ರೈತರಿಗೆ ಭೂ ಸ್ವಾಧೀನದ ಪರಿಹಾರ ನೀಡದ ಸಣ್ಣ ನೀರಾವರಿ ಇಲಾಖೆ: ಕಚೇರಿ ಜಪ್ತಿ ಮಾಡಿದ ಕೋರ್ಟ್​ ಸಿಬ್ಬಂದಿ

| Updated By: ವಿವೇಕ ಬಿರಾದಾರ

Updated on: Nov 04, 2022 | 4:23 PM

ಭೂಸ್ವಾಧೀನ ಪರಿಹಾರದ ಹಣ ನೀಡುವಲ್ಲಿ ವಿಳಂಬ ತೋರಿದ ಹಿನ್ನೆಲೆ ಧಾರವಾಡದ ಸಣ್ಣ ನೀರಾವರಿ ಇಲಾಖೆಯನ್ನು ಜಪ್ತಿ ಮಾಡುವಂತೆ ಆದೇಶಿಸಿದ ನ್ಯಾಯಾಲಯ

ರೈತರಿಗೆ ಭೂ ಸ್ವಾಧೀನದ ಪರಿಹಾರ ನೀಡದ ಸಣ್ಣ ನೀರಾವರಿ ಇಲಾಖೆ: ಕಚೇರಿ ಜಪ್ತಿ ಮಾಡಿದ ಕೋರ್ಟ್​ ಸಿಬ್ಬಂದಿ
ಧಾರವಾಡ ಸಣ್ಣ ನೀರಾವರಿ ಇಲಾಖೆ
Follow us on

ಧಾರವಾಡ: ನ್ಯಾಯಾಲಯದ ಆದೇಶವಿದ್ದರೂ ಭೂಸ್ವಾಧೀನ ಪರಿಹಾರದ ಹಣ ನೀಡುವಲ್ಲಿ ವಿಳಂಬ ತೋರಿದ ಹಿನ್ನೆಲೆ ಧಾರವಾಡದ (Dharwad) ಸಣ್ಣ ನೀರಾವರಿ ಇಲಾಖೆಯನ್ನು (Irrigation Department) ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ. ಹಾವೇರಿ ಜಿಲ್ಲೆಯಲ್ಲಿನ ಶಿಗ್ಗಾಂವ್, ಹಾನಗಲ್ ತಾಲೂಕಿನಲ್ಲಿ ಕಾಲುವೆ ನಿರ್ಮಾಣ ಮಾಡಲು, ಹಾನಗಲ್ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ರೈತರ ಜಮೀನನ್ನು ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಸಣ್ಣ ನೀರಾವರಿ ಇಲಾಖೆ 6 ಎಕರೆ ಜಮೀನು ಸ್ವಾಧೀನ ಮಾಡಿಕೊಂಡಿದ್ದು, ಪ್ರತಿ ಎಕರೆಗೆ 29 ಸಾವಿರ ರೂ. ಪರಿಹಾರ ನಿಗದಿಪಡಿಸಿತ್ತು.

ಆದರೆ ಪರಿಹಾರದ ಹಣ ಹೆಚ್ಚಿಸುವಂತೆ 2007 ರಲ್ಲಿ ನೀಲವ್ವ, ಶಿವಪ್ಪ, ಮಹಮ್ಮದ್ ಷರೀಫ್ ಅನ್ನೋ ಮೂವರು ರೈತರು ಹಾನಗಲ್‌ನ ಹಿರಿಯ ಸಿವಿಲ್ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. 3 ಜನ ರೈತರದ್ದು 35 ಗುಂಟೆ ಜಮೀನಿದ್ದು, ಪ್ರತಿ ಗುಂಟೆಗೆ 10 ಸಾವಿರ ಪರಿಹಾರ ನೀಡಬೇಕೆಂದು 2016 ರಲ್ಲಿ ಹಾನಗಲ್‌ನ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿತ್ತು.

ತೀರ್ಪು ಬಂದು 6 ವರ್ಷಗಳು ಕಳೆದರೂ ನೀರಾವರಿ ಇಲಾಖೆ ರೈತರಿಗೆ ಪರಿಹಾರ ನೀಡಿರಲಿಲ್ಲ. ಈ ಸಂಬಂಧ ನ್ಯಾಯಾಲಯ ಇಲಾಖೆಯನ್ನು ಜಪ್ತಿ ಮಾಡುವಂತೆ ಆದೇಶ ನೀಡಿದೆ. ಹೀಗಾಗಿ ನ್ಯಾಯಾಲಯದ ಸಿಬ್ಬಂದಿ ಕಚೇರಿಯ ಪೀಠೋಪಕರಣ, ಕಂಪ್ಯೂಟರ್​ಗಳನ್ನು ಜಪ್ತಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:18 pm, Fri, 4 November 22