ಧಾರವಾಡ: ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಸ್ಪರ್ಧೆಗಳು ಎಲ್ಲಾ ಕಡೆಯೂ ನಡೆಯುತ್ತಿವೆ. ಆದರೆ ಅವುಗಳಲ್ಲಿ ಭಾಗವಹಿಸೋದು ಎಲ್ಲ ಶ್ರೀಮಂತರ ಮಕ್ಕಳೇ ಅನ್ನೋ ಭಾವನೆ ಇದೆ. ಅದು ಬಹುತೇಕ ಸತ್ಯವೂ ಹೌದು. ಅದರಲ್ಲೂ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಂತೂ ಶ್ರೀಮಂತರ ಪಾಲಿಗೆ ಮಾತ್ರ ಅನ್ನೋ ಭಾವನೆ ಇದೆ. ಆದರೆ ಧಾರವಾಡದ ಮಧ್ಯಮ ವರ್ಗದ ಕುಟುಂಬದ ಕುಡಿಯೊಂದು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿದೆ. ಆಕೆ ಧಾರವಾಡದ ಸುಂದರ ಬಾಲಕಿ ಅನ್ನೋದು ವಿಶೇಷ.
ಮಿಸ್ ಇಕೋ ಟೀನ್ ಇಂಟರ್ ನ್ಯಾಷನಲ್ ಸ್ಪರ್ಧೆಗೆ ಧಾರವಾಡದ ಬೆಡಗಿ
ಧಾರವಾಡ ನಗರದ ಜಕಣಿ ಬಾವಿ ಪ್ರದೇಶದ ಏಕನಾಥ ಟಿಕಾರೆ ಹಾಗೂ ಶೈಲಾ ದಂಪತಿಯ ಹಿರಿಯ ಮಗಳು ಖುಷಿ ಟಿಕಾರೆಗೆ ಇದೀಗ 17 ವರ್ಷ ವಯಸ್ಸು. ನೋಡಲು ತುಂಬಾ ಸುಂದರಿಯಾಗಿರುವ ಖುಷಿ, ಬುದ್ಧಿವಂತೆ ಕೂಡ ಹೌದು. ನಗರದ ವಿದ್ಯಾಗಿರಿ ಬಡಾವಣೆಯಲ್ಲಿರೋ ಜೆ.ಎಸ್.ಎಸ್. ಕಾಲೇಜಿನಲ್ಲಿ ಪಿಯುಸಿ ಓದುತ್ತಿರೋ ಖುಷಿ ಇದೀಗ ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಗೆ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾಳೆ. ಕಳೆದೊಂದು ವರ್ಷದಿಂದ ಇದೇ ತಯಾರಿಯಲ್ಲಿ ಇರುವ ಖುಷಿ ಇದೀಗ ದೇಶವನ್ನು ಪ್ರತಿನಿಧಿಸಲು ಈಜಿಫ್ಟ್ ದೇಶಕ್ಕೆ ಹೋಗುತ್ತಿದ್ದಾಳೆ. ಇದು ಜಿಲ್ಲೆಗಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ಹೆಮ್ಮೆ ತರುವ ಸಂಗತಿಯಾಗಿದೆ.
ಈಜಿಪ್ಟ್ನಲ್ಲಿ ನಡೆಯಲಿರುವ ಸ್ಪರ್ಧೆ
ಪ್ರತಿವರ್ಷ ಈಜಿಪ್ಟ್ ದೇಶದಲ್ಲಿ ಮಿಸ್ ಇಕೋ ಟೀನ್ ಇಂಟರ್ ನ್ಯಾಷನಲ್ ಸ್ಪರ್ಧೆಗೆ ಖುಷಿ ಆಯ್ಕೆಯಾಗಿದ್ದಾಳೆ. ಇದೇ ಡಿಸೆಂಬರ್ 10 ರಿಂದ 21 ರವರೆಗೆ ಈಜಿಪ್ಟ್ ದೇಶದ ಲುಕ್ಸಾರ್ ಸಿಟಿಯಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಆರ್ಕಿಡ್ ಇಂಟರ್ ನ್ಯಾಷನಲ್ ಆರ್ಗನೈಜೇಶನ್ ಕಳೆದ 2020 ರ ನವೆಂಬರ್ ನಲ್ಲಿ ನಡೆಸಿದ್ದ ಸ್ಪರ್ಧೆಯಲ್ಲಿ ಖುಷಿ ಪ್ರಥಮ ಸ್ಥಾನ ಪಡೆದಿದ್ದಳು. ಹೀಗೆ ಪ್ರಥಮ ಸ್ಥಾನ ಪಡೆದ ಸ್ಪರ್ಧಾಳುಗೆ ಇಕೋ ಟೀನ್ ನ್ಯಾಷನಲ್ ಇಂಡಿಯಾ ಅಂತಾ ಘೋಷಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ದೇಶದ ಎಲ್ಲ ರಾಜ್ಯಗಳಿಂದ ಅನೇಕ ಸ್ಪರ್ಧಾಳುಗಳು ಬಂದಿರುತ್ತಾರೆ. ಇಂಥ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರೇ ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯೋ ಮಿಸ್ ಇಕೋ ಟೀನ್ ಇಂಟರ್ ನ್ಯಾಷನಲ್ ಸ್ಪರ್ಧೆಗೆ ದೇಶವನ್ನು ಪ್ರತಿನಿಧಿಸುತ್ತಾರೆ. ಇದೀಗ ಅಂಥ ಭಾಗ್ಯ ಪೇಢಾ ನಗರಿಯ ಬಾಲಕಿಗೆ ಒದಗಿ ಬಂದಿದೆ. ಇದೀಗ ಸ್ಪರ್ಧೆಗೆ ಸಿದ್ಧಳಾಗಿರೋ ಖುಷಿ, ಖುಷಿ ಖುಷಿಯಿಂದ ಈಜಿಫ್ಟ್ಗೆ ಹೋಗುತ್ತಿದ್ದಾಳೆ.
