ಹುಬ್ಬಳ್ಳಿ: ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಬಂತೆಂದರೆ ಭಾರತೀಯರ ಕೈಯಲ್ಲಿ ತ್ವಿವರ್ಣ ಧ್ವಜ ರಾರಾಜಿಸುತ್ತದೆ. ಧ್ವಜ ಹಿಡಿದು ರಾಷ್ಟ್ರ ಪ್ರೇಮ ಮೆರೆಯುತ್ತಾರಾದರೂ, ಅದರಿಂದ ಕೆಲವೊಮ್ಮೆ ಪರಿಸರ ಹಾನಿಯಾಗುವ ಸಾಧ್ಯತೆಗಳೂ ಇವೆ. ಇದಕ್ಕೆ ಕಾರಣ ಪ್ಲಾಸ್ಟಿಕ್ನಿಂದ ತಾಯರಿಸಿದ ಬಾವುಟ. ಆದರೆ ಈ ಬಾರಿ ಅವಳಿ ನಗರದಲ್ಲಿ ವಿಶಿಷ್ಟ ರಾಷ್ಟ್ರಧ್ವಜ ತಯಾರಿಸಲಾಗಿದೆ. ಈ ಧ್ವಜವನ್ನು ಎದೆಗೆ ಇಟ್ಟುಕೊಂಡಲ್ಲಿ ರಾಷ್ಟ್ರ ಪ್ರೇಮ ಉಕ್ಕಿ ಬರುತ್ತದೆ, ಮಣ್ಣಿಗೆ ಹಾಕಿ ನೀರು ಹಾಕಿದರೆ ಮೊಳಕೆ ಬಂದು ಗಿಡಗಳಾಗುತ್ತದೆ. ಧಾರವಾಡದ ದಂಪತಿಗಳು ರೂಪಿಸಿರುವ ಈ ವಿಶಿಷ್ಟ ಧ್ವಜಕ್ಕೆ ಸದ್ಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ಲಾಸ್ಟಿಕ್ ಧ್ವಜಗಳಿಂದ ಆಗುವ ತೀವ್ರ ಪರಿಸರ ಹಾನಿ ತಡೆಗಟ್ಟುವ ಪ್ರಯತ್ನವಾಗಿ ರೂಪಿಸಿರುವ, ಬೀಜಗಳ ಕಾಗದ ರಾಷ್ಟ್ರಧ್ವಜ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಬಳಕೆಯಲ್ಲಿರುವ ಪ್ಲಾಸ್ಟಿಕ್ ಧ್ವಜದ ಬದಲು ಈ ಬೀಜಗಳ ಧ್ವಜ ಬಳಸುವುದು ಸೂಕ್ತ ಏಕೆಂದರೆ ಬಳಕೆಯ ನಂತರ ಇದನ್ನು ಮಣ್ಣಿನ ಮೇಲೆ ಹಾಕಿ ನೀರೆರೆದರೆ ಸಾಕು. ನಾಲ್ಕೈದು ದಿನಗಳಲ್ಲಿಯೇ ಧ್ವಜ ಮೊಳಕೆಯಾಗುತ್ತದೆ, ಗಿಡದ ಸ್ವರೂಪ ಪಡೆದು ಗೃಹೋಪಯೋಗಿಯೂ ಆಗುತ್ತದೆ. ಧಾರವಾಡದ ದಂಪತಿಗಳಿಂದ ರೂಪುಗೊಂಡಿದೆ ಈ ನೂತನ ಶೈಲಿಯ ಪರಿಸರ ಸ್ನೇಹಿ ಧ್ವಜ. ಧಾರವಾಡ ಹಾಗೂ ಹುಬ್ಬಳ್ಳಿ ಅವಳಿ ನಗರಗಳಲ್ಲಿ ಈ ಧ್ವಜದ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಧಾರವಾಡದ ಕೆ.ಸಿ.ಪಾರ್ಕ್ನ ಅಕ್ಷತಾ ಹಾಗೂ ರಾಹುಲ್ ಪ್ರಯತ್ನದ ಫಲವಾಗಿ ರದ್ದಿ ಕಾಗದ ಮತ್ತು ಹಳೆ ಬಟ್ಟೆ ರಾಷ್ಟ್ರಧ್ವಜದ ರೂಪ ಪಡೆದುಕೊಂಡಿದೆ. ಧ್ವಜದಲ್ಲಿ ತುಳಸಿ, ಮಲ್ಲಿಗೆ, ಟೊಮೆಟೋ ಬೀಜ ಇಟ್ಟು ಧ್ವಜ ತಯಾರಿಕೆ ಮಾಡಲಾಗಿದೆ. ಅಲ್ಲದೆ ಡ್ರೆಸ್ ಮೇಲೆ ಹಾಗೂ ಕೈಗೆ ಬ್ಯಾಂಡ್ ರೂಪದಲ್ಲಿಯೂ ಕಟ್ಟಿಕೊಳ್ಳುವ ಧ್ವಜ ತಯಾರಿಕೆ ಮಾಡಲಾಗಿದೆ.
