ಉತ್ತರ ಕರ್ನಾಟಕಕ್ಕೂ ವ್ಯಾಪಿಸಿದ ಕಾವೇರಿ ಕಿಚ್ಚು; ಚಿಕ್ಕೋಡಿ, ಹುಬ್ಬಳ್ಳಿಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ
ಕಾವೇರಿ ನೀರು ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲು ಬರಲ್ಲ. ಸೌಹಾರ್ದಯುತವಾಗಿ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಸಲಹೆ ನೀಡಿದರು.
ಹುಬ್ಬಳ್ಳಿ ಸೆ.23: ಕಾವೇರಿ ನದಿ (Cauvery Water Dispute) ವಿಚಾರವಾಗಿ ಸುಪ್ರಿಂಕೋರ್ಟ್ನಲ್ಲಿ (Supreme Court) ರಾಜ್ಯ ಸರ್ಕಾರ ಮೂರು ರಾಜ್ಯಗಳ ಜಲಾಶಯಗಳ ವಾಸ್ತವ ಸ್ಥಿತಿ ಬಗ್ಗೆ ಸೂಕ್ತವಾಗಿ ವಾದ ಮಂಡಿಸಿಲ್ಲ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಗೆ ನಮ್ಮವರು ವರ್ಚುವಲ್ ಮೂಲಕ ಹಾಜರಾಗಿದ್ದರು. ಕಾವೇರಿ ನದಿ ವಿಚಾರದಲ್ಲಿ ಕೇಂದ್ರದಿಂದ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದೆ. ಮುಂದೆಯೂ ಸಹಕಾರ ನೀಡುತ್ತೇವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮತನಾಡಿದ ಅವರು ಕಾವೇರಿ ವಿಚಾರ ಕೋರ್ಟ್ನಲ್ಲಿರುವುದರಿಂದ ಹೆಚ್ಚು ಮಾತನಾಡಲ್ಲ. ಮೊನ್ನೆ ಡಿಕೆ ಶಿವಕುಮಾರ್ ಅವರ ಭೇಟಿ ವೇಳೆ ಕಾವೇರಿ ವಿಚಾರದ ಬಗ್ಗೆ ವಿವರ ನೀಡಿದ್ದೇನೆ. ಕಾವೇರಿ ನೀರು ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲು ಬರಲ್ಲ. ಸೌಹಾರ್ದಯುತವಾಗಿ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಸಲಹೆ ನೀಡಿದರು.
ಕಾಂಗ್ರೆಸ್ನವರು ಡಿಎಂಕೆಗೆ ಸಮಯಾವಕಾಶ ಕೇಳಬಹುದಿತ್ತು. ಈವರೆಗೂ ಡಿಎಂಕೆ ನಾಯಕರನ್ನು ಖರ್ಗೆ ಯಾಕೆ ಕರೆದು ಮಾತಾಡಿಲ್ಲ. ಎಲ್ಲರೂ ಪ್ರಧಾನಿ ಮೋದಿ ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ತಮಿಳುನಾಡಿಲ್ಲಿ ಬೆಳೆಗೆ ಜಾಸ್ತಿ ನೀರು ಉಪಯೋಗಿಸಿದ್ದಾರೆ. ಅವರ ಮೈತ್ರಿ ಪಕ್ಷಕ್ಕೆ ಒಂದಿಷ್ಟು ಸಮಯ ಕೇಳಬಹುದಿತ್ತು. ಡಿಎಮ್ಕೆನವರಿಗೆ, ಸಿದ್ದರಾಮಯ್ಯ ತರಹ ಪ್ರಧಾನಿ ಮೋದಿ ಅವರನ್ನು ಬೈಯೋದೆ ಕೆಲಸವಾಗಿದೆ. ನಾವು ಕರೆದರೆ ಯಾಕೆ ಅವರು ಬರುತ್ತಾರೆ. ತಪ್ಪು ಮುಚ್ಚಿ ಹಾಕಲು, ಜನರನ್ನು ತಪ್ಪು ದಾರಿಗೆ ಎಳೆಯಲು ಸಿದ್ದರಾಮಯ್ಯ ನಿಸ್ಸೀಮರು. ಈ ವರೆಗೆ ಮಲ್ಲಿಕಾರ್ಜುನ್ ಖರ್ಗೆ ಅವರು ಯಾಕೆ ಇಬ್ಬರನ್ನು ಕರೆದು ಮಾತನಾಡಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಕಾವೇರಿ ವಿವಾದ: ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧಾರ – ಬೊಮ್ಮಾಯಿ
