ಧಾರವಾಡ ಅಂದ ಕೂಡಲೇ ಅನೇಕ ಚಿತ್ರಣಗಳು ಕಣ್ಣ ಮುಂದೆ ಬರುತ್ತವೆ. ಕವಿವಿ, ಕರ್ನಾಟಕ ಕಾಲೇಜು, ವಿದ್ಯಾವರ್ಧಕ ಸಂಘ, ಬೇಂದ್ರೆ ಮನೆ ಹೀಗೆ ಹಲವಾರು ಚಿತ್ರಣಗಳು ಕಣ್ಮುಂದೆ ಬರುತ್ತವೆ. ಇದರೊಂದಿಗೆ ಧಾರವಾಡ ಪೇಢಾ, ಖಡಕ್ ರೊಟ್ಟಿ ಸೇರಿದಂತೆ ಅನೇಕ ತಿನಿಸುಗಳು ಕೂಡ ಗಮನ ಸೆಳೆಯುತ್ತವೆ. ಇದರೊಂದಿಗೆ ಶುಭ ಸಮಾರಂಭಗಳಲ್ಲಿ ಪ್ರಮುಖವಾಗಿ ಗಮನ ಸೆಳೆಯುವುದು ಗೋಧಿ ಹುಗ್ಗಿ. ಈ ಹುಗ್ಗಿಯ ರುಚಿಯೇ ಬೇರೆ. ಅದರಲ್ಲೂ ಧಾರವಾಡದಲ್ಲಿ ಮಾಡುವ ಗೋಧಿ ಹುಗ್ಗಿ ರುಚಿ ಎಲ್ಲ ಕಡೆಗಳಿಗಿಂತಲೂ ವಿಭಿನ್ನ. ಆದರೆ ಹೀಗೆ ತಯಾರಾದ ಗೋಧಿ ಹುಗ್ಗಿ ಬಹಳ ದಿನಗಳವರೆಗೆ ಇರುವುದಿಲ್ಲ. ಇದೇ ಕಾರಣಕ್ಕೆ ಧಾರವಾಡದ ಕುಟುಂಬವೊಂದು ಇದಕ್ಕೆ ಹೊಸ ರೂಪ ನೀಡಿ, ಹಲವಾರು ತಿಂಗಳವರೆಗೆ ಕೆಡದಂತೆ ಇಡುವ ವ್ಯವಸ್ಥೆ ಮಾಡಿದೆ. ತಂತ್ರಜ್ಞಾನ ಹಾಗೂ ವಿಜ್ಞಾನಿಗಳ ಸಹಾಯದಿಂದ ಆರು ತಿಂಗಳ ಕಾಲ ಟಿನ್ನಲ್ಲಿ ಇಡುವಂಥ ಹುಗ್ಗಿಯನ್ನು ಸಿದ್ಧಪಡಿಸಿದೆ.
ಕಳೆದ 12 ವರ್ಷಗಳಿಂದ ಧಾರವಾಡದಲ್ಲಿ ನಡೆಯುವ ಸಭೆ-ಸಮಾರಂಭಗಳಿಗೆ ಊಟ ಮತ್ತು ಉಪಹಾರವನ್ನು ಒದಗಿಸುವ ಕೇಟರಿಂಗ್ ಸೇವೆಯಲ್ಲಿ ತೊಡಗಿರುವ ವೀರಭದ್ರಪ್ಪ ಲಟ್ಟಿ ಕುಟುಂಬದವರು ತಮ್ಮೊಂದಿಗೆ 20 ಜನರು ಖಾಯಂ ಕೆಲಸವನ್ನೂ ನೀಡಿದ್ದಾರೆ. ಸಭೆ-ಸಮಾರಂಭಗಳಿಗೆ ಉತ್ತಮ ಸೇವೆ ನೀಡುತ್ತಾ ಬಂದಿದ್ದಾರೆ. ಉತ್ತರ ಕರ್ನಾಟಕ ಭಾಗದ ಜನರು ತಮ್ಮ ಸಭೆ-ಸಮಾರಂಭಗಳಿಗೆ ಬಯಸುವ ಉಟವನ್ನು ಪೂರೈಸುತ್ತಿದ್ದಾರೆ. ಈ ಭಾಗದಲ್ಲಿನ ಸಿಹಿ ಖಾದ್ಯಗಳಾದ ಗೋಧಿ ಹುಗ್ಗಿ (ಬೆಲ್ಲವನ್ನು ಬಳಸಿ), ಪಾಯಸ ಮತ್ತು ಹೋಳಿಗೆಗಳನ್ನು ತಯಾರಿಸುತ್ತಿದ್ದಾರೆ. ಇದರೊಂದಿಗೆ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಚಪಾತಿ ತಯಾರಿಸುತ್ತಾ ಬಂದಿದ್ದಾರೆ. ಬದನೆಕಾಯಿ, ಹೆಸರು ಕಾಳು, ಕಡಲೆಕಾಳು ಪಲ್ಲೆ ಸೇರಿದಂತೆ ಆಯಾ ಹವಾಮಾನಕ್ಕೆ ತಕ್ಕಂತೆ ಪಲ್ಯಗಳನ್ನು ತಯಾರಿಸುತ್ತಾ ಬಂದಿದ್ದಾರೆ.
