ಧಾರವಾಡ: ಸಾಮಾನ್ಯವಾಗಿ ಹತ್ತಿ ಅಂದಕೂಡಲೇ ಎಲ್ಲರ ಮನಸ್ಸಿನಲ್ಲಿ ಮೂಡುವುದು ಬಿಳಿ ಬಣ್ಣ. ಆದರೆ ಧಾರವಾಡದ ಕೃಷಿ ವಿಶ್ವವಿದ್ಯಾಲಯ 25 ವರ್ಷಗಳ ಹಿಂದೆ ನಡೆಸಿದ್ದ ಸಂಶೋಧನೆಯಿಂದಾಗಿ ಹತ್ತಿಗೂ ಬೇರೆ ಬಣ್ಣ ಬರಬಹುದು ಅನ್ನುವುದು ನಿರೂಪಿತವಾಗಿತ್ತು. ಹತ್ತಿ ಅಂದರೆ ಬರೀ ಬಿಳಿ ಬಣ್ಣವಲ್ಲ, ಬೇರೆ ಬೇರೆ ಬಣ್ಣದಲ್ಲಿಯೂ ಹತ್ತಿಯನ್ನು ಪಡೆಯಬಹುದು ಅನ್ನೋದನ್ನು ವಿಶ್ವವಿದ್ಯಾಲಯದ ವಿಜ್ಞಾನಿಗಳು ನಿರೂಪಿಸಿದ್ದರು. ಅಂಥ ಬಣ್ಣದ ಹತ್ತಿಗೆ ಇದೀಗ ಭಾರೀ ಡಿಮ್ಯಾಂಡ್ ಬಂದಿದೆ. ಅಷ್ಟೇ ಅಲ್ಲ, ಮುಂದುವರೆದ ಭಾಗವಾಗಿ ವಿಶ್ವವಿದ್ಯಾಲಯ ಅಂಥ ಹತ್ತಿಯಿಂದಲೇ ಬಗೆ ಬಗೆ ವಸ್ತುಗಳನ್ನು ತಯಾರಿಸಿ, ಮಾರಾಟ ಮಾಡುತ್ತಿದೆ. ವಿಶ್ವವಿದ್ಯಾಲಯಗಳು ಅಂದರೆ ಕೇವಲ ವಿದ್ಯಾರ್ಥಿಗಳಿಗೆ ಕಲಿಸುವುದಷ್ಟೇ ಅಲ್ಲ, ವಿಶ್ವವಿದ್ಯಾಲಯದಲ್ಲಿ ಬಗೆ ಬಗೆಯ ವಸ್ತುಗಳನ್ನು ತಯಾರಿಸಿ, ಅವುಗಳನ್ನು ಮಾರಾಟ ಮಾಡುವ ಮೂಲಕ ಆದಾಯವನ್ನು ಕೂಡ ಪಡೆಯಬಹುದು ಎನ್ನುವುದನ್ನು ಧಾರವಾಡ ಕೃಷಿ ವಿವಿ ಸಾಧಿಸಿ ತೋರಿಸಿದೆ.
ಎರಡೂವರೆ ದಶಕಗಳ ಹಿಂದಿನ ಸಂಶೋಧನೆ, ಬಣ್ಣದ ಹತ್ತಿಯಿಂದ ಬಟ್ಟೆಗಳ ತಯಾರಿ
ಮುಂಚೆಯಿಂದಲೂ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಹೊಸ ಹೊಸ ಬಗೆಯ ಅನ್ವೇಷಣೆಗೆ ಹೆಸರು ಮಾಡಿದೆ. ಇಂಥದ್ದರಲ್ಲಿ 25 ವರ್ಷಗಳ ಹಿಂದೆಯೇ ಅಭಿವೃದ್ಧಿಪಡಿಸಿದ್ದ ಬೆಳೆಯೊಂದು ಇದೀಗ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಧಾರವಾಡ ತಾಲೂಕಿನ ಹುಬ್ಬಳ್ಳಿ ಫಾರ್ಮ್‌ನಲ್ಲಿ ಕಂದು ಬಣ್ಣದ ಹತ್ತಿಯನ್ನು 1995ರಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಅಲ್ಲಿಂದ ನಿರಂತರ ಸಂಶೋಧನೆಯಲ್ಲಿದ್ದ ಈ ಹತ್ತಿ, ಇದೀಗ ವಾಣಿಜ್ಯ ಬಳಕೆಗೆ ಮುಕ್ತವಾಗಿದೆ. ಅದನ್ನೇ ಬಳಸಿಕೊಂಡು ಉತ್ತಮ ಗುಣಮಟ್ಟದ ಶಾಲನ್ನು ವಿಶ್ವವಿದ್ಯಾಲಯದ ಜವಳಿ ವಿಭಾಗ ಸಿದ್ಧಪಡಿಸುತ್ತಿದೆ. ಅಭಿವೃದ್ಧಿಪಡಿಸಿದ ಬಣ್ಣದ ಹತ್ತಿಯ ಲಡಿಯನ್ನು ಬಳಸಿ ಸುಂದರ ಶಾಲನ್ನು ಸಿದ್ಧಪಡಿಸಲಾಗುತ್ತಿದೆ. ಕೈಮಗ್ಗದಲ್ಲೇ ಸಿದ್ಧಗೊಳ್ಳುತ್ತಿರುವ ಈ ಶಾಲಿಗೆ ಇದೀಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ದೇಸಿ ಹತ್ತಿಯ ಶಾಲಿನ ಮೇಲೆ ಅಡಿಕೆಯ ಚೊಗರಿನ ಕೆಂಪು ಬಣ್ಣದ ಚಿತ್ತಾರವನ್ನು ಮೂಡಿಸಲಾಗಿದೆ. ರುದ್ರಾಕ್ಷಿ ವಿನ್ಯಾಸವಿರುವ ಇದು ಗುಳೇದಗುಡ್ಡದ ಕಣದಲ್ಲಿ ಬಳಸುವ ವಿನ್ಯಾಸವಾಗಿದೆ. ಅಂಚಿಗೆ ಬಿಳಿ ಹತ್ತಿಯಿಂದ ತಯಾರಾದ ನೂಲಿನ ಕುಚ್ಚವನ್ನು ನೀಡಲಾಗಿದೆ. ಇದರಿಂದಾಗಿ ಈ ಶಾಲಿನ ಸೌಂದರ್ಯ ಮತ್ತಷ್ಟು ಹೆಚ್ಚಿದೆ.
ರಾಸಾಯನಿಕ ಬಳಸದೇ ಶಾಲು ತಯಾರಿಕೆ
ಸಾಮಾನ್ಯವಾಗಿ ಬಟ್ಟೆ ತಯಾರಿಸುವಾಗ ರಾಸಾಯನಿಕವನ್ನು ಬಳಸಲಾಗುತ್ತದೆ. ಆದರೆ ಕೃಷಿ ವಿವಿಯಲ್ಲಿ ಈ ಹತ್ತಿಯಿಂದ ತಯಾರಿಸಲಾಗುತ್ತಿರುವ ಶಾಲುಗಳಿಗೆ ರಾಸಾಯನಿಕ ಬಳಸಿಲ್ಲ. ಶುದ್ಧ ಹತ್ತಿಯ ಲಡಿಯನ್ನು ವಿಭಾಗಕ್ಕೆ ತರಿಸಿ, ಕೈಮಗ್ಗದಲ್ಲೇ ಇದನ್ನು ಸಿದ್ಧಪಡಿಸಲಾಗುತ್ತಿದೆ. ಅಂಚಿನಲ್ಲಿ ಹಾಗೂ ಮಧ್ಯಭಾಗದಲ್ಲಿ ರುದ್ರಾಕ್ಷಿ ಚಿತ್ರದ ವಿನ್ಯಾಸ ಮಾಡಲಾಗಿದೆ. ರುದ್ರಾಕ್ಷಿ ಕಲಾಕೃತಿ ಇರುವುದರಿಂದ ಇದನ್ನು ಹೆಚ್ಚು ಜನ ಪೂಜೆಗೆ, ಸನ್ಮಾನಕ್ಕೆ ಹಾಗೂ ಕೆಲ ಮಹಿಳೆಯರು ವೇಲ್ ಆಗಿಯೂ ಬಳಸುತ್ತಿದ್ದಾರೆ. 2.25 ಮೀಟರ್ ಉದ್ದದ ಈ ಶಾಲು ಎರಡು ದಿನಕ್ಕೆ ಒಂದು ಮಾತ್ರ ತಯಾರಾಗುತ್ತಿದೆ. ಇದುವರೆಗೂ 120 ಶಾಲುಗಳನ್ನು ಮಾರಾಟ ಮಾಡಲಾಗಿದೆ. ಇದಕ್ಕೆ ವಿಶ್ವವಿದ್ಯಾಲಯವು 360 ರೂಪಾಯಿ ದರ ನಿಗದಿಪಡಿಸಿದೆ. ಬೇಡಿಕೆ ಹೆಚ್ಚುತ್ತಿರುವುದರಿಂದ, ನಿತ್ಯ ಶಾಲನ್ನು ನೇಯಲಾಗುತ್ತಿದೆ.
