ಕಾಲುವೆ ಅವ್ಯವಹಾರ: ಪೋಲಾದ ಸರ್ಕಾರದ ಕೋಟಿ ಕೋಟಿ ಹಣ, ಲೋಕಾಯುಕ್ತಕ್ಕೆ ಮೊರೆ ಹೋದ ರೈತ ಸೇನಾ ಅಧ್ಯಕ್ಷ
ಈ ಅಕ್ರಮದ ತನಿಖೆ ನಡೆಸಬೇಕು ಅಂತಾ ಧಾರವಾಡದ ಕರ್ನಾಟಕ ನೀರಾವರಿ ನಿಗಮದ ಎದುರು ರೈತ ಸೇನಾ ವತಿಯಿಂದ 38 ದಿನಗಳಿಂದ ಸತ್ಯಾಗ್ರಹ ನಡೆಸಲಾಗುತ್ತಿದೆ. ಈ ಹೋರಾಟಕ್ಕೆ ಯಾರೂ ಸ್ಪಂದಿಸದೇ ಇರೋದಕ್ಕೆ ಇದೀಗ ರೈತ ಸೇನಾದ ಅಧ್ಯಕ್ಷ ವೀರೇಶ ಸೊಬರದಮಠ ಇದೀಗ ಲೋಕಾಯುಕ್ತ ಮೊರೆ ಹೋಗಿದ್ದಾರೆ.
ಧಾರವಾಡ, ಸೆಪ್ಟೆಂಬರ್ 23: ಧಾರವಾಡ ಕರ್ನಾಟಕ ನೀರಾವರಿ ನಿಗಮದಲ್ಲಿ ನಡೆದಿರುವ ಹಲವು ಹಗರಣಗಳ ತನಿಖೆಗೆ ಆಗ್ರಹಿಸಿ ಈಗಾಗಲೇ ಹಲವಾರು ದಿನಗಳಿಂದ ಹೋರಾಟ ನಡೆದಿದೆ. ಈ ಅವ್ಯವಹಾರದ ತನಿಖೆಯಾಗಬೇಕು ಅಂತಾ ಎಷ್ಟೇ ಹೋರಾಟ ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಇದೇ ಕಾರಣಕ್ಕೆ ಇದೀಗ ಲೋಕಾಯುಕ್ತದಲ್ಲಿ ಈ ಸಂಬಂಧ ಕೇಸು ದಾಖಲಾಗಿದೆ. ಮಲಪ್ರಭಾ ಬಲದಂಡೆ ಮತ್ತು ಎಡದಂಡೆ ಕಾಲುವೆಯ 114 ಕಿ.ಮೀ. ಉದ್ದದ ಕಾಲುವೆ (Canal scam) ನವೀಕರಣ ಕಾಮಗಾರಿಯು ಸಂಪೂರ್ಣ ಅವೈಜ್ಞಾನಿಕವಾಗಿದೆ ಅಂತಾ ಈಗಾಗಲೇ ಹಲವಾರು ಹೋರಾಟಗಳು ನಡೆದಿವೆ.
ಈ ಅಕ್ರಮದ ತನಿಖೆ ನಡೆಸಬೇಕು ಅಂತಾ ಧಾರವಾಡದ ಕರ್ನಾಟಕ ನೀರಾವರಿ ನಿಗಮದ ಎದುರು ರೈತ ಸೇನಾ ವತಿಯಿಂದ 38 ದಿನಗಳಿಂದ ಸತ್ಯಾಗ್ರಹ ನಡೆಸಲಾಗುತ್ತಿದೆ. ಈ ಹೋರಾಟಕ್ಕೆ ಯಾರೂ ಸ್ಪಂದಿಸದೇ ಇರೋದಕ್ಕೆ ಇದೀಗ ರೈತ ಸೇನಾದ ಅಧ್ಯಕ್ಷ ವೀರೇಶ ಸೊಬರದಮಠ ಇದೀಗ ಲೋಕಾಯುಕ್ತ ಮೊರೆ ಹೋಗಿದ್ದಾರೆ. ಈ ಕಾಮಗಾರಿ ಕುರಿತು ತನಿಖೆ ನಡೆಸಬೇಕೆಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರಿಗೆ ದೂರು ಸಲ್ಲಿಸಿರುವ ಅವರು, ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆ 11 ತಾಲೂಕಿಗೆ ವ್ಯಾಪ್ತಿಯ ಮಲಪ್ರಭಾ ಯೋಜನೆ ಬಲ ಮತ್ತು ಎಡ ದಂಡೆ ಕಾಲುವೆಗಳ ಮೂಲಕ ರೈತರ ಜಮೀನುಗಳಿಗೆ ನೀರುಣಿಸಲಾಗುತ್ತದೆ.
