ಹುಬ್ಬಳ್ಳಿ- ಧಾರವಾಡದಲ್ಲಿ ಚಿರತೆ ಉಪಟಳ: ರಾಜನಗರದಲ್ಲಿ ಚಿರತೆ ಪ್ರತ್ಯಕ್ಷ, 12 ಶಾಲೆಗಳಿಗೆ ರಜೆ ಘೋಷಣೆ

| Updated By: ganapathi bhat

Updated on: Sep 21, 2021 | 8:48 PM

ಹುಬ್ಬಳ್ಳಿ ನೃಪತುಂಗ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಕಂಡು ಬಂದಿದೆ ಎಂದು ಹೇಳಲಾಗಿದೆ. ಶಾಲಾ ಮಕ್ಕಳಿಗೆ ಆನ್‍ಲೈನ್ ಮೂಲಕ ತರಗತಿ ಮುಂದುವರೆಸಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಹುಬ್ಬಳ್ಳಿ- ಧಾರವಾಡದಲ್ಲಿ ಚಿರತೆ ಉಪಟಳ: ರಾಜನಗರದಲ್ಲಿ ಚಿರತೆ ಪ್ರತ್ಯಕ್ಷ, 12 ಶಾಲೆಗಳಿಗೆ ರಜೆ ಘೋಷಣೆ
ಚಿರತೆ ( ಪ್ರಾತಿನಿಧಿಕ ಚಿತ್ರ)
Follow us on

ಹುಬ್ಬಳ್ಳಿ: ಜಿಲ್ಲೆಯ ರಾಜನಗರದಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನಲೆಯಲ್ಲಿ ಸಮೀಪದ‌ ಕೇಂದ್ರಿಯ ವಿದ್ಯಾಲಯ, ಜನತಾಪ್ರೌಢಶಾಲೆ ಸೇರಿದಂತೆ ಒಟ್ಟು 12 ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆಪರೇಷನ್ ಚಿರತೆ ಕಾರ್ಯಚರಣೆ ನಡೆಸಲಾಗುತ್ತಿದೆ. ಚಿರತೆ ಸೆರೆಹಿಡಿಯಲು ಪ್ರಯತ್ನ ನಡೆಸಲಾಗುತ್ತಿದೆ. ಆ ಹಿನ್ನಲೆ ಮುಂಜಾಗೃತ ಕ್ರಮವಾಗಿ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ರಜೆ ಘೋಷಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಹುಬ್ಬಳ್ಳಿ ನೃಪತುಂಗ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಕಂಡು ಬಂದಿದೆ ಎಂದು ಹೇಳಲಾಗಿದೆ. ಶಾಲಾ ಮಕ್ಕಳಿಗೆ ಆನ್‍ಲೈನ್ ಮೂಲಕ ತರಗತಿ ಮುಂದುವರೆಸಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಧಾರವಾಡದಲ್ಲಿ ಮತ್ತೊಂದು ಚಿರತೆ ಪ್ರತ್ಯಕ್ಷ; ಜನರಲ್ಲಿ ಆತಂಕ
ಕಳೆದೊಂದು ವಾರದಿಂದ ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಚಿರತೆಯೊಂದು ಕಾಣಿಸಿಕೊಂಡು ಆತಂಕ ಹುಟ್ಟಿಸಿರೋ ನಡುವೆಯೇ ಇದೀಗ ಧಾರವಾಡದಲ್ಲಿಯೂ ಚಿರತೆಯೊಂದು ಕಾಣಿಸಿಕೊಂಡಿದೆ. ಸೋಮವಾರ ಸಂಜೆ ಕಾಣಿಸಿಕೊಂಡ ಚಿರತೆಯಿಂದಾಗಿ ಗ್ರಾಮವೊಂದರ ಜನರು ಆತಂಕಗೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಕಾಣಿಸಿಕೊಂಡ ಚಿರತೆಯೇ ಇದಾಗಿರಬಹುದಾ? ಅಥವಾ ಈ ಚಿರತೆ ಬೇರೆಯಾಗಿರಬಹುದಾ? ಅನ್ನೋ ಪ್ರಶ್ನೆ ಕೂಡ ಎದ್ದಿದೆ.

ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಚಿರತೆ
ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಜನರು ಇದೀಗ ಚಿರತೆಯ ಭಯದಿಂದ ಜೀವನ ಕಳೆಯುವಂತಾಗಿದೆ. ಕಳೆದೊಂದು ವಾರದಿಂದ ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಕಣ್ಣಾಮುಚ್ಚಾಲೆಯಾಡುತ್ತಿರೋ ಚಿರತೆಯಿಂದಾಗಿ ಈಗಾಗಲೇ ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ. ಇದೇ ವೇಳೆ ಜಿಲ್ಲೆಯಲ್ಲಿ ಮತ್ತೊಂದು ಚಿರತೆ ಪ್ರತ್ಯಕ್ಷವಾದರೆ ಜನರ ಪರಿಸ್ಥಿತಿ ಏನು? ಸೋಮವಾರ ಸಂಜೆ ಹೊತ್ತಿಗೆ ಕವಲಗೇರಿ ಗ್ರಾಮದ ಹೊರವಲಯದ ಹೊಲವೊಂದರಲ್ಲಿ ಚಿರತೆಯೊಂದು ಕಾಣಿಸಿಕೊಂಡಿತು. ಗ್ರಾಮದ ಆನಂದ ಅನ್ನುವ ಯುವಕ ಟ್ರ್ಯಾಕ್ಟರ್ ಮೂಲಕ ಹೊಲದಲ್ಲಿ ಉಳುಮೆ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಆತನಿಗೆ ಚಿರತೆ ಕಂಡಿದೆ. ಇದರಿಂದ ಭಯಗೊಂಡ ಆನಂದ ತನ್ನ ಕೆಲ ಸ್ನೇಹಿತರು ಹಾಗೂ ಸಹೋದರನಿಗೆ ಫೋನ್ ಮಾಡಿದ್ದಾನೆ.ಕೂಡಲೇ ಹೊಲಕ್ಕೆ ಧಾವಿಸಿದ ಅವರು ಕೂಡ ಚಿರತೆ ನಿರ್ಭಯವಾಗಿ ಹೊಲದಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ. ಈ ಘಟನೆಯಿಂದಾಗಿ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.

ಅದೇ ಚಿರತೆ ಇಲ್ಲಿಗೆ ಬಂತಾ?
ಕಳೆದ ವಾರದಿಂದ ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಬಳಿ ಓಡಾಡುತ್ತಿರೋ ಚಿರತೆ, ಎರಡು ದಿನಗಳಿಂದ ಅಲ್ಲಿ ಯಾರಿಗೂ ಕಂಡಿಲ್ಲ. ಹೀಗಾಗಿ ಅದೇ ಚಿರತೆ ಇಲ್ಲಿಗೆ ಬಂದಿರಬಹುದಾ? ಅನ್ನೋ ಶಂಕೆಯೂ ವ್ಯಕ್ತವಾಗುತ್ತಿದೆ. ನೃಪತುಂಗ ಬೆಟ್ಟದಿಂದ ಕವಲಗೇರಿ ಗ್ರಾಮ ಕೆಲ ಕಿ.ಮೀ. ದೂರದಲ್ಲಿದ್ದರೂ, ಚಿರತೆಯಂಥ ವನ್ಯಮೃಗಕ್ಕೆ ಅದೇನೂ ದೊಡ್ಡ ದೂರವಲ್ಲ. ಹೀಗಾಗಿ ಅದೇ ಇಲ್ಲಿಗೆ ಬಂದಿರಬಹುದು ಅಂತಾನೂ ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಇನ್ನು ಕೆಲವರು ಈ ಚಿರತೆ ಬೇರೆಯದ್ದು ಕೂಡ ಆಗಿರಬಹುದು ಅನ್ನುತ್ತಿದ್ದಾರೆ.

