ಧಾರವಾಡದಲ್ಲಿ ಒಮಿಕ್ರಾನ್ ಆತಂಕ: ಲಸಿಕೆ ಪಡೆಯಲು ಒಲವು ತೋರುತ್ತಿರುವ ಜನರು

ಜನರು ಕೊರೊನಾ ಹೋಗಿಯೇ ಬಿಟ್ಟಿತು ಅನ್ನುವ ಭಾವನೆಯಲ್ಲಿದ್ದರು. ಆದರೆ ಅದು ಅಷ್ಟು ಸುಲಭವಾಗಿ ಹೋಗುವದಲ್ಲ ಎನ್ನುವುದನ್ನು ಒಮಿಕ್ರಾನ್ ನಿರೂಪಿಸಿದೆ

ಧಾರವಾಡದಲ್ಲಿ ಒಮಿಕ್ರಾನ್ ಆತಂಕ: ಲಸಿಕೆ ಪಡೆಯಲು ಒಲವು ತೋರುತ್ತಿರುವ ಜನರು
ಪ್ರಾತಿನಿಧಿಕ ಚಿತ್ರ

ಧಾರವಾಡ: ದೇಶದಲ್ಲಿ ಇದೀಗ ಒಮಿಕ್ರಾನ್ ಆತಂಕ ಶುರುವಾಗಿದೆ. ವಿದೇಶಗಳಲ್ಲಿ ಒಮಿಕ್ರಾನ್ ಪ್ರಭೇದ ಸಾಕಷ್ಟು ಜೀವ ಹಾನಿ ಮಾಡಿದೆ. ಭಾರತಕ್ಕೆ ಒಮಿಕ್ರಾನ್ ಬರಬಾರದು ಎಂದು ಹಲವು ನಿರ್ಬಂಧಗಳನ್ನು ಜಾರಿ ಮಾಡಿದ್ದರೂ ಎಷ್ಟೇ ಕಷ್ಟಪಟ್ಟರೂ ಈಗಾಗಲೇ ಅದು ಎಂಟ್ರಿ ಕೊಟ್ಟಿದೆ. ಉಳಿದ ಪ್ರಭೇದಗಳಿಗಿಂತ ಒಮಿಕ್ರಾನ್ ಅತ್ಯಂತ ವೇಗವಾಗಿ ಹರಡುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಹಿಂದಿನ ದಿನಗಳಿಗಿಂತ ಬೇಗನೆ ಅನೇಕರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇದೆ. ಇದರ ಪರಿಣಾಮ ಧಾರವಾಡದಲ್ಲಿ ಲಸಿಕಾಕರಣದ ಮೇಲಾಗಿದೆ. ಇತ್ತೀಚಿನ ದಿನಗಳಲ್ಲಿ ಲಸಿಕಾಕರಣ ಜಿಲ್ಲೆಯಲ್ಲಿ ನಿಧಾನವಾಗಿ ಸಾಗಿತ್ತು. ಜನರು ಕೊರೊನಾ ಹೋಗಿಯೇ ಬಿಟ್ಟಿತು ಅನ್ನುವ ಭಾವನೆಯಲ್ಲಿದ್ದರು. ಆದರೆ ಅದು ಅಷ್ಟು ಸುಲಭವಾಗಿ ಹೋಗುವದಲ್ಲ ಎನ್ನುವುದನ್ನು ಒಮಿಕ್ರಾನ್ ನಿರೂಪಿಸಿದೆ. ಇದೇ ಕಾರಣಕ್ಕೆ ಧಾರವಾಡ ಜಿಲ್ಲೆಯಲ್ಲಿ ಇದೀಗ ಲಸಿಕೆ ಪಡೆಯಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸುಕತೆ ತೋರಿಸುತ್ತಿದ್ದಾರೆ. ಇದರಿಂದಾಗಿ ಜಿಲ್ಲಾಡಳಿತಕ್ಕೆ ಸಮಾಧಾನವಾದಂತಾಗಿದೆ.