ಒಣ ಭೂಮಿ ಹಿನ್ನೆಲೆಯಲ್ಲಿ ರೈತರು ಸಂಪೂರ್ಣವಾಗಿ ಕಾಲುವೆ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಕಟ್ಟಕಡೆಯ ರೈತರಿಗೆ ನೀರುಣಿಸುವ ಉದ್ದೇಶದಿಂದ ರೂ. 2178.39 ಕೋಟಿ ವೆಚ್ಚದಲ್ಲಿ ಎರಡೂ ದಂಡೆಗಳ ಕಾಮಗಾರಿ ನಡೆಯುತ್ತಿದೆ. ಮುಖ್ಯ ಕಾಲುವೆ, ಉಪಕಾಲುವೆ ಕಾಮಗಾರಿ ಮುಕ್ತಾಯಗೊಂಡಿದೆ. ಕೆಲವು ಭಾಗಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಸ್ವತಃ ತಾವು ಕಾಮಗಾರಿ ಪರಿಶೀಲಿಸಿದ್ದು ಅದು ಸಂಪೂರ್ಣ ಅವೈಜ್ಞಾನಿಕ ಹಾಗೂ ಕಳಪೆಯಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್ನಲ್ಲಿ ಜನಿಸಿದ ಮಗು ಅದಲು ಬದಲು; ಗಂಡಿನ ಬದಲಾಗಿ ಪಾಲಕರಿಗೆ ಹೆಣ್ಣು ಮಗು ನೀಡಿದ ವೈದ್ಯರು
ಸರ್ಕಾರದ ಹಣ ಪೋಲಾಗಿದೆ. ಅಧಿಕಾರಿಗಳು, ರಾಜಕಾರಣಿಗಳಿಗೆ ಈ ಯೋಜನೆ ಅನುಕೂಲವಾಗಿದೆಯೇ ಹೊರತು ರೈತರಿಗಲ್ಲ. ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಲೋಕಾಯುಕ್ತರು ತನಿಖೆ ನಡೆಸಬೇಕೆಂದು ದೂರಿನಲ್ಲಿ ದಾಖಲೆಗಳೊಂದಿಗೆ ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ಮಹಾದಾಯಿ ಯೋಜನೆಯಲ್ಲಿ ಸರ್ಕಾರದ ಪರವಾನಗಿ ಪಡೆಯದೇ ನೀರಾವರಿ ಇಲಾಖೆಯು ರೂ. 957 ಕೋಟಿ ಮೊತ್ತದ ಟೆಂಡರ್ ಕರೆದಿದ್ದು ಹೇಗೆ ಎಂಬ ಪ್ರಶ್ನೆಯೂ ಎದುರಾಗಿದೆ. ಈ ಕುರಿತು ಅಕ್ಟೋಬರ್ ತಿಂಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ. ಮಹಾದಾಯಿ ಯೋಜನೆಯಲ್ಲಿ ಈ ಭಾಗದ ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.
ಇದನ್ನೂ ಓದಿ: ಉತ್ತರ ಕರ್ನಾಟಕಕ್ಕೂ ವ್ಯಾಪಿಸಿದ ಕಾವೇರಿ ಕಿಚ್ಚು; ಚಿಕ್ಕೋಡಿ, ಹುಬ್ಬಳ್ಳಿಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ
ನ್ಯಾಯಾಧೀಕರಣ 3.9 ಟಿಎಂಸಿ ನೀಡಬೇಕೆಂದು ತೀರ್ಪು ನೀಡಿದರೂ ಮುಂದೆ ಹೈಕೋರ್ಟ್ ಮೂಲಕ ವನ್ಯಜೀವಿ ತಾಣವನ್ನಾಗಿಸಿದೆ. ಕೂಡಲೇ ರಾಜ್ಯ ಸರ್ಕಾರ ಮುಂಬೈ ಹೈಕೋರ್ಟ್‌ಗೆ ಮನವಿ ಮಾಡಿ ನ್ಯಾಯಾಧೀಕರಣ ತೀರ್ಪು ಹಾಗೂ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಬಗ್ಗೆ ಕಾರ್ಯ ಪ್ರವೃತ್ತರಾಗಬೇಕಿದೆ.
ಈ ಭಾಗದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕೇಂದ್ರದಿಂದ ಅನುಮತಿ ಕೊಡಿಸುವ ಜವಾಬ್ದಾರಿ ಹೊತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಈ ಕ್ರಮ ಕೈಗೊಳ್ಳಲು ರೈತರ ನಿಯೋಗ ಸದ್ಯದಲ್ಲಿಯೇ ಬೆಂಗಳೂರಿಗೆ ಹೊರಡಿಲಿದೆ ಅಂತಾನೂ ಹೇಳಿದ್ದಾರೆ. ಒಟ್ಟಿನಲ್ಲಿ ಒಂದು ಕಡೆ ಜನರು ನೀರಿಲ್ಲದೇ ಒದ್ದಾಡುತ್ತಿದ್ದರೆ, ಜನರಿಗೆ ನೀರು ಪೂರೈಸೋ ಕಾಲುವೆಗಳ ನಿರ್ಮಾಣದಲ್ಲಿ ಅಧಿಕಾರಿಗಳು ಹಣ ಲೂಟಿ ಮಾಡುತ್ತಾ ಮಜಾ ಮಾಡುತ್ತಿರೋದು ವಿಪರ್ಯಾಸದ ಸಂಗತಿಯೇ ಸರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:59 pm, Sat, 23 September 23