ಹುಬ್ಬಳ್ಳಿ: ಯಡಿಯೂರಪ್ಪ ಬದಲಾವಣೆ ಬಗ್ಗೆ ನನಗೆ ಗೊತ್ತಿತ್ತು. ಅದಕ್ಕೆ ನಾನು ಈ ಹಿಂದೆ ಹೇಳಿದ್ದೆ. ಆದರೆ ಬೊಮ್ಮಾಯಿ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದರು. ಸಿಎಂ ಬದಲಾವಣೆ ವಿಚಾರದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಮೂರನೇಯವರಾದ್ರು ಬರಲಿ ನಾಲ್ಕನೇಯವರಾದ್ರೂ ಬರಲಿ. ಸಿಎಂ ಬದಲಾವಣೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಟ್ವೀಟ್ ಮಾಡಿದವರನ್ನ ಹೋಗಿ ಕೇಳಿ, ನಾನಂತೂ ಟ್ವೀಟ್ ಮಾಡಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಸಿಎಂ ಬದಲಾವಣೆ ವದಂತಿ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ ನಿನ್ನೆ ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಲೆಳೆಯುವ ಪ್ರಯತ್ನ ಮಾಡಿದೆ. ಅಮಿತ್ ಶಾ(Amit Shah) ಬಂದುಹೋದ ಬಳಿಕ ಮೋಡ ಕವಿದ ವಾತಾವರಣ. 40% ಸರ್ಕಾರದಲ್ಲಿ ‘3ನೇ ಸಿಎಂ’ ಸೀಟು ಹತ್ತುವುದು ಸನ್ನಿಹಿತವಾಗಿದೆ. ಬೊಮ್ಮಾಯಿ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ ಎಂದು ಟ್ವೀಟ್ ಮೂಲಕ ಸಿಎಂ ಬೊಮ್ಮಾಯಿ ಬಗ್ಗೆ ಕಾಂಗ್ರೆಸ್ ಟೀಕೆ ಮಾಡಿತ್ತು. ಸದ್ಯ ಸಿದ್ಧರಾಮಯ್ಯ ಆ ಟ್ವೀಟ್ ನಾನು ಮಾಡಿಲ್ಲ ಎಂದು ಅಂತರ ಕಾಯ್ದುಕೊಂಡಿದ್ದಾರೆ.
ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣ
ಅಮಿತ್ ಶಾ ಬಂದು ಹೋದ ನಂತರ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣವಿದೆ. 40% ಸರ್ಕಾರದಲ್ಲಿ ‘3ನೇ ಸಿಎಂ’ ಸೀಟು ಹತ್ತುವ ಕಾಲ ಸನ್ನಿಹಿತವಾಗಿದೆ. ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ. ಅಮಿತ್ ಶಾ ಅವರ ಭೇಟಿಯ ಬಗ್ಗೆ ಸರ್ಕಾರದ ಯಾವೊಬ್ಬ ಸಚಿವರು ಮಾತಾಡದಿರುವುದು, ಸಂಭ್ರಮವಿಲ್ಲದಿರುವುದೇ ಇದಕ್ಕೆ ನಿದರ್ಶನ. ಸಿಎಂ ಬೊಮ್ಮಾಯಿ ಅವರೇ, ಬಿಜೆಪಿಯ ನಕಲಿ ನೋಟ್ ದಂಧೆಕೋರರೊಂದಿಗೆ ನಿಮ್ಮದೇನು ಸಂಬಂಧ? ಸಮಾಜಘಾತುಕರು, ಬಿಟ್ ಕಾಯಿನ್ ದಂಧೆಕೋರರು, 40% ಕಮಿಷನ್ ಗಿರಾಕಿಗಳು, ನೇಮಕಾತಿ ಅಕ್ರಮ ನಡೆಸುವವರು, ನಕಲಿ ನೋಟ್ ದಂಧೆಕೊರರು ಆಡಿಸಿದಂತೆ ಆಡುವ ಸಿಎಂ ಮಾತ್ರವೇ? ಕುರ್ಚಿ ಉಳಿಸಿಕೊಳ್ಳಲು ಈ ಎಲ್ಲಾ ಬಗೆಯ ಭ್ರಷ್ಟರಿಗೆ ಬೆಂಬಲವಾಗಿ ನಿಂತಿದ್ದೀರಾ?
ಬಿಜೆಪಿ ಸರ್ಕಾರದ್ದು 40% ಕಮಿಷನ್ ದಂಧೆಯಾದರೆ, ಬಿಜೆಪಿ ಕಾರ್ಯಕರ್ತರದ್ದು ಡ್ರಗ್ ಪೆಡ್ಲಿಂಗ್, ನಕಲಿ ನೋಟಿನ ದಂಧೆ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಬಿಜೆಪಿ ಪಕ್ಷದ ಹೈಕಮಾಂಡ್ ಸಂಪಾದನೆಗೆ ಅದ್ಬುತ ದಾರಿ ಕಂಡುಕೊಂಡಿದೆ! ಬೊಮ್ಮಾಯಿ ಅವರೇ, ನಿಮ್ಮ ಕಂತು ತೀರಿತೇ? ಅಥವಾ 40% ಕಮಿಷನ್‌ನಲ್ಲಿ ಹೈಕಮಾಂಡ್ ಪಾಲು ತಲುಪಿಸಲು ವಿಫಲರಾದ್ರಾ? ಮೊದಲ ಸಿಎಂ – ₹2,500 ಕೋಟಿ, ಎರಡನೇ ಸಿಎಂ – ₹2,500 ಕೋಟಿ, ಮೂರನೇ ಸಿಎಂ – ₹2,500 ಕೋಟಿ, ಒಟ್ಟು ಸಂಪಾದನೆ – ₹7,500 ಕೋಟಿ! ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಾದಾಮಿಯಿಂದ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ
ಬಾದಾಮಿಯಿಂದ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಸದ್ಯ ಬಾದಾಮಿ ವಿಧಾನಸಭಾ ಕ್ಷೇತ್ರದ ಶಾಸಕನಾಗಿದ್ದೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಾನೇ ಹೇಳುತ್ತೇನೆ. ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದ ನನಗೆ ಗೊತ್ತಿಲ್ಲ. ಕಾನೂನು ವಿವಾದದ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:18 am, Wed, 10 August 22