ಧಾರವಾಡ: ಯಾರದ್ದೋ ದುಡ್ಡು, ಯಲ್ಲಮ್ಮನ ಜಾತ್ರೆ ಎಂಬ ಮಾತಿದೆ. ಯಾರದ್ದೋ ದುಡ್ಡಿನಲ್ಲಿ ಮೋಜು-ಮಸ್ತಿ ಮಾಡುವವರನ್ನು ಕಂಡು ಈ ಮಾತು ರೂಢಿಯಲ್ಲಿ ಬಂದಿದೆ. ಇಂಥ ಮಾತಿಗೆ ಧಾರವಾಡದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಆದರೆ ಇಲ್ಲಿ ದುಡ್ಡು ಸಿಗೋದಕ್ಕೂ ಮುನ್ನಾ ಖದೀಮರ ಮರ್ಮ ಗೊತ್ತಾಗಿ, ಅವರೆಲ್ಲಾ ಸಿಕ್ಕಿಬಿದ್ದಿದ್ದಾರೆ. ಬ್ಯಾಂಕ್ ನ ಮ್ಯಾನೇಜರ್ ಕೊಂಚ ಯಾಮಾರಿದ್ದರೂ ಖದೀಮರ ದಂಡು ಕೋಟಿ ಕೋಟಿ ರೂಪಾಯಿ ಹಣವನ್ನು ಎಗರಿಸಿಕೊಂಡು ಪರಾರಿಯಾಗುತ್ತಿತ್ತು. ಆದರೆ ಹಾಗಾಗಲಿಲ್ಲ ಅನ್ನುವುದೇ ಸಮಾಧಾನದ ಸಂಗತಿ. ಅಷ್ಟಕ್ಕೂ ಇದೆಲ್ಲ ನಡೆದಿದ್ದು ಧಾರವಾಡದಲ್ಲಿ
ಎರಡು ದಿನಗಳ ಹಿಂದೆ ಧಾರವಾಡ ನಗರದ ಎನ್.ಟಿ.ಟಿ.ಎಫ್. ಬಳಿಯ ಎಚ್.ಡಿ.ಎಫ್.ಸಿ. ಬ್ಯಾಂಕ್ ಶಾಖೆಗೆ ಕೆಲವರು ಬರುತ್ತಾರೆ. ಅದರಲ್ಲಿ ಓರ್ವ ಮಹಾರಾಷ್ಟ್ರದ ಸಾಂಗ್ಲಿ ಮೂಲದವ. ಆತ ನೇರವಾಗಿ ಬಂದು ಕೌಂಟರ್ನ ಸಿಬ್ಬಂದಿಗೆ ಒಂದು ಚೆಕ್ ನೀಡುತ್ತಾನೆ. ಆ ಚೆಕ್ ನೋಡಿ ಬ್ಯಾಂಕ್ ಸಿಬ್ಬಂದಿ ಅಚ್ಚರಿಗೊಳ್ಳುತ್ತಾರೆ. ಏಕೆಂದರೆ ಅದರಲ್ಲಿ ಬರೆದಿದ್ದ ಮೊತ್ತ ಬರೋಬ್ಬರಿ 2.5 ಕೋಟಿ ರೂಪಾಯಿ. ಚೆಕ್ನಲ್ಲಿ ನಮೂದಾಗಿದ್ದ ಭಾರೀ ಮೊತ್ತವನ್ನು ನೋಡಿಯೇ ಬ್ಯಾಂಕ್ ಸಿಬ್ಬಂದಿಗೆ ಡೌಟು ಬಂದಿದೆ. ಸಿಬ್ಬಂದಿ ಕೂಡಲೇ ಈ ವಿಚಾರವನ್ನು ಬ್ಯಾಂಕ್ ಮ್ಯಾನೇಜರ್ ಗಮನಕ್ಕೆ ತಂದಿದ್ದಾರೆ. ಆ ವ್ಯಕ್ತಿಯನ್ನು ನೋಡಿದ ಬ್ಯಾಂಕ್ ಮ್ಯಾನೇಜರ್ಗೂ ಕೂಡ ಅನುಮಾನ ಬಂದಿದೆ. ಕೊಂಚ ಹೊತ್ತು ಕಾಯಲು ಸೂಚಿಸಿದ ಮ್ಯಾನೇಜರ್ ನೇರವಾಗಿ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಧಾರವಾಡ ನಗರ ಠಾಣೆ ಪೊಲೀಸರು ವ್ಯಕ್ತಿಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯ ವರ್ತನೆಯಿಂದ ಅನುಮಾನಗೊಂಡು ಕೂಡಲೇ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಆ ಚೆಕ್ ಈತನದ್ದು ಅಲ್ಲವೇ ಅಲ್ಲ ಅನ್ನುವುದು ಕೂಡ ವಿಚಾರಣೆ ವೇಳೆ ಗೊತ್ತಾಗಿದೆ. ಅಲ್ಲದೇ ಈತನ ಹೆಸರು ಯುವರಾಜ ಬಿರಾದಾರ್ ಅನ್ನುವುದು ತಿಳಿದು ಬಂದಿದೆ. ಈತ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಖಾನ್ಭಾಗ್ ಪ್ರದೇಶದ ವ್ಯಕ್ತಿ ಅನ್ನುವುದು ತಿಳಿದುಬಂದಿದೆ.
ಬ್ಯಾಂಕ್ ಸಿಬ್ಬಂದಿ ಕೊಂಚ ಯಾಮಾರಿದ್ದರೂ ಸಾಕಿತ್ತು ಯುವರಾಜ ಬಿರಾದಾರ ಎರಡೂವರೆ ಕೋಟಿ ರೂಪಾಯಿಯನ್ನು ತನ್ನದಾಗಿಸಿಕೊಂಡು ಹೋಗುತ್ತಿದ್ದ. ಅಲ್ಲದೇ ಆತನೊಬ್ಬನೇ ಈ ಕುತಂತ್ರದ ಹಿಂದೆ ಇದ್ದವನಲ್ಲ. ಇನ್ನೂ ಅನೇಕರು ಕೂಡ ಈ ಕುತಂತ್ರದ ಹಿಂದೆ ಇರೋದು ವಿಚಾರಣೆ ವೇಳೆ ತಿಳಿದು ಬಂದಿದೆ. ಪೊಲೀಸರು ವಿಚಾರಣೆ ನಡೆಸಿದ ಬಳಿಕ ಈ ಪ್ರಕರಣದಲ್ಲಿ ಒಟ್ಟು ಈತನನ್ನು ಸೇರಿಸಿ 11 ಜನರಿದ್ದಾರೆ. ಎಲ್ಲರೂ ಸೇರಿ ಬೇರೆಯವರ ಚೆಕ್ಒಂದನ್ನು ತಮ್ಮದೇ ಚೆಕ್ ಅನ್ನುವಂತೆ ಬಳಸಿಕೊಂಡು ನಗದು ಪಡೆಯಲು ಯೋಜನೆ ರೂಪಿಸಿದ್ದರು. ಆದರೆ ಬ್ಯಾಂಕ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅದು ಸಾಧ್ಯವಾಗಿಲ್ಲ.
