ಠೇವಣಿ ವಾಪಸ್ ಕೊಡದ ಬ್ಯಾಂಕ್ ಆಫ್ ಬರೋಡಾ ಶಾಖೆಗೆ 97 ಸಾವಿರ ರೂ ದಂಡ ವಿಧಿಸಿದ ಧಾರವಾಡ ಗ್ರಾಹಕ ವೇದಿಕೆ
ಈ ದೂರಿನ ವಿಚಾರಣೆ ನಡೆಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು ಠೇವಣಿ ಅವಧಿ 2010 ರಲ್ಲೇ ಮುಗಿದಿದೆ. ಆದರೆ ಗ್ರಾಹಕರಾದ ಮಂಜುನಾಥ ಅವರಿಗೆ ಈವರೆಗೆ ಠೇವಣಿ ಮುಕ್ತಾಯದ ಹಣ ಮತ್ತು ಅದರ ಮೇಲಿನ ಬಡ್ಡಿಯನ್ನು ಕೊಡದೇ ಇರುವುದು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಹೊಸಳ್ಳಿ ಗ್ರಾಮದ ನಿವಾಸಿ ಮಂಜುನಾಥ ಕಾಂಬಳೆ ಅವರು ಮಾರ್ಚ್ 26, 1999 ರಂದು ಐದು ಸಾವಿರ ರೂಪಾಯಿ ಹಣವನ್ನು ಆಗಿನ ಧಾರವಾಡದ ( Dharwad) ದೇನಾ ಬ್ಯಾಂಕಿನಲ್ಲಿ ಖಾಯಂ ಠೇವಣಿ ಇಟ್ಟಿದ್ದರು. ಈ ದೇನಾ ಬ್ಯಾಂಕ್ ನಂತರದ ದಿನಗಳಲ್ಲಿ ಬ್ಯಾಂಕ್ ಆಫ್ ಬರೋಡಾದಲ್ಲಿ (Bank of Baroda) ವಿಲೀನವಾಗಿತ್ತು. ಠೇವಣಿ (Deposit) ಮೇಲೆ ಶೇ.10.5 ರಂತೆ ಬಡ್ಡಿ ಕೊಡಲು ಒಪ್ಪಂದವಿತ್ತು.
ಮಾರ್ಚ್ 26, 2010 ಕ್ಕೆ ಆ ಠೇವಣಿ ಅವಧಿ ಮುಗಿದಿತ್ತು. ಮುಕ್ತಾಯದ ಮೌಲ್ಯ ರೂ.15,635/- ಆಗಿತ್ತು. ಠೇವಣಿ ಅವಧಿ 2010 ರಲ್ಲೇ ಮುಗಿದರೂ ನಂತರ ಆ ಹಣವನ್ನು ಬ್ಯಾಂಕಿನವರು ಮಂಜುನಾಥ ಅವರಿಗೆ ಕೊಟ್ಟಿರಲಿಲ್ಲ. ಮಂಜುನಾಥ ಹಲವಾರು ಬಾರಿ ಬ್ಯಾಂಕ್ ಆಫ್ ಬರೋಡಾಗೆ ಠೇವಣಿ ಹಣ ಮತ್ತು ಬಡ್ಡಿ ಹಿಂದಿರುಗಿಸಲು ವಿನಂತಿಸಿದರೂ ಏನೂ ಪ್ರಯೋಜನ ಆಗಿರಲಿಲ್ಲ. ಬ್ಯಾಂಕಿನವರ ಈ ವರ್ತನೆಯಿಂದ ಬೇಸತ್ತು ಬ್ಯಾಂಕಿನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ (Dharwad Consumer Forum) ದೂರು ಸಲ್ಲಿಸಿದ್ದರು.
Also Read: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಿಮಾ ಕಂಪನಿಗೆ ದಂಡ! ಕಾರಣವೇನು?
ಈ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ಅವರು ಠೇವಣಿ ಅವಧಿ 2010 ರಲ್ಲೇ ಮುಗಿದಿದ್ದು ಈಗ ಸುಮಾರು 13 ವರ್ಷ ಕಳೆದಿದೆ. ಈವರೆಗೆ ಮಂಜುನಾಥ ಅವರಿಗೆ ಠೇವಣಿ ಮುಕ್ತಾಯದ ಹಣ ಮತ್ತು ಅದರ ಮೇಲಿನ ಬಡ್ಡಿಯನ್ನು ಕೊಡದೇ ಇರುವುದು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದ್ದಾರೆ.
Also Read: ಸೇವಾ ನ್ಯೂನ್ಯತೆ: ಕೊವಿಡ್ ನೆಪ ಹೇಳಿ ಮದುವೆಗೆ ಶಾಮಿಯಾನ ಹಾಕದ ಹುಬ್ಬಳ್ಳಿಯ ಶಾಮಿಯಾನ ಮಾಲಿಕನಿಗೆ ದಂಡ
ಠೇವಣಿ ಹಣ ರೂ.15,635/- ಮತ್ತು ಅದರ ಮೇಲೆ ಇದುವರೆಗಿನ ಬಡ್ಡಿ ರೂ. 22,299/- ಸೇರಿ ಒಟ್ಟು ರೂ. 37,934/- ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ನೀಡುವಂತೆ ಆಯೋಗ ಬ್ಯಾಂಕ್‌ಗೆ ಆದೇಶಿಸಿದೆ. ಈ ಬಗ್ಗೆ ಬ್ಯಾಂಕಿನವರ ನಿರ್ಲಕ್ಷದ ಧೋರಣೆ ಮತ್ತು ಅದರಿಂದ ದೂರುದಾರರಿಗೆ ಆಗಿರುವ ತೊಂದರೆಗಾಗಿ ಬ್ಯಾಂಕಿನವರು ರೂ. 50,000/- ಪರಿಹಾರ ಹಾಗೂ ರೂ.10,000/- ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಆದೇಶಿಸಿದೆ.
ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