AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಲ್ಯಾಕ್ ಫಂಗಸ್​ನಿಂದ ಕಿಮ್ಸ್​ನಲ್ಲಿ 15ಕ್ಕೂ ಹೆಚ್ಚು ಜನರ ಬದುಕು ಸಂಪೂರ್ಣ ಕತ್ತಲು.. ರೋಗಿಗಳಿಗೆ ಕಾಡುತ್ತಿದೆ ದೃಷ್ಟಿ ದೋಷ

ಕೊರೊನಾ ಜೊತೆ ಜೊತೆಗೆ ಬಂದ ಬ್ಲ್ಯಾಕ್ ಫಂಗಸ್ ಹಲವರ ಬದುಕಿಗೆ ಕತ್ತಲೆ ತಂದಿದೆ. ಇನ್ನೂ ಹಲವರು ಆಸ್ಪತ್ರೆಗಳಲ್ಲಿ ನರಕಯಾತನೆ ಅನುಭವಿಸ್ತಿದ್ದಾರೆ. ಅದ್ರಲ್ಲೂ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಬ್ಲ್ಯಾಕ್ ಫಂಗಸ್ ರೋಗಿಗಳ ಪೈಕಿ 15ಕ್ಕೂ ಹೆಚ್ಚು ಜನರ ಬದುಕು ಸಂಪೂರ್ಣ ಕತ್ತಲಾಗಿಬಿಟ್ಟಿದೆ.

ಬ್ಲ್ಯಾಕ್ ಫಂಗಸ್​ನಿಂದ ಕಿಮ್ಸ್​ನಲ್ಲಿ 15ಕ್ಕೂ ಹೆಚ್ಚು ಜನರ ಬದುಕು ಸಂಪೂರ್ಣ ಕತ್ತಲು.. ರೋಗಿಗಳಿಗೆ ಕಾಡುತ್ತಿದೆ ದೃಷ್ಟಿ ದೋಷ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 28, 2021 | 8:55 AM

Share

ಹುಬ್ಬಳ್ಳಿ: ಕೊರೊನಾ ಎರಡನೇ ಅಲೆಯಲ್ಲಿ ಸಾವಿರಾರು ಜನ ಜೀವ ಕಳೆದುಕೊಂಡ್ರೆ, ನೂರಾರು ಜನ ಇನ್ನೂ ಆಸ್ಪತ್ರೆಗಳಲ್ಲಿ ನರಳ್ತಿದ್ದಾರೆ. ಅದ್ರಲ್ಲೂ ಎರಡನೇ ಅಲೆ ವೇಳೆ ಬ್ಲ್ಯಾಕ್ ಫಂಗಸ್ ಜನರಿಗೆ ಅಕ್ಷರಶಃ ನರಕದರ್ಶನ ಮಾಡಿಬಿಟ್ಟಿದೆ. ಕೊರೊನಾಗೆ ಚಿಕಿತ್ಸೆ ಪಡೆದು ಇನ್ನೇನು ಚೇತರಿಸಿಕೊಂಡ್ವಿ ಅಂತಾ ನಿಟ್ಟುಸಿರು ಬಿಡ್ತಿದ್ದವ್ರನ್ನೇ ಕಾಡ್ತಿದ್ದ ಬ್ಲ್ಯಾಕ್ ಫಂಗಸ್, ಹುಬ್ಬಳ್ಳಿಯಲ್ಲಿ ಹಲವರ ಬದುಕನ್ನೇ ಕತ್ತಲೆ ಕೂಪಕ್ಕೆ ತಳ್ಳಿದೆ.

ರಾಜ್ಯದಲ್ಲಿ ಕೊರೊನಾ ಆರ್ಭಟ ಕಡಿಮೆಯಾಗಿದೆ. ಆದ್ರೆ ಅದೇ ಕೊರೊನಾದಿಂದ ಹುಟ್ಟಿಕೊಂಡಿರೋ ಈ ಬ್ಲ್ಯಾಕ್ ಫಂಗಸ್ ಜನರನ್ನ ಇನ್ನಿಲ್ಲದಂತೆ ಕಾಡುತ್ತಿದೆ. ಬ್ಲ್ಯಾಕ್ ಫಂಗಸ್ ಅಟ್ಯಾಕ್ಗೊಳಗಾದ ಹಲವರು ಶಾಶ್ವತವಾಗಿ ಕಣ್ಣುಗಳನ್ನು ಕಳೆದುಕೊಂಡು ಬಿಟ್ಟಿದ್ದಾರೆ. ಇದೇ ವಿಚಾರ ಕಿಮ್ಸ್ ವೈದ್ಯರಿಗೆ ಆತಂಕ ತರಿಸಿದೆ. ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ ಬ್ಲ್ಯಾಕ್ ಫಂಗಸ್ಗೆ ಬರೋಬ್ಬರಿ 176 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಸುಮಾರು 120 ಕ್ಕೂ ಹೆಚ್ಚು ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಆದ್ರೆ ಕಿಮ್ಸ್ ವೈದ್ಯರಿಗೆ ಆತಂಕ ಸೃಷ್ಠಿ ಮಾಡಿದ್ದೆ ಈ ದೃಷ್ಟಿ ದೋಷ ಕೇಸ್ಗಳು. ಅಂದ್ರೆ 20 ಕ್ಕೂ ಹೆಚ್ಚು ಜನರಿಗೆ ಕಣ್ಣಿನ ಚಿಕಿತ್ಸಾ ವಿಭಾಗದಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಈ ಪೈಕಿ 15 ಕ್ಕೂ ಹೆಚ್ಚು ಜನ ಸಂಪೂರ್ಣ ಹಾಗೂ ಶಾಶ್ವತ ದೃಷ್ಟಿಹೀನರಾಗಿದ್ದಾರೆ ಅನ್ನೋ ಬೆಚ್ಚಿ ಬಿಳಿಸೋ ಮಾಹಿತಿಯನ್ನ ಕಿಮ್ಸ್ ಆಸ್ಪತ್ರೆಯ ವೈದ್ಯರು ಹೊರಹಾಕಿದ್ದಾರೆ.

