AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಹೆಚ್ಚಾದ ಬೀದಿ ನಾಯಿಗಳ ಕಾಟ; ಕಬ್ಬನ್ ಪಾರ್ಕ್ ನಲ್ಲೂ ಸಾಕುನಾಯಿಗಳ ಮಾಲೀಕರಿಂದ ರೂಲ್ಸ್ ಬ್ರೇಕ್

ಬೆಂಗಳೂರಿನಲ್ಲಿ ನಾಯಿಗಳ ಕಾಟಕ್ಕೆ ಕಡಿವಾಣ ಹಾಕಬೇಕಿದ್ದ ಪಾಲಿಕೆ ಸೈಲೆಂಟ್ ಆಗಿದೆ. ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಬೀದಿನಾಯಿಗಳ ಕಾಟ ಮಿತಿಮೀರಿದೆ. ಇತ್ತ ಸಾವಿರಾರು ಜನರು ವಾಯುವಿಹಾರಕ್ಕೆ ಬರೋ ಕಬ್ಬನ್ ಪಾರ್ಕ್ ನಲ್ಲಿ ಸಾಕುನಾಯಿಗಳಿಗೆ ಬಿಬಿಎಂಪಿಯಿಂದ ಮಾಡಿರೋ ರೂಲ್ಸ್ ಗಳು ಉಲ್ಲಂಘನೆಯಾಗ್ತಿದ್ರೂ ಪಾಲಿಕೆ ಸೈಲೆಂಟ್ ಆಗಿದೆ. ನಾಯಿಗಳ ಕಾಟಕ್ಕೆ ಬ್ರೇಕ್ ಹಾಕದ ಪಾಲಿಕೆ ನಡೆಯಿಂದ ಸಿಟಿಜನರಿಗೆ ಶ್ವಾನಸಂಕಟ ಶುರುವಾಗಿದ್ದು, ಟಿವಿ9 ರಿಯಾಲಿಟಿ ಚೆಕ್ ನಲ್ಲಿ ನಾಯಿಗಳ ಹಾವಳಿ ಬಯಲಾಗಿದೆ.

ಬೆಂಗಳೂರಿನಲ್ಲಿ ಹೆಚ್ಚಾದ ಬೀದಿ ನಾಯಿಗಳ ಕಾಟ; ಕಬ್ಬನ್ ಪಾರ್ಕ್ ನಲ್ಲೂ ಸಾಕುನಾಯಿಗಳ ಮಾಲೀಕರಿಂದ ರೂಲ್ಸ್ ಬ್ರೇಕ್
ಬೀದಿ ನಾಯಿಗಳು
ಶಾಂತಮೂರ್ತಿ
| Edited By: |

Updated on: Sep 04, 2024 | 7:39 AM

Share

ಬೆಂಗಳೂರು, ಸೆ.04: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಶ್ವಾನಪಡೆಯ (Dogs) ಹಾವಳಿ ದಿನೇ ದಿನೇ ಹೆಚ್ಚಾಗ್ತಿದೆ. ಯಾವ ಏರಿಯಾದಲ್ಲಿ ಅದ್ಯಾವ ಗಲ್ಲಿಯಿಂದ ನಾಯಿ ಅಟ್ಯಾಕ್ (Street Dogs) ಮಾಡುತ್ತೋ ಅಂತಾ ಸಿಟಿ ಜನರು ಆತಂಕದಲ್ಲೇ ಓಡಾಡೋ ಸ್ಥಿತಿ ನಿರ್ಮಾಣವಾಗಿದೆ. ರಾಜಧಾನಿಯ ಶ್ವಾನಸಂಕಷ್ಟದ ಬಗ್ಗೆ ಟಿವಿ9 ರಿಯಾಲಿಟಿ ಚೆಕ್ ನಡೆಸಿದ್ದು, ರಾಜಧಾನಿಯ ಬೀದಿ ನಾಯಿಗಳ ಗ್ಯಾಂಗ್ ಸೆರೆಯಾಗಿದೆ. ಜೆ.ಸಿ.ರಸ್ತೆ, ಸುಧಾಮನಗರ ಸುತ್ತಮುತ್ತ ಗಲ್ಲಿ ಗಲ್ಲಿಯಲ್ಲೂ ನಾಯಿ ಗ್ಯಾಂಗ್ ಬೀಡುಬಿಟ್ಟಿದೆ. ಬೆಳಗ್ಗೆಯಲ್ಲ ಸೈಲೆಂಟ್ ಆಗಿರೋ ಈ ಗ್ಯಾಂಗ್, ರಾತ್ರಿಯಾದ್ರೆ ವಾಹನ ಸವಾರರು, ಪಾದಚಾರಿಗಳಿಗೆ ಭಯ ಹುಟ್ಟಿಸ್ತಿವೆ. ಈ ಬೀದಿ ನಾಯಿಗಳು ಯಾವ ಕ್ಷಣದಲ್ಲಿ ಹೇಗೆ ವರ್ತಿಸುತ್ತೆ ತಿಳಿಯದೇ ಜನರು ಹೈರಾಣಾಗಿಬಿಟ್ಟಿದ್ದಾರೆ.