ಜವಳಿ ವಿಭಾಗದಲ್ಲೇ ವಿನ್ಯಾಸಗೊಳಿಸಲಾದ ರುದ್ರಾಕ್ಷಿ ವಿನ್ಯಾಸ ಹಾಗೂ ಸೂರ್ಯಮುಖಿ ವಿನ್ಯಾಸದ ಬಾರ್ಡರ್ ಹೊಂದಿರುವ ಪಾಲಿಕಾಟನ್ ಸೀರೆಯೂ ಜನಪ್ರಿಯತೆ ಪಡೆದಿದೆ. ತಲಾ ಶೇ. 50ರಷ್ಟು ಹತ್ತಿ ಹಾಗೂ ಪಾಲಿಸ್ಟರ್ ಬಳಸಿರುವ ಈ ಸೀರೆಯ ವಿಶೇಷತೆ ಎಂದರೆ, ಸೀರೆ ನೇಯಿಗೆಯಲ್ಲಿ ಉದ್ದವಾಗಿ ಹತ್ತಿಯನ್ನು, ಅಡ್ಡವಾಗಿ ಪಾಲಿಸ್ಟರ್ ನೂಲನ್ನು ಬಳಸಲಾಗಿದೆ. ಇದರಿಂದ ಹತ್ತಿಯ ಪ್ರಮಾಣ ಸೀರೆಯಲ್ಲಿ ಹೆಚ್ಚು ಇರುವುದರಿಂದ ತೊಡುವವರಿಗೆ ಹೆಚ್ಚು ಆರಾಮ ಸಿಗಲಿದೆ. ಹಾಗೆಯೇ ಸರ್ಕಾರದ ಮಡಿಲು ಕಿಟ್‌ಗಾಗಿ ಎಳೆ ಮಕ್ಕಳ ವಸ್ತ್ರಗಳನ್ನು ನೈಸರ್ಗಿಕವಾಗಿ ಸಿಗುವ ಚೆಂಡು ಹೂವಿನ ದಳಗಳು ಹಾಗೂ ಅಡಿಕೆಯ ಬಣ್ಣವನ್ನು ಬಳಸಿದ ವಸ್ತ್ರಗಳೂ ವಿಭಾಗದಲ್ಲಿ ಸಿದ್ಧಗೊಳ್ಳುತ್ತಿವೆ.
ಈ ಬಗ್ಗೆ ಟಿವಿ-9 ಡಿಜಿಟಲ್ ಜತೆಗೆ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಬಿ. ಚೆಟ್ಟಿ, ಇದೀಗ ಈ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಉತ್ಪನ್ನದ ಪ್ರಮಾಣವನ್ನು ಕೂಡ ಹೆಚ್ಚಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕೆ ಹಾನಿಕರವಾಗಿರುವಂಥ ಬಣ್ಣಗಳನ್ನು ಬಳಸೋದ್ರರಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಇಂಥ ವೇಳೆಯಲ್ಲಿ ಈ ವಿವಿಯಲ್ಲಿ ತಯಾರಾಗುತ್ತಿರೋ ಬಟ್ಟೆಯ ವಸ್ತ್ರಗಳು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಒಟ್ಟಿನಲ್ಲಿ ಇದೀಗ ಬಣ್ಣದ ಹತ್ತಿಯಿಂದ ತಯಾರಾಗುತ್ತಿರೋ ಬಟ್ಟೆಗಳು ಸಾಕಷ್ಟು ಸದ್ದು ಮಾಡಿವೆ ಅನ್ನುತ್ತಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜವಳಿ ವಿಭಾಗದ ಮುಖ್ಯಸ್ಥೆ ಡಾ. ಸಣ್ಣ ಪಾಪಮ್ಮ, ಇಲ್ಲಿ ತಯಾರಾಗುತ್ತಿರುವ ಶಾಲುಗಳಿಗೆ ಭಾರೀ ಬೇಡಿಕೆ ಬರುತ್ತಿದೆ. ಎಲ್ಲ ಕಾಲಗಳಲ್ಲಿಯೂ ಬಳಸಬಹುದಾದ ಬಟ್ಟೆ ಇದಾಗಿದ್ದು, ಇದೀಗ ಸಾಕಷ್ಟು ಜನಪ್ರಿಯತೆ ಪಡೆಯುತ್ತಿದೆ. ಮಹಿಳೆಯರು ಕೂಡ ವೇಲ್ ಆಗಿ ಬಳಸುತ್ತಿದ್ದಾರೆ. ಬೇಡಿಕೆ ಹೆಚ್ಚುತ್ತಿರುವುದರಿಂದ ನಿತ್ಯವೂ ಶಾಲುಗಳನ್ನು ನೇಯಲಾಗುತ್ತಿದೆ ಎಂದರು.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಧಾರವಾಡ
ಇದನ್ನೂ ಓದಿ: ಬೆಳಗಾವಿ: ಈ ಬಾರಿ ಸುವರ್ಣಸೌಧದಲ್ಲೇ ಅಧಿವೇಶನ- ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