ರಾಜ್ಯದಲ್ಲಿ ಹೆಸರು ಕಾಳು ಖರೀದಿ ಕೇಂದ್ರ ಆರಂಭಕ್ಕೆ ಸೂಚನೆ; ಧಾರವಾಡ ರೈತರ ಮೊಗದಲ್ಲಿ ಮಂದಹಾಸ

| Updated By: ganapathi bhat

Updated on: Aug 25, 2021 | 6:29 PM

ರೈತರಿಂದ ಖರೀದಿಸಿದ 15 ದಿನಗಳ ಅವಧಿಯಲ್ಲಿ ಹೆಸರು ಕಾಳನ್ನು ಸಂಬಂಧಿಸಿದ ನೋಡೆಲ್ ಏಜೆನ್ಸಿಯವರು ರಾಜ್ಯಮಟ್ಟದ ಉಗ್ರಾಣಗಳಿಗೆ ನೀಡಿ ರೈತರಿಗೆ ಹಣ ಪಾವತಿ ಮಾಡುವಂತೆ ಸೂಚಿಸಲಾಗಿದೆ.

ರಾಜ್ಯದಲ್ಲಿ ಹೆಸರು ಕಾಳು ಖರೀದಿ ಕೇಂದ್ರ ಆರಂಭಕ್ಕೆ ಸೂಚನೆ; ಧಾರವಾಡ ರೈತರ ಮೊಗದಲ್ಲಿ ಮಂದಹಾಸ
ಹೆಸರು ಕಾಳು
Follow us on

ಧಾರವಾಡ: ಹೆಸರು ಬೆಳೆ ಕೇಂದ್ರ ಸ್ಥಾಪಿಸಲು ರಾಜ್ಯ ಸರಕಾರದ ಪ್ರಸ್ತಾವನೆಗೆ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ರಾಜ್ಯದಲ್ಲಿ 30 ಸಾವಿರ ಮೆಟ್ರಿಕ್ ಟನ್ ಹೆಸರು ಖರೀದಿಗೆ ಅವಕಾಶ ನೀಡಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾಧ್ಯಮ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ. ಖರೀದಿ ಕೇಂದ್ರಗಳನ್ನು ಶೀಘ್ರವೇ ಆರಂಭಿಸಿ, 90 ದಿನಗಳೊಳಗೆ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.

ರೈತರಿಂದ ಖರೀದಿಸಿದ 15 ದಿನಗಳ ಅವಧಿಯಲ್ಲಿ ಹೆಸರು ಕಾಳನ್ನು ಸಂಬಂಧಿಸಿದ ನೋಡೆಲ್ ಏಜೆನ್ಸಿಯವರು ರಾಜ್ಯಮಟ್ಟದ ಉಗ್ರಾಣಗಳಿಗೆ ನೀಡಿ ರೈತರಿಗೆ ಹಣ ಪಾವತಿ ಮಾಡುವಂತೆ ಸೂಚಿಸಲಾಗಿದೆ. ರಾಜ್ಯ ಸರಕಾರ ಖರೀದಿ ಮುಗಿದ ಕನಿಷ್ಟ 15 ದಿನಗಳ ಅವಧಿಯಲ್ಲಿ ಆವರ್ತಕ ನಿಧಿ ಮಂಜೂರು ಮಾಡಿ, ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ಜಮಾ ಮಾಡುವಂತೆಯೂ ಕೇಂದ್ರ ಸರಕಾರ ಸೂಚಿಸಿದೆ. ಒಟ್ಟಿನಲ್ಲಿ ಕೇಂದ್ರ ಸರಕಾರದ ಈ ಆದೇಶದಿಂದಾಗಿ ಹೆಸರು ಬೆಳೆದ ರೈತರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ಕಂಗಾಲು
ಹೆಸರು ಬೆಳೆ ಧಾರವಾಡ ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದು. ಸಾವಿರಾರು ರೈತರು ಮುಂಗಾರು ಹಂಗಾಮಿನಲ್ಲಿ ಹೆಸರು ಬಿತ್ತನೆ ಮಾಡುತ್ತಾರೆ. ಮಳೆ ಚೆನ್ನಾಗಿ ಬಂದರೆ ರೈತರನ್ನು ಹಿಡಿಯುವವರೆ ಇಲ್ಲ. ಆದರೆ ಕಳೆದ ಮೂರು ವರ್ಷಗಳಿಂದ ಒಂದಿಲ್ಲಾ ಒಂದು ಸಮಸ್ಯೆಯಿಂದ ಬಳಲುತ್ತಿರುವ ರೈತರಿಗೆ ಈ ಬಾರಿ ಇದ್ದುದರಲ್ಲಿಯೇ ಉತ್ತಮ ಬೆಳೆ ಕೈಗೆ ಸಿಕ್ಕಿದೆ. ಈ ನಡುವೆ ರೈತರಿಗೆ ಸರಿಯಾದ ಮಾರುಕಟ್ಟೆ ಸಿಗದೇ ರೈತರು ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯ ಮಾಡುತ್ತಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಅನೇಕ ಬೆಳೆಗಳನ್ನು ಬೆಳೆಯಲಾಗುತ್ತದಾದರೂ ಹೆಸರು ರೈತರ ನೆಚ್ಚಿನ ಬೆಳೆ. ಮೂರು ತಿಂಗಳ ಬೆಳೆಯಾಗಿರುವ ಹೆಸರು ಈ ಬಾರಿ ರೈತರ ಮೊಗದಲ್ಲಿ ಮಂದಹಾಸ ತಂದಿದೆ. ಈ ಬಾರಿ ರೈತರು ಅತಿವೃಷ್ಟಿಯಿಂದಾಗಿ ಬೆಳೆ ಬರುವುದಿಲ್ಲ ಎಂದು ಅಂದಾಜಿಸಿದ್ದರು. ಆದರೆ ನಿರೀಕ್ಷೆ ಮೀರಿ ಉತ್ತಮ ಫಸಲು ಬಂದಿದೆ. ಇದರಿಂದಾಗಿ ರೈತರು ಖುಷಿಯಾಗಿದ್ದಾರೆ. ಆದರೆ ಈ ಖುಷಿ ಬಹಳ ಹೊತ್ತು ಉಳಿಯುವಂತಿಲ್ಲ. ಏಕೆಂದರೆ ಇದೀಗ ನಾನಾ ಕಾರಣಗಳಿಂದಾಗಿ ಹೆಸರಿಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ. ಇದರಿಂದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಹೋಗಿದೆ.