ಬ್ಯಾಂಕ್ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಬಯಲಾಯ್ತು ವಂಚನೆ ಜಾಲ
ಈ ಎರಡೂವರೆ ಕೋಟಿ ರೂಪಾಯಿ ಚೆಕ್ ಪಂಜಾಬ್ ಮೂಲದ ಬೆಹರಿಲಾಲ್ ಇಸ್ಪಾಟ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸೇರಿದ್ದು. ಅದ್ಹೇಗೋ ಇತ್ತೀಚೆಗೆ ಈ ಖಾಲಿ ಚೆಕ್ ಕಳೆದಿತ್ತು. ಅದು ಹೇಗೋ ನವೀನ್ ಕುಮಾರ್ ಅನ್ನೋ ವ್ಯಕ್ತಿ ಕೈಗೆ ಸಿಕ್ಕಿತ್ತು. ಆತ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಖಾನ್ಭಾಗ್ ಭಾಗದ ಯುವರಾಜ್ ಬಿರಾದಾರ ಎಂಬ ವ್ಯಕ್ತಿಯನ್ನು ಸಂಪರ್ಕಿಸುತ್ತಾನೆ. ಇಂಥ ಅನೇಕ ಪ್ರಕರಣಗಳನ್ನು ಅದಾಗಲೇ ನಿಭಾಯಿಸಿದ್ದ ಈ ತಂಡಕ್ಕೆ ಈ ದೊಡ್ಡ ಮೊತ್ತ ಸಿಕ್ಕುಬಿಟ್ಟಿದ್ದರೆ ಅವರ ಬದುಕೇ ಬೇರೆ ಆಗಿ ಹೋಗುತ್ತಿತ್ತು. ಆದರೆ ಇಲ್ಲಿ ಹಾಗೆ ಆಗಲಿಲ್ಲ. ನವೀನ್ ಕುಮಾರ್, ಯುವರಾಜ್ ಸೇರಿದಂತೆ ಒಟ್ಟು 11 ಜನರು ಸೇರಿ ಈ ಚೆಕ್ ನ್ನು ಹೇಗೆ ಬಳಸಿಕೊಳ್ಳಬಹುದು ಅನ್ನೋದರ ಬಗ್ಗೆ ಯೋಚನೆ ಮಾಡುತ್ತಾರೆ. ಈ ಅವರಿಗೆ ಕರ್ನಾಟಕದ ಐವರು ಸಹಾಯಕ್ಕೆ ಬಂದಿದ್ದಾರೆ. ಅವರ ಸಹಾಯದಿಂದಲೇ ಧಾರವಾಡಕ್ಕೆ ಬಂದಿದ್ದ ಯುವರಾಜ್ ಚೆಕ್ ಹಿಡಿದುಕೊಂಡು ಬ್ಯಾಂಕ್ ಕೌಂಟರ್ಗೆ ಬಂದು ಹಣ ಡ್ರಾ ಮಾಡಿಕೊಳ್ಳಲು ಮುಂದಾಗಿದ್ದಾನೆ. ಆಗ ಬ್ಯಾಂಕ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಸಿಕ್ಕಿಬಿದ್ದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವರಾಜ ಸೇರಿದಂತೆ ನವೀನ್ ಕುಮಾರ, ಜಾಕ್ಮೆನ್ ಹಣಗಿ, ನಿಜಲಿಂಗಪ್ಪ ಪಾಟೀಲ್, ದತ್ತಾತ್ರೇಯ ಮಾಳಿ, ಅಜೇಯ ಕುಮಾರ್ ಕರ್ಜೆ, ಮಹಮ್ಮದ್ ಮುಜಿಲ್, ರಮೇಶ ಮುರಗೋಡ, ಗೋವಿಂದಪ್ಪ ಹೂಗಾರ ಎಂಬುವವರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳಾದ ವೆಂಕಟರೆಡ್ಡಿ ಹಾಗೂ ಆರೀಫ್ ಎಂಬುವವರು ಪರಾರಿಯಾಗಿದ್ದಾರೆ.
