ಧಾರವಾಡ: ವಿಭಿನ್ನ ಬಗೆಯಲ್ಲಿ ವಿಮಾ ಹಣ ಲೂಟಿ: ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದ ಘಟನೆ
ಈ ಅಕ್ರಮದ ಬಗ್ಗೆ ಗ್ರಾಮದ ನಾಗಾನಂದ ಗುಂಡಗೋವಿ ಎನ್ನುವ ವ್ಯಕ್ತಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಧಾರವಾಡ ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ಅವರು ಅಧಿಕಾರಿಗಳಿಗೆ ಈ ಬಗ್ಗೆ ತನಿಖೆ ಮಾಡಲು ಸೂಚಿಸಿದ್ದಾರೆ.
ಧಾರವಾಡ: ಅಕ್ರಮಗಳಿಗೆ ಕಡಿವಾಣ ಹಾಕಲು ಸರಕಾರ ಎಷ್ಟೇ ಹೊಸ ಹೊಸ ಬಗೆಯ ತಂತ್ರಜ್ಞಾನದ ಮೊರೆ ಹೋದರೂ, ಅಕ್ರಮವೆಸಗುವವರು ಮಾತ್ರ ಬೇರೆ ಬೇರೆ ದಾರಿ ಮೂಲಕ ಹಣ ನುಂಗುವ ಕೆಲಸ ಮಾಡುತ್ತಲೇ ಇರುತ್ತಾರೆ. ಸರಕಾರ ಚಾಪೆ ಕೆಳಗೆ ನುಸುಳಿದರೆ, ಅಕ್ರಮವೆಸಗುವವರು ರಂಗೋಲಿ ಕೆಳಗೆ ನುಸುಳುತ್ತಾರೆ. ಇದಕ್ಕೆ ಉದಾಹರಣೆ ಅಂದರೆ ಧಾರವಾಡದಲ್ಲಿ ನಡೆದಿರುವ ಘಟನೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನೇ ತಮಗೆ ಬೇಕಾದಂತೆ ಬಳಸಿಕೊಂಡು, ಹಣ ಲೂಟಿ ಮಾಡಿರುವ ಘಟನೆ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ನಡೆದಿದೆ.
ಸರಕಾರಿ ಭೂಮಿಯನ್ನೇ ತಮ್ಮ ಭೂಮಿ ಎಂದು ತೋರಿಸಿದ ಭೂಪರು ಅತಿವೃಷ್ಟಿ ಮತ್ತು ಅನಾವೃಷ್ಟಿಯ ಸಂದರ್ಭಗಳಲ್ಲಿ ರೈತರಿಗೆ ಬೆಳೆ ನಷ್ಟವಾದರೆ, ಅದಕ್ಕೊಂದು ಸಹಾಯ ಧನ ನೀಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಫಸಲ್ ಬಿಮಾ ವಿಮೆ ಯೋಜನೆ ಜಾರಿಯಲ್ಲಿದೆ. ರೈತರು ತಮ್ಮ ಹೊಲದಲ್ಲಿನ ಬೆಳೆಯ ದಾಖಲೆಗಳನ್ನು ನೀಡಿ, ವಿಮೆಯ ಕಂತು ತುಂಬಿ ಈ ಯೋಜನೆಗೆ ಫಲಾನುಭವಿ ಆಗುವುದು ಸಾಮಾನ್ಯ. ಇತ್ತೀಚೆಗಂತೂ ಎಲ್ಲವೂ ಡಿಜಿಟಲೀಕರಣ ಆದ ಬಳಿಕ ಆಯಾ ರೈತರ ಜಮೀನಿನ ಬೆಳೆಯ ಸಮೀಕ್ಷೆ ಕರಾರುವಕ್ಕಾಗಿಯೇ ನಡೆಯುತ್ತಿದೆ. ಆದರೆ ಮನಗುಂಡಿ ಗ್ರಾಮದ ಕೆಲವರು ಸರ್ಕಾರದ ಜಮೀನಿನ ಮೇಲೆ ತಮ್ಮ ಹಕ್ಕು ಸಾಧಿಸಿ, ಬೆಳೆ ಇದೆ ಎಂದು ಸುಳ್ಳು ದಾಖಲೆ ತೋರಿಸಿ, ವಿಮೆಯ ಕಂತನ್ನೂ ಕಟ್ಟಿದ್ದಾರೆ. ಬಳೀಕ ಬೆಳೆ ವಿಮೆ ಪರಿಹಾರವನ್ನೂ ಪಡೆದುಕೊಂಡಿದ್ದಾರೆ.