ಇತ್ತ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಒಂದಾದ ಕಬ್ಬನ್ ಪಾರ್ಕ್​ನಲ್ಲೂ ನಾಯಿಗಳ ಗ್ಯಾಂಗ್ ಬೀಡುಬಿಟ್ಟಿದ್ದು ವಾಯುವಿಹಾರಿಗಳಿಗೆ ಭಯ ಹುಟ್ಟಿಸ್ತೀವೆ. ಗೇಟ್ ಎಂಟ್ರಿಯಲ್ಲೇ ಕಾದುಕುಳಿತುಕೊಳ್ಳೋ ಶ್ವಾನಪಡೆ, ಪಾರ್ಕ್ ಒಳಗೆ ಎಂಟ್ರಿಯಾಗೋ ಜನರಿಗೆ ಬೊಗಳೋ ಮೂಲಕ ಭಯ ಹುಟ್ಟಿಸ್ತೀವೆ. ಅತ್ತ ಬೀದಿನಾಯಿಗಳ ಜೊತೆಗೆ ಸಾಕುನಾಯಿಗಳನ್ನ ವಾಕಿಂಗ್ ಗೆ ಕರೆತರೋ ಮಾಲೀಕರು, ಶ್ವಾನಗಳಿಗಾಗಿ ಪಾರ್ಕ್ ನಲ್ಲಿ ಮಾಡಿರೋ ರೂಲ್ಸ್ ಗಳನ್ನ ಉಲ್ಲಂಘಿಸ್ತಿದ್ದಾರೆ

ಸದ್ಯ ಈಗಾಗಲೇ ಕಬ್ಬನ್ ಪಾರ್ಕ್ ನಲ್ಲಿ ಸಾಕುನಾಯಿಗಳಿಗೆ ಒಂದಷ್ಟು ರೂಲ್ಸ್ ಮಾಡಿರೋ ಪಾಲಿಕೆ, ಎಲ್ಲಾ ಪ್ರವೇಶದ್ವಾರದಲ್ಲಿ ರೂಲ್ಸ್ ಗಳನ್ನ ಭಿತ್ತರಿಸಿದೆ, ಆದ್ರೆ ಬೆಳ್ಳಂಬೆಳಗ್ಗೆ ನಾಯಿಗಳ ಜೊತೆ ಎಂಟ್ರಿಕೊಡೋ ಶ್ವಾನ ಮಾಲೀಕರು ಇಷ್ಟಬಂದಂತೆ ಶ್ವಾನಗಳನ್ನ ವಾಕ್ ಮಾಡಿಸ್ತಿರೋದು ಇತರೆ ಸಾರ್ವಜನಿಕರಿಗೆ ಅಪಾಯ ತಂದಿಡೋ ಸೂಚನೆ ನೀಡ್ತಿದೆ. ಇತ್ತೀಚೆಗಷ್ಟೇ ಪಾಲಿಕೆ ಬಿಡುಗಡೆ ಮಾಡಿದ್ದ ನಾಯಿಕಡಿತದ ಅಂಕಿ-ಅಂಶದಲ್ಲಿ 5 ಸಾವಿರಕ್ಕೂ ಹೆಚ್ಚು ಸಾಕುನಾಯಿಗಳು ಅಟ್ಯಾಕ್ ಮಾಡಿರೋದು ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ಹಬ್ಬಕ್ಕೆ ಊರಿಗೆ ಹೊರಟವರಿಗೆ ಖಾಸಗಿ ಬಸ್ ಟಿಕೆಟ್ ದರ ಏರಿಕೆ ಶಾಕ್: ದುಪ್ಪಟ್ಟು ದರ ವಸೂಲಿ

ಕಬ್ಬನ್ ಪಾರ್ಕ್​ನಲ್ಲಿ ಸಾಕು ನಾಯಿಗಳಿಗೆ ಮಾಡಲಾದ ರೂಲ್ಸ್ ಗಳೇನು?