ಸ್ಥಳದಲ್ಲಿಯೇ ಅರಣ್ಯ ಇಲಾಖೆ ಅಧಿಕಾರಿಗಳು ಬೀಡು
ಇನ್ನು ನೃಪತುಂಗ ಬೆಟ್ಟದ ಬಳಿಯೇ ಕಳೆದೊಂದು ವಾರದಿಂದ ಬೀಡು ಬಿಟ್ಟಿರೋ ಅರಣ್ಯ ಇಲಾಖೆ ಅಧಿಕಾರಿಗಳು, ಕವಲಗೇರಿ ಗ್ರಾಮದ ಬಳಿ ಚಿರತೆ ಪ್ರತ್ಯಕ್ಷವಾಗಿದೆ ಅನ್ನೋ ಮಾಹಿತಿ ತಿಳಿಯುತ್ತಿದ್ದಂತೆಯೇ ಇತ್ತ ದೌಡಾಯಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಓಡಾಟದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ರಾತ್ರಿಯಿಡೀ ಸಿಬ್ಬಂದಿ ಅದೇ ಪ್ರದೇಶದಲ್ಲಿ ಬೀಡು ಬಿಟ್ಟಿದ್ದರೂ ಯಾರ ಕಣ್ಣಿಗೂ ಬಿದ್ದಿಲ್ಲ. ಅಲ್ಲದೇ ನಿನ್ನೆ ಸಂಜೆಯೇ ಅದು ಪಕ್ಕದಲ್ಲಿರೋ ಕಬ್ಬಿನ ಗದ್ದೆಯೊಳಗೆ ಹೋಗಿದೆ. ಅದಾಗಲೇ ಕಬ್ಬು ಬೆಳೆದು ನಿಂತಿದ್ದು, ಅದರಲ್ಲಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಪತ್ತೆ ಹಚ್ಚುವುದು ಕಷ್ಟಕರ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ. ಅಲ್ಲದೇ ಸ್ಥಳೀಯರಿಗೆ ಎಚ್ಚರವಹಿಸಲು ಮನವಿ ಮಾಡಿಕೊಂಡಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು

ಕುರಿಗಾಹಿಗಳಿಗೆ ಆತಂಕ ತಂದ ಚಿರತೆ
ಇನ್ನು ಚಿರತೆ ಪ್ರತ್ಯಕ್ಷವಾದ ಬಳಿಕ ಕುರಿಗಾಹಿಗಳಿಗೆ ಆತಂಕವುಂಟಾಗಿದೆ. ಹೀಗಾಗಿ ತಮ್ಮ ಕುರಿಗಳನ್ನು ಬೇರೆ ಕಡೆಗೆ ಕರೆದೊಯ್ಯಲು ಅವರು ಸಿದ್ಧರಾಗಿದ್ದಾರೆ. ಹೆಚ್ಚಾಗಿ ರಾತ್ರಿಯಲ್ಲಿಯೇ ದಾಳಿ ಮಾಡುವ ಚಿರತೆಯಿಂದಾಗಿ ಎಲ್ಲರೂ ಆತಂಕಗೊಂಡಿದ್ದಾರೆ. ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಕಳೆದೊಂದು ವಾರದಿಂದ ಎಲ್ಲರ ನಿದ್ದೆಗೆಡಿಸಿರೋ ಚಿರತೆ ಒಂದು ಕಡೆಯಾದರೆ, ಕವಲಗೇರಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿ ಸ್ಥಳೀಯರ ನಿದ್ದೆಗೆಡಿಸಿರೋ ಚಿರತೆ ಮತ್ತೊಂದು ಕಡೆ. ಒಟ್ಟಿನಲ್ಲಿ ಚಿರತೆ ಅವಳಿ ನಗರದ ಜನರನ್ನು ಆತಂಕಕ್ಕೀಡು ಮಾಡಿದ್ದಂತೂ ಸತ್ಯ.

ಎಚ್ಚರವಹಿಸಲು ಎಲ್ಲರಿಗೂ ಮನವಿ: ಆರ್.ಎಸ್. ಉಪ್ಪಾರ
ಘಟನೆ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಧಾರವಾಡ ಅರಣ್ಯ ವಲಯಾಧಿಕಾರಿ ಆರ್.ಎಸ್. ಉಪ್ಪಾರ, ಟಿವಿ-9 ಡಿಜಿಟಲ್ ಜತೆ ಮಾತನಾಡಿ, ಈಗಾಗಲೇ ನೃಪತುಂಗ ಬೆಟ್ಟದ ಬಳಿಯ ಚಿರತೆ ಹಿಡಿಯಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲಿ ಈಗಾಗಲೇ ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದೀಗ ಚಿರತೆ ಈ ಗ್ರಾಮದ ಬಳಿ ಬಂದಿದೆ. ಅದೇ ಚಿರತೆ ಇಲ್ಲಿಗೆ ಬಂದಿರಬಹುದಾ? ಅನ್ನೋ ಶಂಕೆಯೂ ಇದೆ. ಅಥವಾ ಇದು ಬೇರೆ ಚಿರತೆಯಾ? ಅನ್ನೋದರ ಬಗ್ಗೆ ಮಾಹಿತಿ ಕಲೆ ಹಾಕಬೇಕಿದೆ. ಇಂಥ ಸಂದರ್ಭದಲ್ಲಿ ಜನರು ಕೂಡ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ ಅನ್ನುತ್ತಾರೆ.

