ಶುಕ್ರವಾರ ವಿಧಾನ ಪರಿಷತ್ ದೈವಾರ್ಷಿಕ ಚುನಾವಣೆ: ಮತದಾನ ಹೇಗೆ ಮಾಡಬೇಕು? ವಿವರ ಇಲ್ಲಿದೆ

Karnataka Legislative Council Elections Voting : ಇತರೆ ಚುನಾವಣೆಗಳಿಗಿಂತ ವಿಧಾನ ಪರಿಷತ್ ಚುನಾವಣೆ ವಿಭಿನ್ನವಾಗಿ ನಡೆಯುತ್ತದೆ. ಇಲ್ಲಿ ಮತ ಯಂತ್ರಗಳ ಬಳಕೆ ಇಲ್ಲ. ಬದಲಿಗೆ, ಮತಪತ್ರದಲ್ಲಿ ಪ್ರಾಶಸ್ತ್ಯದ ಮತ ಚಲಾಯಿಸಲಾಗುತ್ತದೆ. ಇದು ಕೂಡ ನಿಗದಿತ ಮಾದರಿಯಲ್ಲಿ ಇರದಿದ್ದರೆ ಮತಪತ್ರವೇ ಅಸಿಂಧುವಾಗಿ ಬಿಡುತ್ತದೆ. ಹೀಗಾಗಿ ವಿಧಾನ ಪರಿಷತ್ ಚುನಾವಣೆಯ ಕಣದಲ್ಲಿರುವ ಅಭ್ಯರ್ಥಿಗಳು, ಅವರ ಬೆಂಬಲಿಗರು ಹಾಗೂ ಪಕ್ಷಗಳ ಮುಖಂಡರು ಭರದ ಪ್ರಚಾರದಲ್ಲಿ ತೊಡಗಿದ್ದಾರೆ.

ಶುಕ್ರವಾರ ವಿಧಾನ ಪರಿಷತ್ ದೈವಾರ್ಷಿಕ ಚುನಾವಣೆ: ಮತದಾನ ಹೇಗೆ ಮಾಡಬೇಕು? ವಿವರ ಇಲ್ಲಿದೆ
ನಾಳೆ ಶುಕ್ರವಾರ ವಿಧಾನ ಪರಿಷತ್ ದೈವಾರ್ಷಿಕ ಚುನಾವಣೆ : ಸಿದ್ಧತೆ, ಮತದಾನ ವಿಧಾನದ ವಿವರಗಳು ಇಲ್ಲಿವೆ

ಕರ್ನಾಟಕ ವಿಧಾನ ಪರಿಷತ್ತಿಗೆ ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ಚುನಾವಣಾ ಕಣದಲ್ಲಿ ಅಂತಿಮವಾಗಿ 10 ಅಭ್ಯರ್ಥಿಗಳು ಉಳಿದಿದ್ದಾರೆ. ಸಾರ್ವತ್ರಿಕ ಚುನಾವಣೆಗಳಿಗಿಂತ ವಿಧಾನ ಪರಿಷತ್ ಚುನಾವಣೆ ಭಿನ್ನವಾಗಿ ನಡೆಯುತ್ತದೆ. ಇಲ್ಲಿ ಮತ ಪತ್ರದಲ್ಲಿ ಪ್ರಾಶಸ್ತ್ಯ ಮತ ಚಲಾಯಿಸಬೇಕಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಮತಯಾಚನೆ ಜೊತೆಗೆ ಪ್ರಾಶಸ್ತ್ಯ ಮತ ಚಲಾಯಿಸುವ ಬಗ್ಗೆಯೂ ತಿಳಿಸುವುದು ಅನಿವಾರ್ಯವಾಗಿದೆ. ಎಲ್ಲಾ ಚುನಾವಣೆಗಳಲ್ಲೂ ಈಗ ಮತಯಂತ್ರ ಬಳಿಕೆ ಸಾಮಾನ್ಯವಾಗಿದೆ. ಕೆಲವು ಚುನಾವಣೆಗಳಲ್ಲಿ ಮತಪತ್ರದ ಬಳಕೆಯಾದರೂ ಆಯ್ಕೆಯ ಅಭ್ಯರ್ಥಿ ಹೆಸರು ಅಥವಾ ಚಿಹ್ನೆಯ ಮುಂದೆ ಮತಗಟ್ಟೆ ಅಧಿಕಾರಿ ಕೊಡುವ ಸೀಲ್ ಒತ್ತಿದರೆ ಆಯಿತು. ಆದರೆ ಪರಿಷತ್ ಚುನಾವಣೆಯಲ್ಲಿ ಮತದಾರ ತನ್ನ ಆಯ್ಕೆಯ ಅಭ್ಯರ್ಥಿಗೆ ಪ್ರಾಶಸ್ತ್ಯದ ಮತ ಚಲಾಯಿಸಬೇಕಾಗುತ್ತದೆ (Karnataka Legislative Council Biennial Elections 2021 Voting).