ಕೆಲವು ಸಂದರ್ಭಗಳಲ್ಲಿ ಸಭೆ-ಸಮಾರಂಭಗಳ ಆಯೋಜಕರಿಗೆ ಅರ್ಜೆಂಟಾಗಿ ಗೋಧಿ ಹುಗ್ಗಿ ಬೇಕಾಗಿರುತ್ತದೆ. ಎಲ್ಲ ಆಹಾರ ಪದಾರ್ಥಗಳನ್ನು ಕೆಲವು ತುರ್ತು ಸಂದರ್ಭಗಳಲ್ಲಿ ಸಿದ್ಧಪಡಿಸಬಹುದು. ಆದರೆ ಗೋಧಿ ಹುಗ್ಗಿಯನ್ನು ಮಾತ್ರ ತುರ್ತಾಗಿ ಸಿದ್ಧಪಡಿಸಲು ಸಾಧ್ಯವಾಗುವುದಿಲ್ಲ. ರುಚಿಕರವಾಗಿ ತಯಾರಿಸಬೇಕಾದರೆ ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಈ ಕಾರಣದಿಂದ ಸಾಕಷ್ಟು ಮುಂಚಿತವಾಗಿ ಗೋಧಿ ಹುಗ್ಗಿಯನ್ನು ಸಿದ್ಧಪಡಿಸಿ, ಸಂಗ್ರಹಿಸಿ, ಆಯೋಜಕರಿಗೆ ಒದಗಿಸಬೇಕು ಅನ್ನುವ ಕಾರಣಕ್ಕೆ ಧಾರವಾಡದ ಮದಿಹಾಳ ಬಡಾವಣೆಯ ವೀರಭದ್ರಪ್ಪ ಲಟ್ಟಿ ಅವರು ಬಹಳ ದಿನಗಳವರೆಗೆ ಯೋಚಿಸಿ, ಟಿನ್ ಗಳಲ್ಲಿ ಇದನ್ನು ಸಂಗ್ರಹಿಸಿಡಬಹುದಾದ ತಂತ್ರಜ್ಞಾನಕ್ಕಾಗಿ ಹಲವಾರು ಜನರ ಬಳಿ ಕೇಳಿದರು. ಈ ವೇಳೆ ಅವರ ಸಹಾಯಕ್ಕೆ ಬಂದಿದ್ದು ದೇಶಪಾಂಡೆ ಫೌಂಡೇಶನ್.