ಘಟನೆ ಸಂಬಂಧ ಜನರು ಕೂಡ ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ

ಗ್ರಾಮಸ್ಥರಿಗೆ ಆತಂಕವಾಗಿದೆ, ಆದಷ್ಟು ಬೇಗನೇ ಚಿರತೆಯನ್ನು ಹಿಡಿಯಬೇಕು: ಮಂಜುನಾಥ ಕವಳಿ
ಚಿರತೆಯ ಸುದ್ದಿ ಕೇಳಿದ‌ ಬಳಿಕ ಗ್ರಾಮಸ್ಥರಿಗೆ ಆತಂಕವಾಗಿದೆ. ಇದೀಗ ಗ್ರಾಮದ ಸುತ್ತಮುತ್ತ ಕಬ್ಬು ಬೆಳೆದು ನಿಂತಿದ್ದು, ಅದರಲ್ಲಿ ಚಿರತೆ ಅಡಗಿ ಕುಳಿತರೆ ಯಾರಿಗೂ ಗೊತ್ತಾಗುವುದಿಲ್ಲ. ಅಲ್ಲದೇ ರಾತ್ರಿ ಹೊತ್ತಿನಲ್ಲಿಯೇ ರೈತರು ಬೆಳೆಗೆ ನೀರು ಹಾಯಿಸಲು ಹೊಲಕ್ಕೆ ಹೋಗುತ್ತಾರೆ. ಇಂಥ ವೇಳೆ ಚಿರತೆ ದಾಳಿ ಮಾಡಿದರೆ ಹೇಗೆ? ಇನ್ನು ಇದೀಗ ಅನೇಕ ಹೊಲಗಳಲ್ಲಿ ಕುರಿಗಾಹಿಗಳು ಬೀಡು ಬಿಟ್ಟಿದ್ದಾರೆ. ಅವರ ಕುರಿ, ನಾಯಿಗಳ ಮೇಲೆ ಚಿರತೆ ಕಣ್ಣು ಹಾಕಿದರೆ ಹೇಗೆ ಅನ್ನುವ ಆತಂಕವೂ ಎದುರಾಗಿದೆ. ಕುರಿ, ನಾಯಿಗಳನ್ನು ರಕ್ಷಿಸಿಕೊಳ್ಳುವ ವೇಳೆ ಕುರಿಗಾಹಿಗಳ‌ ಮೇಲೆ ಚಿರತೆ ಹಲ್ಲೆ ಮಾಡುವ ಸಾಧ್ಯತೆಯನ್ನು ಕೂಡ ಅಲ್ಲಗಳೆಯುವಂತಿಲ್ಲ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಅನ್ನುತ್ತಾರೆ ಗ್ರಾಮದ ಯುವ ಮುಖಂಡ ಮಂಜುನಾಥ ಕವಳಿ.

ವಿಶೇಷ ವರದಿ: ನರಸಿಂಹಮೂರ್ತಿ ಪ್ಯಾಟಿ, ಹಿರಿಯ ವರದಿಗಾರರು ಟಿವಿ9 ಕನ್ನಡ

ಇದನ್ನೂ ಓದಿ: ಎರಡು ವರ್ಷ ಕಳೆದರೂ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗಿಲ್ಲ ಚುನಾಯಿತ ಪ್ರತಿನಿಧಿ; ಮತದಾರರಲ್ಲಿ ನಿರಾಸೆ

ಇದನ್ನೂ ಓದಿ: ಹುಬ್ಬಳ್ಳಿ: ಕೊವಿಡ್ ಬಳಿಕ ಮಕ್ಕಳನ್ನು ಕಾಡುತ್ತಿದೆ ನ್ಯುಮೋನಿಯಾ; ಒಂದೇ ವಾರದಲ್ಲಿ 7 ಮಕ್ಕಳು ಬಲಿ

Published On - 5:44 pm, Tue, 21 September 21