10 ಸಾವಿರ ಧ್ವಜ, ಒಂದು ಸಾವಿರ ಕೈ ಪಟ್ಟಿ ಸಿದ್ಧಪಡಿಸಿರುವ ದಂಪತಿಗಳು. ಹುಬ್ಬಳ್ಳಿಯ ಶ್ರೇಯಾ ನಗರದ ಸಿರಿ ಪರಂಪರಾ ಸ್ಟೋರ್ ಹಾಗೂ ಧಾರವಾಡದ ನಾರಾಯಣ ನಗರದ ಆರ್ಗ್ಯಾನಿಕ್ ಅಂಗಡಿಗಳಲ್ಲಿ ಧ್ವಜ ಮಾರಾಟ ಮಾಡಿದ್ದಾರೆ. ಅವಳಿ ನಗರದ ಪರಿಸರ ಸ್ನೇಹಿ ಅಂಗಡಿಗಳಲ್ಲಿಯೂ ಧ್ವಜಗಳ ಮಾರಾಟ ಮಾಡಲಾಗುತ್ತಿದೆ. ಪರಿಸರ ಸಂರಕ್ಷಣೆ ದೃಷ್ಟಿಯನ್ನಿಟ್ಟುಕೊಂಡು ಈ ಧ್ವಜ ತಯಾರಿಕೆ ಮಾಡಲಾಗಿದೆ. ಬೀಜಗಳ ಕಾಗದ ಧ್ವಜಗಳಿಗೆ ಜನತೆಯಿಂದ ಕೂಡ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಬೀಜಗಳ ಕಾಗದ ಧ್ವಜ ಬಳಸಿದಲ್ಲಿ ದೇಶಪ್ರೇಮ ಮತ್ತು ಪರಿಸರ ಪ್ರೇಮ ಎರಡನ್ನು ತೋರಿಸಿದಂತಾಗುತ್ತದೆ. ಮಣ್ಣಿಗೆ ಹಾಕಿದರೆ ಮೊಳಕೆಯಾಗಿ, ಗಿಡದ ಸ್ವರೂಪ ಪಡೆದು, ಉತ್ತಮ ರೀತಿಯಲ್ಲಿ ಉಪಯೋಗವಾಗುತ್ತದೆ. ಸೀಡ್ ಪೇಪರ್ ಫ್ಲ್ಯಾಗ್ನಿಂದ ತುಳಸಿ, ಹೂವು, ಟೊಮೆಟೋ, ತರಕಾರಿಗಳನ್ನೂ ಪಡೆಯಬಹುದು ಎಂದು ವಿಶಿಷ್ಟ ಧ್ವಜ ತಯಾರಿಸಿರುವ ಅಕ್ಷತಾ ಹಾಗೂ ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
ವರದಿ: ದತ್ತಾತ್ರೇಯ ಪಾಟೀಲ್
ಇದನ್ನೂ ಓದಿ:
ಸ್ವಾತಂತ್ರೋತ್ಸವದ ಜತೆಗೆ ಧಾರವಾಡದ 75 ವರ್ಷದ ಈ ರಾಷ್ಟ್ರಧ್ವಜಕ್ಕೂ ಅಮೃತ ಮಹೋತ್ಸವದ ಸಂಭ್ರಮ!
ಕೆಂಪುಕೋಟೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ; ಇಲ್ಲಿವೆ ಸುಂದರ ಕ್ಷಣದ ಫೋಟೋಗಳು