ಒಮಿಕ್ರಾನ್ ವೈರಸ್ ರಾಜ್ಯಕ್ಕೆ ಎಂಟ್ರಿಕೊಟ್ಟ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇತ್ತೀಚೆಗೆ ಹಲವು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅದರಲ್ಲೂ ಒಮಿಕ್ರಾನ್ ವೈರಸ್ ಸುದ್ದಿ ಬರುತ್ತಿದ್ದಂತೆ ಇಲ್ಲಿಯವರೆಗೂ ಕೊರೊನಾ ಲಸಿಕೆಯ ಮೊದಲು ಡೋಸ್ ಪಡೆಯದವರು ಹಾಗೂ ಎರಡನೇ ಡೋಸ್ ಪಡೆಯಲು ನಿರ್ಲಕ್ಷ್ಯ ತೋರಿದವರು ಈಗ ಲಸಿಕೆ ಪಡೆಯಲು ಮುಂದಾಗಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಶೇ 93ರಷ್ಟು ಜನರು ಮೊದಲ ಡೋಸ್ ಪಡೆದರೆ, ಶೇ 61ರಷ್ಟು ಜನರು 2ನೇ ಡೋಸ್ ಪಡೆದಿದ್ದಾರೆ. ಕೊವಿಡ್ 3ನೇ ಅಲೆಯನ್ನು ತಡೆಯಲು ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಸರಕಾರ ಜಾರಿಗೊಳಿಸಿದೆ. ವಿವಿಧ ಸೌಲಭ್ಯ ಪಡೆಯಲು ಹಾಗೂ ಕೆಲವು ಸ್ಥಳಗಳ ಪ್ರವೇಶಕ್ಕೆ ಕೊವಿಡ್ ಲಸಿಕೆಯ ಎರಡೂ ಡೋಸ್ ಪಡೆದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಕೊವಿಡ್ ಲಸಿಕಾ ಕೇಂದ್ರಗಳತ್ತ ಮುಖ ಮಾಡಿದ್ದಾರೆ.

ಎರಡು ಡೋಸ್ ಕಡ್ಡಾಯ ಮಾಡಿರುವ ಆದೇಶವೂ ಕಾರಣ ಕೆಲ ಸ್ಥಳಗಳನ್ನು ಪ್ರವೇಶಿಸಲು ಎರಡು ಡೋಸ್ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾಲ್​ಗಳು, ಚಿತ್ರಮಂದಿರಗಳಿಗೆ ತೆರಳಲು ಎರಡು ಡೋಸ್ ಕಡ್ಡಾಯ ಮಾಡಿ ಸರಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಅನಿವಾರ್ಯವಾಗಿ ಜನರು ಎರಡನೇ ಡೋಸ್ ಮೊರೆ ಹೋಗಬೇಕಾಗಿದೆ. ಇನ್ನು ಸರ್ಕಾರಿ ನೌಕರರು ಸೇರಿದಂತೆ ಶಾಲಾ-ಕಾಲೇಜುಗಳ ಪೋಷಕರಿಗೆ ಎರಡು ಡೋಸ್ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಲಸಿಕಾಕರಣ ಹೆಚ್ಚಾಗಲು ಈ ಅಂಶಗಳು ಸಹ ಕಾರಣವಾಗಿದೆ. ಜಿಲ್ಲೆಯಲ್ಲಿ ಸಂಭಾವ್ಯ ಕೊವಿಡ್ ಮೂರನೇ ಅಲೆಯ ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷೆ ಹಾಗೂ ಲಸಿಕೆಗೆ ಆದ್ಯತೆ ನೀಡಲಾಗಿದೆ.

ಎರಡನೇ ಡೋಸ್‌ಗೆ ಹೆಚ್ಚಿದ ಬೇಡಿಕೆ ಕೊವಿಡ್ ಎರಡನೇ ಅಲೆಯು ನಿಯಂತ್ರಣಕ್ಕೆ ಬಂದ ಬಳಿಕ ಹಲವರು ಅವಧಿ ಮುಗಿದ್ದಿದ್ದರೂ ಎರಡನೇ ಡೋಸ್ ಪಡೆದಿರಲಿಲ್ಲ. ರಾಜ್ಯದಲ್ಲಿ ಒಮಿಕ್ರಾನ್ ಪತ್ತೆಯಾದ ಬಳಿಕ ಹಾಗೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ನಂತರ ಕೊವಿಡ್ ಲಸಿಕೆಯ ಎರಡನೇ ಡೋಸ್ ಪಡೆದುಕೊಳ್ಳುವವರ ಸಂಖ್ಯೆ ಜಿಲ್ಲೆಯಲ್ಲಿಯೂ ಅಧಿಕಗೊಂಡಿದೆ. ವೈರಾಣುವಿನ ವಿರುದ್ಧ ಹೋರಾಡಲು ಪ್ರತಿಯೊಬ್ಬರೂ ಎರಡೂ ಡೋಸ್ ಪಡೆದುಕೊಳ್ಳಬೇಕು. ಅದಕ್ಕಾಗಿಯೇ ಜಿಲ್ಲೆಯಲ್ಲಿ ಪ್ರಮುಖ ಸಾರ್ವಜನಿಕ ಸ್ಥಳಗಳೂ ಸೇರಿ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಕೊವಿಡ್ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಇನ್ನು ಕೆಲವೆಡೆ ಮನೆ ಮನೆಗೆ ತೆರಳಿ ಲಸಿಕೆ ಹಾಕಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಶವಂತ ಮದೀನಕರ್.