35 ದೇಶಗಳ ಸ್ಪರ್ಧಾಳುಗಳು
ಕಳೆದ ವರ್ಷದ ನವೆಂಬರ್ ನಲ್ಲಿಯೇ ಈ ಸ್ಪರ್ಧೆಯಲ್ಲಿ ಖುಷಿ ಗೆದ್ದಿದ್ದರೂ ಈ ವರ್ಷದ ಡಿಸೆಂಬರ್ ನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರೋದು ಅಚ್ಚರಿ ಮೂಡಿಸಿದರೂ ಸತ್ಯ. ಏಕೆಂದರೆ ಇದೊಂದು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ಆಗಿರೋದ್ರಿಂದ, ಹತ್ತಾರು ದೇಶಗಳಿಂದ ಸ್ಪರ್ಧಾಳುಗಳು ಆಗಮಿಸಿರುತ್ತಾರೆ. ಈ ಬಾರಿ ಕೊವಿಡ್ ಕಾರಣದಿಂದಾಗಿ 35 ದೇಶಗಳಿಂದ ಸ್ಪರ್ಧಾಳುಗಳು ಆಗಮಿಸುತ್ತಾರೆ. ಕೊರೊನಾ ಇಲ್ಲದೇ ಇದ್ದರೆ ಇದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಆಗಮಿಸುತ್ತಿದ್ದರು. ಇನ್ನು ಹನ್ನೆರಡು ದಿನಗಳ ಕಾಲ ನಡೆಯಲಿರೋ ಈ ಸ್ಪರ್ಧೆಯಲ್ಲಿ ವಿವಿಧ ಸುತ್ತುಗಳು ಇರುತ್ತವೆ. ಫಿಟ್ ನೆಸ್ ರೌಂಡ್, ಟ್ಯಾಲೆಂಟ್ ರೌಂಡ್, ಇಕೋ ಡ್ರೆಸ್ ರೌಂಡ್ ಸೇರಿದಂತೆ ಅನೇಕ ಸುತ್ತುಗಳಲ್ಲಿ ಸ್ಪರ್ಧೆ ಮಾಡಬೇಕಾಗುತ್ತದೆ. ಇದೇ ವೇಳೆ ನಮ್ಮ ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸೋ ಡ್ರೆಸ್ ಧರಿಸಿ ಕೂಡ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿದ್ದು ಪ್ರತಿಯೊಬ್ಬ ಸ್ಪರ್ಧಿಯೂ ಪರಿಸರಕ್ಕೆ ಸಂಬಂಧಿಸಿದ ಒಂದೊಂದು ವಿಷಯ ವಸ್ತುವನ್ನು ಹೊಂದಿರಬೇಕು. ಈ ವಿಚಾರವಾಗಿ ಖುಷಿ ಸುಸ್ಥಿರ ಪರಿಸರ ಅನ್ನೋ ಪರಿಕಲ್ಪನೆಯನ್ನು ಇಟ್ಟುಕೊಂಡಿದ್ದಾಳೆ. ಮುಂದಿನ ದಿನಗಳಲ್ಲಿ ಪರಿಸರಕ್ಕೆ ಸಂಬಂಧಿಸಿದಂತೆ ಏನೆಲ್ಲಾ ಕೆಲಸಗಳನ್ನು ಮಾಡಬೇಕು ಅನ್ನೋದರ ಬಗ್ಗೆಯೂ ಸ್ಪರ್ಧೆಯ ಸಂದರ್ಶನದಲ್ಲಿ ಕೇಳಲಾಗುತ್ತದೆ. ಅಂದರೆ ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಮತ್ತು ಗೆದ್ದವರು ಭವಿಷ್ಯದಲ್ಲಿ ಪರಿಸರದ ರಾಯಭಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ.
ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆ ಹೊಂದಿರುವ ಖುಷಿ
ಖುಷಿಯ ತಂದೆ ಏಕನಾಥ ಹೊಲಿಗೆ ಯಂತ್ರಗಳನ್ನಿಟ್ಟುಕೊಂಡಿದ್ದಾರೆ. ಹೊಲಿಗೆ ಕೆಲಸ ಮಾಡುವ ಇವರು ಅದನ್ನೇ ಕಾಯಕ ಮಾಡಿಕೊಂಡಿದ್ಧಾರೆ. ಇಂಥ ಮಧ್ಯಮ ವರ್ಗದ ಕುಟುಂಬದ ಕುಡಿಯೊಂದು ಇವತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದು, ಇದೀಗ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಹೋಗಲಿದೆ. ಇದು ಕೇವಲ ಆ ಕುಟುಂಬದವರಿಗಷ್ಟೇ ಅಲ್ಲ, ಇಡೀ ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆಯ ಸಂಗತಿಯೇ ಸರಿ.
ನಾನು ಆಯ್ಕೆಯಾಗಿದ್ದು ಬಹಳ ಖುಷಿಯಾಗಿದೆ -ಖುಷಿ ಟಿಕಾರೆ
ಇನ್ನು ಈ ಬಗ್ಗೆ ಟಿವಿ-9 ಡಿಜಿಟಲ್ಗೆ ಪ್ರತಿಕ್ರಿಯಿಸಿರುವ ಖುಷಿ ಟಿಕಾರೆ, ನಾನು ನನ್ನ ಹೆಮ್ಮೆಯ ದೇಶವನ್ನು ಪ್ರತಿನಿಧಿಸುತ್ತಿರುವುದು ಖುಷಿ ತಂದಿದೆ. ನೂರಾರು ಸ್ಪರ್ಧಿಗಳ ನಡುವೆ ನಮ್ಮ ದೇಶದಿಂದ ನಾನು ಆಯ್ಕೆಯಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಈ ಸಾಧನೆಗೆ ಕಾರಣರಾಗಿರುವ ನನ್ನ ತಂದೆ-ತಾಯಿಗೆ ಋಣಿಯಾಗಿದ್ದೇನೆ. ಇನ್ನು ಆರ್ಕಿಡ್ ಇಂಟರ್ ನ್ಯಾಷನಲ್ ಆರ್ಗನೈಜೇಶನ್ಗೂ ಅಭಾರಿಯಾಗಿದ್ದೇನೆ ಅಂತಾ ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಖುಷಿಯ ತಂದೆ ಏಕನಾಥ ಟಿಕಾರೆ, ಇದು ನಮಗೆಲ್ಲಾ ಹೆಮ್ಮೆಯ ಹಾಗೂ ಖುಷಿಯ ಸಂಗತಿ. ಆಕೆಗೆ ನಾವು ಖುಷಿ ಅಂತಾ ಹೆಸರಿಟ್ಟಾಗಲೇ ಆಕೆ ನಮ್ಮ ಬದುಕಲ್ಲಿ ಖುಷಿ ತರುತ್ತಾಳೆ ಅನ್ನುವ ಭರವಸೆ ಇತ್ತು. ಓದಿನಲ್ಲಿಯೂ ತುಂಬಾನೇ ಬುದ್ಧಿವಂತೆಯಾಗಿರುವ ಖುಷಿ, ಇಂಥ ಸ್ಪರ್ಧೆಯಲ್ಲಿಯೂ ಮುಂಚೂಣಿಯಲ್ಲಿರುವುದು ಎಂಥ ತಂದೆ-ತಾಯಿಗೂ ಖುಷಿ ತರುವ ವಿಚಾರವೇ ಸರಿ ಎನ್ನುತ್ತಾರೆ.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಧಾರವಾಡ
ಇದನ್ನೂ ಓದಿ: WhatsApp Feature: ವಾಟ್ಸ್ಆ್ಯಪ್ನಲ್ಲಿ ಬಂದಿದೆ ಹೊಸ ಬದಲಾವಣೆ: ನೀವು ಗಮನಿಸಿದ್ರಾ?
Published On - 1:15 pm, Tue, 7 December 21