ಧಾರವಾಡ: ಮಹಿಳೆಗೆ ಮೊಮೊಸ್​ ಡೆಲಿವರಿ ಮಾಡದಿದ್ದಕ್ಕೆ ಜೊಮ್ಯಾಟೊಗೆ 60 ಸಾವಿರ ದಂಡ!

|

Updated on: Jul 12, 2024 | 2:39 PM

ಧಾರವಾಡದ ಓರ್ವ ಮಹಿಳೆ ಮಹಿಳೆ 2023ರಲ್ಲಿ ಮೊಮೊಸ್​ ಆರ್ಡ್​​ರ ಮಾಡಿದ್ದರು. ಮಹಿಳೆಗೆ ಮೊಮೊಸ್​ ಡೆಲಿವರಿ ಮಾಡದಿದ್ದಕ್ಕೆ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ 2024ರ ಜು.03 ರಂದು ಜೊಮ್ಯಾಟೋ ಕಂಪನಿಗೆ 60 ಸಾವಿರ ರೂ. ದಂಡ ವಿಧಿಸಿದೆ.

ಧಾರವಾಡ: ಮಹಿಳೆಗೆ ಮೊಮೊಸ್​ ಡೆಲಿವರಿ ಮಾಡದಿದ್ದಕ್ಕೆ ಜೊಮ್ಯಾಟೊಗೆ 60 ಸಾವಿರ ದಂಡ!
ಜೊಮ್ಯಾಟೊ
Follow us on

ಧಾರವಾಡ, ಜುಲೈ 12: ಆರ್ಡರ್​​ ನೀಡದೆ ಸತಾಯಿಸಿದ ಜೊಮ್ಯಾಟೊ (Zomato) ಕಂಪನಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (Consumer Disputes Redressal Commission) 60 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ಧಾರವಾಡದ (Dharwad) ಶೀತಲ್ ಎಂಬುವರು 2023ರ ಅಗಸ್ಟ್​ 31 ರಂದು ಜೊಮ್ಯಾಟೊ ಮೂಲಕ ಮೊಮೊಸ್ (Momos)​​ ಆರ್ಡರ್ ಮಾಡಿ, ಗೂಗಲ್​-ಪೇ ಮೂಲಕ 133.25 ರೂ. ಪಾವತಿಸಿದ್ದರು. ಆರ್ಡರ್ ಮಾಡಿದ 15 ನಿಮಿಷಗಳ ನಂತರ, ನಿಮ್ಮ ಆರ್ಡರ್ ಅನ್ನು ತಲುಪಿಸಲಾಗಿದೆ ಎಂದು ಸಂದೇಶ ಶೀತಲ್​ ಅವರಿಗೆ ಬಂದಿದೆ. ಆದರೆ, ಶೀತಲ್​ ಅವರಿಗೆ ಮೊಮೊಸ್​ ತಲುಪಿರಲಿಲ್ಲ.

ಬಳಿಕ ಶೀತಲ್​ ಅವರು ರೆಸ್ಟೋರೆಂಟ್​ಗೆ ಕರೆ ಮಾಡಿ ಪ್ರಶ್ನಿಸಿದಾಗ, ಡೆಲಿವರಿ ಬಾಯ್ ನಿಮ್ಮ​ ಆರ್ಡರ್ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು. ನಂತರ, ಶೀತಲ್​ ಅವರು ಜೊಮ್ಯಾಟೊ ವೆಬ್‌ಸೈಟ್ ಮೂಲಕ ಡೆಲಿವರಿ ಬಾಯ್​ನನ್ನು ಸಂಪರ್ಕಿಸಿ ಆರ್ಡರ್​​​ ಬಗ್ಗೆ ವಿಚಾರಿಸಿದಾಗ, ಆಕಡೆಯಿಂದ ಸರಿಯಾದ ಪ್ರತಿಕ್ರಿಯೆ ಬರಲಿಲ್ಲ. ಅದೇ ದಿನ, ಶೀತಲ್ ಅವರು ಇಮೇಲ್ ಮೂಲಕ ಜೊಮ್ಯಾಟೊಗೆ ದೂರು ನೀಡಿದರು. ಇದಕ್ಕೆ ಜೊಮ್ಯಾಟೊ ಕಂಪನಿ ಪ್ರತಿಕ್ರಿಯಿಸಿ, ಸಮಸ್ಯೆ ಬಗೆಹರಿಸಲು 72 ಗಂಟೆ ಸಮಯ ಕೊಡಿ ಎಂದು ಹೇಳಿತು.