ಅತಿ ಜಾಣರಾಗಲು ಹೋಗಿ ಸಿಕ್ಕಿಬಿದ್ದರು
ಖಾಲಿ ಚೆಕ್ ಸಿಕ್ಕ ಕೂಡಲೇ ಅದರ ಹಿಂದೆ ಬಿದ್ದ ಈ ತಂಡಕ್ಕೆ ಅದು ಎಲ್ಲಿಯದು ಅನ್ನುವುದು ಗೊತ್ತಾಗಿದೆ. ಅಲ್ಲದೇ ಉಳಿದ ಚೆಕ್ಗಳಲ್ಲಿನ ಸಹಿಗಳನ್ನು ಕೂಡ ಪತ್ತೆಹಚ್ಚಿದ್ದಾರೆ. ಅಲ್ಲದೇ ಖಾತೆಯಲ್ಲಿ ಹಣ ಎಷ್ಟಿದೆ ಅನ್ನುವದರ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ. ಬಳಿಕ ಯುವರಾಜ್ ತನ್ನ ಹೆಸರನ್ನು ಅದರಲ್ಲಿ ಬರೆದುಕೊಂಡು, ತಾನೇ ಖಾತಾದಾರನ ಸಹಿಯನ್ನು ಮಾಡಿದ್ದಾನೆ. ಆದರೆ ಅದು ಅಷ್ಟು ಸರಿಯಾಗಿ ಆಗಿರಲಿಲ್ಲ. ಅಲ್ಲದೇ ಚೆಕ್ ಕಳೆಯುತ್ತಿದ್ದಂತೆಯೇ ಕಂಪನಿಯ ಮಾಲಿಕ ಬ್ಯಾಂಕ್ಗೆ ದೂರು ನೀಡಿದ್ದ. ಹೀಗಾಗಿ ಯಾವಾಗ ಈ ಚೆಕ್ ನಂಬರ್ ಎಂಟ್ರಿ ಮಾಡಲಾಯಿತೋ ಒಂದು ಕಡೆ ಸಹಿ ಬದಲಾಗಿರೋದು ಕಂಡು ಬಂದರೆ, ಮತ್ತೊಂದು ಕಡೆ ಈ ಚೆಕ್ ಕಳೆದಿರೋದಾಗಿ ಅದನ್ನು ಲಾಕ್ ಮಾಡಿರುವುದು ತಿಳಿದು ಬಂದಿದೆ. ಅದನ್ನು ನೇರವಾಗಿ ಈ ಖದೀಮರಿಗೆ ಹೇಳಿದ್ದರೆ ಅವರು ಅದನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿ ಬಿಡುತ್ತಿದ್ದರು. ಆದರೆ ಬ್ಯಾಂಕ್ ಸಿಬ್ಬಂದಿ ಜಾಣತನದಿಂದ ಹಣವನ್ನು ನೀಡೋದಾಗಿ ಹೇಳಿ, ಕೂಡಲೇ ನಗರ ಠಾಣೆಯವರಿಗೆ ಕರೆ ಮಾಡಿದ್ದಾರೆ. ಕೂಡಲೇ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಎಲ್ಲವೂ ಹೊರಗೆ ಬಂದಿದೆ.
9 ಜನರ ಬಂಧನವಾಗಿದೆ
ಇನ್ನು ಈ ಬಗ್ಗೆ ಟಿವಿ-9 ಡಿಜಿಟಲ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ರಾಮರಾಜನ್, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರ ವಿರುದ್ಧ ಧಾರವಾಡ ನಗರ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ. ಅದರಲ್ಲಿ 9 ಜನರನ್ನು ಬಂಧಿಸಲಾಗಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಅವರನ್ನು ಕೂಡ ಬಂಧಿಸಲು ಜಾಲ ಬೀಸಲಾಗಿದೆ. ಈ ಮುಂಚೆಯೂ ಇಂಥ ಪ್ರಕರಣಗಳಲ್ಲಿ ಈ ತಂಡ ಭಾಗಿಯಾಗಿರುವ ಕುರಿತು ತನಿಖೆ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.
ವರದಿ: ನರಸಿಂಹಮೂರ್ತಿ ಪ್ಯಾಟಿ
ಟಿವಿ9, ಧಾರವಾಡ
ಇದನ್ನೂ ಓದಿ:
ಧಾರವಾಡದಲ್ಲಿ ಅಪ್ಘಾನಿಸ್ತಾನದ ವಿದ್ಯಾರ್ಥಿಗಳು; ತಾಯ್ನಾಡಿನ ದುಸ್ಥಿತಿ, ಕುಟುಂಬದವರನ್ನು ನೆನೆದು ಕಣ್ಣೀರು
ಧಾರವಾಡ: ವಿಭಿನ್ನ ಬಗೆಯಲ್ಲಿ ವಿಮಾ ಹಣ ಲೂಟಿ: ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದ ಘಟನೆ
(Dharwad checkbook fraud police arrest 9 people)
Published On - 9:50 pm, Fri, 20 August 21