ಬೆಳೆ ವಿಮಾ ತುಂಬಿದ 13 ಜನರು ಮನಗುಂಡಿ ಗ್ರಾಮದ ಬಳಿ 61 ಎಕರೆ ಸರಕಾರಿ ಗೋಮಾಳವಿದೆ. ಇದರ ಸರ್ವೆ ನಂಬರ್ 48. ಇದೇ ಸರ್ವೆ ನಂಬರ್ ಬಳಸಿಕೊಂಡು 13 ಜನರು ಬೆಳೆ ವಿಮೆಯನ್ನು ತುಂಬಿದ್ದಾರೆ. ಇಲ್ಲಿ ಭತ್ತದ ಬೆಳೆ ಇದೆ ಎಂದು ಸರಕಾರವನ್ನೇ ನಂಬಿಸಿ, ಬೆಳೆ ವಿಮೆ ಕಂತು ತುಂಬಿದ್ದಾರೆ. ಅಷ್ಟೇ ಅಲ್ಲ, ಇವರಲ್ಲಿ ಇಬ್ಬರು ಬೆಳೆ ಹಾನಿ ಪರಿಹಾರವನ್ನು ಕೂಡ ಪಡೆದುಕೊಂಡಿದ್ದಾರೆ. ಈ ಭೂಮಿ ಸಂಪೂರ್ಣವಾಗಿ ಸರ್ಕಾರದ ಅಧೀನದಲ್ಲೇ ಇದೆ. ಆದರೆ ಇದೇ ಸರ್ವೇ ನಂಬರ್ನಲ್ಲಿ ತಮ್ಮ ಜಮೀನಿದ್ದು, ಅದರಲ್ಲಿ ಭತ್ತ ಬೆಳೆದಿದ್ದೇವೆ ಎಂದು ದಾಖಲೆ ಸೃಷ್ಟಿಸಿದ್ದು, ಕಂಪ್ಯೂಟರ್ ಕೇಂದ್ರದಲ್ಲಿ ಕುಳಿತುಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸರಕಾರವನ್ನೇ ಯಾಮಾರಿಸಿದ್ದಾರೆ.
ಜಿಪಿಎಸ್ ಇದ್ದರೂ ಅಧಿಕಾರಿಗಳನ್ನು ಯಾಮಾರಿಸಿದ ಭೂಪರು ಓರ್ವ ರೈತನ ಆಯಾ ವರ್ಷದ ಬಿತ್ತನೆ ಬೆಳೆ ವಿಮೆಗೆ ಆಯ್ಕೆಯಾಗಬೇಕಾದರೆ, ಸ್ಥಳೀಯ ಮಟ್ಟದಲ್ಲಿ ಸರ್ವೆ ಆಗಬೇಕು. ಈಗಂತೂ ಜಿಪಿಎಸ್ ಮೂಲಕವೇ ಎಲ್ಲವೂ ನಡೆಯುವುದರಿಂದ ಯಾವ ಸರ್ವೆ ನಂಬರ್ನಲ್ಲಿ ಯಾವ ಬೆಳೆ ಇದೆ ಎನ್ನುವುದು ಕೂಡ ಗೊತ್ತಾಗುತ್ತದೆ. ಆದರೆ ಪಹಣಿ ಪತ್ರಗಳು, ಆಧಾರ್ ನಂಬರ್ ಸೇರಿದಂತೆ ಇತರೆ ದಾಖಲೆಗಳಿಗೆ ಲಿಂಕ್ ಆಗಿರುವುದಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡ 13 ಜನರು ಸರಕಾರಿ ಜಾಗದ ಸರ್ವೆ ನಂಬರ್ ಬಳಸಿ ವಿಮಾ ಕಂತನ್ನು ತುಂಬಿದ್ದಾರೆ. ಅದರಲ್ಲಿ ಮಹೇಶ ಹೆಬ್ಬಾಳ್ ಮತ್ತು ಸಂತೋಷ ಕುಸುಗಲ್ ಎನ್ನುವವರಿಗೆ 2019-20 ರ ಸಾಲಿನಲ್ಲಿ ಪರಿಹಾರದ ಹಣವೂ ಬಂದಿದೆ. ಮಹೇಶಗೆ 17 ಸಾವಿರ ಹಾಗೂ ಸಂತೋಷಗೆ 38 ಸಾವಿರ ರೂಪಾಯಿ ಪರಿಹಾರ ಬಂದಿದೆ. ಒಟ್ಟು 61 ಎಕರೆ ಇರುವ ಈ ಸರಕಾರಿ ಜಾಗವನ್ನು ತಮಗೆ ಬೇಕಾದ ರೀತಿ ಬಳಸಿಕೊಳ್ಳಲು ಈ ತಂಡ ಹೊರಟಿತ್ತು.
ಕಂಪ್ಯೂಟರ್ ಕೇಂದ್ರದ ಮೇಲೆ ದಾಳಿ, ಕಂಪ್ಯೂಟರ್ ವಶಕ್ಕೆ! ಈ ಅಕ್ರಮದ ಬಗ್ಗೆ ಗ್ರಾಮದ ನಾಗಾನಂದ ಗುಂಡಗೋವಿ ಎನ್ನುವ ವ್ಯಕ್ತಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಧಾರವಾಡ ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ಅವರು ಅಧಿಕಾರಿಗಳಿಗೆ ಈ ಬಗ್ಗೆ ತನಿಖೆ ಮಾಡಲು ಸೂಚಿಸಿದ್ದಾರೆ. ಗ್ರಾಮಕ್ಕೆ ತೆರಳಿದ ಅಧಿಕಾರಿಗಳು ಇಡೀ ಪ್ರಕರಣದ ಕೇಂದ್ರ ಬಿಂದು ಆಗಿರುವ ಸಿಎನ್ಸಿ ಕೇಂದ್ರಕ್ಕೆ ದಾಳಿ ಮಾಡಿ, ಕಂಪ್ಯೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಸಿಎನ್ಸಿ ಕೇಂದ್ರ ಮಹೇಶ ಹೆಬ್ಬಾಳಗೆ ಸೇರಿದ್ದಾಗಿದೆ. ಇದೀಗ ಈ ಬಗ್ಗೆ ತನಿಖೆ ನಡೆಯುತ್ತಿದೆ.
