ಹುಬ್ಬಳ್ಳಿ: ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಭಾಗಿಯಾದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಮಾತನಾಡಿದ ಸಿಎಂ, ದೇಶ ಅಭಿವೃದ್ಧಿಯಾಗಬೇಕಾದರೆ ಶಾಂತಿ ಮುಖ್ಯ. ಎಲ್ಲಿ ಶಾಂತಿ ಇರಲ್ಲವೋ ಅಲ್ಲಿ ಪ್ರಗತಿಯಾಗುವುದಿಲ್ಲ. ಕೆಲ ದೇಶಗಳು ಭಯೋತ್ಪಾದನೆಯಿಂದ ನಲುಗುತ್ತಿವೆ. ದೇಶದ ಭದ್ರತೆಗೆ ಪೊಲೀಸರು ಹೋರಾಡುತ್ತಿದ್ದಾರೆ. ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಪೊಲೀಸರಿಗೆ ನೀಡಬೇಕಾದ ಎಲ್ಲ ಸವಲತ್ತು ನೀಡುತ್ತೇವೆ. ಪೊಲೀಸರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಆನ್ ಲೈನ್ ಗೇಮ್ನಿಂದ ಯುವಕರು ಹಾಳಾಗುತ್ತಿದ್ದರು. ಸಾಕಷ್ಟು ಜನ ಸಾಲಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಅದನ್ನ ಮಟ್ಡ ಹಾಕೋಕೆ ಹೊಸ ಕಾನೂನು ತಂದಿದ್ದೇವೆ. ಇನ್ಮುಂದೆ ಎಲ್ಲಾ ಕಾಲೇಜುಗಳಲ್ಲಿ ಮಹಿಳಾ ರಕ್ಷಣಾ ಎನ್ನುವ ಹೆಸರಿನಲ್ಲಿ ಹಿರಿಯ ನುರಿತ ಅಧಿಕಾರಿಗಳಿಂದ ಸೆಲ್ಪ್ ಡಿಫೆನ್ಸ್ ಬಗ್ಗೆ ತರಬೇತಿ ನೀಡುವ ಕಾರ್ಯ ಆರಂಭ ಮಾಡುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.
ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಲು ಸಲಹೆ ನೀಡುತ್ತಿದ್ದೇವೆ ಎಂದು ಮಾತನಾಡಿದ ಬೊಮ್ಮಾಯಿ, ಮಹಿಳೆಯರ ಸ್ವಯಂ ರಕ್ಷಣೆಗೆ ತರಬೇತಿ ನೀಡುತ್ತೇವೆ. ಉತ್ತರಾಖಂಡ್ ರಾಜ್ಯಕ್ಕೆ ಅಗತ್ಯ ನೆರವು ನೀಡುತ್ತೇವೆ. ಈಗಾಗಲೇ ತುಷಾರ್ ಗಿರಿನಾಥ್ಗೆ ಜವಾಬ್ದಾರಿ ನೀಡಿದ್ದೇವೆ. ಕನ್ನಡಿಗರ ರಕ್ಷಣೆಗೆ ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇವೆ ಅಂತ ಅಭಿಪ್ರಾಯಪಟ್ಟಿದ್ದಾರೆ.
ಉಪಚುನಾವಣೆ ವೇಳೆ ವೈಯಕ್ತಿಕವಾಗಿ ನಿಂದನೆ ಸರಿಯಲ್ಲ. ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಜನರ ಮನಸ್ಸನ್ನು ಗೆಲ್ಲುವ ಮಾತುಗಳನ್ನ ಆಡಬೇಕು. ವಾದಕ್ಕೆ ಬಿದ್ದು ವಾದ ಮಾಡುವುದು ಸರಿಯಲ್ಲ. ಜನರ ಧ್ವನಿಯನ್ನ ಮಾಧ್ಯಮಗಳು ಬಿಂಬಿಸುತ್ತಿವೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕು ಅಂತ ಬೊಮ್ಮಾಯಿ ನುಡಿದರು.
ಇದನ್ನೂ ಓದಿ
‘ಶಾರುಖ್ ಮಗನ ಸಮಸ್ಯೆಗೆ ನಾನೇನು ಮಾಡಲಿ?’: ಮುಖಕ್ಕೆ ಹೊಡೆದಂತೆ ಮಾತಾಡಿದ್ರಾ ಅಜಯ್ ದೇವಗನ್?