ಬರ ವಿಚಾರದಲ್ಲಿಯೂ ಸಿಎಂ ಸಿದ್ದರಾಮಯ್ಯರಿಂದ ರಾಜಕಾರಣ ಮಾಡುತ್ತಿದ್ದಾರೆ. ಕೇಂದ್ರ ರೂಪಿಸಿರುವ ಬರದ ಕುರಿತಾದ ಮಾನದಂಡಗಳು ಇಂದು ನಿನ್ನೆಯದಲ್ಲ, ಈ ಹಿಂದೆ ಯುಪಿಎ ಸರ್ಕಾರದಲ್ಲಿದ್ದ ಮಾನದಂಡಗಳೇ ಮುಂದುವರಿದಿವೆ ಎಂದು ನಾನು ಮುಖ್ಯಮಂತ್ರಿಗಳ ಸಮ್ಮುಖದಲ್ಲಿಯೇ ಹೇಳಿದ್ದೇನೆ. ನಮ್ಮ ಸರ್ಕಾರ ಬಂದ ಮೇಲೆ ಹಲವಾರು ಬದಲಾವಣೆಗಳನ್ನು ಮಾಡಿದ್ದೇವೆ. ಪರಿಹಾರದ ಪ್ರಮಾಣದಲ್ಲಿಯೂ ಹೆಚ್ಚಳ ಮಾಡಿದ್ದೇವೆ. ನಮಗೆ ಹಣಕಾಸಿನ ತೊಂದರೆ ಇಲ್ಲ ಅಂತ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಕೇಂದ್ರ ಸರ್ಕಾರದ ನಿತಿ ನಿಯಮಗಳು ಇಡೀ ದೇಶಕ್ಕೆ ಅನ್ವಯ ಆಗುತ್ತೆ. ಸಿದ್ದರಾಮಯ್ಯಗೆ ಇದೆಲ್ಲವೂ ಗೊತ್ತಿದೆ. ತಾವು ಸರಿಯಾಗಿ ಹಣಕಾಸಿನ ನಿರ್ವಹಣೆ ಮಾಡುತ್ತಿಲ್ಲ ಎಂದು ಆರೋಪಿಸಿದರು
ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂಡುಸುತ್ತಿದ್ದಾರೆ. ಎನ್.ಡಿ.ಆರ್.ಎಫ್ ಪರಿಹಾರ ಹಣ ಬರುತ್ತೆ. ಅದನ್ನೇಕೆ ಸಿದ್ದರಾಮಯ್ಯ ಖರ್ಚು ಮಾಡುತ್ತಿಲ್ಲ. ಇಡೀ ರಾಜ್ಯ ಬರಪೀಡಿತ ಅಂತ ಘೋಷಿಸಲು ಮೀನಾ ಮೇಷ ಏಕೆ ಎಣಿಸುತ್ತಿದ್ದಾರೆ. ಕಾಂಗ್ರೆಸ್ ಭಾಗ್ಯಗಳಿಂದಾಗಿ ಸಿದ್ದರಾಮಯ್ಯ ಅವರ ಬಳಿ ಹಣವಿಲ್ಲ. ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕರೇ ರಸ್ತೆಗಳಿಗೆ ಹಣ ನೀಡಿ ಅಂತ ಬೆನ್ನುಹತ್ತಿದ್ದಾರೆ. ವಿದ್ಯುತ್ ಕೊರತೆ ವಿಚಾರದಲ್ಲಿಯೂ ನೆಪ ಹೇಳುತ್ತಿದ್ದಾರೆ . ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲಿ. ಬರ ವಿಚಾರದಲ್ಲಿ ಕೇಂದ್ರ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಿದೆ. ಆರೋಪ ಮಾಡುವುದನ್ನೇ ಕೆಲಸ ಮಾಡಿಕೊಳ್ಳಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಡಿ ಜಿಲ್ಲೆ ಬೆಳಗಾವಿಗೂ ವ್ಯಾಪಿಸಿದ ಕಾವೇರಿ ಹೋರಾಟದ ಕಿಚ್ಚು
ಗಡಿ ಜಿಲ್ಲೆ ಬೆಳಗಾವಿಗೂ ಕಾವೇರಿ ಹೋರಾಟದ ಕಿಚ್ಚು ವ್ಯಾಪಿಸಿದೆ. ಕಾವೇರಿ ಹೋರಾಟ ಬೆಂಬಲಿಸಿ ಚಿಕ್ಕೋಡಿಯಲ್ಲಿ ಕರವೇ ಕಾರ್ಯಕರ್ತರು, ಚಿಕ್ಕೋಡಿ ಬಿಜೆಪಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ 28 ಸಂಸದರು ರಾಜ್ಯದ ಜನರ ಹಿತ ಕಾಪಾಡುವಲ್ಲಿ ವಿಫಲವಾಗಿದ್ದಾರೆ. ಕಾವೇರಿ ವಿಚಾರದಲ್ಲಿ ರಾಜ್ಯದ ಸಂಸದರು ಮೌನ ವಹಿಸಿದ್ದಾರೆ. ತಕ್ಷಣ ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕು, ರಾಜ್ಯಕ್ಕೆ ತಜ್ಞರ ತಂಡ ಭೇಟಿ ನೀಡಿ ವಸ್ತುಸ್ಥಿತಿ ನೋಡಲಿ. ರಾಜ್ಯ ಸರ್ಕಾರ ತಕ್ಷಣ ತಮಿಳುನಾಡಿಗೆ ನೀರು ಬಿಡುವುದನ್ನ ನಿಲ್ಲಿಸಬೇಕು. ನೆಲ ಜಲ ವಿಚಾರ ಬಂದಾಗ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಎಲ್ಲವೂ ಒಂದೇ. ತಮಿಳುನಾಡಿಗೆ ನೀರು ಹರಿಸುವುದನ್ನು ಮುಂದುವರಿಸಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಗೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