ಕಿಮ್ಸ್ ಆಸ್ಪತ್ರೆ ವೈದ್ಯರ ಮಾಹಿತಿ ಹೊರ ಬೀಳ್ತಿದ್ದಂತೆ ಹುಬ್ಬಳ್ಳಿಯ ಜನ್ರಿಗೂ ಬ್ಲ್ಯಾಕ್ ಫಂಗಸ್ ಆತಂಕ ಶುರುವಾಗಿದೆ. ಯಾಕೆಂದ್ರೆ ಮನೆಯ ಯಜಮಾನಂತಿದ್ದ ಕೆಲವ್ರು ತಮ್ಮ ಕಣ್ಣನ್ನೆ ಕಳೆದುಕೊಂಡಿದ್ದು, ಇಡೀ ಕುಟುಂಬವೇ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಕಳೆದ ಒಂದು ತಿಂಗಳಿನಿಂದ ಸುಮಾರು 20 ಕ್ಕೂ ಹೆಚ್ಚು ಜನ ಕಿಮ್ಸ್ ಆಸ್ಪತ್ರೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ನಡೀತಿದ್ರೂ ಯಾವುದೇ ಚೇತರಿಕೆ ಮಾತ್ರ ಕಾಣಿಸ್ತಿಲ್ಲ. ಯಾಕಂದ್ರೆ ಬ್ಲ್ಯಾಕ್ ಫಂಗಸ್ ಅವ್ರ ಕಣ್ಣಿನ ಸಾಮರ್ಥ್ಯವನ್ನೇ ಕಸಿದುಬಿಟ್ಟಿದೆ. ಒಂದು ವೇಳೆ ಅವ್ರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ರೆ ಕರಿಮಾರಿ ಮೆದುಳಿಗೂ ಹರಡಬಹುದು. ಹೀಗಾಗಿ ಅವರ ಜೀವಕ್ಕೆ ಹಾನಿಯಾಗಬಾರದು ಅಂತಾ ಆಸ್ಪತ್ರೆಯಲ್ಲೆ ಇಟ್ಟುಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಕಣ್ಣಿನ ವಾರ್ಡ್ನ ಎಲ್ಲಾ ಬೆಡ್ಗಳು ಭರ್ತಿಯಾಗಿದ್ದು, ಅದು ಮತ್ತೊಂದು ಸಮಸ್ಯೆಗೆ ನಾಂದಿ ಹಾಡುತ್ತಿದೆ ಎನ್ನುತ್ತಿದ್ದಾರೆ ವೈದ್ಯರು.

ಒಟ್ನಲ್ಲಿ ಕೊರೊನಾ ಅಬ್ಬರ ಕಡಿಮೆಯಾದ್ರೂ ಬ್ಲ್ಯಾಕ್ ಫಂಗಸ್ ಕಾಟಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಪ್ರತಿ ದಿನವೂ ಕಿಮ್ಸ್ ಗೆ 3-4 ಬ್ಲಾಕ್ ಫಂಗಸ್ ಕೇಸ್ ದಾಖಲಾಗ್ತಾನೆ ಇವೆ. ಹೀಗಾಗೇ ಇಲ್ಲಿನ ವೈದ್ಯರಿಗೆ ಮತ್ತಷ್ಟು ಆತಂಕ ಹೆಚ್ಚಾಗಿದೆ. ಸರ್ಕಾರ ನೀಡೋ ಔಷಧಿ ಒಂದೊಮ್ಮೆ ಸ್ವಲ್ಪ ತಡವಾದ್ರೂ ಅಪಾಯ ಕಟ್ಟಿಟ್ಟಬುತ್ತಿ ಅಂತಿದ್ದಾರೆ ವೈದ್ಯರು.

ಇದನ್ನೂ ಓದಿ: ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಬ್ಲ್ಯಾಕ್ ಫಂಗಸ್ ಕೇಸ್..