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಎರಡನೇ ಡೋಸ್ ಲಸಿಕೆ ಪಡೆಯುವವರ ಸಂಖ್ಯೆ ಅಧಿಕವಾಗಿದೆ. ಶೇ 61ರಷ್ಟು ಜನರು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ವಾರದಲ್ಲಿ ಹೆಚ್ಚಿನ ಜನರು ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಇಲ್ಲಿಯವರೆಗೆ ಒಟ್ಟು 8,94,093 ಜನರು ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಅದರಂತೆ 13,50,522 ಜನರು ಮೊದಲ ಡೋಸ್ ಪಡೆದಿದ್ದಾರೆ. ಜಿಲ್ಲೆಯ ಲಸಿಕಾಕರಣದಲ್ಲಿ ಶೇ 93ರಷ್ಟು ಸಾಧನೆಯಾಗಿದೆ.

ಕೊರೊನಾ ಲಸಿಕೆ ಪಡೆಯುವಂತೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಬಹುತೇಕ ಜನರು ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಮೊದಲ ಡೋಸ್ ಲಸಿಕೆ ಪಡೆಯಲು ಮುಂದಾಗುತ್ತಿಲ್ಲ. ಇದಕ್ಕೆ ಹೋಲಿಕೆ ಮಾಡಿದರೆ ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಜನರು ಭಯ ಮುಕ್ತರಾಗಿ ಲಸಿಕೆ ಪಡೆಯಲು ಆಗಮಿಸುತ್ತಿದ್ದಾರೆ. ನಗರ ಪ್ರದೇಶದಲ್ಲಿಯೂ ಜನರು ನಿರ್ಭೀತಿಯಿಂದ ಲಸಿಕೆ ಪಡೆಯಲು ಆಗಮಿಸಬೇಕು ಎಂಬುದು ಆರೋಗ್ಯ ಇಲಾಖೆಯ ಮನವಿಯಾಗಿದೆ.

ಲಸಿಕೆಗೆ ನಿರ್ಲಕ್ಷ್ಯ ಬೇಡ: ಡಾ.ಎಸ್.ಎಂ.ಹೊನಕೇರಿ ಜಿಲ್ಲೆಯ ಲಸಿಕಾಕರಣದ ಬಗ್ಗೆ ಟಿವಿ-9 ಡಿಜಿಟಲ್ ಜತೆಗೆ ಮಾತನಾಡಿದ ಜಿಲ್ಲಾ ಆರ್​ಸಿಎಚ್ ಅಧಿಕಾರಿ ಡಾ.ಎಸ್.ಎಂ.ಹೊನಕೇರಿ, ಕೊರೊನಾ ರೂಪಾಂತರಿ ವೈರಸ್ ತಡೆಯಲು ಲಸಿಕೆ ಪಡೆಯುವುದೇ ಪರಿಹಾರ. ಹೀಗಾಗಿ ಕಳೆದ ಒಂದು ವಾರದಿಂದ ಮೊದಲ ಹಾಗೂ ಎರಡನೇ ಡೋಸ್ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಎಲ್ಲರೂ ಆದ್ಯತೆ ಮೇರೆಗೆ ಲಸಿಕೆ ಪಡೆಯಬೇಕು. ಕೊರೊನಾದಿಂದ ದೂರವಿರಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

(ವರದಿ: ನರಸಿಂಹಮೂರ್ತಿ ಪ್ಯಾಟಿ)

ಇದನ್ನೂ ಓದಿ: ಒಮಿಕ್ರಾನ್ ಸೋಂಕಿತ ವಿದೇಶಕ್ಕೆ ಪರಾರಿ ಪ್ರಕರಣ; ಆಫ್ರಿಕಾ ಪ್ರಜೆ, ಶಾಂಗ್ರಿ-ಲಾ ಆಡಳಿತ ಮಂಡಳಿ ವಿರುದ್ಧ ಎಫ್ಐಆರ್ ದಾಖಲು ಇದನ್ನೂ ಓದಿ: ಒಮಿಕ್ರಾನ್​​ನಿಂದ ಭಾರತದಲ್ಲಿ ಕೊವಿಡ್​ 19 ಮೂರನೇ ಅಲೆ ಆತಂಕ; ಐಎಂಎಯಿಂದ ಎಚ್ಚರಿಕೆ

Click on your DTH Provider to Add TV9 Kannada