ಹೆಸರು ಕಾಳು ಖರೀದಿ ಕೇಂದ್ರ ಆರಂಭಕ್ಕೆ ಸೂಚನೆ

ಮಾರುಕಟ್ಟೆಯಲ್ಲಿ ಕಡಿಮೆ ದರ
ಧಾರವಾಡ ಜಿಲ್ಲೆಯಲ್ಲಿ ಈ ಬಾರಿ 52931 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದೆ. ಈ ಬಾರಿ ಜಿಲ್ಲೆಯಲ್ಲಿ 6 ಲಕ್ಷ ಕ್ವಿಂಟಾಲ್ ಉತ್ಪನ್ನ ಬಂದಿದೆ. ಸಧ್ಯಕ್ಕೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್​ಗೆ 5 ರಿಂದ 6 ಸಾವಿರ ರೂಪಾಯಿ ದರ ಇದೆ. ಈ ದರದಿಂದ ರೈತರಿಗೆ ಅಷ್ಟೊಂದು ಲಾಭವಾಗುವುದಿಲ್ಲ. ಆದರೆ ಸರಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಕ್ವಿಂಟಾಲ್​ಗೆ  7800 ರೂಪಾಯಿ ಇದೆ.

ಸರಕಾರ ಬೇಗನೇ ಖರೀದಿ ಕೇಂದ್ರ ತೆರೆದರೆ ಉತ್ತಮ ಬೆಲೆ ಸಿಗುವುದಲ್ಲದೇ ಮಾರುಕಟ್ಟೆಗೆ ಅಲೆಯುವುದು ಕೂಡ ತಪ್ಪುತ್ತದೆ ಎನ್ನುವುದು ರೈತರ ಆಗ್ರಹ. ಪ್ರತಿವರ್ಷವೂ ರೈತರು ಹೋರಾಟ ಮಾಡಿದ ಮೇಲಷ್ಟೇ ಖರೀದಿ ಕೇಂದ್ರ ತೆರೆಯಲಾಗುತ್ತದೆ. ಅಷ್ಟೊತ್ತಿಗೆ ರೈತರು ಕೈಗೆ ಬಂದಿದ್ದ ಹೆಸರನ್ನು ಮನೆಯಲ್ಲಿ ಇಟ್ಟುಕೊಳ್ಳಲಾಗದೇ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಿಬಿಟ್ಟಿರುತ್ತಾರೆ. ಹೀಗಾಗಿ ಕೂಡಲೇ ಸರಕಾರ ಖರೀದಿ ಕೇಂದ್ರವನ್ನು ಆರಂಭಿಸಬೇಕು ಎನ್ನುವುದು ರೈತರ ಆಗ್ರಹ.

