ಸೇವಾ ನ್ಯೂನ್ಯತೆ: ಕೊವಿಡ್ ನೆಪ ಹೇಳಿ ಮದುವೆಗೆ ಶಾಮಿಯಾನ ಹಾಕದ ಹುಬ್ಬಳ್ಳಿಯ ಶಾಮಿಯಾನ ಮಾಲಿಕನಿಗೆ ದಂಡ
ಮದುವೆ ದಿನ ಮನೆಯ ಬಳಿ ಶ್ಯಾಮಿಯಾನ ಹಾಕಿ ಡೆಕೋರೇಷನ್ ಮಾಡಲಿಲ್ಲ. ವಿಚಾರಿಸಿದಾಗ ಕೊವಿಡ್ ಕಾರಣ ನೀಡಿದ್ದರು. 2022ರ ಸೆಪ್ಟೆಂಬರ್ 28ರಂದು ನಿಗದಿಯಾದ ಮಗಳ ಮದುವೆಗಾದರೂ ಶಾಮಿಯಾನ ಹಾಕೆಂದು ಮನವಿ ಮಾಡಿದರೂ ಓಂಕಾರ ಶಾಮಿಯಾನದವರು ಹಾಕಿರಲಿಲ್ಲ. ಹೀಗಾಗಿ ದ್ಯಾಮಪ್ಪ ಅವರು ಗ್ರಾಹಕರ ನ್ಯಾಯಾಲಯದ ಬಾಗಿಲು ಬಡಿದರು.

ಮದುವೆಗೆ ಶಾಮಿಯಾನ ಹಾಕುವುದಾಗಿ ಹೇಳಿ ಸೇವಾ ನ್ಯೂನ್ಯತೆ ಎಸಗಿದ ಹುಬ್ಬಳ್ಳಿಯ ಉಣಕಲ್ ಸಾಯಿನಗರದ ಓಂಕಾರ ಶಾಮಿಯಾನ ಮಾಲಿಕನಿಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ಮತ್ತು ಪರಿಹಾರ ನೀಡಲು ಆದೇಶಿಸಿದೆ. ಧಾರವಾಡದ ಬಸವೇಶ್ವರ ಬಡಾವಣೆಯ ನಿವೃತ್ತ ಸ್ಟೇಟ್ ಬ್ಯಾಂಕ್ ನೌಕರ ದ್ಯಾಮಪ್ಪ ಸಣ್ಣಕ್ಕಿ ಅವರು 2021ರ ಏಪ್ರಿಲ್ 25ರಂದು ಮಗನ ಮದುವೆಗಾಗಿ ಶಾಮಿಯಾನ ಹಾಕಿ ಡೆಕೋರೇಷನ್ ಮಾಡಲು ಹುಬ್ಬಳ್ಳಿಯ (Hubballi, Dharwad) ಉಣಕಲ್ ಸಾಯಿನಗರದ ಓಂಕಾರ ಶಾಮಿಯಾನ (Shamiyana) ಮಾಲೀಕ ನಿಂಗಪ್ಪನ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಮುಂಗಡವಾಗಿ ರೂ. 50 ಸಾವಿರ ಸಹ ನೀಡಿದ್ದರು. ಈ ಮಧ್ಯೆ ಕೊವಿಡ್ ಬಂದಿದ್ದರಿಂದ ಅಂಬರೈ ಗಾರ್ಡನ್‌ನಲ್ಲಿ ನಿಗದಿಯಾಗಿದ್ದ ಮದುವೆಯನ್ನು (Marriage) ಹತ್ತಿರದ ಬಸವೇಶ್ವರ ಬಡಾವಣೆಯ ತಮ್ಮ ಮನೆಯ ಮುಂದೆ ಮಾಡಲು ಸ್ಥಳ ಬದಲಾಯಿಸಿದರು.
ಈ ಬಗ್ಗೆ ಓಂಕಾರ ಶಾಮಿಯಾನ ಮಾಲೀಕ ನಿಂಗಪ್ಪನಿಗೆ ಮಾಹಿತಿ ನೀಡಿದ್ದರು. ಆದರೆ ಮದುವೆ ದಿನ ಮನೆಯ ಬಳಿ ಶ್ಯಾಮಿಯಾನ ಹಾಕಿ ಡೆಕೋರೇಷನ್ ಮಾಡಲಿಲ್ಲ. ವಿಚಾರಿಸಿದಾಗ ಕೊವಿಡ್ ಕಾರಣ ನೀಡಿದ್ದರು. 2022ರ ಸೆಪ್ಟೆಂಬರ್ 28ರಂದು ನಿಗದಿಯಾದ ಮಗಳ ಮದುವೆಗಾದರೂ ಶಾಮಿಯಾನ ಹಾಕೆಂದು ಮನವಿ ಮಾಡಿದರೂ ಓಂಕಾರ ಶಾಮಿಯಾನದವರು ಹಾಕಿರಲಿಲ್ಲ. ಹೀಗಾಗಿ ದ್ಯಾಮಪ್ಪ ಅವರು ಗ್ರಾಹಕರ ನ್ಯಾಯಾಲಯದ ಬಾಗಿಲು ಬಡಿದರು.
Also read: ನಾಮಿನಿಗೆ ವಿಮಾ ಹಣ ಕೊಡದ ಖಾಸಗಿ ವಿಮಾ ಕಂಪನಿಗೆ, 10 ಲಕ್ಷ ರೂ ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ
ಪ್ರಕರಣದ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ರೂ.50 ಸಾವಿರ ಹಣ ಪಡೆದು ಮಗನ ಮದುವೆ ಅಥವಾ ನಂತರದ ಮಗಳ ಮದುವೆಗೆ ಶ್ಯಾಮಿಯಾನ ಹಾಕದಿರುವುದು ತಪ್ಪು. ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ. ದೂರುದಾರರಿಂದ ಪಡೆದ ರೂ. 50 ಸಾವಿರ ಮತ್ತು ಅದರ ಮೇಲೆ 2021ರಿಂದ ಶೇ. 8ರಂದು ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಣ ಹಿಂತಿರುಗಿಸುವಂತೆ ಓಂಕಾರ ಶ್ಯಾಮಿಯಾನ ಮಾಲೀಕ ನಿಂಗಪ್ಪನಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ರೂ. 15 ಸಾವಿರ ಪರಿಹಾರ ಮತ್ತು ರೂ. 5 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ನಿರ್ದೇಶಿಸಿದೆ.
ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