ಈ ಅಕ್ರಮವನ್ನು ಬಯಲಿಗೆಳೆದಿರುವ ಗ್ರಾಮದ ಆರ್ಟಿಐ ಕಾರ್ಯಕರ್ತ ನಾಗಾನಂದ ಗುಂಡಗೋವಿ ಟಿವಿ9 ಡಿಜಿಟಲ್ ಜೊತೆ ಮಾತನಾಡಿದ್ದು, ಇಂಥವರನ್ನು ಹಾಗೆಯೇ ಬಿಟ್ಟರೆ ಮುಂದಿನ ದಿನಗಳಲ್ಲಿ ಸರಕಾರಿ ಜಾಗವನ್ನು ಕೂಡ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು ಬಿಡುತ್ತಾರೆ. ಈಗಾಗಲೇ ಇದೇ ಸರ್ವೆ ನಂಬರ್ನಲ್ಲಿ ಅನೇಕರು ಕಟ್ಟಡ ಕಟ್ಟಿಕೊಂಡಿದ್ದಾರೆ. ಅದರ ಬಗ್ಗೆ ಎಷ್ಟೇ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಲೇ ಇಲ್ಲ. ಜಾನುವಾರುಗಳಿಗೆ ಅಂತಾನೇ ಇಂಥ ಗೋಮಾಳಗಳನ್ನು ಇಟ್ಟಿರಲಾಗಿರುತ್ತದೆ. ಆದರೆ ಅವುಗಳ ಮೇಲೆಯೂ ಇಂಥ ಅನೇಕರು ಕಣ್ಣು ಹಾಕಿ, ಅವುಗಳನ್ನು ನುಂಗಲು ಯತ್ನಿಸುತ್ತಲೇ ಇರುತ್ತಾರೆ. ಅಂಥವರ ಮಧ್ಯೆ ಇದೀಗ ಸರಕಾರಿ ಗೋಮಾಳದ ಜಮೀನಿನ ಸರ್ವೆ ನಂಬರ್ ಬಳಸಿಕೊಂಡು, ವಿಮಾ ಹಣ ನುಂಗಿದ್ದು ಅಚ್ಚರಿ ಮೂಡಿಸಿದೆ. ಇದರಲ್ಲಿ ಕೆಲ ಸರಕಾರಿ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ವಿಸ್ತ್ರತ ತನಿಖೆ ಮಾಡುವಂತೆ ಸೂಚಿಸಿದ್ದೇನೆ. ಇನ್ನು ಅಕ್ರಮ ಎಸಗಿರುವ 13 ಜನರ ಮೇಲೆ ಎಫ್ಐಆರ್ ಸಹ ದಾಖಲಿಸುವಂತೆ ಕೃಷಿ ಇಲಾಖೆಗೆ ಸೂಚಿಸಿದ್ದೇನೆ. ಸರಿಯಾದ ತನಿಖೆ ಮಾಡಿ, ಇದರಲ್ಲಿ ಭಾಗಿಯಾಗಿರುವ ನೌಕರರನ್ನು ಪತ್ತೆ ಹಚ್ಚಿ, ಅವರ ಮೇಲೆಯೂ ಕ್ರಮ ಕೈಗೊಳ್ಳುವಂತೆ ಧಾರವಾಡ ತಹಸೀಲ್ದಾರ್ ಅವರಿಗೂ ಸೂಚಿಸಿದ್ದೇನೆ ಎಂದು ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಸರ್ಕಾರ ರೈತರ ಅನುಕೂಲಕ್ಕೆ ಎಂದು ಬೆಳೆ ವಿಮೆ ಯೋಜನೆ ಜಾರಿಗೆ ತಂದರೆ, ಅದರ ಮೂಲಕವೇ ಇಂಥವರು ಕೊಳ್ಳೆ ಹೊಡೆಯುತ್ತಿದ್ದಾರೆ. ಇಂಥವರ ಮೇಲೆ ಕಾನೂನು ಕ್ರಮ ಜರುಗಿಸಿ, ಅಕ್ರಮಗಳನ್ನು ತಡೆಯುವ ಕಡೆಗೆ ಅಧಿಕಾರಿಗಳು ಇನ್ನು ಹೆಚ್ಚಿನ ಗಮನ ಹರಿಸಬೇಕಿದೆ.
ವರದಿ: ನರಸಿಂಹಮೂರ್ತಿ ಪ್ಯಾಟಿ
ಇದನ್ನೂ ಓದಿ: ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್‌ಗೆ ವಂಚನೆ? ಸಿನಿಮಾ ನಿರ್ದೇಶಕ ಕರಮಲ ಬಾಲರವೀಂದ್ರನಾಥ್ ಬಂಧನ
ಆನೇಕಲ್ನಲ್ಲಿ ಒತ್ತುವರಿ ಸರ್ಕಾರಿ ಜಾಗ ತೆರವು ಕಾರ್ಯ; ಒಂದು ಗಂಟೆಯೊಳಗೆ ಜಾಗ ಖಾಲಿ ಮಾಡಲು ಸೂಚನೆ