ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲೊಂದಾದ(Congress Guarantee) ಗೃಹ ಲಕ್ಷ್ಮೀ ಯೋಜನೆಯನ್ನು(Gruha Lakshmi Scheme) ಘೋಷಣೆ ಮಾಡಲಾಗಿದ್ದು, ಆಧಾರ್ ತಿದ್ದುಪಡಿಗೆ ಮಹಿಳೆಯರು ಲಗ್ಗೆ ಇಟ್ಟಿದ್ದಾರೆ. ನೂಕುನುಗ್ಗಲು ನಿಯಂತ್ರಣಕ್ಕೆ ಸೇವಾ ಕೇಂದ್ರದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಗೆ ಆಧಾರ್ ಕಡ್ಡಾಯ ಹಿನ್ನೆಲೆ ಹುಬ್ಬಳ್ಳಿಯ ಆಧಾರ್ ಸೇವಾ ಕೇಂದ್ರಗಳು ತುಂಬಿ ತುಳುಕುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ಅಲ್ಲೊಬ್ಬರು, ಇಲ್ಲೊಬ್ಬರು ಕಾಣಿಸಿಕೊಳ್ಳುತ್ತಿದ್ದ ಆಧಾರ್ ಕೇಂದ್ರದಲ್ಲಿ ಇದೀಗ ಸಾವಿರಾರು ಜನರು ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಮಹಿಳೆಯರು ದಿಢೀರ್ ದಾಂಗುಡಿ ಇಟ್ಟಿದ್ದರಿಂದ ಆಧಾರ್ ಸೇವಾ ಕೇಂದ್ರದ ಎದುರು ನೂಕು ನುಗ್ಗಲು ಉಂಟಾಯಿತು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ 11ರಂದು ಉಚಿತ ಬಸ್ ಪ್ರಯಾಣದೊಂದಿಗೆ ಶುರುವಾಗುತ್ತಿದ್ದಂತೆ. ಎಚ್ಚೆತ್ತುಕೊಂಡಿರುವ ಮಹಿಳೆಯರು ಹಲವರು ಯೋಜನೆಗಳ ಲಾಭ ಪಡೆಯಲು ಆಧಾರ್ ಸೇವಾ ಕೇಂದ್ರದತ್ತ ಧಾವಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಡಿ ತಿಂಗಳಿಗೆ 2 ಸಾವಿರ ರೂ. ಪಡೆಯಲು ಆಧಾರ್ ಕಾರ್ಡ್ ನಿಗದಿಪಡಿಸಲಾಗಿದೆ. ಅದಕ್ಕಾಗಿ ಆಧಾರ್ ಕಾರ್ಡ್ ತಿದ್ದುಪಡಿಗಾಗಿ ನೂರಾರು ಮಹಿಳೆಯರು ಆಧಾರ್ ಸೇವಾ ಕೇಂದ್ರಕ್ಕೆ ಲಗ್ಗೆ ಇಟ್ಟಿದ್ದಾರೆ.
ಇದನ್ನೂ ಓದಿ: ರೆಸಾರ್ಟ್ನಲ್ಲಿ ಶಾಮನೂರು ಶಿವಶಂಕರಪ್ಪ ಭೇಟಿಯಾಗಿದ್ಯಾಕೆ? ಕಾರಣ ಕೊಟ್ಟ ಬೊಮ್ಮಾಯಿ
ಸೇವಾ ಕೇಂದ್ರಕ್ಕೆ ಬಂದವರಲ್ಲಿ ಅಡ್ರೆಸ್ ಬದಲಾವಣೆ ಸಂಖ್ಯೆಯೇ ಹೆಚ್ಚಾಗಿದೆ. ಇನ್ನು ಕೆಲವರು ಮದುವೆಯಾಗಿ ಗಂಡನ ಮನೆಗೆ ಬಂದವರು ಸ್ಥಳ ಬದಲಾವಣೆ ಮಾಡಿಸುತ್ತಿದ್ದು ಇನ್ನೂ ಕೆಲವರು ಜನ್ಮದಿನಾಂಕ ತಿದ್ದುಪಡಿ ಮಾಡಿಸಲು ಆಗಮಿಸುತ್ತಿದ್ದಾರೆ. ಮತ್ತೆ ಹಲವರು ಪತಿ/ಪತ್ನಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಬಂದಿದ್ದಾರೆ. ಬಹಳಷ್ಟು ಆಧಾರ್ ಕಾರ್ಡ್‌ಗಳಲ್ಲಿ ಗಂಡನ ಹೆಸರು ಕೇರ್/ ಆಫ್ ಎಂದು ನಮೂದಿಸಲಾಗಿದೆ. ಇದು ಆಧಾರ್ ತಂತ್ರಾಂಶ ಲೋಪ ಎಂಬ ಮಾತುಗಳು ಕೇಳಿ ಬರುತ್ತಿವೆ. ಗ್ಯಾರಂಟಿ ಯೋಜನೆಯಡಿ ಎರಡು ಸಾವಿರ ರೂ.ಗಳನ್ನು ಮನೆ ಯಜಮಾನಿ ಬ್ಯಾಂಕ್ ಖಾತೆಗೆ ನೇರ ಜಮಾ ಮಾಡುವುದಾಗಿ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಜೋಡಣೆ ಕಡ್ಡಾಯವಾಗಿದೆ. ಇದುವರೆಗೂ ಬಹಳಷ್ಟು ಮಹಿಳೆಯರು ಖಾತೆಗೆ ಆಧಾರ್ ಅಪಡೇಟ್ ಮಾಡಿಲ್ಲ. ಹಾಗಾಗಿ ಮಹಿಳೆಯರು ಬ್ಯಾಂಕ್ ಖಾತೆಗೆ ಹೊಂದಾಣಿಕೆಯಾಗುವಂತೆ ಜನ್ಮದಿನಾಂಕ, ಅಡ್ರೆಸ್, ಹೆಸರು ಇತ್ಯಾದಿ ಸಂಗತಿಗಳ ತಿದ್ದುಪಡಿ ಮಾಡಿಸಲು ಸೇವಾ ಕೇಂದ್ರಗಳಿಗೆ ಓಡಾಟ ಆರಂಭಿಸಿದ್ದಾರೆ. ಪುಟ್ಟ ಮಕ್ಕಳ ಆಧಾರ ಕಾರ್ಡ್ ಮಾಡಿಸಲು ಮಹಿಳೆಯರು ಆಗಮಿಸುತ್ತಿರುವ ದೃಶ್ಯಗಳು ಹಬ್ಬಳ್ಳಿಯಲ್ಲಿ ಕಂಡುಬಂತು.
ಹುಬ್ಬಳ್ಳಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