ದೇಶಪಾಂಡೆ ಫೌಂಡೇಶನ್‌ನ ನವೋದ್ಯಮಿಗಳ ಪರಿಚಯ ಕಾರ್ಯದ ಸಹಾಯದಿಂದ ಗೋಧಿ ಹುಗ್ಗಿಯ ಡಬ್ಬಿಯನ್ನು (ಟಿನ್) ಸಿದ್ಧಪಡಿಸಿ 2019 ರ ಜನವರಿಯಲ್ಲಿ ಪ್ರಾಯೋಗಿಕವಾಗಿ ಮೈಸೂರಿನ ಸಿ.ಎಫ್.ಟಿ.ಆರ್.ಐ. ಗೆ ( Central Food Reaserch Technologicla Institute) ನೀಡಲಾಯಿತು. ಇದೀಗ ಈ ಗೋಧಿ ಹುಗ್ಗಿಗೆ ಮಾನ್ಯತೆ ನೀಡಲಾಗಿದ್ದು, 6 ತಿಂಗಳವರೆಗೆ ಈ ಗೋದಿ ಹುಗ್ಗಿ ಅತ್ಯುತ್ತಮ ಸ್ಥಿತಿಯಲ್ಲಿಯೇ ಇರುತ್ತದೆ. ಈ ಅಧಿಕೃತ ಮಾನ್ಯತೆಯಿಂದಾಗಿ ಈ ಗೋಧಿ ಹುಗ್ಗಿಗೆ ಇದೀಗ ಮಾರುಕಟ್ಟೆ ಸಿಕ್ಕಂತಾಗಿದೆ.
ಗೋದಿ ಹುಗ್ಗಿಯ ವಿಶೇಷತೆ ಏನು?
ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಸಾಂಪ್ರದಾಯಿಕ ಆಹಾರ ಪದಾರ್ಥಗಳಿವೆ. ಅದರಲ್ಲಿ ಗೋಧಿ ಹುಗ್ಗಿ ಪ್ರಮುಖ. ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಗೋಧಿ ಹುಗ್ಗಿ ಪ್ರಮುಖ ಆಹಾರ. ಗೋಧಿಯನ್ನು ಕುಟ್ಟಿ, ಕುದಿಸಿ ನಂತರ ಅದಕ್ಕೆ ಬೆಲ್ಲ, ಏಲಕ್ಕಿ, ಗೋಡಂಬಿ, ಗಸಗಸೆ ಮಿಶ್ರಣ ಮಾಡಿ ಹುಗ್ಗಿಯನ್ನು ತಯಾರಿಸಲಾಗುತ್ತದೆ. ಹಾಲು ಮತ್ತು ತುಪ್ಪದೊಂದಿಗೆ ಈ ಗೋಧಿ ಹುಗ್ಗಿ ಸವಿಯುವುದೇ ಒಂದು ಹಬ್ಬ. ತುಂಬಾ ಪೋಷಕಾಂಶಗಳನ್ನು ಹೊಂದಿರುವ ಈ ಗೋಧಿ ಹುಗ್ಗಿಯನ್ನು ಪ್ರಮಖ ಹಬ್ಬಗಳಲ್ಲೂ ಮಾಡಲಾಗುತ್ತದೆ. ವಿಟಮಿನ್ ಎ, ಫಾಲಿಕ್ ಆ್ಯಸಿಡ್ ಇದರಲ್ಲಿ ಲಭ್ಯ. ಅಲ್ಲದೇ ಕಾಲು ಕೇಜಿಯಷ್ಟು ಗೋಧಿ ಹುಗ್ಗಿಯಲ್ಲಿ ಮನುಷ್ಯನಿಗೆ ಒಂದು ದಿನಕ್ಕೆ ಬೇಕಾಗುವ ಕಾಲು ಭಾಗದಷ್ಟು ಕ್ಯಾಲರಿ ಸಿಗುತ್ತದೆ. ಹೀಗಾಗಿ ಇದು ಆರೋಗ್ಯಕ್ಕೆ ತುಂಬಾನೇ ಉತ್ತಮ.
