನಾಯಿಗಳಿಗೆ ಊಟ ಹಾಕಿದರೆ ಕೇಸ್!
ಇನ್ನು ಚಿಕ್ಕಮಗಳೂರು ನಗರದಲ್ಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ, ಬೀದಿ ನಾಯಿಗಳಿಗೆ ರಸ್ತೆಯಲ್ಲಿ ಊಟ ಹಾಕಿದರೆ ಕೇಸ್ ಹಾಕುತ್ತೇವೆ ಅಂತಾ ನಗರಸಭೆ ಕಮಿಷನರ್ ಬಸವರಾಜ್ ವಾರ್ನ್ ಮಾಡಿದ್ದಾರೆ.
ಇದನ್ನೂ ಓದಿ: ಬೀದಿನಾಯಿಗಳ ಕಡಿವಾಣಕ್ಕೆ ಬಿಬಿಎಂಪಿ ಮತ್ತೊಂದು ಪ್ಲ್ಯಾನ್: ನಾಯಿಗಳ ಸಂತತಿ ಹೆಚ್ಚಳ ಪತ್ತೆಗೆ ಮುಂದಾದ ಪಾಲಿಕೆ
ಬೀದಿನಾಯಿಗಳಿಗೆ ಬಾಡೂಟ ಹಾಕುವುದಕ್ಕೆ ಬಿಬಿಎಂಪಿ ರೆಡಿಯಾಗಿತ್ತು. ಆದರೆ ಇದಕ್ಕೆ ಜನರಿಂದ ವ್ಯಾಪಕ ವಿರೋಧ ಕೇಳಿ ಬಂದಿತ್ತು. ಅದಕ್ಕಾಗಿ ಬಿಬಿಎಂಪಿ ಹೊಸ ಪ್ಲ್ಯಾನ್ ಮಾಡಿದೆ. ನಾಯಿಗಳ ಕಾಟ ಹೆಚ್ಚಾಗ್ತಿರೋದೇಕೆ ಅನ್ನೋದನ್ನ ಪತ್ತೆಹಚ್ಚೋಕೆ ಹೊಸ ಟೀಂ ರಚಿಸಲಿದೆ. ಪಶುಪಾಲನಾ ವಿಭಾಗ, ಪ್ರಾಣಿ ಸಂರಕ್ಷಣಾ ಸ್ವಯಂಸೇವ ಸಂಸ್ಥೆಗಳ ಸಹಕಾರದಲ್ಲಿ ಟೀಂ ರಚನೆಯಾಗಲಿದ್ದು, ನಾಯಿಗಳ ಸಂತತಿ ಹೆಚ್ಚಳಕ್ಕೆ ಕಾರಣಗಳನ್ನ ಪರಿಶೀಲಿಸಲಿದೆ. ಸಂತಾನಹರಣ ಚಿಕಿತ್ಸೆ ಸರಿಯಾಗಿ ನಡೀತಿದ್ಯಾ? ರೇಬಿಸ್ ಲಸಿಕೆ ಕೊಡೋದರಲ್ಲಿ ಆಗಿರೋ ಸಮಸ್ಯೆಗಳೇನು ಅನ್ನೋದನ್ನ ಈ ಟೀಮ್ ವರದಿ ನೀಡಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:29 am, Tue, 29 July 25