ಇತರೆ ಚುನಾವಣೆಗಳಿಗಿಂತ ವಿಧಾನ ಪರಿಷತ್ ಚುನಾವಣೆ ವಿಭಿನ್ನವಾಗಿ ನಡೆಯುತ್ತದೆ. ಇಲ್ಲಿ ಮತ ಯಂತ್ರಗಳ ಬಳಕೆ ಇಲ್ಲ. ಬದಲಿಗೆ, ಮತಪತ್ರದಲ್ಲಿ ಪ್ರಾಶಸ್ತ್ಯದ ಮತ ಚಲಾಯಿಸಲಾಗುತ್ತದೆ. ಇದು ಕೂಡ ನಿಗದಿತ ಮಾದರಿಯಲ್ಲಿ ಇರದಿದ್ದರೆ ಮತಪತ್ರವೇ ಅಸಿಂಧುವಾಗಿ ಬಿಡುತ್ತದೆ. ಹೀಗಾಗಿ ವಿಧಾನ ಪರಿಷತ್ ಚುನಾವಣೆಯ ಕಣದಲ್ಲಿರುವ ಅಭ್ಯರ್ಥಿಗಳು, ಅವರ ಬೆಂಬಲಿಗರು ಹಾಗೂ ಪಕ್ಷಗಳ ಮುಖಂಡರು ಭರದ ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ಜೊತೆಯಲ್ಲಿ ಇಲ್ಲಿ ಮತದಾನ ಬೇರೆ ರೀತಿಯಲ್ಲಿ ನಡೆಯುವುದರಿಂದ ಮತ ಹೇಗೆ ಚಲಾಯಿಸಬೇಕು ಎನ್ನುವುದನ್ನೂ ತಿಳಿಸುತ್ತಿರುವುದು ವಿಶೇಷವಾಗಿದೆ.

ಮತಪತ್ರ ಅಸಿಂಧುವಾದರೆ ಅಭ್ಯರ್ಥಿಗಳಿಗೆ ನಷ್ಟ

ವಿಧಾನ ಪರಿಷತ್ ಚುನಾವಣೆಯ ಮತದಾರರಲ್ಲಿ ಅನಕ್ಷರಸ್ಥರೂ ಇದ್ದಾರೆ. ಅಲ್ಲದೇ ಮೊದಲ ಬಾರಿಗೆ ಈ ವಿಧಾನದಲ್ಲಿ ಮತ ಚಲಾಯಿಸುವವರಿಗೆ ಗೊಂದಲವೂ ಆಗಬಹುದು. ಇದರಿಂದಾಗಿ ಪ್ರತಿಯೊಂದು ಮತಗಳು ಅಭ್ಯರ್ಥಿಗಳಿಗೆ ಅಮೂಲ್ಯವಾಗಿವೆ. ಒಂದು ವೇಳೆ ಮತ ಚಲಾವಣೆಯಲ್ಲಿ ವ್ಯತ್ಯಾಸವಾಗಿ ಮತಪತ್ರ ಅಸಿಂಧುವಾದರೆ ಅದು ಅಭ್ಯರ್ಥಿಗಳಿಗೇ ನಷ್ಟ. ಆದ್ದರಿಂದ ಮತದಾರರಲ್ಲಿ ಮತ ಚಲಾವಣೆಯ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ.

ಹೇಗೆ ಪ್ರಾಶಸ್ತ್ಯ ಮತ ಚಲಾವಣೆ?