ಗೋಧಿ ಹುಗ್ಗಿ ಇದೀಗ ಕಾರ್ಖಾನೆಯಲ್ಲಿ ತಯಾರು
ಮುಚ್ಚಿದ ಡಬ್ಬಿಯಲ್ಲಿನ ಗೋಧಿ ಹುಗ್ಗಿಯ ಗುಣಮಟ್ಟವನ್ನು ತಜ್ಞರು ಪರೀಕ್ಷಿಸಿದ್ದಾರೆ. ಕೋಡ್ ಹಾಗೂ ಇನ್ನಿತರ ಕಾರಣಗಳಿಂದ ಈ ಕಾರ್ಯ ವಿಳಂಬವಾಯಿತು. 2021 ನೇ ವರ್ಷದ ಆರಂಭದಲ್ಲಿ ಬೆಳಗಾವಿ ರಸ್ತೆಯಲ್ಲಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಲಟ್ಟಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಗೋಧಿ ಹುಗ್ಗಿ ಉತ್ಪಾದನಾ ಘಟಕ ಆರಂಭಿಸಲಾಗಿದೆ. ಈ ಡಬ್ಬಿಯಲ್ಲಿನ ಗೋಧಿ ಹುಗ್ಗಿ ತಯಾರಿಸಿದ 6 ತಿಂಗಳ ನಂತರವೂ ತನ್ನ ಸ್ವಾದ ಕಾಯ್ದುಕೊಳ್ಳಲಿದೆ. ಹೀಗಾಗಿ ದೀರ್ಘಕಾಲದವರೆಗೆ ಸಿಹಿ ಆಹಾರ ಪದಾರ್ಥವಾಗಿ ಬಳಸಲು ಸೂಕ್ತವಾಗಿದೆ. ಇಂತಹ ಉತ್ತರ ಕರ್ನಾಟಕದ ಚಿರಪರಿಚಿತ ಗೋಧಿ ಹುಗ್ಗಿಗೆ ಸಿ.ಎಫ್.ಟಿ.ಆರ್.ಐ ನಿಂದ ಮಾನ್ಯತ ಸಿಗಲಿದೆ ಎಂಬ ವಿಶ್ವಾಸದಿಂದ ಘಟಕ ಕಾರ್ಯಾರಂಭ ಮಾಡಿದೆ. ಇದೀಗ ಸಿ.ಎಫ್.ಟಿ.ಆರ್.ಐನಿಂದ ಮಾನ್ಯತೆ ಕೂಡ ಲಭಿಸಿದೆ.
ಆನ್‌ಲೈನ್ ಮುಖಾಂತರ ಗ್ರಾಹಕರು ಗೋಧಿ ಹುಗ್ಗಿ ಪಡೆಯಬಹುದು. ಜೊತೆಗೆ ಡೀಲರ್ ಮತ್ತು ರಫ್ತುದಾರರ ಮೂಲಕ ಭಾರತ ಮಾತ್ರವಲ್ಲದೇ ಅಮೆರಿಕಾ, ಕೊಲ್ಲಿ ರಾಷ್ಟ್ರಗಳು, ದಕ್ಷಿಣ ಆಫ್ರಿಕ, ಸಿಂಗಪೂರ, ಹಾಂಕಾಂಗ್ ಮತ್ತಿತರ ದೇಶಗಳಲ್ಲಿನ ಗೋಧಿ ಹುಗ್ಗಿ ಪ್ರಿಯರನ್ನು ತಲುಪಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ಡಬ್ಬಿಯಲ್ಲಿರುವ 225 ಗ್ರಾಂನಷ್ಟು ಗೋಧಿ ಹುಗ್ಗಿಯನ್ನು ಓರ್ವ ವ್ಯಕ್ತಿ ಒಂದು ಸಲ ಸೇವಿಸಿದರೆ 20 ಗಂಟೆಗಳವರೆಗೆ ಹಸಿವು ನೀಗಿಸಿಕೊಳ್ಳಬಹುದಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ತಮ್ಮ ಬಿಡಾರಗಳಿಂದ ಬಹಳ ದಿನಗಳವರೆಗೆ ದೂರ ಉಳಿಯುವ ಭಾರತೀಯ ಸೈನಿಕರು ಕೂಡ ಸೇವಿಸಲು ಅನುಕೂಲ ಆಗಲಿದೆ.
