ವಿದ್ಯಾಕಾಶಿಯ ಶತಮಾನದ ಕಾಲೇಜಿನ ದುರಸ್ತಿಗೆ ಮುಂದಾಗದ ಅಧಿಕಾರಿಗಳು

| Updated By:

Updated on: Jun 07, 2020 | 6:21 PM

ಧಾರವಾಡ: ವಿದ್ಯಾಕಾಶಿ ಧಾರವಾಡ ಅಂದ ಕೂಡಲೇ ಪ್ರಮುಖವಾಗಿ ಮನಸ್ಸಿಗೆ ಬರೋದು ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕಾಲೇಜು, ಕೃಷಿ ವಿಶ್ವವಿದ್ಯಾಲಯ! ಅಂಥವುಗಳ ಸಾಲಿಗೆ ಸೇರೋ ಮತ್ತೊಂದು ಅಂದರೆ ಅದು ಧಾರವಾಡ ತರಬೇತಿ ಕಾಲೇಜು. ಈ ಕಾಲೇಜು ಆರಂಭವಾಗಿ ಅದಾಗಲೇ ಒಂದು ಶತಮಾನ ದಾಟಿ ಹೋಗಿದೆ. 1913 ರಲ್ಲಿ ಆರಂಭವಾದ ಕಾಲೇಜು ಅದು. ಅದೀಗ ಶತಮಾನೋತ್ತರ ದಶಕದಲ್ಲಿ ಅಡಿ‌ ಇಟ್ಟಾಗಿದೆ. ಆದರೆ ಇಂಥ ಸುಂದರವಾದ ಕಾಲೇಜಿನ ಇವತ್ತಿನ ಪರಿಸ್ಥಿತಿ ನೋಡಿದರೆ ಎಂಥವರಿಗಾದರೂ ನೋವಾಗೋದು ಸಹಜ. ಏಕೆಂದರೆ ಇತ್ತೀಚೆಗೆ ಸುರಿದ ಭಾರೀ […]

ವಿದ್ಯಾಕಾಶಿಯ ಶತಮಾನದ ಕಾಲೇಜಿನ ದುರಸ್ತಿಗೆ ಮುಂದಾಗದ ಅಧಿಕಾರಿಗಳು
Follow us on

ಧಾರವಾಡ: ವಿದ್ಯಾಕಾಶಿ ಧಾರವಾಡ ಅಂದ ಕೂಡಲೇ ಪ್ರಮುಖವಾಗಿ ಮನಸ್ಸಿಗೆ ಬರೋದು ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕಾಲೇಜು, ಕೃಷಿ ವಿಶ್ವವಿದ್ಯಾಲಯ! ಅಂಥವುಗಳ ಸಾಲಿಗೆ ಸೇರೋ ಮತ್ತೊಂದು ಅಂದರೆ ಅದು ಧಾರವಾಡ ತರಬೇತಿ ಕಾಲೇಜು. ಈ ಕಾಲೇಜು ಆರಂಭವಾಗಿ ಅದಾಗಲೇ ಒಂದು ಶತಮಾನ ದಾಟಿ ಹೋಗಿದೆ. 1913 ರಲ್ಲಿ ಆರಂಭವಾದ ಕಾಲೇಜು ಅದು. ಅದೀಗ ಶತಮಾನೋತ್ತರ ದಶಕದಲ್ಲಿ ಅಡಿ‌ ಇಟ್ಟಾಗಿದೆ.

