ಹುಬ್ಬಳ್ಳಿ: ಕೊವಿಡ್ ಬಳಿಕ ಮಕ್ಕಳನ್ನು ಕಾಡುತ್ತಿದೆ ನ್ಯುಮೋನಿಯಾ; ಒಂದೇ ವಾರದಲ್ಲಿ 7 ಮಕ್ಕಳು ಬಲಿ
ಉಸಿರಾಟದ ತೊಂದರೆಯಿಂದ ಚಿಕ್ಕಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಕೆಮ್ಮು, ನೆಗಡಿ, ಕಫ ಮತ್ತು ಜ್ವರ ಬಂದರೆ ನಿಷ್ಕಾಳಜಿ ತೋರದಂತೆ ವೈದ್ಯರು ಸೂಚನೆ ನೀಡಿದ್ದಾರೆ.
ಹುಬ್ಬಳ್ಳಿ: ಕೊವಿಡ್ ಬಳಿಕ ಮಕ್ಕಳನ್ನು ನ್ಯುಮೋನಿಯಾ ಕಾಡುತ್ತಿದ್ದು, ಒಂದೇ ವಾರದಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 7 ಮಕ್ಕಳು ಸಾವನ್ನಪ್ಪಿದ್ದಾರೆ. ನ್ಯಮೋನಿಯಾದಿಂದ ಬಳಲುತ್ತಿರುವ 163 ಮಕ್ಕಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಿಲಾಗುತ್ತಿದೆ.
ಸದ್ಯ ಕಿಮ್ಸ್‌ನ ಮಕ್ಕಳ ವಿಭಾಗದ ಬೆಡ್‌ಗಳು ಸಂಪೂರ್ಣ ಭರ್ತಿಯಾಗಿದ್ದು, 1 ವರ್ಷದ 95 ಮಕ್ಕಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ 23 ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಸಿರಾಟದ ತೊಂದರೆಯಿಂದ ಚಿಕ್ಕಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಕೆಮ್ಮು, ನೆಗಡಿ, ಕಫ ಮತ್ತು ಜ್ವರ ಬಂದರೆ ನಿಷ್ಕಾಳಜಿ ತೋರದಂತೆ ವೈದ್ಯರು ಸೂಚನೆ ನೀಡಿದ್ದಾರೆ.
ಕೊವಿಡ್ ಎರಡನೇ ಅಲೆಯ ಅಬ್ಬರ ಕಡಿಮೆಯಾಗಿದೆ. ಆದರೆ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಾಗಿ ಕೊವಿಡ್ ಸೊಂಕು ತಗುಲುತ್ತೆ ಎಂದು ತಜ್ಞತಂಡ ಹೇಳುತ್ತಿದೆ. ಈ ಆತಂಕದ ನಡುವೆಯೇ ಈಗ ಚಿಕ್ಕ ಮಕ್ಕಳಿಗೆ ಹೊಸದೊಂದು ಕಾಯಿಲೆ ಕಾಣಿಸಿಕೊಂಡಿದ್ದು, ಮಕ್ಕಳ ಜೀವ ಹಿಂಡುತ್ತಿದೆ. ಉಸಿರಾಟದ ತೊಂದರೆಯಿಂದ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಬಹುತೇಕ ಮಕ್ಕಳಿಗೆ ನ್ಯುಮೋನಿಯಾ ಕಾಣಿಸಿಕೊಂಡಿದೆ. ನೆಗಡಿ, ಜ್ವರ, ಕಫದಿಂದ ಮಕ್ಕಳು ಬಳಲುತ್ತಿದ್ದು, ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವಂತಾಗಿದೆ. ಧಾರವಾಡ ಜಿಲ್ಲೆಯಲ್ಲಿ ಕಳೆದೊಂದು ತಿಂಗಳಲ್ಲಿ ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎಂದು ಕೀಮ್ಸ್ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ.ಪ್ರಕಾಶ ವಾರಿ ತಿಳಿಸಿದ್ದಾರೆ.
ಇದೇ ತಿಂಗಳಲ್ಲಿ 7 ಮಕ್ಕಳನ್ನು ಈ ಮಹಾಮಾರಿ ಬಲಿ ತೆಗೆದುಕೊಂಡಿದೆ. ಕೊವಿಡ್ ಮೂರನೇ ಅಲೆಗೂ ಮೊದಲೇ ಮಕ್ಕಳ ಜೀವ ಹಿಂಡುತ್ತಿರುವ ಈ ಕಾಯಿಲೆ ಬಗ್ಗೆ ಈಗಾಗಲೇ ಕೀಮ್ಸ್ ವೈದ್ಯರು ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ.
ಇದನ್ನೂ ಓದಿ: ಬ್ಲ್ಯಾಕ್ ಫಂಗಸ್ನಿಂದ ಕಿಮ್ಸ್ನಲ್ಲಿ 15ಕ್ಕೂ ಹೆಚ್ಚು ಜನರ ಬದುಕು ಸಂಪೂರ್ಣ ಕತ್ತಲು.. ರೋಗಿಗಳಿಗೆ ಕಾಡುತ್ತಿದೆ ದೃಷ್ಟಿ ದೋಷ
ಮಕ್ಕಳಿಗೆ ವೈರಲ್ ಫೀವರ್ ಹೆಚ್ಚಳ; ಕೊರೊನಾ ಮೂರನೇ ಅಲೆಯ ಮುನ್ಸೂಚನೆ ಅಲ್ಲ: ಹಾಲಪ್ಪ ಆಚಾರ್
Published On - 7:38 am, Sat, 18 September 21