ಈ ಹುಗ್ಗಿಯನ್ನು ಪಾರಂಪರಿಕ ಸ್ವಾದದಲ್ಲಿಯೇ ಸವಿಯಬಹುದು- ಎಚ್.ಎಸ್. ಸತೀಶ
ಇನ್ನು ಈ ಗೋಧಿ ಹುಗ್ಗಿ ಬಗ್ಗೆ ಟವಿ-9 ಡಿಜಿಟಲ್ ಜತೆಗೆ ಮಾತನಾಡಿದ ಸಿಎಫ್‌ಆರ್ಟಿಆರ್ ಆಹಾರ ಪ್ಯಾಕೇಜಿಂಗ್ ತಂತ್ರಜ್ಞಾನ ವಿಭಾಗದ ಮುಖ್ಯ ವಿಜ್ಞಾನಿ ಎಸ್.ಎಸ್. ಸತೀಶ, ಯಾವುದೇ ಆಹಾರವು ಬ್ಯಾಕ್ಟೀರಿಯಾಗಳ ಪ್ರವೇಶದಿಂದಾಗಿ ಕೆಲವು ಸಮಯ ಅಥವಾ ದಿನಗಳ ನಂತರದಲ್ಲಿ ಕೆಟ್ಟು ಹೋಗುತ್ತದೆ. ಆಹಾರವನ್ನು ಸರಿಯಾಗಿ ಸಂಸ್ಕರಣೆ ಮಾಡಿ ವೈಜ್ಞಾನಿಕವಾಗಿ ಪ್ಯಾಕಿಂಗ್ ಮಾಡಿದರೆ ವರ್ಷಗಳವರೆಗೂ ಕೆಡದಂತೆ ಇಡಬಹುದು. ಅದೇ ರೀತಿ ವೀರಭದ್ರಪ್ಪ ಲಟ್ಟಿ ಅವರ ಮನವಿ ಮೇರೆಗೆ ಗೋಧಿ ಹುಗ್ಗಿಯನ್ನು ಕೆಡದಂತೆ ಇಡಲು ಒಂದು ವರ್ಷ ಸಂಶೋಧನೆ ಮಾಡಲಾಗಿದ್ದು, ಅದರಲ್ಲಿ ಯಶಸ್ವಿಯಾಗಿದ್ದೇವೆ. ಈ ಆಹಾರದಲ್ಲಿ ಯಾವುದೇ ರಾಸಾಯನಿಕ ಬೆರೆಸದೇ ಇದುವುದು ವಿಶೇಷ. ರಸಾಯನಿಕ ಬಳಸದೇ ಸಹಜ ಸ್ಥಿತಿಯಲ್ಲಿಯೇ ಸಂಸ್ಕರಣೆ ಮಾಡಲಾಗಿದೆ. ಇದನ್ನು ಇಡಲು ರೆಫ್ರಿಜರೇಟರ್ ಸಹ ಅಗತ್ಯವಿಲ್ಲದೇ ಸಾಮಾನ್ಯ ವಾತಾವರಣದಲ್ಲಿಯೇ ಇಟ್ಟು ಹುಗ್ಗಿಯನ್ನು ಪಾರಂಪರಿಕ ಸ್ವಾದದಲ್ಲಿಯೇ ಸವಿಯಬಹುದು ಎಂದು ಮಾಹಿತಿ ನೀಡಿದರು.
ಪ್ರಸ್ತುತ ಸಂದರ್ಭದಲ್ಲಿ ಜಾಗತಿಕವಾಗಿ ಜನರು ಚದುರಿ ಹೋಗಿದ್ದಾರೆ. ತಾವಿದ್ದಲ್ಲಿಯೇ ತಮ್ಮ ಆಹಾರಗಳನ್ನು ಅದೇ ಸ್ವಾದದಲ್ಲಿ ಸೇವಿಸಲು ಇಂತಹ ತಂತ್ರಜ್ಞಾನ ಅನುಕೂಲವಾಗಿದೆ. ಆಹಾರಗಳ ಗುಣಮಟ್ಟ ಮತ್ತು ಸಂಶೋಧನೆಗಾಗಿ ತಮಿಳುನಾಡು ಮತ್ತು ಕೇರಳಗಳಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಉದ್ಯಮಿಗಳು ಸಿಎಫ್‌ಟಿಆರ್ ಸಂಪರ್ಕಿಸುತ್ತಾರೆ. ಆದ್ದರಿಂದ ಗೋಧಿ ಹುಗ್ಗಿ ಮಾತ್ರವಲ್ಲದೇ ಇದೇ ರೀತಿಯ ಸಾಂಪ್ರದಾಯಿಕ ಪದಾರ್ಥಗಳನ್ನು ಕೆಡದಂತೆ ಸಂಗ್ರಹಿಸಿ ಇಡುವ ಕಾರ್ಯ ಆಗಬೇಕಿದೆ. ಕರ್ನಾಟಕದ ಉದ್ಯಮಿಗಳು ಮುಂದೆ ಬಂದು ತಮ್ಮ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಬೇಕಿದೆ ಎಂದು ಹೇಳಿದರು.