ನಿರ್ದಿಷ್ಟ ಅಭ್ಯರ್ಥಿ ತನ್ನ ಆಯ್ಕೆ ಆಗಿದ್ದರೆ ಆ ಹೆಸರಿನ ಮುಂದೆ ಮತಗಟ್ಟೆ ಅಧಿಕಾರಿ ಕೊಡುವ ಪೆನ್‌ನಿಂದಲೇ 1 ಎಂದು ಬರೆಯಬೇಕಾಗುತ್ತದೆ. ಮತಪತ್ರದಲ್ಲಿ ಯಾವುದಾದರೂ ಒಂದು ಹೆಸರಿನ ಎದುರು ಮಾತ್ರ 1 ಎಂದು ನಮೂದಿಸಿರಬೇಕು. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಹೆಸರಿನ ಮುಂದೆ 1 ಎಂದಿದ್ದರೆ ಆ ಮತಪತ್ರವೇ ಅಸಿಂಧು ಆಗುತ್ತದೆ. ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳನ್ನು ಚುನಾಯಿಸಬೇಕಿದ್ದ ಪಕ್ಷದಲ್ಲಿ ಸಹ ಅಂಕಿ 1 ನ್ನು ಕೇವಲ ಒಬ್ಬನೇ ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಮಾತ್ರ ಗುರುತು ಹಾಕಬೇಕು.

ಮತದಾರ ಎರಡನೇ ಅಥವಾ ನಂತರದ ಪ್ರಾಶಸ್ತ್ಯಗಳನ್ನು ಸೂಚಿಸಬಹುದಾಗಿದೆ ಅಥವಾ ಸೂಚಿಸದೇ ಇರಬಹುದಾಗಿದೆ. ಪ್ರಾಶಸ್ತ್ಯವನ್ನು ಅಂಕಿಗಳ ಮೂಲಕ ಮಾತ್ರ ಎಂದರೆ 1, 2, 3, 4… ಇತ್ಯಾದಿ ಕ್ರಮದಲ್ಲಿ ಮಾತ್ರ ಗುರುತು ಹಾಕಬೇಕು. ಇದರ ಬದಲಾಗಿ ಒಂದು, ಎರಡು, ಮೂರು, ಇತ್ಯಾದಿ ಅಕ್ಷರಗಳ ರೂಪದಲ್ಲಿ ಬರೆಯಬಾರದು. ಅಲ್ಲದೇ ಅಂಕಿ 1 ನ್ನು ಮತ್ತು 2, 3 ಇತ್ಯಾದಿ ಅಂಕಿಗಳನ್ನು ಸಹ ಒಬ್ಬನೇ ಅಭ್ಯರ್ಥಿಯ ಹೆಸರಿನ ಮುಂದೆ ಗುರುತು ಹಾಕಿದರೆ ಅದು ಕೂಡ ಅಸಿಂಧುವಾಗುತ್ತದೆ.

ನೇರಳೆ ಇಂಕಿನ ಪೆನ್

ಮತಗಟ್ಟೆ ಅಧಿಕಾರಿ ಕೊಡುವ ನೇರಳೆ ಇಂಕಿನ ಪೆನ್‌ನಿಂದಲೇ ಮತದಾರ ಮತಪತ್ರದಲ್ಲಿ ತನ್ನ ಪ್ರಾಶಸ್ತ್ಯ ಮತವನ್ನು ನಮೂದಿಸಬೇಕು. 1 ನೇ ಪ್ರಾಶಸ್ತ್ಯ ನಮೂದಾಗಲೇ ಬೇಕು. ಕ್ರಮಬದ್ಧವಿಲ್ಲದ ಮತಪತ್ರ ಅಸಿಂಧು ಆಗುವುದರಿಂದ ಮತದಾರ ಎಚ್ಚರಿಕೆಯಿಂದ ಮತದಾನ ಮಾಡಬೇಕು. ಹೀಗಾಗಿ ಅಭ್ಯರ್ಥಿಗಳಿಗೆ ಹಾಗೂ ರಾಜಕೀಯ ಪಕ್ಷಗಳ ಮುಖಂಡರಿಗೂ ಮತದಾನದ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದೆ.