  • ಸಾಕುನಾಯಿಗಳಿಗೆ ಕಡ್ಡಾಯವಾಗಿ ವ್ಯಾಕ್ಸಿನೇಷನ್ ಆಗಿರಬೇಕು
  • ವ್ಯಾಕ್ಸಿನ್ ಆಗಿರೋದನ್ನ ಪಾರ್ಕ್ ಎಂಟ್ರಿಗೆ ಮುನ್ನ ಪರಿಶೀಲಿಸಬೇಕು
  • ಪಾರ್ಕ್ ಒಳಗೆ ಶ್ವಾನಗಳಿಗೆ ಆಹಾರ ನೀಡಬಾರದು
  • ಚೈನ್ ಗಳ ಮೂಲಕ ನಾಯಿಗಳನ್ನ ಕಟ್ಟಿರಬೇಕು
  • ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನಾಯಿಗಳನ್ನ ವಾಕ್ ಮಾಡಿಸಬೇಕು
  • ಜನರಿಗೆ ಸಾಕುನಾಯಿ ಕಚ್ಚಿದ್ರೆ ಮಾಲೀಕರೇ ಚಿಕಿತ್ಸಾವೆಚ್ಚ ಭರಿಸಬೇಕು
  • ಮಲ-ಮೂತ್ರ ವಿಸರ್ಜನೆ ಮಾಡಿದ್ರೆ ಮಾಲೀಕರೇ ಸ್ವಚ್ಚಗೊಳಿಸಬೇಕು

ಸದ್ಯ ಈ ನಿಯಮಗಳಲ್ಲಿ ಬಹುತೇಕ ರೂಲ್ಸ್ ಬ್ರೇಕ್ ಆಗ್ತಿದೆ. ಸಾಕುನಾಯಿಗಳನ್ನ ಪಾರ್ಕ್ ಗೆ ಕರೆತರೋ ಕೆಲ ಮಾಲೀಕರು ಚೈನ್ ಹಾಕದೇ ಪಾರ್ಕ್ ತುಂಬ ನಾಯಿಗಳನ್ನ ಓಡಾಡಿಸಿದ್ರೆ, ನಾಯಿಗಳಿಗೆ ವ್ಯಾಕ್ಸಿನ್ ಆಗಿದ್ಯಾ ಅನ್ನೋದನ್ನ ಪರಿಶೀಲಿಸೋದು ಬರೀ ನಾಮಫಲಕದ ರೂಲ್ಸ್ ಆಗಿ ಮಾತ್ರ ಉಳಿದಿದೆ. ಇತ್ತ ಬೀದಿನಾಯಿಗಳ ಕಾಟಕ್ಕೆ ಬ್ರೇಕ್ ಯಾವಾಗ ಅಂದ್ರೆ ಬಿಬಿಎಂಪಿಯ ಅಧಿಕಾರಿಗಳು ಕಳೆದ ಬಾರಿಗಿಂತ ಈ ಬಾರಿ ನಾಯಿಗಳು ಕಡಿಮೆಯಾಗಿದೆ ಅಂತಾ ಉತ್ತರಕೊಟ್ಟು ಜಾರಿಕೊಳ್ತಿದ್ದಾರೆ.

ರಾಜಧಾನಿಯ ಜನರಿಗೆ ಶ್ವಾನಗಳ ಕಾಟದಿಂದ ಸಂಕಷ್ಟ ಶುರುವಾಗಿದ್ದು, ನಿತ್ಯ ನಾಯಿಗಳ ಕಣ್ಣುತಪ್ಪಿಸಿ ಓಡಾಡೋ ಸ್ಥಿತಿ ಎದುರಾಗಿದೆ. ಸದ್ಯ ಸಂತಾನಹರಣ ಚಿಕಿತ್ಸೆ ಮಾಡ್ತಿದ್ದೇವೆ ಅಂತಾ ಸೈಲೆಂಟ್ ಆಗಿರೊ ಪಾಲಿಕೆ, ಇನ್ನಾದ್ರೂ ನಾಯಿಗಳ ಕಾಟಕ್ಕೆ ಬ್ರೇಕ್ ಹಾಕಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