ಈ ಬಗ್ಗೆ ಟಿವಿ9 ಡಿಜಿಟಲ್ ಜೊತೆ ಮಾತನಾಡಿದ ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದ ರೈತ ರುದ್ರಯ್ಯ ಹಿರೇಮಠ, ಕಳೆದ ಎರಡು ವರ್ಷ ಅತಿವೃಷ್ಟಿಯಿಂದಾಗಿ ಎಲ್ಲಾ ಬೆಳೆ ನಾಶವಾಗಿ ಹೋಗಿತ್ತು. ಈ ಬಾರಿಯೂ ಅಂಥದ್ದೇ ಪರಿಸ್ಥಿತಿ ಎದುರಾಗುತ್ತದೆ ಎಂದುಕೊಂಡಿದ್ದ ನಮಗೆ ನಿರೀಕ್ಷೆ ಮೀರಿ ಬೆಳೆ ಬಂದಿದೆ. ರೈತರ ಈ ಖುಷಿ ಉಳಿಯಬೇಕೆಂದರೆ ಸರಕಾರ ಕೂಡಲೇ ಖರೀದಿ ಕೇಂದ್ರವನ್ನು ತೆರೆಯಬೇಕಿದೆ. ಇಲ್ಲದಿದ್ದರೆ ಮತ್ತೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ರೈತರು ಕೈ ಸುಟ್ಟುಕೊಳ್ಳೋ ಪರಿಸ್ಥಿತಿ ಬರುವುದು ಗ್ಯಾರಂಟಿ ಎಂದು ಹೇಳಿದ್ದಾರೆ.

ಪ್ರತಿವರ್ಷವೂ ರೈತರು ಇಂಥದ್ದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿ ನಡುವೆಯೂ ರೈತರು ಕಷ್ಟಪಟ್ಟು ದುಡಿಮೆ ಮಾಡುತ್ತಾರೆ. ಕೈಗೆ ಬಂದಿರುವ ಬೆಳೆಗೆ ಸರಿಯಾದ ದರ ಸಿಗದೇ ಇದ್ದರೆ ಅವರು ಕೃಷಿಯನ್ನು ಮಾಡೋದಾದರೂ ಏಕೆ? ಪ್ರತಿವರ್ಷ ಹೋರಾಟದ ಬಳಿಕವೇ ಸರಕಾರ ಹೆಸರು ಖರೀದಿ ಕೇಂದ್ರವನ್ನು ತೆರೆಯುತ್ತದೆ. ಆರಂಭದಲ್ಲಿಯೇ ಖರೀದಿ ಕೇಂದ್ರವನ್ನು ತೆರೆದರೆ ರೈತರು ಮಾರುಕಟ್ಟೆಗೆ ಅಲೆಯುವುದು ತಪ್ಪುತ್ತದೆ. ಅಲ್ಲದೇ ರೈತರು ಅಲ್ಲಿ ಕಡಿಮೆ ದರಕ್ಕೆ ಹೆಸರು ಮಾರಾಟ ಮಾಡುವುದು ತಪ್ಪುತ್ತದೆ. ಸರಕಾರಕ್ಕೆ ನಿಜವಾಗಿಯೂ ರೈತರ ಮೇಲೆ ಕಾಳಜಿ ಇದ್ದರೆ ಕೂಡಲೇ ಖರೀದಿ ಕೇಂದ್ರವನ್ನು ತೆರೆದು, ರೈತರು ಬೆಳೆದ ಹೆಸರನ್ನು ಖರೀದಿಸಬೇಕು ಎಂದು ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ಆಗ್ರಹಿಸಿದ್ದಾರೆ.

ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಸರಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಇಷ್ಟರಲ್ಲಿಯೇ ಖರೀದಿ ಕೇಂದ್ರ ತೆರೆಯಲು ಕೇಂದ್ರದಿಂದ ಸೂಚನೆ ಬರುವ ನಿರೀಕ್ಷೆ ಇದೆ ಎಂದು ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ತಿಳಿಸಿದ್ದಾರೆ.

ವಿಶೇಷ ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಧಾರವಾಡ

ಇದನ್ನೂ ಓದಿ:

ಗದಗ: ಮಲಪ್ರಭಾ ನದಿ ಪ್ರವಾಹಕ್ಕೆ ತತ್ತರಿಸಿದ ರೈತರು; ಸತತ ಎರಡು ವರ್ಷದಿಂದ ಬೆಳೆ ನಾಶ

ಹೂವು ಬೆಳೆಗಾರರಿಗೆ ಆಷಾಢ ಸಂಕಷ್ಟ; ವ್ಯಾಪಾರವಿಲ್ಲದೆ ಚಿಕ್ಕಬಳ್ಳಾಪುರ ರೈತರು ಕಂಗಾಲು

 

Published On - 1:51 pm, Wed, 25 August 21