ಬೀದಿನಾಯಿಗಳ ಕಡಿವಾಣಕ್ಕೆ ಬಿಬಿಎಂಪಿ ಮತ್ತೊಂದು ಪ್ಲ್ಯಾನ್: ನಾಯಿಗಳ ಸಂತತಿ ಹೆಚ್ಚಳ ಪತ್ತೆಗೆ ಮುಂದಾದ ಪಾಲಿಕೆ
ಬೆಂಗಳೂರಿನ ಬೀದಿನಾಯಿಗಳಿಗೆ ಬಾಡೂಟ ನೀಡುವ ವಿಚಾರವಾಗಿ ಬಿಬಿಎಂಪಿ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ಹೀಗಿರುವಾಗ ನಾಯಿಗಳ ಸಂತತಿ ಹೆಚ್ಚಳಕ್ಕೆ ಕಾರಣವೇನು ಅಂತಾ ಪತ್ತೆಗೆ ಬಿಬಿಎಂಪಿ ಮುಂದಾಗಿದೆ. ಬೀದಿನಾಯಿಗಳ ಹಾವಳಿ ಬಗ್ಗೆ ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪಾಲಿಕೆ ಸಜ್ಜಾಗಿದೆ.

ಬೆಂಗಳೂರು, ಜುಲೈ 26: ಇತ್ತೀಚೆಗೆ ಬೀದಿನಾಯಿಗಳ (Street Dog) ಊಟಕ್ಕೆ ಟೆಂಡರ್ ಕರೆದು ಚರ್ಚೆಗೆ ಗುರಿಯಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (bbmp), ಇದೀಗ ಬೆಂಗಳೂರಿನಲ್ಲಿ ಬೀದಿನಾಯಿಗಳ ಕಾಟಕ್ಕೆ ಬ್ರೇಕ್ ಹಾಕಲು ಹೊಸ ಪ್ಲ್ಯಾನ್ಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ ಹುಡುಕಲು ಪ್ರಾಣಿಪ್ರಿಯರು ಮತ್ತು ಪಶುಪಾಲನಾ ವಿಭಾಗದ ಮೂಲಕ ತಂಡ ರಚನೆಗೆ ತಯಾರಿ ಮಾಡಿಕೊಂಡಿದೆ.
ಬೆಂಗಳೂರಿನ ಬೀದಿನಾಯಿಗಳಿಗೆ ಕಡಿವಾಣ ಹಾಕಬೇಕಿದ್ದ ಪಾಲಿಕೆ, ಬೀದಿನಾಯಿಗಳ ಕಂಟ್ರೋಲ್ ನೆಪದಲ್ಲಿ ನಾಯಿಗಳಿಗೆ ಚಿಕನ್, ಎಗ್ ರೈಸ್ ಕೊಡುವುದಕ್ಕೆ ಈಗಾಗಲೇ ಸಜ್ಜಾಗಿದೆ. ರಾಜಧಾನಿಯ ಬೀದಿನಾಯಿಗಳಿಗೆ ಬಾಡೂಟ ಹಾಕೋಕೆ ಬರೋಬ್ಬರಿ 2.80 ಕೋಟಿ ರೂ ಹಣ ಸುರಿಯುವುದಕ್ಕೆ ಪಾಲಿಕೆ ಮುಂದಾಗಿದೆ. ಇದರ ಬೆನ್ನಲ್ಲೇ ನಾಯಿಗಳ ಸಂತತಿ ಹೆಚ್ಚಳಕ್ಕೆ ಕಾರಣವೇನು ಅಂತಾ ಪತ್ತೆಗೂ ತಯಾರಿ ನಡೆಸಿದೆ.
ಇದನ್ನೂ ಓದಿ: ಬೀದಿ ನಾಯಿಗಳಿಗೆ ಬಿಬಿಎಂಪಿ ಬಾಡೂಟ: ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ
ನಗರದಲ್ಲಿ ನಾಯಿಗಳ ಕಾಟದ ಬಗ್ಗೆ ಬಿಬಿಎಂಪಿಗೆ ದೂರುಗಳು ಬಂದಿವೆ. ಹೀಗಾಗಿ ಈ ಹೊಸ ಪ್ಲ್ಯಾನ್ಗೆ ಮುಂದಾಗಿದೆ. ಆ ಮೂಲಕ ನಾಯಿಗಳ ಕಾಟ ಮತ್ತು ಹೆಚ್ಚಳಕ್ಕೆ ಕಾರಣ ಹುಡುಕಲಿದೆ. ಇದಕ್ಕಾಗಿ ಬಿಬಿಎಂಪಿಯ ಪ್ರತಿ ವಲಯದಲ್ಲಿ ಆಯಾ ಪಶುಪಾಲನಾ ವಿಭಾಗ ಮತ್ತು ಸ್ಥಳೀಯ ಪ್ರಾಣಿ ಸಂರಕ್ಷಣಾ ಎನ್ಜಿಒಗಳನ್ನು ಬಳಸಿಕೊಳ್ಳಲು ತಯಾರಿ ನಡೆಸಲಾಗಿದೆ.
ಈ ತಂಡ ನಾಯಿಗಳ ಸಂತತಿ ಹೆಚ್ಚಳಕ್ಕೆ ಕಾರಣವೇನು, ರೇಬಿಸ್ ಲಸಿಕೆ, ಶಸ್ತ್ರಚಿಕಿತ್ಸೆಯ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಬೀದಿನಾಯಿಗಳ ಕಾಟದ ಬಗ್ಗೆ ಮಾಹಿತಿ ಕಲೆ ಹಾಕಿ ವರದಿ ಸಿದ್ಧಪಡಿಸಲಿದೆ.
ಇದನ್ನೂ ಓದಿ: ಜನರಿಗೆ ಇಂದಿರಾ ಕ್ಯಾಂಟೀನ್, ಬೀದಿ ನಾಯಿಗಳಿಗೆ ಬಾಡೂಟ! ಬಿಬಿಎಂಪಿ ಹೊಸ ಯೋಜನೆ
ಸದ್ಯ ರಾಜಧಾನಿಯ ಹಲವೆಡೆ ಬೀದಿನಾಯಿಗಳ ಕಾಟಕ್ಕೆ ಜನರು ಬೇಸತ್ತು ಹೋಗಿದ್ದಾರೆ. ನಾಯಿಗಳ ಕಾಟಕ್ಕೆ ಬ್ರೇಕ್ ಹಾಕಬೇಕಿದ್ದ ಬಿಬಿಎಂಪಿ, ಬೀದಿನಾಯಿಗಳಿಗೆ ಬಾಡೂಟ ಭಾಗ್ಯ ನೀಡಿದೆ. ಇದೆ ಸಿಲಿಕಾನ್ ಸಿಟಿ ಜನರು ಆಕ್ರೋಶಕ್ಕೂ ಕಾರಣವಾಗಿದೆ. ಈ ಮಧ್ಯೆ ನಾಯಿಗಳ ಸಂತತಿ ಹೆಚ್ಚಳಕ್ಕೆ ಕಾರಣವೇನು ಅಂತಾ ಪತ್ತೆಗೆ ಮುಂದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