ಹಲವಾರು ವರ್ಷಗಳ ಕನಸು ನನಸಾಗಿದೆ- ವೀರಭದ್ರಪ್ಪ ಲಟ್ಟಿ
ಇನ್ನು ಈ ಬಗ್ಗೆ ಟಿವಿ-9 ಡಿಜಿಟಲ್ ಜತೆಗೆ ಮಾತನಾಡಿದ ವೀರಭದ್ರಪ್ಪ ಲಟ್ಟಿ, ನನ್ನ ಹಲವಾರು ವರ್ಷಗಳ ಪ್ರಯತ್ನಕ್ಕೆ ಇದೀಗ ಫಲ ಸಿಕ್ಕಿದೆ ಇದೀಗ ನನ್ನ ಕನಸು ನನಸಾಗಿದೆ. ಬಹು ದಿನಗಳ ಬಾಳಿಕೆಯ ಗೋಧಿ ಹುಗ್ಗಿ ಲಭ್ಯತೆಯಿಂದಾಗಿ ಉತ್ತರ ಕರ್ನಾಟಕ ಭಾಗದ ಜನರು ಹೆಚ್ಚಿರುವ ಅಮೆರಿಕಾ, ಯರೋಪ ರಾಷ್ಟ್ರಗಳು, ಸಿಂಗಪೂರ, ಕೊಲ್ಲಿ ರಾಷ್ಟ್ರಗಳು ಸೇರಿದಂತೆ ಬೇರೆ ರಾಜ್ಯ ಅಥವಾ ಹೊರ ದೇಶಗಳಲ್ಲಿಯೂ ಗೋಧಿ ಹುಗ್ಗಿ ಪ್ರಿಯರಿಗೆ ತಲುಪಿಸಲು ಸಿದ್ಧತೆ ನಡೆದಿದೆ. ಅದಕ್ಕಿಂತ ಹೆಚ್ಚಾಗಿ ಒಂದು ಡಬ್ಬಿಯಲ್ಲಿರುವ 225 ಗ್ರಾಂ ಗೋದಿ ಹುಗ್ಗಿಯನ್ನು ಓರ್ವ ವ್ಯಕ್ತಿ ಒಂದು ಬಾರಿ ಸೇವಿಸಿದರೆ 20 ಗಂಟೆಗಳವರೆಗೆ ಹಸಿವು ನೀಗಿಸಿಕೊಳ್ಳಬಹುದು ಎಂದು ಸಂಶೋಧನೆಯಿಂದ ತಿಳಿದುಕೊಂಡಿದ್ದೇವೆ. ಬರುವ ದಿನಗಳಲ್ಲಿ ತಮ್ಮ ಬಿಡಾರಗಳಿಂದ ದೂರ ಇರುವ ಭಾರತೀಯ ಸೈನಿಕರಿಗೆ ಕೂಡ ಗೋಧಿ ಹುಗ್ಗಿಯನ್ನು ತಲುಪಿಸುವ ಯೋಚನೆಯೂ ಇದೆ ತಮಗಿದೆ ಎನ್ನುತ್ತಾರೆ.
ವಿಶೇಷ ವರದಿ: ನರಸಿಂಹಮೂರ್ತಿ ಪ್ಯಾಟಿ, ಹಿರಿಯ ವರದಿಗಾರ, ಟಿವಿ9 ಧಾರವಾಡ
ಇದನ್ನೂ ಓದಿ: ಧಾರವಾಡದಲ್ಲಿ ಒಮಿಕ್ರಾನ್ ಆತಂಕ: ಲಸಿಕೆ ಪಡೆಯಲು ಒಲವು ತೋರುತ್ತಿರುವ ಜನರು