72 ಗಂಟೆ ಕಳೆದರೂ ಜೊಮ್ಯಾಟೊದಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ, ಶೀತಲ್​ ಅವರು ಸೆಪ್ಟೆಂಬರ್ 13, 2023 ರಂದು ಜೊಮ್ಯಾಟೊ ಕಂಪನಿಗೆ ಕಾನೂನು ನೋಟಿಸ್ ಕಳುಹಿಸಿದರು. ನೋಟಿಸ್‌ಗೆ ಪ್ರತಿಕ್ರಿಯೆಯಾಗಿ, ಜೊಮ್ಯಾಟೊ ಕಂಪನಿ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿ “ಶೀತಲ್​ ಅವರು ಮಾಡಿದ ಆರೋಪ ಸುಳ್ಳು ಎಂದು ವಾದ ಮಂಡಿಸಿದರು.

ವಾದ-ಪ್ರತಿವಾದ ಆಲಿಸಿದ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಈಶಪ್ಪ ಕೆ ಭೂತೆ ಅವರು, ಸಮಸ್ಯೆ ಬಗೆಹರಿಸಲು ಜೊಮ್ಯಾಟೊ 72 ಗಂಟೆಗಳ ಸಮಯ ಕೇಳಿದೆ. ಆದರೆ, ಇಲ್ಲಿಯವರೆಗೆ ಸಮಸ್ಯೆ ಬಗೆ ಹರಿಸಿಲ್ಲ. ಈ ಮೂಲಕ ಜೊಮ್ಯಾಟೋ ವಿಶ್ವಾಸರ್ಹತೆಯನ್ನು ಕಳೆದುಕೊಂಡಿದೆ ಎಂದು ಹೇಳಿದರು.

ಇದನ್ನೂ ಓದಿ: ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಗುತ್ತಿದೆ ಡ್ರಗ್ಸ್​, ಗಾಂಜಾ! ಈ ಕುರಿತು ವಿಶೇಷ ವರದಿ ಇಲ್ಲಿದೆ

ಪ್ರಕರಣ ವಿಚಾರಣೆ ಹಂತದಲ್ಲಿ ಇರುವಾಗಲೆ ಶೀತಲ್ ಅವರಿಗೆ ಜೊಮ್ಯಾಟೋ ಮೇ 2 ರಂದು 133.25 ರೂಪಾಯಿ ಹಿಂತಿರುಗಿಸಿತು. ಈ ವಿಚಾರವನ್ನು ಶೀತಲ್​ ಅವರು ಮೇ 18 ರಂದು ಆಯೋಗದ ಮುಂದೆ ತಿಳಿಸಿದರು.

ಕೊನೆಗೆ ಆಯೋಗ, ವಸ್ತು ಖರೀದಿಸಿದ ಹಣದ ರಶೀದಿಯನ್ನು ತಲುಪಿಸಿದೆ. ಆದರೆ, ಜೊಮ್ಯಾಟೊ ದೂರುದಾರರಿಗೆ ಅಗತ್ಯವಿರುವ ಉತ್ಪನ್ನವನ್ನು ತಲುಪಿಸಲಿಲ್ಲ. ಹೀಗಾಗಿ, ಶೀತಲ್ ಅವರಿಗೆ ಉಂಟಾದ ಅನಾನುಕೂಲತೆ ಮತ್ತು ಮಾನಸಿಕ ಸಂಕಟಕ್ಕೆ ಪರಿಹಾರವಾಗಿ 50,000 ರೂಪಾಯಿಗಳನ್ನು ಮತ್ತು ಆಕೆಯ ವ್ಯಾಜ್ಯ ವೆಚ್ಚಕ್ಕೆ 10,000 ರೂಪಾಯಿಗಳನ್ನು ಜೊಮ್ಯಾಟೊ ಪಾವತಿಸಬೇಕೆಂದು ಜು.03 ರಂದು ಆದೇಶಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:39 pm, Fri, 12 July 24