ತಪ್ಪು ಮಾಡದವರು ಬಲಿಪಶು ಆಗುವುದು ಬೇಡ: ಬಸವರಾಜ ಹೊರಟ್ಟಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 13, 2022 | 3:26 PM

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನನ್ನ ಕ್ಷಮೆ ಕೇಳಿದ್ದಾರೆ. ಈ ವಿವಾದವನ್ನು ದೊಡ್ಡದಾಗಿ ಬೆಳೆಸಲು ನಾನು ಇಚ್ಛಿಸುವುದಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ತಪ್ಪು ಮಾಡದವರು ಬಲಿಪಶು ಆಗುವುದು ಬೇಡ: ಬಸವರಾಜ ಹೊರಟ್ಟಿ
ಸಭಾಪತಿ ಬಸವರಾಜ ಹೊರಟ್ಟಿ (ಸಂಗ್ರಹ ಚಿತ್ರ)
Follow us on

ಧಾರವಾಡ: ಯಾರೋ ಮಾಡಿದ ತಪ್ಪಿಗೆ ಮತ್ತಿನ್ಯಾರೋ ಬಲಿಯಾಗುವುದು ಬೇಡ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಹೇಳಿದರು. ತಮ್ಮ ವಿರುದ್ಧ ಅಟ್ರಾಸಿಟಿ ದೂರು ದಾಖಲಾದ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸ್ ಇನ್​ಸ್ಪೆಕ್ಟರ್ ಅಮಾನತು ಆಗಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನನ್ನ ಕ್ಷಮೆ ಕೇಳಿದ್ದಾರೆ. ಈ ವಿವಾದವನ್ನು ದೊಡ್ಡದಾಗಿ ಬೆಳೆಸಲು ನಾನು ಇಚ್ಛಿಸುವುದಿಲ್ಲ ಎಂದರು.

ನನ್ನ ವಿರುದ್ಧ ದೂರು ದಾಖಲಾಗಿದ್ದು ಜನವರಿ 25ರಂದು. ಆ ದಿನ ನಾನು ಧಾರವಾಡದಲ್ಲಿ ಇರಲೇ ಇಲ್ಲ. ವಿಷಯ ದೊಡ್ಡದು ಮಾಡಬಾರದೆಂದು ನಾನು ಸುಮ್ಮನಿದ್ದೆ. ತಪ್ಪು ಮಾಡಿದವರ ಮೇಲೆ ಕ್ರಮ ಆಗಲಿ. ಸದನದಲ್ಲಿ ‌ಬಜೆಟ್ ವಿಚಾರದಲ್ಲಿ ಮಾತನಾಡುವಾಗ ಕೆಲ ಸದಸ್ಯರು ಪ್ರಸ್ತಾಪಿಸಿದ್ದರು ಎಂದು ನೆನಪಿಸಿಕೊಂಡರು. ತಪ್ಪು ಮಾಡದವರ ಮೇಲೆ ಕ್ರಮ‌ ಜರುಗಿಸಿ ಯಾರನ್ನೂ ಬಲಿಪಶು ಮಾಡುವುದು ಬೇಡ. ಹಿರಿಯ ಅಧಿಕಾರಿ ಹೇಳಿದರೆಂದು ಕಿರಿಯರನ್ನು ಬಲಿಕೊಡುವುದು ತಪ್ಪು. ಪೊಲೀಸ್ ಮಹಾನಿರ್ದೇಶಕರ ಜೊತೆಗೆ ನಾನೇ ಮಾತನಾಡುತ್ತೇನೆ. ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಹೊರಟ್ಟಿ ಪರ ಸಲೀಂ ಅಹ್ಮದ್ ಹೇಳಿಕೆ

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Hortti) ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತು ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಲೀ ಅಹ್ಮದ್ ಆಗ್ರಹಿಸಿದ್ದರು. ಪ್ರಕರಣ ದಾಖಲಿಸಿರುವ ಇನ್​ಸ್ಪೆಕ್ಟರ್ ಅಮಾನತು ಮಾಡಲಾಗಿದೆ ಆದರೆ ಇಷ್ಟೇ ಸಾಲದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ನಸುಕಿನ 3 ಗಂಟೆಗೆ ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಭಾಪತಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಸವರಾಜ ಹೊರಟ್ಟಿಯವರದ್ದು ಸಾಂವಿಧಾನಿಕ ಹುದ್ದೆ. ಅವರು ಬೆಂಗಳೂರಲ್ಲಿದ್ದಾಗ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಕ್ತಕ್ರಮದ ಭರವಸೆ ನೀಡಿದ್ದಾರೆ. ಹೊರಟ್ಟಿ ನಮ್ಮ ಪಕ್ಷದವರಲ್ಲ, ಆದರೆ ನಮ್ಮ ಸಭಾಪತಿ. ಈಗ ನಾವು ಧ್ವನಿ ಎತ್ತಿದ್ದೇವೆ. ಎಸ್​ಪಿ ಮೇಲೆ ಕ್ರಮ‌ ಕೈಗೊಳ್ಳದಿದ್ದರೆ ಪುನಃ ಹೋರಾಟ ಮಾಡುತ್ತೇವೆ. ಸಭಾಪತಿ ಮೇಲೆ ಪ್ರಕರಣ ದಾಖಲಿಸುವಾಗ ಸರ್ಕಾರದ ಅನುಮತಿ ಪಡೆಯಬೇಕಿತ್ತು ಎಂದು ಅವರು ತಿಳಿಸಿದ್ದರು.

ಹೊರಟ್ಟಿ ನಮ್ಮ ಪಕ್ಷದವರಲ್ಲ. ಆದರೆ ಅವರು ನಮ್ಮ ಸಭಾಪತಿ. ಹೀಗಾಗಿ ನಾವು ಧ್ವನಿ ಎತ್ತಿದ್ದೇವೆ. ಈಗ ಇನ್ಸಪೆಕ್ಟರ್ ಅಮಾನತು ಮಾಡಿದ್ದಾರೆ. ನಾವು ಎಸ್​ಪಿ ಅಮಾನತು ಆಗಬೇಕೆಂದು ಆಗ್ರಹಿಸುತ್ತಿದ್ದೇವೆ. ಎಸ್​ಪಿ ವಿರುದ್ಧ ಕ್ರಮ ಜರುಗಿಸದಿದ್ದರೆ ಪುನಃ ಹೋರಾಟ ಮಾಡುತ್ತೇವೆ. ಈ ವಿಚಾರದಲ್ಲಿ ಎಸ್​ಪಿ ಅವರದು ತಪ್ಪು ಎಂದು ನಾನು ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ಸಭಾಪತಿ ಹೊರಟ್ಟಿ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿದ ಇನ್​ಸ್ಪೆಕ್ಟರ್ ಅಮಾನತು: ಎಸ್​ಪಿ ಅಮಾನತಿಗೆ ಸಲೀಂ ಅಹ್ಮದ್ ಆಗ್ರಹ

ಇದನ್ನೂ ಓದಿ: ಸಭಾಪತಿ ವಿರುದ್ಧ ಎಫ್​ಐಆರ್: ಬೆಳಗಿ‌ನ ಜಾವ 3 ಗಂಟೆಗೆ ಧಾರವಾಡ ಎಸ್.ಪಿ ಫೋನ್ ಮಾಡ್ತಾರೆ ಎಂದು ಸಭಾಪತಿ ಹೊರಟ್ಟಿ ಗರಂ