ಹುಬ್ಬಳ್ಳಿ: ಮದುವೆಗೆ ಹೆಣ್ಣು ಸಿಗಲಿಲ್ಲವೆಂದು ಯುವಕನೋರ್ವ ಸ್ಮಶಾನದಲ್ಲಿ ಬೆಂಕಿ ಹಚ್ಚಿಕೊಂಡ ಘಟನೆ ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ. ಮದುವೆ ವಯಸ್ಸು ಮೀರುತ್ತಿದ್ದರೂ ಹೆಣ್ಣು ಸಿಗಲಿಲ್ಲವೆಂದು ತೀವ್ರ ಬೇಸರಗೊಂಡಿದ್ದ ಸಂತೋಷ್ ಕೊರಡಿ(30) ಬೆಂಕಿ ಹಚ್ಚಿಕೊಂಡು ಆಸ್ಪತ್ರೆ ಸೇರಿದ್ದಾನೆ.
ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗಲಿಲ್ಲ ಎಂದು ಹಲವು ದಿನಗಳಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ಸಂತೋಷ್ ಕೊರಡಿ, ಸ್ಮಶಾನದಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಶೇ. 50ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿರುವ ಸಂತೋಷ್ ನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಪಾಳ್ಯದಲ್ಲಿ ಅಂಗಡಿ ತೆರವು ವಿರೋಧಿಸಿ ವಿಷಸೇವಿಸಿ ಮಾಲೀಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಗ್ರಾಮದ ರಂಗಸ್ವಾಮಿ ಎಂಬಾತ ರಸ್ತೆ ಒತ್ತುವರಿ ಮಾಡಿ ಅಂಗಡಿ ನಿರ್ಮಾಣ ಮಾಡಿದ್ದ. ಈ ಬಗ್ಗೆ ಗ್ರಾಮಸ್ಥರು ತಹಶೀಲ್ದಾರ್‌ಗೆ ದೂರು ನೀಡಿದ್ದರು. ಬಳಿಕ ಸರ್ವೆ ಅಧಿಕಾರಿಗಳು ಜಾಗ ಪರಿಶೀಲಿಸಿ ರಸ್ತೆ ಒತ್ತುವರಿ ಮಾಡಿರುವುದು ನಿಜ ಎಂದು ವರದಿ ನೀಡಿದ್ದರು. ಹೀಗಾಗಿ ಅಂಗಡಿ ತೆರವುಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಆದ್ರೆ ರಂಗಸ್ವಾಮಿ ಅಂಗಡಿ ತೆರವುಗೊಳಿಸಿಲ್ಲ. ಹೀಗಾಗಿ ನಿನ್ನೆ ಒತ್ತುವರಿ ತೆರವುಗೊಳಿಸಲು ತಹಶೀಲ್ದಾರ್ ಮಂಜುಳಾ ಮುಂದಾಗಿದ್ರು. ಈ ವೇಳೆ ರಂಗಸ್ವಾಮಿ ಕಾಲಾವಕಾಶ ಕೇಳಿದ್ರು. ಆದ್ರೆ ತಹಶೀಲ್ದಾರ್ ಮಂಜುಳಾ ಕಾಲಾವಕಾಶ ನೀಡಲು ನಿರಾಕರಿಸಿದ್ರು. ಈ ವೇಳೆ ಅಂಗಡಿಯಲ್ಲೇ ವಿಷ ಸೇವಿಸಿ ರಂಗಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳೀಯರು ಕೂಡಲೇ ರಂಗಸ್ವಾಮಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊಳ್ಳೇಗಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Crime News: ಬಿಜೆಪಿ ಮಾಜಿ ಶಾಸಕರ ಮನೆ ಹಿಂದೆ ಮಹಿಳೆಯ ಕೊಳೆತ ಶವ ಪತ್ತೆ
ವೈದ್ಯರ ಎಡವಟ್ಟಿನಿಂದ ಯುವತಿ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆಪರೇಷನ್ ಮಾಡಿದ ಕೆಲವೇ ಕ್ಷಣಗಳಲ್ಲಿ ಯುವತಿ ಮೃತಪಟ್ಟಿದ್ದಾರೆ. ಯುವತಿ ಸಾವಿಗೆ ವೈದ್ಯರೇ ಕಾರಣ ಎಂದು ಕುಟುಂಬಸ್ಥರು ರಾಯಚೂರು ರಿಮ್ಸ್ ಆಸ್ಪತ್ರೆ ಮೇಲೆ ಕಲ್ಲು ತೂರಾಟ ನಡೆಸಿ ಪ್ರತಿಭಟನೆ ಮಾಡುತ್ತಿದ್ದಾರೆ.
ಕಫ ಕಟ್ಟಿದ ವಿಚಾರಕ್ಕೆ ರಾಜೇಶ್ವರಿ(19) ಕಳೆದ ಮೂರು ದಿನಗಳ ಹಿಂದೆಯಷ್ಟೇ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಳು. ನಿನ್ನೆರಾತ್ರಿ ವೈದ್ಯರು ಯುವತಿ ರಾಜೇಶ್ವರಿ ಮೂಗಿನ ಆಪರೇಷನ್ ಮಾಡಿದ್ದಾರೆ. ಆಪರೇಷನ್ ಮಾಡಿದ ಕೆಲವೇ ಹೊತ್ತಲ್ಲಿ ರಾಜೇಶ್ವರಿ ಮೃತಪಟ್ಟಿದ್ದಾಳೆ. ಲೋ ಬಿಪಿಯಿಂದ ರಾಜೇಶ್ವರಿ ಮೃತಪಟ್ಟಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಆದ್ರೆ ಯುವತಿ ಸಾವಿಗೆ ವೈದ್ಯರೇ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