ಸಿಂಧು ಮತಪತ್ರಗಳು

– ಆಯ್ಕೆಯ ಒಬ್ಬ ಅಭ್ಯರ್ಥಿ ಹೆಸರಿನ ಮುಂದೆ ಮಾತ್ರ 1 ಎಂದು ಬರೆಯಬೇಕು – ಒಂದೇ ಆಯ್ಕೆಯ ಸಂಖ್ಯೆಯನ್ನು ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಮುಂದೆ ಬರೆಯುವಂತಿಲ್ಲ – ಮತ ಗುರುತು ಮಾಡಲು ಮತಗಟ್ಟೆ ಅಕಾರಿ ಕೊಡುವ ಪೆನ್ ಮಾತ್ರ ಬಳಸಬೇಕು – ಬ್ಯಾಲೆಟ್ ಪೇಪರ್‌ನಲ್ಲಿ ಹೆಸರು, ಸಹಿ, ಹೆಬ್ಬಟ್ಟು ಗುರುತು ಹಾಕುವಂತಿಲ್ಲ – ಆಯ್ಕೆಯ ಸಂಖ್ಯೆಗಳು ಅಂಕಿಯ ರೂಪದಲ್ಲೇ ಇರಬೇಕು. ಅಕ್ಷರದಲ್ಲಿ ಬರೆಯುವಂತಿಲ್ಲ

ಅಸಿಂಧು ಮತಪತ್ರ ಹೇಗೆ?

– ಮೊದಲ ಪ್ರಾಶಸ್ತ್ಯ ಮತ ದಾಖಲಿಸದಿದ್ದರೆ – ಪ್ರಾಶಸ್ತ್ಯಗಳನ್ನು ಅಂಕಿಗಳ ಬದಲಾಗಿ ಅಕ್ಷರಗಳಲ್ಲಿ ಬರೆದಿದ್ದರೆ – ಮತಪತ್ರದಲ್ಲಿ ಯಾವುದೇ ಚಿಹ್ನೆ ಅಥವಾ ಬರಹ ಇದ್ದರೆ – ಮತಗಟ್ಟೆ ಅಕಾರಿ ನೀಡಿದ ಪೆನ್ನಿನಿಂದ ಗುರುತು ಮಾಡದೇ ಬೇರೆ ಪೆನ್ನಿನಿಂದ ಗುರುತು ಮಾಡಿದ್ದರೆ -ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಮುಂದೆ ಒಂದೇ ಬಗೆಯ ಅಂಕಿ ನಮೂದಿಸಿದ್ದರೆ

ಇನ್ನು ಈ ಬಗ್ಗೆ ಟಿವಿ-9 ಡಿಜಿಟಲ್ ಜತೆಗೆ ಮಾತನಾಡಿದ ಚುನಾವಣೆಯ ಮಾಸ್ಟರ್ ಟ್ರೇನರ್ ಎಸ್. ಎನ್. ರುದ್ರೇಶ, ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರ ಅಭ್ಯರ್ಥಿಗಳಿಗೆ ಪ್ರಾಶಸ್ತ್ಯ ನೀಡುವ ಮೂಲಕ ತನ್ನ ಹಕ್ಕು ಚಲಾಯಿಸಬೇಕಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳಿಗೆ ಹಾಗೂ ರಾಜಕೀಯ ಪಕ್ಷಗಳ ಮುಖಂಡರಿಗೆ ಮತದಾನದ ಕುರಿತು ಸೂಕ್ತ ಮಾಹಿತಿ ನೀಡಲಾಗಿದೆ. ಹೀಗಾಗಿ ಮತದಾನವನ್ನು ಜಾಗೃತಿಯಿಂದ ಮಾಡಬೇಕು ಎನ್ನುತ್ತಾರೆ.

– ನರಸಿಂಹಮೂರ್ತಿ ಪ್ಯಾಟಿ, ಹಿರಿಯ ವರದಿಗಾರ, ಟಿವಿ 9, ಧಾರವಾಡ

Published On - 9:46 am, Thu, 9 December 21

Click on your DTH Provider to Add TV9 Kannada