ಹುಬ್ಬಳ್ಳಿ: ನೋಂದಣಿ ಕಛೇರಿಯಲ್ಲಿ ಹೆಬ್ಬೆಟ್ಟು ಒತ್ತಿದ್ದ ಮಹಿಳೆ, ಖಾತೆಯಿಂದ 64 ಸಾವಿರ ರೂ. ಖಾಲಿ!
ಒಟಿಪಿ ಬಂದಿಲ್ಲ, ಹಣ ವರ್ಗಾವಣೆ ಸಂದೇಶವೂ ಬಂದಿಲ್ಲ. ಆದರೂ ಮಹಿಳೆಯ ಬ್ಯಾಂಕ್ ಖಾತೆಯಲ್ಲಿದ್ದ ಸಾವಿರಾರು ರೂಪಾಯಿ ಮಾಯವಾಗಿದೆ. ಇಂತಹ ಒಂದು ವಂಚನೆ ಪ್ರಕರಣ ಹುಬ್ಬಳ್ಳಿಯಲ್ಲಿ ನಡೆದಿದೆ. ಸದ್ಯ, ತನ್ನ ಹಣ ವಾಪಸ್ ಕೊಡಿಸುವಂತೆ ನೊಂದ ಮಹಿಳೆ ಪೊಲೀಸರ ಮೊರೆ ಹೋಗಿದ್ದು, ಕುಂದಗೋಳ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ, ನ.28: ನೋಂದಣಿ ಕಚೇರಿಯಲ್ಲಿ ಹೆಬ್ಬೆಟ್ಟು ಒತ್ತಿದ ನಂತರ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ ಸಾವಿರಾರು ರೂಪಾಯಿ ವಂಚಕರ ಪಾಲಾದ ಪ್ರಕರಣ ಹುಬ್ಬಳ್ಳಿಯ (Hubli) ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ನಡೆದಿದೆ. ವಂಚನೆಗೊಳಗಾದ ಮಹಿಳೆಯು ಹಣ ವಾಪಸ್ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ.
ಯರಿನಾರಾಯಣಪುರದ ಮಲ್ಲವ್ವ ಮುಳ್ಳಹಳ್ಳಿ ಎಂಬವರು ಯರಗುಪ್ಪಿಯ ಕೆ.ವಿ.ಜಿ. ಬ್ಯಾಂಕ್ ಖಾತೆಯಲ್ಲಿ ಉಳಿತಾಯದ ಹಣ ಹೊಂದಿದ್ದರು. ಆದರೆ, ಸ್ಥಳ ಖರೀದಿಗಾಗಿ ಕುಂದಗೋಳದ ನೋಂದಣಿ ಕಛೇರಿಯಲ್ಲಿ ಹೆಬ್ಬಟ್ಟು ಒತ್ತಿದ್ದಾರೆ. ಅದರ ನಂತರ ಒಟಿಪಿ, ಹಣ ವರ್ಗಾವಣೆ ಸಂದೇಶ ಯಾವುದು ಬಾರದೆ ಹಂತ ಹಂತವಾಗಿ ಮಹಿಳೆಯ ಖಾತೆಯಿಂದ ಹಣ ಮಾಯವಾಗಿದೆ.
ಇದನ್ನೂ ಓದಿ: ಸೈಬರ್ ವಂಚನೆ ಪ್ರಕರಣಗಳ ಬಗ್ಗೆ ಚರ್ಚಿಸಲು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಸಭೆ ಕರೆದ ಸರ್ಕಾರ
ಸೈಬರ್ ವಂಚಕರು ಮಹಿಳೆಯ ಖಾತೆಯಿಂದ ಅಕ್ರೋಬರ್ 24 ರಿಂದ ನವೆಂಬರ್ 3 ರವರೆಗೆ ಏಳು ಬಾರಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಇತ್ತ, 64 ಸಾವಿರ ಹಣ ಕಳೆದುಕೊಂಡು ಕಂಗಾಲಾಗಿರುವ ಮಹಿಳೆ, ತನ್ನ ಹಣ ವಾಪಸ್ ಕೊಡಿಸುವಂತೆ ಕುಂದಗೋಳ ಪೊಲಿಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