ಆದರೆ ಇಂಥ ಸುಂದರವಾದ ಕಾಲೇಜಿನ ಇವತ್ತಿನ ಪರಿಸ್ಥಿತಿ ನೋಡಿದರೆ ಎಂಥವರಿಗಾದರೂ ನೋವಾಗೋದು ಸಹಜ. ಏಕೆಂದರೆ ಇತ್ತೀಚೆಗೆ ಸುರಿದ ಭಾರೀ ಮಳೆ ಹಾಗೂ ಬೀಸಿದ ಗಾಳಿಯಿಂದ ಕಟ್ಟಡದ ಮೇಲೆ ತಾರಸಿ ಹಂಚಿಗೆ ಹೊದಿಸಲಾಗಿದ್ದ ಶೀಟ್​ಗಳು‌ ಮತ್ತು ಆಧಾರವಾಗಿದ್ದ ಟ್ಯೂಬ್ ಮೇಲ್ಛಾವಣಿ ಹಾರಿ ಬಿದ್ದುಹೋಗಿವೆ.

ಧಾರವಾಡದ ಪಾರಂಪರಿಕ ಕಟ್ಟಡ: 
ಇದು ಧಾರವಾಡದ ಪಾರಂಪರಿಕ ಕಟ್ಟಡಗಳ ಸಾಲಿಗೆ ಸೇರಬಹುದಾದ ಕಟ್ಟಡವೂ ಹೌದು. ಧಾರವಾಡ ನಗರದ ಸುಂದರ ನಿರ್ಮಿತಿಗಳಲ್ಲಿ‌ ಇದೂ ಒಂದು. ಧಾರವಾಡದ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯನ್ನು ಕೂಡ ಈ ಕಟ್ಟಡ ಹೊಂದಿದೆ.‌ 107 ವರ್ಷ ಕಳೆದರೂ ಅಲುಗಾಡದ ಕಟ್ಟಡದ ಅಭಿಯಾಂತ್ರಿಕತೆ, ನಿರ್ಮಿತಿ ಕೌಶಲ, ಒಳಾವರಣ ವಿನ್ಯಾಸ ಅಧ್ಯಯನ ಯೋಗ್ಯ.

ಆದರೆ, ಇತ್ತೀಚೆಗೆ ಕೈಗೊಂಡ ಈ ಮೇಲ್ಛಾವಣಿ ದುರಸ್ತಿ ಕಾಮಗಾರಿಯ ಗುಣಮಟ್ಟ ನೋಡಿದರೆ ಇಲ್ಲಿ ಯಾವ ರೀತಿ ಕೆಲಸ ನಿರ್ವಹಿಸಲಾಗಿದೆ ಅನ್ನೋದು ತಿಳಿದು ಬರುತ್ತದೆ. ಘಟನೆ ನಡೆದು 2 ವಾರ ಕಳೆದರೂ ಅದರ ದುರಸ್ತಿಗೆ ಯಾರೂ ಮುಂದಾಗುತ್ತಿಲ್ಲ. ಒಂದೆಡೆ ಇಲಾಖೆಯಲ್ಲಿ ಹಣದ ಕೊರತೆ ಇದೆ ಅನ್ನೋ ಮಾತು ಕೇಳಿ ಬರುತ್ತಿದೆ.

ಹೀಗಾಗಿ ಅದರ ದುರಸ್ತಿ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಇತ್ತೀಚೆಗಷ್ಟೇ ಇದರ ಕೆಲಸ ಮಾಡಿದ್ದರೂ ಅಷ್ಟು ಬೇಗ ಹೇಗೆ ಈ ಸಮಸ್ಯೆ ಎದುರಾಯಿತು ಅನ್ನೋ ಮಾತು ಮತ್ತೊಂದು ಕಡೆ. ಇದೆಲ್ಲದರ ನಡುವೆ ಸದ್ಯಕ್ಕೆ ಸಮಾಧಾನದ ಸಂಗತಿ ಅಂದರೆ ಪ್ರಾಣ ಹಾನಿಯಾಗಿಲ್ಲ ಅನ್ನೋದು. ಒಟ್ಟಿನಲ್ಲಿ ಸುಂದರವಾದ ಕಟ್ಟಡವನ್ನು ಈ ರೀತಿಯಾಗಿ ನೋಡಬೇಕಾಗಿ ಬಂದಿದ್ದು ಧಾರವಾಡಿಗರ ದುರ್ದೈವೇ ಸರಿ.