ಬರಗಾಲದ ನಡುವೆ ರೈತರಿಗೆ ವಂಚಕರ ಕಾಟ: ಸಬ್ಸಿಡಿ ಪೈಪ್ ಹೆಸರಲ್ಲಿ ಲಕ್ಷಾಂತರ ರೂ. ದೋಚುತ್ತಿರುವ ಜಾಲ!
ರಾಜ್ಯದಲ್ಲಿ ಭೀಕರ ಬರಗಾಲದ ನಡುವೆ ಸಂಕಷ್ಟದಲ್ಲಿರುವ ರೈತರಿಗೆ ಇದೀಗ ಸೈಬರ್ ವಂಚಕರ ಕಾಟ ಶುರುವಾಗಿದೆ. ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಸ್ಪ್ರಿಂಕ್ಲರ್ ಪೈಪ್ ಮಂಜೂರಾಗಿದೆ ಎಂದು ಕರೆ ಮಾಡಿ, ಸಾಗಾಣಿಕೆ ವೆಚ್ಚದ ಹೆಸರಿನಲ್ಲಿ ಹಣ ಪಡೆದು ವಂಚಿಸುತ್ತಿರುವ ಜಾಲ ಪತ್ತೆಯಾಗಿದೆ. ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ರೈತರು ಹಣ ಕಳೆದುಕೊಂಡಿದ್ದು, ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಖ್ಯಾಂಶಗಳು
- ಬರಗಾಲದ ಸಂಕಷ್ಟದಲ್ಲಿರುವ ರೈತರಿಗೆ ಇದೀಗ ಸಬ್ಸಿಡಿ ಪೈಪ್‌ಗಳ ಹೆಸರಿನಲ್ಲಿ ವಂಚಕರ ಕಾಟ.
- ಸ್ಪ್ರಿಂಕ್ಲರ್ ಪೈಪ್ ಮಂಜೂರಾಗಿದೆ ಎಂದು ನಂಬಿಸಿ ಸಾಗಾಣಿಕೆ ವೆಚ್ಚದ ನೆಪದಲ್ಲಿ ಹಣ ದೋಚುತ್ತಿರುವರು.
- ರೈತರ ಮಾಹಿತಿ ಸೋರಿಕೆ ಶಂಕೆ; ಧಾರವಾಡ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.
ಹುಬ್ಬಳ್ಳಿ, ಸೆಪ್ಟೆಂಬರ್ 27: ರಾಜ್ಯದಲ್ಲಿ ಈ ಬಾರಿ ಭೀಕರ ಬರಗಾಲ ಎದುರಾಗಿದ್ದು, ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ಅನ್ನದಾತರಿಗೆ ಇದೀಗ ವಂಚಕರ ಹಾವಳಿ ದೊಡ್ಡ ಆಪತ್ತಾಗಿ ಪರಿಣಮಿಸಿದೆ. ‘ನಿಮಗೆ ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಸ್ಪ್ರಿಂಕ್ಲರ್ ಪೈಪ್ ಸೆಟ್‌ಗಳು ಮಂಜೂರಾಗಿವೆ’ ಎಂದು ಫೋನ್ ಕರೆ ಮಾಡಿ, ಸಾಗಾಣಿಕೆ ವೆಚ್ಚ ಹಾಗೂ ಪ್ರಕ್ರಿಯಾ ಶುಲ್ಕದ ಹೆಸರಿನಲ್ಲಿ ಹಣ ಪಡೆದು ಮೋಸ ಮಾಡುವ ಜಾಲ ಸಕ್ರಿಯವಾಗಿದ್ದು, ಹುಬ್ಬಳ್ಳಿ-ಧಾರವಾಡದ ರೈತರು ಮೋಸಹೋಗುತ್ತಿದ್ದಾರೆ.
ಹಂತ-ಹಂತವಾಗಿ ಹಣ ಪಡೆದ ವಂಚಕ
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದ ಶಂಕರಗೌಡ ಎಂಬ ರೈತ ಈ ವಂಚನೆಗೆ ಒಳಗಾಗಿದ್ದಾರೆ. ಏಜೆನ್ಸಿಯಿಂದ ಮಾತನಾಡುತ್ತಿರುವುದಾಗಿ ಹೇಳಿದ ಯಲ್ಲಾಲಿಂಗ ಎಂಬ ವ್ಯಕ್ತಿ, ಪೈಪ್‌ಗಳ ಬಾಡಿಗೆ ಹಾಗೂ ಆರ್‌ಟಿಜಿಎಸ್ ಶುಲ್ಕವೆಂದು ಹಂತ-ಹಂತವಾಗಿ ಹಣ ಪಡೆದು, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಪೈಪ್ ಸಿಕ್ಕಿದರೆ ಕೊಳವೆಬಾವಿ ನೀರಿನಿಂದ ಬೆಳೆ ಉಳಿಸಿಕೊಳ್ಳಬಹುದು ಎಂಬ ಆಸೆಯಿಂದ ರೈತರು ಹಣ ಕಳೆದುಕೊಳ್ಳುತ್ತಿದ್ದಾರೆ.
ಇಲಾಖೆಯ ಮಾಹಿತಿ ಸೋರಿಕೆ ಶಂಕೆ?
ರೈತರ ನಿಖರ ಹೆಸರು, ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಹೇಳಿ ವಂಚಕರು ನಂಬಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರೈತರು ಈ ಹಿಂದೆ ಕೃಷಿ ಇಲಾಖೆಗೆ ಸಲ್ಲಿಸಿದ್ದ ಅರ್ಜಿಗಳ ಮಾಹಿತಿ ವಂಚಕರ ಕೈಗೆ ತಲುಪಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಆದರೆ, ಪ್ರಸ್ತುತ ಇಲಾಖೆಯಿಂದ ಯಾವುದೇ ಸ್ಪ್ರಿಂಕ್ಲರ್ ಪೈಪ್‌ಗಳನ್ನು ನೀಡುತ್ತಿಲ್ಲ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.
ಸದ್ಯ ಸಂಕಷ್ಟದಲ್ಲಿರುವ ರೈತನಿಗೆ ಮೋಸ ಮಾಡಿದ ಕುರಿತು ಧಾರವಾಡ ಸೈಬರ್ ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾಗಿದೆ. ಬರಗಾಲದಿಂದ ಕಂಗಾಲಾಗಿರುವ ಅನ್ನದಾತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿರುವ ಇಂತಹ ಸೈಬರ್ ವಂಚಕರ ವಿರುದ್ಧ ಸೈಬರ್ ಪೊಲೀಸರು ತಕ್ಷಣವೇ ಸೂಕ್ತ ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




